ಕಿನಾರೆಯಲಿ ಬಿದ್ದ ಖಾಲಿ ಪತ್ರ..

ಸದಾಶಿವ್ ಸೊರಟೂರು

ಥಂಡಾ ಥಂಡಾ
ಅನ್ನುತ್ತಾ ಎದುರಿಗೆ
ಪಾನೀಯ ಮಾರಲು-
ನಿಂತ ಹುಡುಗನಿಗೂ
ಬಿಸಿಲು
ಕರುಣೆ ತೋರಿಸಿರಲಿಲ್ಲ

ಕಿನಾರೆಗೆ ಇಳಿದವರೆಲ್ಲಾ
ಪಾನೀಯ ಹೀರಿ
ದಡದಲ್ಲಿ ಅಲೆಗಳನ್ನು ತಬ್ಬಿಕೊಂಡು
ಕೂತು ಬಿಡುತ್ತಿದ್ದರು;
ಬಿಸಿಲಿಗೆ  ಸವಾಲು!

ಸಮುದ್ರದ ನೆಂಟಸ್ಥಿಕೆ ಬಯಸಿ
ವಿನಮ್ರವಾಗಿ ಬಾಗಿ
ಅತ್ತ ಕಡೆಯೇ ಚಾಚಿಕೊಂಡ
ತೆಂಗನ್ನು ಏರಿ ಕೂತೆ
ನೋಡುವವರಿಗೆ ತಂಪು ಉಣ್ಣಲು
ಬಂದವನಂತಿದ್ದೆ!

ಒಂದು ಕಟ್ಟಿನಷ್ಟು ಪತ್ರಗಳು
ಜೇಬಿನಿಂದ  ಕೈಗೆ ಬಂದು ಕೂತವು
‘ಹೌದು’ ನಾನು ತಂಪಾಗಬೇಕು,
ನೆನಪು ಮತ್ತು ಆಕಾಶ ಇಷ್ಟೇ ಸಾಕು!

ಪತ್ರಗಳನ್ನು ಗಾಳಿ ಕೈಗಿಟ್ಟು
ಅಲೆಗೆ ಒಪ್ಪಿಸಲು ಹೇಳಿದೆ
ಅವುಗಳದು ಎಂತಹ ನಿಷ್ಠೆ?
ಅಕ್ಷರಗಳನ್ನು ನುಂಗಿ ಹಾಳೆಗಳನ್ನು
ದಡಕ್ಕೆ ತಂದು ಎಸೆದವು!

ಜೋಡಿ ಪಾದಗಳನ್ನು ಮೂಡಿಸಿದ್ದ
ಕಿನಾರೆಯೇ
ಇಂದು ಅಲೆಗಳನ್ನು ಕರೆ ತಂದು ಅಳಿಸಿತ್ತು!
ಎರಡರಲ್ಲೂ ಅದೇ ನಿಷ್ಠೆ
ಅದರದ್ದು!
ಉಳಿದಿದ್ದು ಮಾತ್ರ ಅಕ್ಷರ ತೊಳೆದುಕೊಂಡು
ಬಂದು ಬಿದ್ದು ಖಾಲಿ ಪತ್ರ…

Leave a Reply