ಸಿಂಗಾಪುರ್ ನಲ್ಲಿ ‘ಯಾರಿಗುಂಟು ಯಾರಿಗಿಲ್ಲ’

ಸ್ಟಾಲ್ ನಂಬರ್ 8 – ಸಮೋಸ, ಸ್ಟಾಲ್ ನಂಬರ್ 5 – ಪಾನಿ ಪುರಿ, ಸ್ಟಾಲ್ ನಂಬರ್ 10- ಇಂಡಿಯನ್ ಸ್ನ್ಯಾಕ್ಸ್, ಸ್ಟಾಲ್ ನಂಬರ್ 3 – ಫ್ಯಾನ್ಸೀ ಐಟಮ್ …. ಹೀಗೆ ಟೇಬಲ್ ಗಳ ಸಂಖ್ಯೆ ಸಾಗುತ್ತಲೇ ಇರುತ್ತದೆ. ಯಾವುದನ್ನು ತಿನ್ನೋದು, ಯಾವುದನ್ನು ಬಿಡೋದು, ಯಾವುದನ್ನು ಕೊಳ್ಳೋದು… ಅನ್ನೋದೇ ಚಿಂತೆ. ಯಾಕೆಂದ್ರೆ ಅದು ಬರೀ ಒಂದು ದಿನದ ಸಡಗರ. ಅದೂ ವರ್ಷಕ್ಕೊಮ್ಮೆ ನಡೆಯುವ ಹಬ್ಬ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ನಮಗಂತೂ ಸಂಭ್ರಮದ ವಾತಾವರಣ.

ನಮ್ಮ ದೇಶದಲ್ಲಿ ಇಂತಹ ಆಚರಣೆಗಳಿಗೆ ಲೆಕ್ಕವೇ ಇರೋದಿಲ್ಲ. ಪುಸ್ತಕಗಳ ಹಬ್ಬ, ಜಾತ್ರೆ, ಅದು – ಇದು ಹೇಳುತ್ತಾ ಪ್ರಮುಖ ರಸ್ತೆಗಳೆಲ್ಲಾ ಬಿಡುವಿಲ್ಲದೆ ನಲಿದಾಡುತ್ತಿರುತ್ತವೆ. ನಾವು ಇಲ್ಲಿ ಕೂತು ವೀಡಿಯೋಗಳನ್ನು ನೋಡುತ್ತಾ ಕಣ್ಣು- ಬಾಯಿ ಬಿಟ್ಟಿದ್ದೇ ಬಂತು. ಆದರೆ ಈ ದೇಶದಲ್ಲಿ ಹೀಗೆಲ್ಲಾ ನಡಿಯೋದೆ ಕಡಿಮೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದರೂ ದೇಸಿ ಸೊಬಗು ಅನುಭವಕ್ಕೆ ಬರೋದೇ ಅಪರೂಪ. ಇನ್ನೂ ನನ್ನಂತಹ ಶುದ್ಧ ಸಸ್ಯಾಹಾರಿಗಳಿಗಂತೂ ಇಲ್ಲಿನ ಫುಡ್ ಸ್ಟಾಲ್ ಗಳು ವೈಕುಂಠ ಏಕಾದಶಿ ಆಚರಣೆಯನ್ನೇ ಮಾಡಿಸಿಬಿಡುತ್ತವೆ.

ನಮ್ಮ ಊರಿನ ರೀತಿಯ ರೆಸ್ಟಾರೆಂಟ್ ಗಳಲ್ಲಿ ಆರಾಮವಾಗಿ ತಿನ್ನುತ್ತಾ ಮಜಾ ಸವಿಯಬೇಕಾದರೆ ಮುಕ್ಕಾಲು ಗಂಟೆಯ ಹಾದಿ ಕ್ರಮಿಸಬೇಕು. ಸಿಂಗಾಪುರದ ಲಿಟ್ಲ್ ಇಂಡಿಯಾ ಸ್ಥಳದಲ್ಲಿ ಇವೆಲ್ಲಾ ಲಭ್ಯವಿದೆ. ಅಲ್ಲೇ ಸುತ್ತಮುತ್ತ ನೆಲೆಸಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಾವು ಮನೆ ಮಾಡಿರೋದು ದೇಶದ ಇನ್ನೊಂದು ಗಡಿ. ಹಾಗಾಗಿ ಮನಸ್ಸು ಆದಾಗ ಎದ್ದು ಹೋಗಿ ತಿನ್ನುವ ಸಂಗತಿಯೇ ಇಲ್ಲ ನಮ್ಮ ಪಾಲಿಗೆ. ಆಫೀಸ್ ಇರುವ ವಲಯಗಳಲ್ಲಿ ಬೆರಳೆಣಿಕೆಯ ಭಾರತೀಯ ರೆಸ್ಟಾರೆಂಟ್ ಗಳನ್ನು ಕಾಣಬಹುದು. ಅದು ಬಿಟ್ರೆ ಇವಕ್ಕೆಲ್ಲಾ ತವರೂರು ಲಿಟ್ಲ್ ಇಂಡಿಯಾ.
ಹೀಗಾಗಿ ವರ್ಷದ ಕೊನೆಯ ಒಂದು ದಿನ ಹಬ್ಬದ ವಾತಾವರಣ. ಇಡೀ ನಮ್ಮ ಅಪಾರ್ಟ್ ಮೆಂಟ್ ಭಾರತೀಯರಿಂದ ತುಂಬಿ ತುಳುಕುತ್ತಿರುತ್ತವೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿನ ನಿವಾಸಿಗಳಿಗಾಗಿ ಸ್ಟಾಲ್ ಗಳನ್ನು ಇಡುವ ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಒಂದು ವಾರಗಳ ಮುಂಚೆಯೇ ನೋಂದಾವಣಿ ಕಾರ್ಯ ಆರಂಭವಾಗುತ್ತದೆ. ತಮ್ಮ ಹವ್ಯಾಸಗಳನ್ನು, ತಮ್ಮ ಕೌಶಲ್ಯಗಳನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ವೇದಿಕೆ.

ಸಣ್ಣ ಪುಟ್ಟ ಕಲಿಕೆಯಿಂದಲೂ ಎಷ್ಟೊಂದು ಉಪಯೋಗವಿದೆ ಎಂದು ಇವನ್ನೆಲ್ಲಾ ನೋಡುವಾಗ ಅನಿಸುತ್ತದೆ. ಇಲ್ಲೂ ಅಷ್ಟೇ, ಹೊಲಿಗೆಯಲ್ಲಿ ಪರಿಣಿತರು, ಡ್ರಾಯಿಂಗ್ ನಲ್ಲಿ ನಿಪುಣರು, ಸ್ವಿಮ್ಮಿಂಗ್ ಬಲ್ಲವರು.. ಕೆಲ ಮಂದಿ ಹವ್ಯಾಸವಾಗಿ ಬೆಳೆಸಿಕೊಂಡಿದ್ದರೆ, ಮತ್ತೆ ಕೆಲವರು ಇಲ್ಲಿ ಬಂದು ಕೋರ್ಸ್ ಗಳನ್ನು ಮಾಡಿ ಪ್ರಮಾಣಪತ್ರ ಪಡೆದವರು. ವಿದೇಶದಲ್ಲಿ ಇವೆಲ್ಲಾ ತಕ್ಕ ಮಟ್ಟಿಗಾದ್ರೂ ಸಂಪಾದನೆ ಮಾಡುವ ಮಾರ್ಗಗಳು. ಡಿಗ್ರಿ ಪಡೆದು, ಕಚೇರಿಗೆ ಹೋಗಿ ಮಾಡುವ ಉದ್ಯೋಗಗಳಲ್ಲಿ ಸ್ಪರ್ಧೆಗಳು ಸಾಮಾನ್ಯ. ಆದರೆ ಹವ್ಯಾಸಕ್ಕಾಗಿ ಕಲಿತು, ಬೆಳೆಸಿಕೊಂಡ ಸ್ಕಿಲ್ ಗಳಿಗೆ ನಾವೇ ಬಾಸ್ ಗಳು. ಇಂತಹ ವಿಚಾರದಲ್ಲಿ ಮುಂದುವರಿಯಲು ಜನರ ಸಂಪರ್ಕಗಳೊಂದಿದ್ದರೆ ಸಾಕು. ಜೀವನದಲ್ಲಿ ಮೇಲೆ ಬಿದ್ದ ಹಾಗೆ ಎಂದೇ ಅರ್ಥ.
ಇನ್ನೂ ಪಾಕ ಪ್ರವೀಣೆಯರ ಬಗ್ಗೆ ಕೇಳೋದೇ ಬೇಡ. ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ತಮ್ಮ ಅಡುಗೆ ರುಚಿಯನ್ನು ಎಲ್ಲರಿಗೂ ಉಣಬಡಿಸುವ ಅವಕಾಶ. ಈ ಮೂಲಕ ಸಣ್ಣ ಮಟ್ಟಿಗೆ ಸಂಪಾದನೆ ಮಾಡುವ ಸಂತೋಷ. ಕಾಲ ಬುಡದಲ್ಲೇ ಭಾರತೀಯ ತಿನಿಸುಗಳು ಪ್ರತ್ಯಕ್ಷವಾಗೋದೆ ತಡ, ಅಡುಗೆ ಮನೆಗೆ ರಜೆ ಹಾಕುವ ಅವಕಾಶ. ನನ್ನ ಪಾಲಿಗಂತೂ ಇದು ಡಬಲ್ ಖುಷಿ.

ಈ ಅಪಾರ್ಟ್ ಮೆಂಟ್ ಗೆ ಬಂದು ಎರಡನೇ ವರ್ಷ ಆಗಿರುವ ಕಾರಣ, ನಾನು ಈ ಬಗ್ಗೆ ಅಷ್ಟೊಂದು ಯೋಚನೆ ಮಾಡಿರಲಿಲ್ಲ. ಆದರೆ ಇಲ್ಲಿಂದ ಹೊರಡುವ ಮುನ್ನ, ಕಡೇ ಪಕ್ಷ, ಇಡ್ಲಿ, ದೋಸೆ ಯ ಸ್ಟಾಲ್ ಆದ್ರೂ ಹಾಕಬೇಕು ಅನ್ನೋದು ನನ್ನ ಟಾರ್ಗೆಟ್. ಹಾಗಾದ್ರೂ ಈ ಬಿಲ್ಡಿಂಗ್ ನಲ್ಲಿ ನೆಲೆಸಿರುವ ಮಲಯ್ ಹಾಗೂ ಚೀನೀಯರಿಗೆ, ನನ್ನ ಅಡುಗೆ ಕೈ ರುಚಿ ತೋರಿಸಲೇಬೇಕು. ಬೇರೆ ಯಾವ ಸ್ಕಿಲ್ ಇಲ್ಲಾಂದ್ರೂ..!!
ಇವುಗಳ ಮಧ್ಯೆ ಕಾಣುವ, ತಾವೇ ತಯಾರಿಸಿದ ಡ್ರಾಯಿಂಗ್ಸ್, ಡ್ರೆಸ್ ಗಳು, ಆಟಿಕೆಗಳ ಸ್ಟಾಲ್ ಗಳನ್ನು ನೋಡೋದೇ ಒಂದು ವಿಶೇಷ ಅನುಭವ. ಕಚೇರಿಗೆ ಹೋಗುವ ಮಂದಿ, ಬ್ಯಾಗ್ ಹೊತ್ತು ಶಾಲೆಗೆ ತೆರಳುವ ಮಕ್ಕಳು, ವ್ಯಾಯಾಮ ಮಾಡುತ್ತಾ ಕಾಲ ಕಳೆಯುವ ವಯಸ್ಸಾದವರು, ಎಲ್ಲಾ ಕೆಲಸ ಮುಗಿಸಿ ಸ್ವಿಮ್ಮಿಂಗ್ ಪೂಲ್, ಜಿಮ್ ನತ್ತ ಮುಖ ಮಾಡುವ ಮಹಿಳೆಯರು, ಮಕ್ಕಳ ಆರೈಕೆ ಮಾಡುತ್ತಾ ಆಟ ಆಡಿಸುವ ಕೆಲಸದಾಕೆಯರು … ವರ್ಷ ಪೂರ್ತಿ ಇಷ್ಟರಲ್ಲೇ ದಿನ ಕಳೆಯುವ ಈ ನಮ್ಮ ಅಪಾರ್ಟ್ಮೆಂಟ್, ವರ್ಷದ ಕೊನೆಯ ದಿನ ಮಾತ್ರ ಕಲರ್ ಫುಲ್ ಆಗಿ ಕಂಗೊಳಿಸುತ್ತದೆ.

ಬೇರೆ ದಿನಗಳಲ್ಲಿ ಮುಖ ನೋಡಲು ಸಮಯ ಇದೆಯಾ ಇಲ್ವೋ… ಈ ದಿನ ಮಾತ್ರ ವರ್ಷದ ಎಲ್ಲಾ ದಿನಗಳ ಬಾಕಿಯನ್ನು ಒಂದೇ ಬಾರಿ ಸಂದಾಯ ಮಾಡಿದಂತೆ ಸಿಕ್ಕ ಸಿಕ್ಕವರಿಗೆ “ಹಲೋ” ಹೇಳಿದ್ದೇ ಹೇಳಿದ್ದು. ಎಲ್ಲರೂ ನಮ್ಮ ಹತ್ತಿರದ ನೆಂಟರ ಹಾಗೆ. ವಿದೇಶದ ಇದೊಂದು ಸಂಸ್ಕೃತಿ ಮೆಚ್ಚಲೇ ಬೇಕು. ಎದುರಿಗೆ ಸಿಕ್ಕವರಿಗೆ ಹಾರೈಸುವ ಕ್ರಮ. ನಮ್ಮಿಂದ ಇತರರಿಗೆ ಸಣ್ಣ ಪುಟ್ಟ ಸಮಸ್ಯೆಗಳಾದರೂ “ಕ್ಷಮಿಸಿ” ಅನ್ನುವ ಪದ್ಧತಿ. ನಾವು ಮಾಡುವ ಸಹಾಯಕ್ಕಿಂತಲೂ, ಇತರಿರೊಂದಿಗಿನ “ನಮ್ಮ ವರ್ತನೆ” ಹೆಚ್ಚಿನ ಪ್ರಾಮುಖ್ಯತೆ ಪಡೆಯೋದು ಇಲ್ಲಿನ ವಿಶೇಷತೆ.
ಮುಂಜಾನೆಯಿಂದ ರಾತ್ರಿಯವರೆಗೂ ಈ ಸ್ಟಾಲ್ ಗಳಲ್ಲಿ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಂಜೆ ಆಗುತಿದ್ದಂತೆ ಮಕ್ಕಳಿಗೆ ಮನೋರಂಜನೆಗಳು ಆರಂಭವಾಗುತ್ತವೆ. ವಿವಿಧ ಗೇಮ್ಸ್ ಗಳು, ಫ್ಯಾನ್ಸೀ ಡ್ರೆಸ್ ಸ್ಪರ್ಧೆಗಳು, ಸಂಗೀತ ರಸಸಂಜೆಗಳು ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ. ಈ ಮಧ್ಯೆ, ಅದುವರೆಗೆ ಬಿಸಿಲ ಬೇಗೆಯಿಂದ ತತ್ತರಿಸುವ ಸಿಂಗಾಪುರ, ಈ ಪಾರ್ಟೀ ದಿನವೇ ಮಳೆರಾಯ ಗುಡುಗು – ಸಿಡಿಲಿನಿಂದ ಆರ್ಭಟಿಸುವುದು ಇದೆ. ಈ ಮೂಲಕ ಅಪಾರ್ಟ್ ಮೆಂಟ್ ನ ನಿರ್ವಹಣಾ ತಂಡದ ಎಲ್ಲಾ ಯೋಜನೆಗಳನ್ನು ಬುಡಮೇಲು ಆಗೋದು ಸಾಮಾನ್ಯ.

ಬಳಿಕ ವಿಜಯಿಗಳಾದ ಅದೃಷ್ಟಶಾಲಿಗಳಿಗೆ ಲಕ್ಕಿಡಿಪ್ ಡ್ರಾ ಮೂಲಕ ಬಹುಮಾನಗಳನ್ನು ನೀಡಲಾಗುತ್ತದೆ. ಕೊನೆಯದಾಗಿ ಅಪಾರ್ಟ್ಮೆಂಟ್ ನ ಸದಸ್ಯರೆಲ್ಲರೂ ಸೇರಿ ಕೌಂಟ್ ಡೌನ್ ಮಾಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.
ಇದು ಕೇವಲ ನಮ್ಮ ಒಂದು ಅಪಾರ್ಟ್ಮೆಂಟ್ ನ ಸಂಭ್ರಮ. ಇನ್ನೂ ಇಡೀ ಸಿಂಗಾಪುರ ದೇಶದಲ್ಲಿ ನಡೆಯುವ ಪಾರ್ಟೀ – ಗಮ್ಮತ್ ಗಳಿಗೆ ಲೆಕ್ಕವೇ ಇಲ್ಲ. ಇಲ್ಲಿನ ಮರೀನಾ ಬೇ ನಲ್ಲಿ ಸರ್ಕಾರದ ವತಿಯಿಂದ ಪ್ರತಿವರ್ಷ ಒಂದು ಗಂಟೆಗೂ ಹೆಚ್ಚಿನ ಅವಧಿಯ ಸಿಡಿಮದ್ದು ಪ್ರದರ್ಶನ ನಡೆಯುತ್ತದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಮಂದಿ ಜಮಾಯಿಸುತ್ತಾರೆ. ಇದರ ಜೊತೆಗೆ ಸಂಗೀತ, ನೃತ್ಯ, ಶಾಲಾ – ಕಾಲೇಜುಗಳ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಾ ಇರುತ್ತದೆ.

ಅಪಾರ್ಟ್ಮೆಂಟ್ ನಲ್ಲಿ ನಡೆಯುವ ಹೊಸ ವರ್ಷ ಆಚರಣೆ ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾದುದಲ್ಲ. ಇಲ್ಲಿ ಎಲ್ಲ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಈ ಮೂಲಕ ಮತ್ತೆ ಪರಿಚಯ ವಿನಿಮಯ, ತಮ್ಮ ತಮ್ಮ ಆಚಾರ ವಿಚಾರಗಳ ಸಂವಾದ ಏರ್ಪಡುತ್ತವೆ. ಈ ಮೂಲಕ ಸಾಮರಸ್ಯ ಬೆಳೆಯುತ್ತದೆ. ಆಚರಣೆ ಒಂದು ನೆಪ ಅಷ್ಟೇ, ಇದರಿಂದಾಗಿ ಇಲ್ಲಿ ನೆಲೆಸಿರುವ ಎಲ್ಲ ಪಂಗಡದವರು ಒಟ್ಟಾಗಿ ಸೇರುವುದೇ ಇದರ ಪ್ರಮುಖ ಉದ್ದೇಶ. ” ಜನಾಂಗೀಯ ಸಾಮರಸ್ಯ ” ಎಂಬ ಶೀರ್ಷಿಕೆ ಅಡಿಯಲ್ಲಿ ಕೇವಲ ಅಪಾರ್ಟ್ ಮೆಂಟ್ ನಲ್ಲಿ ಮಾತ್ರವಲ್ಲದೆ, ವಲಯ, ಜಿಲ್ಲೆ, ದೇಶ ಮಟ್ಟದಲ್ಲಿ ಇಂತಹ ಅನೇಕ ರೀತಿಯ ಆಚರಣೆಗಳು ಸಿಂಗಾಪುರದಲ್ಲಿ ವರ್ಷ ಪೂರ್ತಿ ನಡೆಯುತ್ತಾ ಇರುತ್ತವೆ.

 

Firework display in Singapore.

Leave a Reply