ಮುದ್ದು ತೀರ್ಥಹಳ್ಳಿಯವರ ‘ಕ್ಷಮಿಸಲಾಗುವುದಿಲ್ಲ ಕ್ಷಮಿಸಿ’

ಡಾ.ಪಾರ್ವತಿ.ಜಿ.ಐತಾಳ್

ಮುದ್ದು ತೀರ್ಥಹಳ್ಳಿ ಎಳೆಯ ವಯಸ್ಸಿನವರಾದರೂ ಪ್ರಾಥಮಿಕ ಶಾಲಾ ಶಿಕ್ಷಣದ ಆರಂಭಿಕ ಹಂತದಲ್ಲೇ ಬರವಣಿಗೆಯ ಬಗ್ಗೆ ಅದಮ್ಯ ಉತ್ಸಾಹ ತೋರಿಸುತ್ತ ಹಲವು ಕೃತಿಗಳನ್ನೂ ಪ್ರಕಟಿಸಿದವರು.

ಆದ್ದರಿಂದಲೇ ಇಂದು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಗುರುತಿಸಲ್ಪಟ್ಟ ಬರಹಗಾರ್ತಿ. ‘ಕಾನನದಲ್ಲಿ ಕಲರವ’ ಇವರ ಮೊದಲ ಕವನ ಸಂಕಲನ. ಕಾದಂಬರಿ, ಪ್ರಬಂಧ ಸಂಕಲನಗಳೂ ಸೇರಿದಂತೆ ಒಟ್ಟು ಆರು ಕೃತಿಗಳಲ್ಲಿ ತಮ್ಮ ಪುಟ್ಟ ಕಣ್ಣುಗಳು ಗಮನಿಸಿದ ಸುತ್ತಮುತ್ತಲ ಸಂಗತಿಗಳಿಗೆ ಸಮರ್ಥ ಅಭಿವ್ಯಕ್ತಿ ನೀಡುವ ಸೃಜನಶೀಲತೆಯನ್ನು ಬೆಳೆಸಿಕೊಂಡ ಇವರು ಹೊಸದಾರಿಯ ಹುಡುಕಾಟದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರು. ಇಂದು ಹದಿವಯಸ್ಸಿನ ಕೊನೆಯ ಹಂತದಲ್ಲಿರುವ ಕಾನೂನು ವಿದ್ಯಾರ್ಥಿನಿ ಮುದ್ದು ಇಲ್ಲಿಯೂ ವಯಸ್ಸಿಗೆ ಮೀರಿದ ಕಾವ್ಯಸಂವೇದನೆಯನ್ನು ಕಾಪಿಟ್ಟುಕೊಂಡದ್ದನ್ನು ನಾವಿಲ್ಲಿ ಕಾಣಬಹುದು.

ಈ ಸಂಕಲನದ ವೈಶಿಷ್ಟ್ಯವಿರುವುದು ಮುದ್ದು ಅವರು ಕವಿತೆಗಳಿಗಾಗಿ ಆಯ್ದುಕೊಂಡಿರುವ , ಬದುಕಿನ ವಿವಿಧ ಆಯಾಮಗಳಿಗೆ ಸಂಬಂಧಪಟ್ಟ ವಸ್ತುಗಳಲ್ಲಿ ಮತ್ತು ಅವರು ಬಳಸುವ ಭಾಷೆ , ಪದವಿನ್ಯಾಸ ಮತ್ತು ನುಡಿಗಟ್ಟುಗಳಲ್ಲಿ. ಸಾಮಾನ್ಯವಾಗಿ ಹದಿಹರೆಯದ ಅಥವಾ ಯುವಕವಿಗಳ ಕವನ ರಚನೆಗೆ ಪ್ರೇರಣೆಯಾಗುವ ಪ್ರೀತಿ -ಪ್ರೇಮಗಳ ಕುರಿತಾದ ಕವಿತೆಗಳು ಇಲ್ಲಿ ಇಲ್ಲವೇ ಇಲ್ಲ. ಇಲ್ಲಿರುವ ಪ್ರೀತಿಯಾಗಲಿ ಕಾಳಜಿಯಾಗಲಿ ಇರುವುದು ಸಮಾಜದ ಸಹಜೀವಿಗಳ ಬಗ್ಗೆ , ನಿಸರ್ಗದ ಜೀವದಾಯಿ ಹಸಿರಿನ ಬಗ್ಗೆ, ಮತ್ತು ಹಳ್ಳಿಯ ಹಸಿಮಣ್ಣಿನ ವಾಸನೆಯ ಮೇಲಿನ ಪ್ರೀತಿಯ ಬಗ್ಗೆ . ಹಿಂದಿಕ್ಕಿ ಬಂದ ಬಾಲ್ಯದ ನೆನಪು ಆಕೆಯನ್ನು ಎಷ್ಟು ಕಾಡುತ್ತದೆಂದರೆ ಒಂದೆರಡು ಕವನಗಳಲ್ಲಿ ‘ ಸುಳ್ಳು ಮೋಸಗಳಿಂದ ತುಂಬಿದ ದೊಡ್ಡವರ ಜಗತ್ತನ್ನು ಪ್ರವೇಶಿಸುವುದೇ ಬೇಡ’ವೆಂದೂ ಅನ್ನಿಸುತ್ತದೆ.

ಮುದ್ದು ಅವರಿಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಬಹಳ ಚೆನ್ನಾಗಿದೆ. ಆದ್ದರಿಂದಲೇ ಶಬ್ದಗಳ ಜತೆಗೆ ಆಟವಾಡುತ್ತ ಶ್ಲೇಷೆಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯವನ್ನು ಆಕೆ ಸಿದ್ಧಿಸಿಕೊಂಡಿದ್ದಾರೆ. ಮೊದಲ ಕವನ ‘ಗುರುತು ಉಳಿಸುವುದು’ ಇದಕ್ಕೆ ಅತ್ಯುತ್ತಮ ಉದಾಹರಣೆ. ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೊಂದು ಸಾಧನೆ ಮಾಡಿ ಇಲ್ಲಿ ನಮ್ಮ ‘ಗುರುತು ಉಳಿಸಿ ಹೋಗಬೇಕು’ ಎನ್ನುತ್ತ ಕವಿತೆಯನ್ನಾರಂಭಿಸುವ ಕವಯಿತ್ರಿ, ಹೇಗಾದರೂ ಮಾಡಿ ಗುರುತಿಸಿಕೊಳ್ಳಲು ಅಸಂಖ್ಯ ದಾರಿಗಳನ್ನು ಹುಡುಕುವವರ ಬಗ್ಗೆಯೂ, ಬಡತನದಿಂದ ಶ್ರೀಮಂತಿಕೆಯತ್ತ ಜಿಗಿದಾಗ ಇನ್ನೊಬ್ಬರ ಗುರುತು ಮರೆಯುವವರ ಬಗ್ಗೆ,ಯೂ ಕಟಕಿಯಾಡುತ್ತಾರೆ.

ಮುಂದೆ ಗುರುತು ಚೀಟಿ ಅನಿವಾರ್ಯವಾಗಿ ಬಿಟ್ಟಿರುವ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಅದಕ್ಕಾಗಿ ಸರಕಾರವು ಮಾಡಿರುವ ವ್ಯವಸ್ಥೆಯಲ್ಲಿ ವಿಕಾರವಾಗಿ ಭಾವಚಿತ್ರಗಳನ್ನು ತೆಗೆಯುವುದರ ಬಗ್ಗೆ ಹಾಸ್ಯ-ವ್ಯಂಗ್ಯ ಬೆರೆತ ಧ್ವನಿಯಲ್ಲಿ ಮಾತನಾಡುತ್ತ ನಿಧಾನವಾಗಿ ಜೀವನದ ಹಾದಿಯಲ್ಲಿ ಉಂಟಾಗುವ ಗಾಯಗಳ ಗುರುತುಗಳ ಬಗ್ಗೆ ಗಂಭೀರರಾಗುತ್ತಾರೆ . ವಿಷಾದದ ಧ್ವನಿಯಿರುವ ಈ ಸಾಲುಗಳು ಮನ ಕದಡುವಂತಿವೆ :

ಆಳವಾದ ಗಾಯದ ಗುರುತುಗಳು ಜೀವನಪರ್ಯಂತ ಕಾಡಿಯಾವು
ಅಳಿಸಲಾಗದ ಗುರುತುಗಳು ನಮ್ಮನ್ನೇ ಅಳಿಸಿಯಾವು
ಗುರುತಿರುವವರೇ ಗುರುತುಗಳ ಮಾಡಿಯಾರು( ಪು.25)

ಯಾರನ್ನೂ ಪೂರ್ತಿಯಾಗಿ ನಂಬುವಂತಿಲ್ಲ ಎಂಬ ಈ ಮಾತುಗಳು ಅನುಭವದ ಆಳದಿಂದ ಬಂದಿರಲೂ ಬಹುದು.
ಕಾಯಿಲೆ, ಸಾವು-ನೋವುಗಳು ಬದುಕಿನಲ್ಲಿ ಒಂದಿಲ್ಲೊಂದು ದಿನ ಎಲ್ಲರನ್ನೂ ಕಾಡುವಂಥವು. ಆದರೆ ಕವಯಿತ್ರಿ ಅವುಗಳನ್ನು ಪರಿಗಣಿಸುವ ರೀತಿ ಭಿನ್ನವಾದುದು. ಇವು ಮನುಷ್ಯನ ಅಹಂಕಾರಕ್ಕೆ ಅಡ್ಡವಾಗಿ ನಿಲ್ಲುವ ತಡೆಗೋಡೆಗಳು ಎಂಬ ಅರ್ಥದಲ್ಲಿ ಅವರೆನ್ನುತ್ತಾರೆ :

ಇತ್ತ ಬದುಕು ಅತ್ತ ಸಾವು ಮತ್ತು

ಹಿಗ್ಗಾಮುಗ್ಗಾ ಜಗ್ಗುವ ನೋವು..( ಪು.47)

ಈ ಯುದ್ಧದಲ್ಲಿ ಒದ್ದಾಟ ಪಟ್ಟರೂ ‘ಮನುಷ್ಯ ಸುಧಾರಿಸುವುದಿಲ್ಲ’ ಯಾಕೆ ಎಂಬುದು ಕವಯಿತ್ರಿಯ ಪ್ರಶ್ನೆ. ಈ ದೇಹವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದೇ ಇಂಥ ಯುದ್ಧದ ಮೂಲಕವಾದರೂ ಮನುಷ್ಯ ಯಾಕೆ ಇತರರಿಗೆ ಹಿಂಸೆ ನೀಡುತ್ತಾನೆ? ಇದು ಬದುಕಿನ ಕುರಿತಾದ ಒಂದು ತಾತ್ವಿಕ ಜಿಜ್ಞಾಸೆ. ಲಂಕೇಶ್ ಅವರ ‘ಗುಣಮುಖ’ ನಾಟಕವೂ ಚರ್ಚಿಸುವುದು ಇದನ್ನೇ ಅಲ್ಲವೆ? ಮುದ್ದು ಅದನ್ನೇ ಸರಳವಾಗಿ ಹೇಳುತ್ತಿದ್ದಾರೆ ಅಷ್ಟೆ.

ಯುದ್ಧದ ಕುರಿತಾದ ಇನ್ನೊಂದು ಕವನ ‘ಯುದ್ಧ ಮುಗಿದಾಗ’ ಈ ಸಂಕಲನದ ಒಂದು ಮುಖ್ಯ ಕವನ. ಅದು ಲೋಕದಲ್ಲಿ ನಡೆಯುವ ಯುದ್ಧವಲ್ಲ. ಅವರ ಮನಸ್ಸಿನೊಳಗೆಯೇ ನಡೆಯುವ ಸಂಘರ್ಷ. ಬದುಕು ನೀಡುವ ನೋವುಗಳು, ಎದುರಿಸವ ಆಘಾತಗಳು- ಎಲ್ಲವನ್ನೂ ನಗುನಗುತ್ತ ಎದುರಿಸುವ ಛಲವಿದ್ದರೆ ಮಾತ್ರ ಯಶಸ್ಸು ನಮ್ಮದಾದೀತು ಎಂಬ ಧ್ವನಿ ಈ ಕವನದಲ್ಲಿದೆ .

ನನ್ನೊಳಗೆ ಯುದ್ಧ ನಡೆಯುತ್ತಲೇ ಇರುತ್ತದೆ

ಒಳಗೆ ಅಸಂಖ್ಯ ಗಾಯಗಳುಳಿದಿವೆ ಮಾಯದೇ

ಗಾಯಗಳು ಕಣ್ಣೀರು ಸುರಿಸುತ್ತಲೇ ಇರುತ್ತವೆ

ಲೋಕದೆದುರು ನಾನು ನಗುತ್ತಲೇ ಇರುತ್ತೇನೆ (ಪು.55)

‘ಪಾಪಿ ಪದ್ಯಗಳು’ ಒಂದು ರೀತಿಯಿಂದ ಪರಿತಾಪದ ಪದ್ಯಗಳೂ ಹೌದು. ಬಹುಶ ರೂಸೋ ಹೇಳಿದಂತೆ ‘ಮನುಷ್ಯ ಹುಟ್ಟುತ್ತಲೇ ಕೆಟ್ಟವನಾಗಿರುವುದಿಲ್ಲ. ಸಮಾಜ ಅವನನ್ನು ಕೆಟ್ಟವನನ್ನಾಗಿ ಮಾಡುತ್ತದೆ’ ಎಂಬ ಮಾತು ಮುದ್ದು ಅವರನ್ನು ಪ್ರಭಾವಿಸಿರಬೇಕು. ‘ಲೆಕ್ಕವಿಲ್ಲದಷ್ಟು ಪಾತಕಗಳನ್ನು ಮಾಡಿದ ನಾನು ಕಡು ಪಾಪಿಯೇ ಸರಿ. ಅಂಗಳದಲ್ಲಾಡುವ ಎಳೆ ಮಗುವ ಕಂಡು ಕರುಬುತ್ತೇನೆ. ಜೊತೆಗೆ ಅದೆಲ್ಲಿ ದೊಡ್ಡದಾಗಿ ಬಿಡತ್ತೋ ಎಂಬ ಆತಂಕದಿಂದ ಮರುಗುತ್ತೇನೆ ‘ ಎನ್ನುವಾಗ ತನ್ನನ್ನು ಪಾಪಕ್ಕೆ ಪ್ರೇರೇಪಿಸಿದ್ದು ಸಮಾಜ, ಮಗುವಾಗಿದ್ದಾಗ ತಾನು ಮುಗ್ಧಳಾಗಿದ್ದೆ ಎಂಬ ಭಾವನೆ ಇಲ್ಲಿ ವ್ಯಕ್ತವಾಗುತ್ತದೆ.

ಕಲೆ ಎನ್ನುವ ಪದದೊಂದಿಗೆ ಆಟವಾಡುವ ಕವನ ‘ಗಾಯ ಮತ್ತು ಕಲೆ’. ಮೈಮೇಲೆ ಆದ ಹೊರಗಿನ ಗಾಯಗಳು ಗುಣವಾದಾಗ ಕಲೆಗಳನ್ನುಳಿಸುತ್ತವೆ. ಆದರೆ ಕಲೆ ಗಾಯದ ನೆನಪನ್ನು ಹಸಿಯಾಗಿಯೇ ಇಡುತ್ತದೆ ಎನ್ನುವಾಗ ಇದು ಕಲೆಯ ಗುಣಗಾನವೇ ಅಥವಾ ಕಲೆಯ ಮೇಲಿನ ಆರೋಪವೇ ಅನ್ನುವ ಸಂದೇಹ ಉಳಿಯುತ್ತದೆ. ಕಲೆ ಸೃಷ್ಟಿ ಮಾಡುವ ಸೌಂದರ್ಯದ ಶಾಶ್ವತ ಗುಣದ ಬಗ್ಗೆ ‘ಗ್ರೇಷಿಯನ್ ಅರ್ನ್’ ಕವಿತೆಯಲ್ಲಿ ಹೇಳುವ ಕೀಟ್ಸ್, ಕಲೆಯ ಮೂಲಗುಣಗಳು ಶಾಶ್ವತವಾಗಿ ಉಳಿಯುವ ಕುರಿತು ‘ಒಝಿಮ್ಯಾಂಡಿಯಾಸ್’ ಕವನದಲ್ಲಿ ನಿರೂಪಿಸುವ ಷೆಲ್ಲಿ ಇಲ್ಲಿ ನೆನಪಾಗುತ್ತಾರೆ. ಯೂರೋಪಿನಲ್ಲಿ 19ನೆಯ ಶತಮಾನದಲ್ಲಿ ನಡೆದ ‘ಕಲೆಗಾಗಿ ಕಲೆ’ ಎಂಬ ಚಳುವಳಿಯ ಪರ-ವಿರೋಧಿ ವಾದಗಳು ನೆನಪಾಗುತ್ತವೆ. ಕಲೆಯ ಬಗೆಗಿನ ಎಲ್ಲ ಕವಿಗಳ ಕಲ್ಪನೆ ಈ ಧಾಟಿಯಲ್ಲಿಯೇ ಸಾಗುತ್ತದೆ. ಆದರೆ ಈ ಕವನದಲ್ಲಿ ಕಲೆ ಅನ್ನುವುದು ನೋವಿನ ನೆನಪುಗಳಿಗೆ ರೂಪಕವಾಗಿ ಬರುತ್ತದೆ. ಗಾಯ ಗುಣವಾಗಬಹುದು. ಆದರೆ ಕಲೆ ಅದನ್ನು ನೆನಪಿಸುತ್ತಲೇ ಇರುತ್ತದೆ.

 

‘ಕೋಳಿಯಂಗಡಿಯ ಮುಂದೆ’ ಕವನದಲ್ಲಿ ನಿರೂಪಕಿಯ ಇಕ್ಕಟ್ಟಿನ ಮನಸ್ಥಿತಿಯಿದೆ.. ಹೊಟ್ಟೆ ತುಂಬಿಸಲು ಕಟುಕನಂಗಡಿಯಲ್ಲಿ ಸಿಗುವ ಮಾಂಸವೇನೋ ಬೇಕು. ಆದರೆ ಅಲ್ಲಿ ಕಟುಕನು ಪ್ರಾಣಿಗಳಿಗೆ ನೀಡುವ ಹಿಂಸೆಯನ್ನು ನೋಡಿದಾಗ, ಕತ್ತು ಹಿಚುಕಿ, ಕಚಕಚನೆ ಕಡಿಕಡಿದು ಮಾರಾಟಕ್ಕಿಡುವುದನ್ನು ನೋಡಿದಾಗ ಕವಯಿತ್ರಿಯ ಕರುಳು ಹಿಂಡುವುದೂ ಅಷ್ಟೇ ನಿಜ. ಇದು ಪರಿಸ್ಥಿತಿಯ ವ್ಯಂಗ್ಯವೂ ಹೌದು. ಕವಯಿತ್ರಿಯ ಮಾನವೀಯ ನೆಲೆಯ ಚಿಂತನೆಗೆ ಈ ಕವನ ಒಂದು ಉದಾಹರಣೆ.

ನಮ್ಮ ಸಮಾಜದಲ್ಲಿ ತಮ್ಮ ಪ್ರತಿಭೆ-ಪರಿಶ್ರಮಗಳಿಂದ ಮೇಲೇರುವವರನ್ನು ಕಂಡರೆ ಕರುಬುವವರಿಗೇನೂ ಕಡಿಮೆಯಿಲ್ಲ. ಆದರೆ ಪರೋಕ್ಷವಾಗಿ ಅಂಥವರೇ ಇನ್ನೊಬ್ಬರು ಮೇಲೇರುವುದಕ್ಕೂ ಕಾರಣರಾಗುತ್ತಾರೆ ಅನ್ನುವುದನ್ನು ಮುದ್ದು ‘ಕನಸೊಂದು’ ಎಂಬ ಕವನದಲ್ಲಿ ಮನೋಜ್ಞವಾಗಿ ಹೇಳುತ್ತಾರೆ. ಮೇಲೇರಬೇಕೆಂದು ಕನಸು ಕಾಣುತ್ತ, ಎಡವಿ ಎಡವಿ ಹೇಗೋ ಹತ್ತುತ್ತಿರುವವರನ್ನು ತಳದಿಮದ ಕಲೆಲೆಯುವ ಮಂದಿಯ ‘ಕೂರಂಬು ಕೂರ್ದಸಿಗಳ’ಬಗ್ಗೆ ಚಿಂತಿಸದೆ ಆಕೆ ಛಲದಿಂದ ಏರಿಯೇ ಬಿಡುತ್ತಾರೆ. ಕೊನೆಯಲ್ಲಿ ಹೇಳುವ ಮಾತು : ‘ಜಯದ ಪಾಲೆಲ್ಲ ನಿಮ್ಮದೇ ಅಲ್ಲವೇನು?/ ಕ್ಷಮಿಸಿ, ತಗ್ಗಿದ ಮುಖಗಳ ಭಾವಗಳ ಹುಡುಕಲಾರೆ’ಎಂದು.

ಹಳ್ಳಿಯ ಮಣ್ಣಿನಲ್ಲೇ ಹುಟ್ಟಿ ಬೆಳೆದು,ರೈತನ ಕೈಯ ಅನ್ನವನ್ನುಂಡು ಮುಂದೆ ನಗರಕ್ಕೆ ಹೋಗಿ ಹಳ್ಳಿಯ ಬಗ್ಗೆ ತಾತ್ಸಾರ ತೋರಿಸುವ ನಗರಣ್ಣರನ್ನು ಮುದ್ದು ಅನಾಗರಿಕರೆಂದು ತಿಳಿಯುತ್ತಾರೆ. ಅವರ ಹಲವಾರು ಕವನಗಳಲ್ಲಿ ಗ್ರಾಮೀಣ ಬದುಕಿನ ಮುಗ್ಧತೆ, ಪ್ರಾಮಾಣಿಕತೆ, ಪರಿಶ್ರಮ ಪಡುವ ಬುದ್ಧಿಗಳ ಬಗ್ಗೆ ಅಪಾರವಾದ ಮೆಚ್ಚುಗೆಯಿದೆ. ಅಜ್ಜ ತಮಗಾಗಿ ಏನೂ ಮಾಡಿಟ್ಟಿಲ್ಲ ಎನ್ನುವ ಮಕ್ಕಳು ಅಜ್ಜನ ಆಸ್ತಿಯ ಮೇಲೆ ಕಣ್ಣಿಡುತ್ತಾರಷ್ಟೇ ಹೊರತು ಅಜ್ಜ ಪ್ರತಿಪಾದಿಸಿದ ಜೀವನ ಮೌಲ್ಯಗಳ ಬಗ್ಗೆ ಗಮನ ಹರಿಸುವುದಿಲ್ಲ ಎನ್ನುವ ಕವನದಲ್ಲಿ ಅಜ್ಜ ಒಬ್ಬ ಹಳ್ಳಿಗನಾಗಿದ್ದಾನೆ.

‘ಬರದ ಬರೆ’ ಕವನದಲ್ಲೂ ಹಳ್ಳಿ ಮತ್ತು ನಗರಗಳ ನಡುವಣ ಭಿನ್ನತೆ ಎದ್ದು ಕಾಣುತ್ತದೆ. ‘ನಾಲಿಗೆಯ ಗುಣ’ಎಂಬ ಕವಿತೆ ಪುಟ್ಟದಾದರೂ ‘ಹೃದಯಕ್ಕಿಂತಲೂ ಮೆದುಳಿಗೇ ಹತ್ತಿರವಾಗಿರುವ ನಾಲಿಗೆ ‘ಮಸೆದಿಟ್ಟ ಕತ್ತಿಯಂತೆ ಹೃದಯವನ್ನಿರಿಯುವ’ ನಾಲಿಗೆಯ ಬಗ್ಗೆ ಕವಯಿತ್ರಿಗೆ ತಿರಸ್ಕಾರವಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಉಪಯೋಗಿಸಬಹುದು ಎಂದೂ ಕವನ ಹೇಳಬಹುದಿತ್ತೇನೋ?

‘ಒಂಟಿತನ’ ಎಂಬ ಕವನ ಅರ್ಥಗರ್ಭಿತವಾಗಿದೆ. ಇಲ್ಲೀ ಪಾದಗಳಿಗೆ ಬಿಗಿಯಾಗಿರುವ ಬೂಟುಗಳಿಂದ ಹೂಪಾದಗಳು ಒಳಗೆ ನೋವಿನಿಂದ ಕಿವಿಚಿಕೊಂಡು ಕಣ್ಣೀರು ಸುರಿಸುವ ಚಿತ್ರಣವಿದೆ. ಮುಸುಕಿನೊಳಗಣ ಗುದ್ದಾಟದಂತೆ ಬೂಟಿನೊಳಗಣ ಪಾದಗಳ ರೂಪ ಬಹಳ ಚೆನ್ನಾಗಿ ಬಂದಿದೆ.ಬರಿಗಾಲುಗಳಲ್ಲಿರುವುದೇ ಸ್ವಾತಂತ್ರ್ಯವೆಂಬ ಆಶಯವೂ ಇಲ್ಲದೆ. ಸಮಾಜದಲ್ಲಿ ನೂರಾರು ಕಟ್ಟುಪಾಡುಗಳಿಂದ ಬಂಧಿತರಾಗುವ ಉಳ್ಳವರಿಗಿಂತ ಇಲ್ಲದವರೇ ಹೆಚ್ಚು ಸುಖಿಗಳು ಎಂಬ ಅರ್ಥದಲ್ಲೂ ಇದನ್ನು ತೆಗೆದುಕೊಳ್ಳಬಹುದು.

ಶೀರ್ಷಿಕೆಯ ಕವನ ‘ಕ್ಷಮಿಸಲಾಗುವುದಿಲ್ಲ ಕ್ಷಮಿಸಿ’ ಒಂದು ಸರಳ ಕವನ. ಕವನದ ನಿರೂಪಕಿಯ ರೂಮ್ ಮೇಟ್ ಕಿಟಿಕಿ ಬದಿಯಲ್ಲಿ ಕುಳಿತ ಪಾರಿವಾಳಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ತನ್ನ ಪ್ರತಿಷ್ಠೆಗಾಗಿ. ಆದರೆ ತಾನು ಅವಕ್ಕೆಂದು ಹಾಕಿದ ಕಾಳುಗಳನ್ನು ಅವಳು ಗುಡಿಸಿ ಎಸೆದು ಬಡಪಾಯಿ ಪಾರಿವಾಳಗಳ ಹಕ್ಕನ್ನು ಕಸಿಯುತ್ತಾಳೆ. ಈ ಮಹಾಪರಾಧವನ್ನು ತಾನೆಂದೂ ಕ್ಷಮಿಸಲಾರೆ ಎನ್ನುತ್ತಾಳೆ. ಇಲ್ಲಿ ಅದನ್ನು ಸರಳವಾಗಿ ಹೇಳಿದ್ದರೂ ಪ್ರಾಯಶ್ಹ ಇತರ ಕವನಗಳಲ್ಲಿ ಬರುವ ಅನ್ಯಾಯ-ದೌರ್ಜನ್ಯ-ಮೋಸ-ವಂಚನೆಗಳ ಸಂದರ್ಭಗಳಿಗೂ ಇದೇ ನುಡಿ ಅನ್ವಯವಾಗುತ್ತದೆ. ಆದರೆ ಈ ನುಡಿಯಲ್ಲಿ ವ್ಯಕ್ತವಾಗುವ ಸೌಜನ್ಯವನ್ನು ಮಾತ್ರ ಮರೆಯಲಾಗದು.

ಕವಯಿತ್ರಿಯ ಸಮಾಜಮುಖಿ ಚಿಂತನೆ ಈ ಕವನಗಳಲ್ಲಿ ಹರಳುಗಟ್ಟಿರುವುದಕ್ಕೆ ಇಲ್ಲಿನ 77 ಕವನಗಳಲ್ಲಿ ಇನ್ನೂ ಅನೇಕ ಕವನಗಳನ್ನು ಉದಾಹರಿಸಬಹುದು. ಯಂತ್ರನಾಗರಿಕತೆಯ ಶಿಖರವನ್ನು ತಲುಪಿರುವ ಇಂದಿನ ಈ ಆಧುನಿಕ ಯುಗದಲ್ಲಿ ಇನ್ನೂ ಮಲದ ಗುಂಡಿಯೊಳಕ್ಕೆ ಮುಗ್ಧ ಮನುಷ್ಯರನ್ನು ಕಳುಹಿಸಿ ತಾವು ಸುರಕ್ಷಿತರಾಗ ಬಯಸುವವರ ಅಮಾನವೀಯ ಧೋರಣೆಯ ಬಗ್ಗೆ ನೋಯುವ ‘ಲಯವಾದೆಯಲ್ಲೋ’ ಎಂಬ ಕವನ, ‘ಗನ್ನು ಹಿಡಿಯುವ ಕೈಗಳು ಪೆನ್ನು ಹಿಡಿಯಲಿ’ ‘ನಾಯಿ ಊರ ಕಾಯುತ್ತದೆ’ ಮೊದಲಾದವು ಅತ್ಯುತ್ತಮ ಆಶಯಗಳಿರುವ ಕವನಗಳು.

ಹಿಂದಿನ ಕವನ ಸಂಕಲನದಿಂದ ಸಾಕಷ್ಟು ದೂರ ಅವರು ಸಾಗಿ ಬಂದಿದ್ದಾರೆ ಎನ್ನುವುದಕ್ಕೆ ಈ ಕವನಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಸಾಹಿತ್ಯ ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿದ್ದು ಮೇಲೇರುವ ಛಲ ಹೊಂದಿರುವ ಮುದ್ದು ಅವರಿಂದ ಇನ್ನಷ್ಟು ಪ್ರಬುದ್ಧ ಕವನಗಳನ್ನು ನಾವು ಖಂಡಿತವಾಗಿಯೂ ನಿರೀಕ್ಷಿಸಬಹುದು.

Leave a Reply