ಸೇತುವೆ- ಸಂಬಂಧ

ಸುಮಾರು ಆರು ತಿಂಗಳ ಹಿಂದೆ ಮುರಿದು ಬಿದ್ದ ಆ ಸೇತುವೆಯ ದುರಸ್ತಿ ಬಗ್ಗೆ ಎರಡೂ ಊರುಗಳ ಮುಖ್ಯಸ್ಥರೂ ಸಾಕಷ್ಟು ಬಾರಿ ಪ್ರಯತ್ನಿಸಿ ಕೈಚೆಲ್ಲಿ ಕೂತಿದ್ದರು. ಮಲೆನಾಡಿನ ಭಾರೀ ಮಳೆಗೆ ಆಗಾಗ,ಅಲ್ಲಲ್ಲಿ ಸೇತುವೆಗಳು ಹೀಗೆ ಮುರಿದು ಬೀಳುವುದು ಸರ್ವೇ ಸಾಮಾನ್ಯವಾದ್ದರಿಂದ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸುತ್ತಾರೆ.

ಅಲ್ಲದೆ ಈ ಹಳ್ಳಿಗಳ ಬಣ ರಾಜಕೀಯವೂ ಒಂದು ಕಾರಣವಾಗಿ ಇಂತಹ ವಿಚಾರಗಳು ಉಲ್ಬಣಗೊಂಡು ಸಮಸ್ಯೆಗಳೇ ಆಗುತ್ತವೆ. ಈ ಪ್ರಕರಣದಲ್ಲೂ ಹಾಗೆಯೇ ಆಯಿತು. ಎರಡು ರಾಜಕೀಯ ಪಕ್ಷಕ್ಕೆ ಸೇರಿದ ಮುಖಂಡರು ತಂತಮ್ಮ ಪ್ರತಿಷ್ಠೆಗಾಗಿ ಹೋರಾಡಿದರೇ ಹೊರತು ಸೇತುವೆ ಸರಿಪಡಿಸುವ ಬಗ್ಗೆ ಯಾರಲ್ಲೂ ಪ್ರಮಾಣಿಕ ಕಾಳಜಿ ಇರಲಿಲ್ಲ.

ಎರಡೂ ಊರುಗಳ ಸಂಪರ್ಕದ ಹಾದಿಯಾಗಿದ್ದುದು ಆ ಸೇತುವೆ ಮಾರ್ಗ ಮಾತ್ರವಾಗಿತ್ತು. ಅನೇಕ ದಿನನಿತ್ಯದ  ಅಗತ್ಯಗಳಿಗಾಗಿ ಪರಸ್ಪರರನ್ನು ಅವಲಂಬಿಸಿದ್ದರೂ ಆರು ತಿಂಗಳುಗಳ ಕಾಲ ಈ‌ ಸಂಪರ್ಕವೇ ಇಲ್ಲದೆ ಅವುಗಳನ್ನೆಲ್ಲ ಹೇಗೋ ನಿಭಾಯಿಸಿಕೊಂಡರು. ಇನ್ನೇನು ಸೇತುವೆ ದುರಸ್ತಿ ಕಾರ್ಯ ಪ್ರಾರಂಭವಾಗಬೇಕೆನ್ನುವಷ್ಟರಲ್ಲಿ ಪಕ್ಷಪಾತಿ ರಾಜಕೀಯ ನಾಯಕರು ಏನಾದರೊಂದು ಕ್ಯಾತೆ ತೆಗೆಯುತ್ತಿದ್ದ ಕಾರಣ ಅಧಿಕಾರಿಗಳೂ ಈ ಬಗ್ಗೆ ಆಸಕ್ತಿ ತೋರುತ್ತಿರಲಿಲ್ಲ.

ಹೀಗಿರುವಾಗಲೇ ಒಂದು ದಿನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಂದ ತಂಡ ಸೇತುವೆಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿಯೇಬಿಟ್ಟಿತು. ಖುದ್ದು ಜಿಲ್ಲಾಧಿಕಾರಿಯೇ ಮೇಲುಸ್ತುವಾರಿ ವಹಿಸಿದ್ದ ಕಾರಣಕ್ಕೆ ಯಾವ ಬಣದವರೂ ಅದನ್ನು ತಡೆಯುವ ಪ್ರಯತ್ನ ಮಾಡಿರಲಿಲ್ಲ . ಆದರೆ ಪೂರ್ತಿ ಕೆಲಸ ಮುಗಿದು ಸೇತುವೆ ಸಿದ್ಧಗೊಂಡ ಮೇಲೆ ಮಾತ್ರ ಎರಡೂ ಹಳ್ಳಿಯ, ಎರಡೂ ಬಣದವರು ತಮ್ಮಿಂದೇ ಈ ಕೆಲಸ ಆಗಿದ್ದು ಎಂದು ,ನಮ್ಮ ಪಕ್ಷದ ನಾಯಕರ ಒತ್ತಡವಿಲ್ಲದಿದ್ದರೆ ಮಹಾನ್ ಕಾರ್ಯ ಆಗುತ್ತಲೇ ಇರಲಿಲ್ಲ-ಎಂದೂ ಹೇಳಿಕೊಂಡು ತಿರುಗಾಡಿದರು.

 

ಆದರೆ ತಿಂಗಳುಗಳ ಕಾಲ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ಸ್ವತಃ ಮುತುವರ್ಜಿಯಿಂದ ಮಾಡಿಸಲು ಕಾರಣವೇನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಹಾಗಾಗಿಯೇ ಎರಡೂ ಊರುಗಳಲ್ಲಿ ತಂತಮ್ಮ ಪಕ್ಷದವರ ಪರವಾಗಿ ತೌಡುಕುಟ್ಟುವ ಕೆಲಸ ನಡೆದೇ ಇತ್ತು. ಹೀಗಿರುವಾಗ ಜಿಲ್ಲಾಧಿಕಾರಿಗಳ ಕಛೇರಿಗೆ ಓರ್ವ ಯುವತಿ ಅವರನ್ನು ಭೇಟಿ ಆಗಲು ಬಂದಳು.  ಅದೇ ಆಫೀಸಿನಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವನೊಬ್ಬ ಆಕೆಯನ್ನು ನೋಡಿ ಸೇತುವೆ ಆ ಕಡೆ ಊರಿನವಳು ಎಂಬುದನ್ನು ಪತ್ತೆ ಹಚ್ಚಿದ. ಜಿಲ್ಲಾಧಿಕಾರಿಗಳ ಕಛೇರಿಯೊಳಗೆ ಹೋದ ಆಕೆ ಕೆಲಕಾಲ ನಗುನಗುತ್ತ ಅವರೊಂದಿಗೆ ಮಾತಾಡಿ ಸಣ್ಣದೊಂದು ಉಡುಗೊರೆ ಕೊಟ್ಟು ತನ್ನನ್ನು ಯಾರೂ ಗುರುತಿಸಲಿಲ್ಲ ಎಂಬ ಖಾತರಿಯೊಂದಿಗೆ ಅಲ್ಲಿಂದ‌ ಸರಸರನೆ ಹೊರಟಳು.

ಇದನ್ನೆಲ್ಲ ನೋಡುತ್ತಿದ್ದ ಆ ಅಟೆಂಡರ್, ಅವಳು ಹೋದಮೇಲೆ ಸೀದಾ ಜಿಲ್ಲಾಧಿಕಾರಿಗಳ ಕ್ಯಾಬೀನ್ ಒಳಗೆ ಹೋಗಿ , ‘ ಸರ್, ಅವಳು ಯಾಕೆ ಬಂದಿದ್ದಳು?’ ಎಂದ. ‘ನನ್ನನ್ನು ಅಭಿನಂದಿಸಲು ಬಂದಿದ್ದಾಳಾಕೆ’ ಎಂದರು ಡಿ.ಸಿ.
‘ ಅವಳೇಕೆ ನಿಮ್ಮನ್ನು ಅಭಿನಂದಿಸಬೇಕು‌ ಸರ್? ನಮ್ಮೂರಿನ ಹಿರಿಯ ನಾಯಕರೇ ಸೇತುವೆ ದುರಸ್ತಿಗೆ ಕಾರಣರಾದವರು. ಅವರೇ ಬಂದಿಲ್ಲ. ಇವಳದ್ದೇನು ಹೆಮ್ಮೆ ತೋರಿಸಲು ಬಂದಿದ್ದಳು ? ‘ ಎಂದು ಆ ಅಟೆಂಡರ್ ದೂರಿದರು. ಅದಕ್ಕೆ ಜಿಲ್ಲಾಧಿಕಾರಿಯವರು, ‘ಇಲ್ಲಾ ರೀ, ಆ ಸೇತುವೆ ದುರಸ್ತಿಯಾದ ಕಾರಣದ ಅರ್ಜಿದಾರರೇ ಅವರು. ಬೇಕಿದ್ದರೆ ಆ ಅರ್ಜಿ ಇಲ್ಲಿದೆ ನೋಡಿ’ ಎಂದು ಫೈಲ್ ಮುಂದಿಟ್ಟರು. ಆ ಅಟೆಂಡರ್ ಆ ಫೈಲ್ ನಲ್ಲಿದ್ದ ಹಾಳೆಯೊಂದನ್ನು ನೋಡಿದ. ಅದುವರೆಗೂ ಅಂತ ವಿಶೇಷ ಅರ್ಜಿಯನ್ನು ಅವನೆಂದೂ ನೋಡಿರಲಿಲ್ಲ. ಆ ಅರ್ಜಿಯನ್ನು ಪರಿಶೀಲಿಸತೊಡಗಿದ.

*             *               *                 *                  *

ಮಾನ್ಯ ಜಿಲ್ಲಾಧಿಕಾರಿಯವರಿಗೆ ,

“ಏನಿಲ್ಲವೆಂದರೂ ಅವನನ್ನು
ನೋಡಲಾಗುತ್ತಿತ್ತು
ಈ ಬಾರಿ ಮಳೆಗೆ
‎ಆ ಸೇತುವೆಯೂ ಮುರಿದುಬಿತ್ತು”
‎                         – ಅನಾಮಿಕ ಕವಿ

‘ಕೂಡೂರು’ ಮತ್ತು ‘ಬೇರೂರು’ ಎಂಬ ಹಳ್ಳಿಗಳ ನಡುವಿನ ಏಕೈಕ ಸಂಪರ್ಕ ಕೊಂಡಿಯಾಗಿದ್ದ ಸೇತುವೆ ಮುರಿದುಬಿದ್ದಿರುವುದು ಮತ್ತು ಅದನ್ನು ಸರಿಪಡಿಸಲು ನಡೆಯುತ್ತಿರುವ ರಾಜಕಾರಣದ ಬಗ್ಗೆ ತಮಗೆ ತಿಳಿದೇ ಇದೆಯೆಂದು ಭಾವಿಸುತ್ತೇನೆ. ಈ ವಿಚಾರವಾಗಿ ರಾಜಕೀಯ ನಿಲುವು ,ಸರ್ಕಾರದ ನಿಲುವು ಅದೇನಿದೆಯೋ ನನಗೆ ತಿಳಿದಿಲ್ಲ. ಆದರೆ ಈ ಸೇತುವೆ ಮುರಿದು ಬಿದ್ದಾಗಿನಿಂದ ಬೇರೂರಿನಲ್ಲಿರುವ ನನ್ನ  ‘ಗೆಳೆಯನನ್ನು ನೋಡಲಾಗಿಲ್ಲ. ಅವನೊಡನೆ ಮಾತನಾಡಲು ಸಾಧ್ಯವಾಗಿಲ್ಲ. ತೋಟದ ನಡುವಿನಲ್ಲಿ ಆಗುತ್ತಿದ್ದ ನಮ್ಮ ರಹಸ್ಯ ಭೇಟಿಗಳು , ಪತ್ರ ವಿನಿಮಯಗಳು ನಡೆದಿಲ್ಲ. ನನ್ನನ್ನು ನೋಡದೆ ಅವನೆಷ್ಟು  ಕೊರಗುತ್ತಿರಬಹುದು ಎಂಬುದರ ಕಿಂಚಿತ್ ಅಂದಾಜು ಕೂಡ ಈ ರಾಜಕಾರಣಕ್ಕಾಗಲೀ , ಅಧಿಕಾರಕ್ಕಾಗಲೀ ಅರ್ಥವಾಗುವುದಿಲ್ಲ ಎಂದೇ ನನ್ನ ನಂಬಿಕೆ. ಅವನ ಬಗ್ಗೆ ತಿಳಿಯಲು ಮನಸ್ಸು ಹೇಗೆ ಕಾತರಿಸುತ್ತಿದೆ ಎಂಬುದನ್ನು ಹೇಳಿದರೆ ನಿಮಗದು ತಮಾಷೆ ಅನ್ನಿಸಬಹುದು. ಆದರೆ ನಮ್ಮ ಸಖ್ಯವನ್ನು ಹೀಗೆ ಬೇರ್ಪಡಿಸಿ ನೋವು ನೀಡುವ ಹಕ್ಕು ಸೇತುವೆಯನ್ನು ಕೆಡವಿದ ಮಳೆಗಾಗಲೀ‌, ನೀವು ಪ್ರತಿನಿಧಿಸುವ ಸರ್ಕಾರಕ್ಕಾಗಲೀ , ಸ್ವಾರ್ಥ ರಾಜಕಾರಣಕ್ಕಾಗಲೀ ಇಲ್ಲ. ನಾವು ನಮ್ಮ ಸಲುಗೆಯನ್ನು ಹೆಚ್ಚಿಸಿಕೊಂಡಿದ್ದೇ ಆ ಸೇತುವೆಯಿದೆ ಎಂಬ ನಂಬಿಕೆಯ ಮೇಲೆ. ಹೀಗೇ ನಂಬಿಕೆಯೇ ಮುರಿದುಬಿದ್ದರೆ ಏನು ಮಾಡುವುದು ಸರ್? ನನಗೆ ಗೊತ್ತು ಅವನಿಗೂ ಹೀಗೆಯೇ ಅನ್ನಿಸಿರುತ್ತೆ. ಆದರೆ ಪುಕ್ಕಲ ಅವನು, ಹೆದರುತ್ತಾನೆ. ಹಾಗಾಗಿಯೇ ನಾನು ತಮ್ಮಲ್ಲಿ ಈ ಮನವಿಯನ್ನು ಅತ್ಯಂತ ವಿನಯಪೂರ್ವಕವಾಗಿ ಮಾಡಿಕೊಳ್ಳುತ್ತಿದ್ದೇನೆ. ಆ ಸೇತುವೆಯ ದುರಸ್ತಿಯಾಗದಿದ್ದರೆ ನಮ್ಮಿಬ್ಬರ ಬದುಕು ದುಸ್ತರವಾಗಿಬಿಡಬಹುದು. ಹಾಗಾಗಲು ನೀವು ಬಿಡಬಾರದು. ಏನೆಲ್ಲಾ ವಾಣಿಜ್ಯ ವ್ಯಾಪಾರಗಳ ನಡುವೆ ಆ ಸೇತುವೆ ನಮ್ಮ ಸಂಬಂಧದ ಸಂಕೇತವೂ ಹೌದು. ಅದನ್ನು ಕಟ್ಟಿಕೊಡಿ. ಇನ್ನೊಂದು ಅರ್ಜಿ ( ಪತ್ರ) ಬರೆಯುವ ಪ್ರಮೇಯ ಬಂದರೆ ನಾನು ಆ ಸೇತುವೆಯ ಬಳಿ ಸಮಾಧಿಯಾಗಿರುತ್ತೇನೆ. ಇದು ಬ್ಲಾಕ್ ಮೇಲ್ ಮಾಡುವ ತಂತ್ರವಲ್ಲ ಬದಲಿಗೆ ಪ್ರೀತಿಯ ಕೋರಿಕೆ. ಜಿಲ್ಲೆಯ ಜವಾಬ್ದಾರಿ ಹೊತ್ತವರಿಗೆ ನಮ್ಮ ಪ್ರೀತಿಯ ಜವಾಬ್ದಾರಿಯನ್ನೂ ಹೊರಿಸುತ್ತಿದ್ದೇನೆ ಕ್ಷಮೆಯಿರಲಿ.

ಅರ್ಜಿದಾರರು ,
‎(  ಸಹಿ  ಮಾತ್ರ )

*             *             *                *             *

 

ಜಿಲ್ಲಾಧಿಕಾರಿ ದೂರವಾಣಿ ಕರೆಯಲ್ಲಿ ಮಾತು ಮುಗಿಸುವಷ್ಟರಲ್ಲಿ ಅಟೆಂಡರ್ ಅರ್ಜಿ ಓದಿ ಅವಕ್ಕಾಗಿದ್ದ.
‘ಆ ಹುಡುಗಿ ಇವಳೇ ಅಂತ ನನಗೂ ಇವತ್ತೇ ತಿಳಿದಿದ್ದು. ನೀವು ಹೋಗಿ ಹಳ್ಳಿಯಲ್ಲಿ ಈ ವಿಷ್ಯ ಹೇಳಿ ಗದ್ದಲ ಎಬ್ಬಿಸಬೇಡಿ. ಆಕೆಯ ಅರ್ಜಿಯ ಗೌಪ್ಯತೆ ಕಾಪಾಡೋದು ನಮ್ಮ ಧರ್ಮ ‘ ಎಂದು ಜಿಲ್ಲಾಧಿಕಾರಿ ಎದ್ದು ಹೋದರು. ತನ್ನೂರಿನ ಆ ಪುಣ್ಯವಂತ ಹುಡುಗ ಯಾರೆಂದು ಆ ಅಟೆಂಡರ್ ದೀರ್ಘವಾಗಿ ಆಲೋಚಿಸತೊಡಗಿದ…

*****

ಅಂದಹಾಗೆ ಆಕೆಯೀಗ ಬಿ ಆರ್ ಲಕ್ಷ್ಮಣರಾವ್ ಅವರ ಹಾಡನ್ನು ಕೊಂಚ ಬದಲಿಸಿ ಹಾಡುತ್ತಿದ್ದಾಳೆ ;
” ಬಾ ಮಳೆಯೇ ಬಾ …
‎ ಅಷ್ಟು ಬಿರುಸಾಗಿ ಬಾರದಿರು …
‎ ನನ್ನಿನಿಯ ಬಾರದಂತೆ…
‎ ಅವನಿಲ್ಲಿ ಬಂದೊಡನೆ …
‎ ಬಿರುಸಾಗಿ ಸುರಿ …
‌‌ ಸೇತುವೆಯು ಬೀಳದಂತೆ …”

*         *           *               *                 *          *
ಇಂಥದ್ದೊಂದು ರಿಪೋರ್ಟ್(ಸ್ಟೋರಿ) ಯಾವುದಾದರೂ ಪತ್ರಿಕೆಯಲ್ಲಿ 2019 ರಲ್ಲಿ ಪ್ರಕಟವಾಗುವಂತಾದರೆ
ಅಧಿಕಾರಿಯಾದವನ ಅಃತಕರಣ ಜನರಿಗೂ , ಮುರಿದುಬಿದ್ದ ಸೇತುವೆಯ ಮಹತ್ವ ಸರ್ಕಾರಗಳಿಗೂ ಅರ್ಥವಾದೀತೇನೋ !

Leave a Reply