ರಂಗಭೂಮಿ ಪ್ರೀತಿಯ ಲೋಕನಾಥ್..

ಸಂಕೇತ್ ಗುರುದತ್ತ

ಲೋಕನಾಥ್ ಅವರು ತಮ್ಮ ತಂದೆಯವರೊಂದಿಗೆ ವ್ಯಾಪಾರ ವಹಿವಾಟಲ್ಲಿ ತೊಡಗಿದ್ದರು. ಅಲ್ಲದೇ ತಮ್ಮ ದೇಹದಾಢ್ರ್ಯಕ್ಕಾಗಿ ಕನ್ನಡದ ಹಿರಿಯ ಸಾಹಿತಿ ಹಾಗೂ ಬಾಡಿ ಬಿಲ್ಡರ್ ಕೂಡ ಆಗಿದ್ದ ಕೆ ವಿ ಅಯ್ಯರ್ ಅವರ ವ್ಯಾಯಾಮ ಶಾಲೆಯಲ್ಲಿ ಸಾಮು ಕಲಿಯಲು ಹೋಗುತ್ತಿದ್ದರು. ಹೀಗೆ ಎತ್ತರದ ಆಳು ಹಾಗೂ ಸುಂದರ ಯುವಕರಾಗಿದ್ದ ಲೋಕನಾಥ್ ಅವರನ್ನು ಕೆ ವಿ ಅಯ್ಯರ್ ಅವರು ತಮ್ಮ ಗೆಳೆಯ ಹಾಗೂ `ರವಿ ಕಲಾವಿದರು ತಂಡ’ದ ರುವಾರಿಯೂ ಹಾಗೂ  ನಿರ್ದೇಶಕರೂ ಆಗಿದ್ದ ಬಿ ಎಸ್ ನಾರಾಯಣ್ ಅವರಿಗೆ ಪರಿಚಯಿಸಿದರು. ಅಲ್ಲದೇ ಅವರ ನಾಟಕದಲ್ಲಿ ನಟಿಸಲು ಅವಕಾಶ ಕೊಡಬೇಕೆಂದು ಶಿಫಾರಸ್ಸನ್ನೂ ಮಾಡಿದ್ದರು. ಆ ಘಟನೆ ಲೋಕನಾಥ್ ಅವರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಕಾಲಿಡಲು ನಾಂದಿಯಾಯಿತು.

ನಾಟಕದಲ್ಲಿ ನಟಿಸಲು ಇಷ್ಟವಿಲ್ಲದಿದ್ದರೂ ಕೆ ವಿ ಅಯ್ಯರ್ ಅವರೇ ಧೈರ್ಯ ತುಂಬಿ ಅಭಿನಯಿಸಲು ಒಪ್ಪಿಸಿದ್ದರು. ಅಲ್ಲದೇ ಈ ಮಟ್ಟಕ್ಕೆ ತಾವು ಬೆಳೆಯಲು ಕೆ ವಿ ಅಯ್ಯರ್ ಹಾಗೂ ಬಿ ಎಸ್ ನಾರಾಯಣ್ ಅವರೇ ಕಾರಣವೆಂದು ಸ್ವತಃ ಲೋಕನಾಥ್ ಅವರೇ ಸಾಕಷ್ಟು ಬಾರಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಈ ಇಬ್ಬರ ಪ್ರೋತ್ಸಾಹವನ್ನು ನಾನು ಮರೆಯುವಂತೆಯೇ ಇಲ್ಲ ಎಂದೂ ಈ ಇಬ್ಬರನ್ನು ಸದಾ ನೆನೆಯುತ್ತಿದ್ದರು. ಕೆ ವಿ ಅಯ್ಯರ್ ಅವರ ಗರಡಿಯಲ್ಲಿ ಕಲಿಯಲು ಹೋಗುತ್ತಿದ್ದ ಲೋಕನಾಥ್ ಅವರಿಗೆ ನಾರಾಯಣ್ ಅವರು ತಮ್ಮ ರವಿ ಕಲಾವಿದರು ಗರಡಿಯಲ್ಲಿ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟು ಕಲಾವಿದನನ್ನಾಗಿ ರೂಪಿಸಿದರು.

ಮೊಟ್ಟ ಮೊದಲ ಬಾರಿಗೆ ನಟಿಸಿದ್ದು ಕೈಲಾಸಂ ಅವರ `ಬಂಡ್ವಾಳವಿಲ್ಲದ ಬಡಾಯಿ’ ನಾಟಕದಲ್ಲಿ. ಆನಂತರ `ತನುವು ನಿನ್ನದೇ ಮನವು ನಿನ್ನದೇ’ ನಾಟಕದಲ್ಲಿ ಸುಮಾರು 23ರ ಹರೆಯದ ಲೋಕನಾಥ್ ಅವರಿಗೆ ಅಪ್ಪನ ಪಾತ್ರ ಕೊಟ್ಟಿದ್ದರು. ಆ ನಾಟಕದ ಮೊದಲ ಪ್ರದರ್ಶನದಲ್ಲೇ ಲೋಕನಾಥ್ ಅವರಿಗೆ `ಉತ್ತಮ ನಟ ಪ್ರಶಸ್ತಿ’ ಕೂಡ ಸಿಕ್ಕಿತ್ತು.

ಈ ನಾಟಕವನ್ನು ನೋಡಲು ಬಂದವರಲ್ಲಿ ನಾಡಿನ ಶ್ರೇಷ್ಟ ನಿರ್ದೇಶಕ ಪುಟ್ಟಣ್ಣನವರು ಇದ್ದರು. ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದ ಲೋಕನಾಥ್ ಅವರನ್ನು ಮೆಚ್ಚಿ ಮಾತಾಡಿಸಿ ಬೆನ್ನುತಟ್ಟಿದ್ದೇ ಅಲ್ಲದೇ ತಮ್ಮ `ಗೆಜ್ಜೆ ಪೂಜೆ’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಲೋಕನಾಥ್ ಅವರಿಗೆ ನಾಟಕದಲ್ಲಿ ನಟಿಸುವುದೇ ಇಷ್ಟವಿರಲಿಲ್ಲ. ಆದರೂ ಕೆವಿ ಅಯ್ಯರ್ ಅವರ ಮಾತಿಗೆ ಕಟ್ಟುಬಿದ್ದು ನಟಿಸುತ್ತಿದ್ದರು. ಹಾಗಿದ್ದಲ್ಲಿ ಸಿನಿಮಾದಲ್ಲಿ ನಟಿಸಲು ಪುಟ್ಟಣ್ಣ ಅವರು ಕೊಟ್ಟ ಅವಕಾಶ ಕೂಡ ಅವರಿಗೆ ಬೇಕಿರಲಿಲ್ಲ. ಆಗ ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುವುದೆಂದರೆ ದೊಡ್ಡ ಕನಸೇ ಆಗಿತ್ತು. ಇಂತಹ ಅವಕಾಶವನ್ನು ಬಿಡಬಾರದೆಂದು ನಟ ಶಿವರಾಮ್, ಕೆ ವಿ ಅಯ್ಯರ್ ಹಾಗೂ ನಾರಾಯಣ್ ಎಲ್ಲರೂ ಆ ಸಿನಿಮಾದಲ್ಲಿ ನಟಿಸುವಂತೆ ಲೋಕನಾಥ್ ಅವರನ್ನು ಹುರಿದುಂಬಿಸಿ ಒಪ್ಪಿಸಿದರು. `ಗೆಜ್ಜೆ ಪೂಜೆ’ಯ ಪಾತ್ರ ಪೋಷಣೆ ಹಾಗೂ ಶಿಸ್ತನ್ನು ನೋಡಿ ಲೋಕನಾಥ್ ಅವರನ್ನು ಪುಟ್ಟಣ್ಣ ಬಹುವಾಗಿ ಮೆಚ್ಚಿದ್ದರು. ಆ ನಂತರ ಅವರ ಸಾಕಷ್ಟು ಚಿತ್ರಗಳಲ್ಲೂ ನಟಿಸಲು ಅವಕಾಶ ಕೊಟ್ಟರು. ಪುಟ್ಟಣ್ಣನವರೇ ಅಲ್ಲದೇ ಹಲವು ನಿರ್ದೇಶಕರ ಚಿತ್ರಗಳಲ್ಲೂ ಸಾಕಷ್ಟು ಅವಕಾಶಗಳು ಹುಡುಕಿ ಬರಲು ತೊಡಗಿದವು.

ಸಿನಿಮಾದಲ್ಲಿ ಹೆಚ್ಚೆಚ್ಚು ಅವಕಾಶಗಳು ಬಂದರೂ ನಾಟಕದಲ್ಲಿ ನಟಿಸುವುದನ್ನು ಬಿಡಲಿಲ್ಲ. ರಾಜ್ಯದ ಉದ್ದಗಲ್ಲಕ್ಕೂ ಓಡಾಡಿ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಸಿನಿಮಾ ಕ್ಷೇತ್ರದಲ್ಲಷ್ಟೇ ಅಲ್ಲದೇ ರಂಗ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದು ಲೋಕನಾಥ್ ಅವರಲ್ಲಿದ್ದ ರಂಗಭೂಮಿಯ ಪ್ರೀತಿಗೆ ದ್ಯೋತಕವಾಗಿದೆ. ರಂಗಭೂಮಿಗೆ ಪರಿಚಯಿಸಿದ ಬಿ ಎಸ್ ನಾರಾಯಣ್ ಅವರ `ರವಿ ಕಲಾವಿದರು’ ತಂಡದಲ್ಲಿ ನಿರಂತರವಾಗಿ 25 ವರ್ಷಗಳಿಗೂ ಹೆಚ್ಚು ವರ್ಷಗಳು ನಟಿಸುತ್ತಲೇ ಇದ್ದದ್ದು ಅವರ ಗುರುಭಕ್ತಿ ಹಾಗೂ ರಂಗದ ನಂಟನ್ನು ಎತ್ತಿ ಹಿಡಿಯುತ್ತದೆ.

ಆ ಕಾಲದಲ್ಲಿ ನಾಟಕಗಳಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದ ಲೋಕನಾಥ್ ಅವರು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸುತ್ತಿದ್ದರು. ಆನಂತರ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಮುಂದಾದರು. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರ ಭೂತಯ್ಯನ ಮಗ ಅಯ್ಯು’ ಚಿತ್ರಗಳಲ್ಲಿ ಹಾಗೂ ಅನಂತರದ ಶಂಕರ್ ನಾಗ್ ಅವರ ನಿರ್ದೇಶನದ `ಮಿಂಚಿನ ಓಟ’ ಹಾಗೂ ಇತ್ತೀಚಿನ ಸುನಿಲ್ ಕುಮಾರ್ ದೇಸಾಯಿಯವರ `…ರೇ’ ಚಿತ್ರಗಳಲ್ಲೂ ನಟಿಸಿದ್ದು ಅಂಕಲ್ ಲೋಕನಾಥ್ ಅವರ ಹೆಗ್ಗಳಿಕೆಯೇ ಸರಿ.

 

Leave a Reply