ನೋವಿನೂರಲಿ ಸೋಲು ಹೊತ್ತವನು

ಸುಗತ

ನೋವನ್ನು ಎರವಲಾಗಿ ಪಡೆಯುವ ಕಲೆ
ಹುಟ್ಟಿನಿಂದಲೇ ಬಂದಿದೆಯೆನ್ನುವಷ್ಡು
ನನ್ನಲ್ಲೀಗ ಅದು ಕರಗತ
ಬೇನೆಗಳನ್ನು ಶುಲ್ಕಸಮೇತ ಚುಕ್ತಾ ಮಾಡಿ
ನೆಮ್ಮದಿಯ ರಾತ್ರಿಗಳಿಗೆ ಹೃದಯವನ್ನು ನೂಕಿದವರು
ಯಾರಾದರೂ ಇದ್ದಾರೆಯೆ

ಖುಷಿಗಳು ಬೇಟೆಯಾಡಿ ಸಾಯಿಸುವಾಗ
ಎಲ್ಲೂ ಸುಳಿಯದ ಆಯುಷ್ಯದ ಚಿಂತೆ
ನನ್ನದೆಲ್ಲವನ್ನೂ ಕಸಿದ ನೋವು
ನನ್ನನ್ನೇ ಅಲ್ಲಿ ಪಟ್ಟಗಟ್ಟಿದಾಗ
ನೆರೆ ರಾಜ್ಯದ ದಾಳಿಗೆ
ಯವ್ವನ ಬಯಸುವುದೇಕೆ

ಯಾಕೆ ನನಗೆ ನಿರ್ಧರಿಸಲಾಗುತ್ತಿಲ್ಲ
ಸ್ವರ್ಗದ ಯಾವ ಖಚಿತತೆಯೂ ಇಲ್ಲದಿರುವಾಗ
ನರಕವನ್ನು ದೂರುತ್ತಿರುವುದಾದರೂ ಯಾಕೆ
ಸೋಲುಗಳ ಮರಣಶಯ್ಯೆಯ ಕನಸುಕಾಣುವ ನನ್ನಿಂದ
ಗಾಯಗಳನ್ನು ಹೊಲೆಯಲು
ಒಂದು ದಾರವನ್ನೂ ಖರೀದಿಸಲಾಗುತ್ತಿಲ್ಲವಲ್ಲ

ನಾನೀಗ
ನೋವಿನೂರಲಿ ಸೋಲು ಹೊತ್ತವನು
ಹಣೆಬರಹದ ಹಸ್ತಾಕ್ಷರದಲ್ಲಿ ಅದೃಷ್ಟ ಪದದ
ಕಾಗುಣಿತದ ದೋಷಕ್ಕೆ ಒಳಗಾಗಿ
ಕೇಡಿನ ಪಾಲಲ್ಲಿ ದೇವರನ್ನು ಸಂದೇಹಿಸಿದವನು
ನನ್ನ ನೋವಿಗೀಗ ನಾನೇ ರಾಗ ಸಂಯೋಜಿಸಬೇಕಿದೆ
ಕೋಗಿಲೆ ಹಾಡುವುದು ಯಾವಾಗಲೂ ಖುಷಿಯಿಂದಲೇ ಅಲ್ಲವಲ್ಲ

1 comment

Leave a Reply