‘ರಾಮ ರೂಪಕವಾಗಿಯೇ ಇರಲಿ ನಿರೂಪಕನಾಗಬೇಕಿಲ್ಲ’

ನಾ ದಿವಾಕರ 


ಪ್ರೊ ಕೆ ಎಸ್ ಭಗವಾನ್ ಅವರ ರಾಮ ಮಂದಿರ ಏಕೆ ಬೇಡ ಎನ್ನುವ ಕೃತಿ ವಿವಾದಕ್ಕೀಡಾಗಿದ್ದು, ಲೇಖಕರು ತಮ್ಮ ಅವಹೇಳನಕಾರಿ ಎನ್ನಲಾಗುವ ಅಭಿಪ್ರಾಯಗಳಿಗೆ ರಾಮಭಂಟರ ಕೆಂಗಣ್ಣಿಗೆ ಗುರಿಯಾಗಬೇಕಿದೆ. ಒಂದು ರೀತಿಯಲ್ಲಿ ವಾಲ್ಮೀಕಿಯ ರಾಮನೂ ಸಹ ಭಾರತೀಯತೆಯ ಹಾಗೆಯೇ ಸಾಂಸ್ಕೃತಿಕ ರಾಜಕೀಯದ ಪಂಜರದಲ್ಲಿ ಸಿಲುಕಿ ಗೊಂದಲ ಮೂರ್ತಿಯಾಗಿಬಿಟ್ಟಿದ್ದಾನೆ. ವಾಲ್ಮೀಕಿಯ ರಾಮನಿಗೂ ಅಯೋಧ್ಯೆಯ ರಾಮನಿಗೂ ಇರುವ ವ್ಯತ್ಯಾಸ ಮತ್ತು ಅಂತರವನ್ನು ರಾಮಾಯಣದ ಗ್ರಂಥಗಳಲ್ಲಿ ಹುಡುಕಲು ಸಾಧ್ಯವಾಗದಿರಬಹುದು. ಆದರೆ ಕಳೆದ ಮೂರು ದಶಕಗಳ ರಾಜಕೀಯದ ಪುಟ ಪುಟಗಳಲ್ಲೂ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ತಮ್ಮ ಕೃತಿಯ ಉದ್ದೇಶವನ್ನು ಅರಿತು ಪ್ರೊ ಈ ಅಂತರವನ್ನು ಗ್ರಹಿಸಿದ್ದರೆ ಬಹುಶಃ ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ರಾಮನ ಗುಣಾವಗುಣಗಳು, ನಡತೆ ಮತ್ತು ವರ್ತನೆ, ನಿಲುವು ಮತ್ತು ನಿರ್ಧಾರ ಇವೆಲ್ಲವೂ ವಾಲ್ಮೀಕಿ ಮತ್ತು ಇತರ ರಾಮಾಯಣದ ರಚಯಿತರಿಗೆ ಸಲ್ಲಬೇಕಾದ ಸಂಗತಿಗಳು.

ಆದರೆ ರಾಮಮಂದಿರ ಇಂದಿನ ಅಯೋಧ್ಯಾ ರಾಮನ ಸೃಷ್ಟಿಕರ್ತರಿಗೆ ಸಲ್ಲಬೇಕಾದ ಸಂಗತಿ. ರಾಮಮಂದಿರ ರಾಜಕೀಯ ವಿವಾದ, ವಾಲ್ಮೀಕಿಯ ರಾಮ ಮಹಾನ್ ಕಾವ್ಯದ ಒಂದು ಪಾತ್ರ. ಆ ಪಾತ್ರದ ಯಾವುದೇ ಗುಣಗಳೂ ಮಂದಿರದ ನಿರ್ಮಾಣಕ್ಕೆ ಮಾನದಂಡವಾಗುವುದಿಲ್ಲ. ಪ್ರಸ್ತುತ ಕೋಮುವಾದಿ ರಾಜಕಾರಣ, ಫ್ಯಾಸಿಸ್ಟ್ ತಂತ್ರಗಾರಿಕೆ ಮತ್ತು ಸರ್ವಾಧಿಕಾರಿ ಧೋರಣೆಯ ರಾಜಕೀಯ ನೆಲೆಯಲ್ಲಿ ರಾಮ ಪ್ರಸ್ತುತನೇ ಅಲ್ಲ ಆದರೆ ರಾಮಮಂದಿರ ಸದಾ ಪ್ರಸ್ತುತವಾಗುತ್ತದೆ. ಏಕೆಂದರೆ ಅದು ರಾಜಕೀಯ ಬಂಡವಾಳದ ಕೇಂದ್ರಬಿಂದು ಆಗಿದೆ.

ರಾಮ ಮಂದಿರ ಏಕೆ ಬೇಡ ಎನ್ನುವ ಪ್ರಶ್ನೆಯನ್ನು ರಾಜಕೀಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅಯೋಧ್ಯೆ 1989ಕ್ಕೂ ಮುನ್ನ ಸಮಸ್ತ ಭಾರತೀಯರ ಅಥವಾ ಹಿಂದೂಗಳ ಪವಿತ್ರ ಯಾತ್ರಾಸ್ಥಳ ಆಗಿರಲಿಲ್ಲ. ಹಾಗೆಯೇ ರಾಮಾಯಣದ ರಾಮ ಆರಾಧನೆಯ ಕೇಂದ್ರವೂ ಆಗಿರಲಿಲ್ಲ.

ರಾಮಮಂದಿರಗಳು ಭಜನೆಯ ಕೇಂದ್ರಗಳಾಗಿದ್ದವೇ ಹೊರತು ಆಚರಣೆಯ ಕೇಂದ್ರಗಳಾಗಿರಲಿಲ್ಲ. ತನ್ನ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಂಘಪರಿವಾರಕ್ಕೆ ಅಯೋಧ್ಯೆಯ ರಾಮ ಅಪ್ಯಾಯಮಾನವಾಗಿದ್ದೇಕೆ ಎನ್ನುವ ಜಟಿಲ ಪ್ರಶ್ನೆಗೆ ಉತ್ತರ ವಾಲ್ಮೀಕಿ ರಾಮಾಯಣದಲ್ಲಿ ದೊರೆಯವುದಿಲ್ಲ. ಬದಲಾಗಿ ಭಾರತದಲ್ಲಿ ಮಾತ್ರವಲ್ಲದೆ ಅನ್ಯ ದೇಶಗಳಲ್ಲೂ ಪ್ರಚಲಿತವಾಗಿರುವ ನೂರಾರು ರಾಮಾಯಣಗಳಲ್ಲಿ ದೊರೆಯುತ್ತದೆ. ರಾಮಾನುಜಂ ಅವರ ಮುನ್ನೂರು ರಾಮಾಯಣ ಕೃತಿಯಲ್ಲಿ ದೊರೆಯುತ್ತದೆ. ವಾಲ್ಮೀಕಿ, ಭವಭೂತಿ, ಕಾಳಿದಾಸ ಮುಂತಾದ ಮಹಾನ್ ಕವಿಗಳ ಸ್ಮೃತಿಗಳಲ್ಲಿ ಅರಳಿದ ರಾಮ, ಕಬೀರ್ ದಾಸ, ತುಳಸೀದಾಸ ಮುಂತಾದ ಸಂತರ ಸ್ಮೃತಿಗಳಲ್ಲಿ ಅರಳಿದ ರಾಮ, ಬೌದ್ಧ, ಜೈನ ಮತ್ತು ಜನಪದ ಸಂಸ್ಕೃತಿಯ ನೆಲೆಯಲ್ಲಿ ಅರಳಿದ ರಾಮ , ಕಂಬನ್, ಕುವೆಂಪು, ಗಾಂಧೀಜಿ ಮುಂತಾದ ದಾರ್ಶನಿಕರ ಕುಂಚದಲ್ಲಿ ಅರಳಿದ ರಾಮ ಮೂಲತಃ ಒಂದೇ ಆದರೂ ವೈವಿಧ್ಯಮಯವಾಗಿರುವುದನ್ನು ಗಮನಿಸಬೇಕು.

ರಾಮ ಚಾರಿತ್ರಿಕ ವ್ಯಕ್ತಿಯಲ್ಲ ಆದರೆ ಚರಿತ್ರೆಯ ವಿಭಿನ್ನ ಘಟ್ಟಗಳಲ್ಲಿ ರೂಪಕವಾಗಿ ಬಳಸಲ್ಪಟ್ಟಿದ್ದಾನೆ. ವಾಲ್ಮೀಕಿಯ ರಾಮನೇ ಓದುಗರಿಗೆ ಕೆಲವು ಸಂದರ್ಭಗಳಲ್ಲಿ ದೇವರ ಅವತಾರವಾಗಿ ಕಂಡರೆ ಇನ್ನೊಮ್ಮೆ ದೈವಾಂಶ ಸಂಭೂತ ಪುರುಷನಾಗಿ ಕಾಣುತ್ತಾನೆ. ಕೆಲವೆಡೆ ಸಾಮಾನ್ಯ ಮನುಷ್ಯನಂತೆ ಕಾಣುತ್ತಾನೆ. ಸೀತಾ ಪರಿತ್ಯಾಗ, ಶಂಭೂಕ ವಧೆಯ ಸಂದರ್ಭಗಳಲ್ಲಿ ಮಾನವ ಸಹಜ ಗುಣಗಳನ್ನು ಪ್ರತಿನಿಧಿಸುತ್ತಾನೆ. ಎ ಎನ್ ಮೂರ್ತಿರಾಯರ ಪೂರ್ವಸೂರಿಗಳೊಡನೆ ಕೃತಿಯಲ್ಲಿ ಇದನ್ನು ವಿಹಂಗಮವಾಗಿ ಚಿತ್ರಿಸಲಾಗಿದೆ. ಹಾಗಾಗಿ ರಾಮನ ವ್ಯಕ್ತಿತ್ವವನ್ನು ಒಂದೇ ನಿರ್ದಿಷ್ಟ ಚೌಕಟ್ಟಿನಲ್ಲಿ ವಿಶ್ಲೇಷಿಸುವಾಗ ಎಚ್ಚರ ವಹಿಸಬೇಕಾಗುತ್ತದೆ. ಸಮಕಾಲೀನ ಸಾಂಸ್ಕೃತಿಕ ನೆಲೆಯಲ್ಲಿ ರಾಮನನ್ನು ತಂದು ನಿಲ್ಲಿಸಿ ನೋಡುವಾಗ ನಾವು ಬಳಸುವ ಭಾಷೆಯೂ ಸಮಕಾಲೀನವೇ ಆದರೆ ಅದು ವಾಲ್ಮೀಕಿಗೆ ಅವಮಾನ ಮಾಡಿದಂತಾಗುತ್ತದೆ. ಬಹುಶಃ ಭಗವಾನ್ ತಮ್ಮ ಕೃತಿಯಲ್ಲಿ ಈ ತಪ್ಪು ಮಾಡಿದ್ದಾರೆ. ಇತಿಹಾಸದ ಚೌಕಟ್ಟಿನಲ್ಲಿ ಬಂಧಿಸಲಾಗದ ಪುರಾಣ ಕಥನವನ್ನು ಚಾರಿತ್ರಿಕ ಪರಿಭಾಷೆಯಲ್ಲಿ ವಿಶ್ಲೇಷಿಸುವುದು ಮತ್ತು ಸಮಕಾಲೀನ ಸಾಂದರ್ಭಿಕ ಭಾಷೆಯಲ್ಲಿ ಪರಾಮರ್ಶಿಸುವುದು ಅನಗತ್ಯ ಎನಿಸುತ್ತದೆ. ಇಂತಹ ಸೂಕ್ಷ್ಮತೆಗಳನ್ನು ಯಾವುದೇ ಲೇಖಕರು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಭಗವಾನ್ ಇಲ್ಲಿ ಕೊಂಚ ಎಡವಿದ್ದಾರೆ ಎನಿಸುತ್ತದೆ. ಹಾಗೆಂದ ಮಾತ್ರಕ್ಕೆ ಭಗವಾನ್ ವಿರೋಧಿಗಳ ಆಟಾಟೋಪಗಳನ್ನು ಮೌನವಾಗಿ ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ. ವಿದ್ಯುನ್ಮಾನ ಮಾಧ್ಯಮಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅನೇಕರು ಬಹುಶಃ ವಾಲ್ಮೀಕಿ ರಾಮಾಯಣದ ಮುಖಪುಟವನ್ನೂ ನೋಡಿರಲಿಕ್ಕಿಲ್ಲ. ರಾಮನ ವ್ಯಕ್ತಿತ್ವವನ್ನು ಕುರಿತು ನಡೆಯುವ ಚರ್ಚೆಗಳಲ್ಲಿ ಸಾವಿರಾರು ವರ್ಷಗಳ ಹಿಂದಿನ ರಾಮನಿಗಿಂತಲೂ ಹೆಚ್ಚಾಗಿ 1989ರ ಅಯೋಧ್ಯೆಯ ರಾಮನೇ ಪ್ರಧಾನವಾಗಿ ಕಾಣುತ್ತಾನೆ. ಭಾವೋನ್ಮಾದದ ನೆಲೆಯಲ್ಲಿ, ಉನ್ಮತ್ತ ರಾಜಕಾರಣದ ನೆಲೆಯಲ್ಲಿ ಕಳೆದುಹೋಗಿರುವ ವಾಲ್ಮೀಕಿಯ ರಾಮ ಉದ್ವೇಗಭರಿತ ಸಾಂಸ್ಕೃತಿಕ ರಾಯಭಾರಿಗಳಿಗೆ ಪಗಡೆಯ ಕಾಯಿ ಮಾತ್ರವಾಗಿರುವುದು ಸ್ಪಷ್ಟ. ಹಾಗಾಗಿಯೇ ವಿದ್ಯುನ್ಮಾನ ಮಾಧ್ಯಮಗಳ ಚರ್ಚೆಗಳಲ್ಲಿ ಸಾಹಿತ್ಯಕ ಬಿಂದು ಕಾಣೆಯಾಗಿರುತ್ತದೆ ರಾಜಕೀಯ ಅಲೆ ಎದ್ದು ಕಾಣುವಂತಿರುತ್ತದೆ.

ಭಾರತದ ಸಂದರ್ಭದಲ್ಲಿ ಶತಮಾನಗಳಿಂದಲೂ ರಾಮ ಒಂದು ರೂಪಕವಾಗಿಯೇ ಉಳಿದಿದ್ದಾನೆ. ರಾಷ್ಟ್ರಕವಿ ಕುವೆಂಪು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಇದೇ ರೂಪಕವನ್ನು ಅದ್ಭುತವಾಗಿ ಚಿತ್ರಿಸಿ ಅಂದಿನ ಕಾಲಘಟ್ಟದ ಸಾಮಾಜಿಕ-ಸಾಂಸ್ಕೃತಿಕ ನೆಲೆಯನ್ನು ಬಿಡಿಸಿದ್ದಾರೆ. ಅಂಬೇಡ್ಕರ್ ತಮ್ಮ ಅಧ್ಯಯನದ ಮೂಲಕ ಈ ರೂಪಕದ ವೈರುಧ್ಯಗಳನ್ನು ಪ್ರತಿರೋಧದ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರಗತಿಪರರಿಗೆ ಇದು ಮಾರ್ಗದರ್ಶಕವಾಗಬೇಕು. ಉನ್ಮತ್ತ ಮನಸುಗಳಿಗೆ ಇದು ಅರ್ಥವಾಗುವುದಿಲ್ಲ ಎನ್ನುವುದು ಬೇರೆ ಮಾತು.

 

4 comments

  1. ಭಗವಾನ್ ಅವರ ವಿಚಾರಗಳನ್ನು ವಿರೋಧಿಸಿದವರೆಲ್ಲ ರಾಮಭಕ್ತರಾಗಬೇಕೆಂದಿಲ್ಲ. ತಾನೇ ನಿಧಿಯನ್ನು ಹೂಳಿ ಅದನ್ನೇ ಉತ್ಖನನ ಮಾಡುವವರು ಭಗವಾನರ. ಮುಪ್ಪಾಳ ರಂಗನಾಯಕಮ್ಮನವರೋ ಮತ್ತಾರೋ ಅವರಂತಹವರಿಂದ ಪ್ರೇರಿತರಾಗಿ ಬರೆಯುವ ಅವರು ವಿಚಾರವಾದಿ ಅನ್ನುವುದಕ್ಕಿಂತ ಉದ್ರೇಕಕಾರಿ ಎನ್ನುವುದೇ ನಿಜ. ಅವರ ವಿರೋಧ ಯಾವುದರ ಬಗ್ಗೆ ಎಂದೇ ಅರ್ಥವಾಗುವುದಿಲ್ಲ. ಭೈರಪ್ಪನವರು ಒಂದು ದಿಕ್ಕಾದರೆ ಇವರು ಇನ್ನೊಂದು. ಎರಡೂ ಅಪಾಯಕಾರಿ.

    • ನಿಜ ಅವರನ್ನು ವಿರೋಧಿಸುವವರೆಲ್ಲಾ ರಾಮಭಕ್ತರಲ್ಲ ಆದರೆ ಅವರ ವಿರುದ್ಧ ಅರಚಾಡುತ್ತಿರುವವರು ರಾಮಭಕ್ತರು ನಮ್ಮದು ತಾತ್ವಿಕ ಅವರದು ಉನ್ಮತ್ತ

Leave a Reply