ಹೊಸ ವರ್ಷದ ರೆಸಲ್ಯೂಷನ್

ಸಂತೋಷ ತಾಮ್ರಪರ್ಣಿ

ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತು. ಒಂದು ವರ್ಷದ ಹಿಂದೇನೂ ಈ ದಿನದಂದು ಹೊಸ ವರ್ಷವೇ ಇತ್ತು. ಪ್ರತಿ ವರ್ಷವೂ ರೆಸಲ್ಯೂಷನ್ ತಪ್ಪದೇ ಮಾಡಿದ್ದಿದೆ. ಅಷ್ಟೇ ಶಿಸ್ತುಬದ್ಧವಾಗಿ ಮುರಿದದ್ದೂ ಇದೆ. ಒಂದೇ, ಎರಡೇ… ಮಾಡಿದ ರೆಸಲ್ಯೂಷನ್ ಗಳು ಎಷ್ಟೋ, ಯಶಸ್ವಿಯಾಗಿದ್ದೆಷ್ಟೋ? ಲೆಕ್ಕ ಇಟ್ಟವರಾರು? ಮುಂಜಾನೆ ಐದಕ್ಕೆ ಏಳಬೇಕೆಂಬ ರೆಸೊಲ್ಯೂಷನ್, ಗಡದ್ದಾಗಿ ಮಲಗಿ ನಿದ್ದೆ ಹೊಡೆದಿದೆ. ಸಿಟ್ಟು ಮಾಡಿಕೊಳ್ಳಬಾರದೆಂಬ ರೆಸಲ್ಯೂಷನ್, ಮುನಿಸಿಕೊಂಡು ಮನ ಬಿಟ್ಟು ಹೋಗಿಯಾಗಿದೆ. ಸಿಗರೇಟ್ ಬಿಟ್ಟು ಬಿಡಬೇಕೆಂಬ ರೆಸಲ್ಯೂಷನ್, ಸುಟ್ಟು ಬೂದಿಯಾಗಿ ಹೋಗಿದೆ. ಕುಡಿತದಿಂದ ಹೊರಬರಬೇಕೆಂಬ ರೆಸಲ್ಯೂಷನ್, ಅಮಲಿನಲ್ಲಿ ಮರೆತೇ ಹೋಗಿದೆ. ವ್ಯಾಯಾಮ ಮಾಡಬೇಕೆಂಬ ರೆಸಲ್ಯೂಷನ್, ಜಿಮ್ ನಲ್ಲಿ ಕೊಳೆಯುತ್ತಾ ಬಿದ್ದಿದೆ. ಹಿಂದಿನ ವರ್ಷ ಮತ್ತು ಇಂದಿನ ವರ್ಷದಲ್ಲಿ ಏನೂ ಬದಲಾಗಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು.

ಹಿಂದೊಮ್ಮೆ ಟೆಲಿಗ್ರಾಫ್ ಪತ್ರಿಕೆ ಹೊಸ ವರ್ಷದ ರೆಸಲ್ಯೂಷನ್ ಬಗ್ಗೆ ಒಂದು ವರದಿ ನೀಡಿತ್ತು. ಕಾಮ್ ರೆಸ್ ಅನ್ನುವ ಸಂಸ್ಥೆ ನಡೆಸಿದ ಗಣತಿಯ ಆಧಾರದ ಮೇಲೆ ಪ್ರಕಟವಾಗಿದ್ದ ವರದಿ ಅದು. ನಿಮಗೆ ಅಚ್ಚರಿಯಾಗಬಹುದು, ವರದಿಯ ಪ್ರಕಾರ ಬ್ರಿಟನ್ನಿನಲ್ಲಿ ಅತೀ ಹೆಚ್ಚು ಜನ ರೆಸಲ್ಯೂಷನ್ ಮಾಡಿದ್ದು ತಮ್ಮ ಆರೋಗ್ಯದ ಬಗ್ಗೆ. ಅಂದರೆ, ಹೆಚ್ಚು ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಹೆಚ್ಚು ವ್ಯಾಯಾಮ ಮಾಡುತ್ತೇನೆ, ತೂಕ ಕಡಿಮೆ ಮಾಡಿಕೊಳ್ಳುತ್ತೇನೆ, ಆರೋಗ್ಯಯುತವಾದುದನ್ನು ತಿನ್ನುತ್ತೇನೆ, ಹೀಗೆ ಹೆಚ್ಚು ಕಡಿಮೆ ಎಲ್ಲವೂ ಆರೋಗ್ಯದ ಸುತ್ತನೇ ಗಿರಕಿ ಹೊಡೆಯುವಂತಹವು. ಅದರಲ್ಲೇನೂ ದೊಡ್ಡ ತಪ್ಪಿಲ್ಲ ಬಿಡಿ, ಆರೋಗ್ಯದ ಬಗ್ಗೆ ಕಾಳಜಿ ಮಾಡಲೇ ಬೇಕು. ಆರೋಗ್ಯವೇ ಭಾಗ್ಯ ತಾನೇ.

ಆದರೆ, ಅಚ್ಚರಿ ಪಡುವ ವಿಷಯವೇನೆಂದರೆ, ಸ್ವಾಭಾವಿಕವಾಗಿ ಯಾವುದೇ ಹೆಚ್ಚಿನ ಮುತುವರ್ಜಿಯಿಲ್ಲದೆ ನಡೆದುಕೊಂಡು ಹೋಗಬೇಕಾದ ವಿಷಯಗಳಿಗೆ ನಾವು ರೆಸಲ್ಯೂಷನ್ ಪಟ್ಟ ಕಟ್ಟುತ್ತಿರುವುದು. ಇನ್ನೂ ವಿಪರ್ಯಾಸದ ಸಂಗತಿ ಎಂದರೆ ಬಹುಪಾಲು ಜನ ಅದನ್ನು ಪಾಲಿಸದೇ ಇರುವುದು! ಅಲ್ಲಾ ಸ್ವಾಮಿ, ಒಳ್ಳೆಯದನ್ನು ತಿಂದು, ಅರಗಿಸಿ ಕೊಂಡು, ಅಷ್ಟಿಷ್ಟು ಮೈ ದಂಡಿಸಿ, ಸ್ವಾಭಾವಿಕವಾಗಿ ಆರೋಗ್ಯವನ್ನು ರೂಪಿಸಿಕೊಳ್ಳುವುದನ್ನು ಬಿಟ್ಟು, ಅದಕ್ಕಾಗಿ ರೆಸಲ್ಯೂಷನ್ ಮೊರೆ ಹೋಗುತ್ತೇವೆ.

ಇವತ್ತಿನಿಂದ ೧೦-೧೫ ವರ್ಷಗಳ ಹಿಂದೆ ಯಾರಾದರೂ ಈ ತರಹದ ರೆಸಲ್ಯೂಷನ್ ಮಾಡಿರೋದನ್ನು ಕೇಳಿದ್ದೀರಾ? ಈ ತರಹದ ಬಿಡಿ, ಯಾವುದೇ ರೆಸಲ್ಯೂಷನ್ ಮಾಡಿರೋದೇ ಸಂಶಯ. ಅದು ಆಗಿನ ಕಾಲ. ಈಗಿನ ಕಾಲದಲ್ಲಿ ಇಂಥವಕ್ಕೆಲ್ಲ ರೆಸಲ್ಯೂಷನ್ ಬೇಕೇ ಬೇಕು. ಹೀಗೇ ಮುಂದುವರೆದರೆ, ಮುಂದಿನ ಕೆಲವು ವರ್ಷಗಳಲ್ಲಿ ಈ ತರಹದ ರೆಸಲ್ಯೂಷನ್ ಗಳು ಪ್ರಾಮುಖ್ಯತೆ ಪಡೆದರೆ ಅಚ್ಚರಿಯೇನಲ್ಲ.

೧. ದಿನ ನಿತ್ಯ ಹಲ್ಲುಜ್ಜುತ್ತೇನೆ ಮತ್ತು ಸ್ನಾನ ಮಾಡುತ್ತೇನೆ.
೨. ವಾಟ್ಸಾಪ್ ಮತ್ತು ಫೇಸ್ಬುಕ್ ನಲ್ಲಿ ದಿನಕ್ಕೆ ನಾಲ್ಕು ಗಂಟೆಗಿಂತ ಹೆಚ್ಚಿನ ಸಮಯ ಕಳೆಯುವುದಿಲ್ಲ.
೩. ಅಕ್ಕ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವವರ ಹೆಸರು ತಿಳಿದುಕೊಳ್ಳುತ್ತೇನೆ.
೪. ತಿಂಗಳಲ್ಲಿ ನಾಲ್ಕು ದಿನವಾದರೂ ಹೆಂಡತಿಯ (ಸ್ವಂತ) ಜೊತೆ (ಪ್ರೀತಿಯಿಂದ) ಮಾತನಾಡುತ್ತೇನೆ.
೫. ವರ್ಷದಲ್ಲಿ ಒಮ್ಮೆಯಾದರೂ ಮಕ್ಕಳನ್ನು ಪಾರ್ಕ್ ಗೆ (ಅಮ್ಯುಸ್ ಮೆಂಟ್ ಪಾರ್ಕ್ ಅಲ್ಲ, ಗಿಡ-ಮರ ಹಕ್ಕಿಗಳಿರುವ ಪಾರ್ಕ್)
ಕರೆದುಕೊಂಡು ಹೋಗುತ್ತೇನೆ.
೬. ವರ್ಷದಲ್ಲೊಂದು ಸಲವಾದರೂ ತಂದೆ ತಾಯಿಯರನ್ನು ಸಿನೆಮಾಗೆ ಹೊರಗಡೆ ಕರೆದುಕೊಂಡು ಹೋಗುತ್ತೇನೆ.
೭. ವರ್ಷದಲ್ಲಿ ಒಂದು ದಿನವಾದರೂ ‘ನೋ ಮೊಬೈಲ್ ಡೇ’ ಆಚರಿಸುತ್ತೇನೆ.
೮. ತಿಂಗಳಲ್ಲಿ ಒಂದೆರಡು ಸಲವಾದರೂ ರೊಟ್ಟಿ, ಅನ್ನ, ಮುದ್ದೆ ತರಹದ ಆಹಾರವನ್ನು ಸೇವಿಸುತ್ತೇನೆ.
೯. ಈ ವರ್ಷ ನಾನು ಯಾವುದೇ ವಿವಾಹೇತರ, ಗುಟ್ಟಾದ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ ಮತ್ತು
೧೦. ಜೀವನದಲ್ಲಿ ಒಂದೆರಡಾದರೂ ಕನ್ನಡ ಪುಸ್ತಕ ಓದುತ್ತೇನೆ ಮತ್ತು ಸರಿಯಾಗಿ, ತಪ್ಪಿಲ್ಲದೆ ಕನ್ನಡ ಮಾತನಾಡುತ್ತೇನೆ.

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದ್ಯಾಕೋ ಅತೀ ಆಯ್ತು, ಈ ಥರ ಆಗಲು ಸಾಧ್ಯವೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ, ಅಲ್ಲವೇ. ಇವುಗಳಲ್ಲಿ ಒಂದೆರಡನಾದರೂ ಮಾಡೋಣ.

3 comments

  1. Our life is becoming more and more ” how do others see me” kind of behavioral activities , thanks to social networking.
    The result of that is well explained with 10 new probable resolutions likely to be true in future.
    very well written.

    Regards
    Pramod Havanur

Leave a Reply