ಪೂರ್ಣಕುಂಭವಲ್ಲ…ಪುಸ್ತಕ ಹೊರುವಂತಾಗಲಿ..

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ

ಶ್ರೀ ಚಂದ್ರಶೇಖರ ಕಂಬಾರರಿಗೆ,

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಗಾತಿಗಳಿಂದ ಪ್ರೀತಿಯ ನಮಸ್ಕಾರಗಳು.

ನಿಮ್ಮ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ತಯಾರಿಗಳು ಭರದಿಂದ ನಡೆದಿದ್ದು ಅದು ಯಶಸ್ವಿಯಾಗಿ ನಡೆಯಲೆಂದು ಹಾರೈಸುತ್ತೇವೆ. ಈ ಸಮ್ಮೇಳನವು ಇನ್ನೂ ಅರ್ಥಪೂರ್ಣವಾಗುವ ನಿಟ್ಟಿನಲ್ಲಿ ಬುದ್ಧ, ಗಾಂಧಿ ಮತ್ತು ಅಂಬೇಡ್ಕರರು ಪ್ರತಿಪಾದಿಸಿದ ಅಹಿಂಸೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಂಬುವ ನಾವು ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಬಯಸುತ್ತೇವೆ.

• ಸರ್ವಧರ್ಮಗಳ ಜನರು ಭಾಗವಹಿಸುವ ಸಮ್ಮೇಳನದಲ್ಲಿ 1001 ಸುಮಂಗಲಿಯರು ಪೂರ್ಣಕುಂಭ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿದು ಆಘಾತ, ಆಶ್ಚರ್ಯವಾಯಿತು. ಮಹಿಳೆಯರನ್ನು ಅಮಂಗಲಿಯರು-ಸುಮಂಗಲಿಯರು ಎಂದು ವಿಭಜಿಸದೇ ಭಾರತದ ಪ್ರಬುದ್ಧ ಪ್ರಜೆಗಳೆಂದು ಪರಿಗಣಿಸಬೇಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ಸಲ್ಲಿಸಿರುವ ಮಹಿಳೆಯರನ್ನು ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆಗೂ ಪರಿಗಣಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.

• ಇನ್ನುಮುಂದೆ ಸಮ್ಮೇಳನದ ಮೆರವಣಿಗೆಯಲ್ಲಿ ನಮ್ಮ ಆಶೋತ್ತರ, ಸ್ಫೂರ್ತಿಯ ಮೂಲವಾದ ಸಂವಿಧಾನವೂ ಸೇರಿದಂತೆ 1001 ಕನ್ನಡ ಪುಸ್ತಕಗಳನ್ನು ಸ್ತ್ರೀಪುರುಷರೆಲ್ಲರೂ ತಲೆ ಮೇಲೆ ಹೊತ್ತು ಸಾಗಿದರೆ ನಾಡು-ನುಡಿಗೂ ಗೌರವ ಬರುವುದು ಹಾಗೂ ನುಡಿಗೆ, ನುಡಿಜಾತ್ರೆಗೊಂದು ಹೊಸ ಮೌಲ್ಯ ಕೊಟ್ಟಂತಾಗುವುದು. ಈ ವರ್ಷದಿಂದಲೇ ಧಾರವಾಡ ಸಮ್ಮೇಳನ ಮೇಲ್ಪಂಕ್ತಿ ಹಾಕಿಕೊಟ್ಟು ಹೊಸ ಮಾದರಿಯಾಗಿ ಈ ಬದಲಾವಣೆ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತೇವೆ.

• ಒಕ್ಕೂಟವು ಸಫಾಯಿ ಕರ್ಮಚಾರಿಗಳ ಮಾನವ ಹಕ್ಕು ಹೋರಾಟವನ್ನು ಬೆಂಬಲಿಸುತ್ತದೆ. ಹಸಿದವರ ಆಹಾರ ಹಕ್ಕು, ಮತ್ತು ಶುದ್ಧ ನೆಲಜಲಗಳ ಹಕ್ಕುಗಳನ್ನು ಗೌರವಿಸುತ್ತದೆ. ಎಂದೇ ಸಮ್ಮೇಳನದ ಆವರಣದಲ್ಲಿ ಬೇಕಾಬಿಟ್ಟಿ ಕಸ ಎಸೆಯದಂತೆ, ಶೌಚಾಲಯಗಳನ್ನು ಗಲೀಜು ಮಾಡದಂತೆ, ಪ್ಲಾಸ್ಟಿಕ್ ಬಳಸದಂತೆ, ಆಹಾರವನ್ನು ಚೆಲ್ಲದಂತೆ ಕಟ್ಟುನಿಟ್ಟಾಗಿ ಸಾಹಿತ್ಯಾಸಕ್ತರಿಗೆ ತಿಳಿಸಬೇಕೆಂದು ಒತ್ತಾಯಿಸುತ್ತೇವೆ.

ನಾಡಿನ ಹಿರಿಯ ಚಿಂತಕರೂ, ಪ್ರಗತಿಪರ ಕವಿಯೂ ಆದ ನೀವು ಕನ್ನಡ ನಾಡು-ನುಡಿ-ಸಂಸ್ಕೃತಿಗಳ ಬಗೆಗೆ ಕಾಳಜಿ, ಅಭಿಮಾನ ಹೊಂದಿರುವ ನಮ್ಮ ಹಕ್ಕೊತ್ತಾಯಗಳನ್ನು ಅರ್ಥಮಾಡಿಕೊಂಡು, ಸೂಕ್ತ ಕ್ರಮ ಕೈಗೊಂಡು, ಬೆಂಬಲಿಸುತ್ತೀರೆಂಬ ನಂಬಿಕೆಯಲ್ಲಿ ಶುಭಾಶಯಗಳೊಂದಿಗೆ,

– ಕರ್ನಾಟಕ ರಾಜ್ಯ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ

ಸಂಗಾತಿಗಳು.

 

1 comment

Leave a Reply