ತನ್ನ ನಿಬಂಧನೆಗೆ ಎಳ್ಳುನೀರು ಬಿಟ್ಟ ಕನ್ನಡ ಸಾಹಿತ್ಯ ಪರಿಷತ್ತು?

ರೂಪ ಹಾಸನ

ತನ್ನ ನಿಬಂಧನೆಗೆ ಎಳ್ಳುನೀರು ಬಿಟ್ಟ ಕನ್ನಡ ಸಾಹಿತ್ಯ ಪರಿಷತ್ತು?
ಕನ್ನಡ ಸಾಹಿತ್ಯ ಪರಿಷತ್ತು ತನ್ನ 103 ವರ್ಷಗಳನ್ನು ಮುಗಿಸಿದೆ! ಹಾಗೇ 83 ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನೂ, ರಾಜ್ಯದಾದ್ಯಂತಾ ಬಹುಶಃ ಸಾವಿರಕ್ಕೂ ಹೆಚ್ಚು ಜಿಲ್ಲಾ, ತಾಲ್ಲೂಕು, ಹೋಬಳಿ ಸಾಹಿತ್ಯ ಸಮ್ಮೇಳನಗಳನ್ನು ಮಾಡಿ ಮುಗಿಸಿದೆ.

ಕಸಾಪದ ಹುಟ್ಟಿಗೆ ಕಾರಣವೇನೆಂದು ನೋಡಿದರೆ- ಅದರ ನಿಬಂಧನೆಯಲ್ಲಿ[ಬೈಲಾ] ಬಹಳ ಮುಖ್ಯವಾಗಿ ಅದರ ಉದ್ದೇಶ: ಕನ್ನಡ ಶಾಲೆಗಳ ಸ್ಥಾಪನೆ, ಅವುಗಳಿಗೂ ಮತ್ತು ಸಾಕ್ಷರತಾ ಪ್ರಚಾರಕ್ಕೂ ಪ್ರೋತ್ಸಾಹ ಎಂದಿದೆ!

ಈಗ ನೋಡಿದರೆ ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಅವುಗಳಿಗೆ ಪ್ರೋತ್ಸಾಹ ಎಂಬ ಬಹುಮುಖ್ಯ ಆಶಯ ಎಲ್ಲಿಗೆ ಹೋಯ್ತು? ನಮ್ಮ ಕಣ್ಣೆದುರಿಗೇ ಕಳೆದೊಂದು ದಶಕದಲ್ಲೇ 12,000ಕ್ಕೂ ಹೆಚ್ಚಿನ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿವೆ. ಇದರೆಡೆಗೆ ಕಸಾಪ ಕಣ್ಣೆತ್ತಿಯೂ ನೋಡಿಲ್ಲ! ಇಷ್ಟೂ ವರ್ಷಗಳಿಂದ ತನಗೂ ತನ್ನ ನಿಬಂಧನೆಯಲ್ಲಿರುವ ಕನ್ನಡ ಶಾಲೆಗಳ ಹಿತರಕ್ಷಣೆಗೂ ಸಂಬಂಧವೇ ಇಲ್ಲದಂತಿರುವ ಕಸಾಪ, ಕನ್ನಡದ ಹೆಸರಲ್ಲಿ ಅದ್ಧೂರಿ ಸಮ್ಮೇಳನಗಳನ್ನು ಮಾತ್ರ ಮಾಡುತ್ತಾ ತನ್ನ ನಿಬಂಧನೆಗೆ ತಾನೇ ಎಳ್ಳುನೀರುಬಿಟ್ಟಂತೆನಿಸುತ್ತಿದೆ.

ಈಗಲಾದರೂ ಕಸಾಪ ಕಣ್ಣುಬಿಡಬೇಕು. ಕನಿಷ್ಠಪಕ್ಷ ಮುಚ್ಚಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ತೆರೆಯಲು ಮತ್ತು ಬಿದ್ದು ಹೋಗುವಂತಿರುವ ಶಾಲೆಗಳನ್ನು ಎತ್ತಿ ನಿಲ್ಲಿಸುವ ಮೂಲಕ ಕನ್ನಡ ಭಾಷೆಯ ಪ್ರಚಾರ ಮಾತ್ರವಲ್ಲ, ರಕ್ಷಣೆ ಮತ್ತು ಅಭಿವೃದ್ಧಿ ಎಂಬ ತನ್ನ ಮುಖ್ಯ ನಿಬಂಧನೆಗೆ ತಾನು ಬದ್ಧವಾಗಬೇಕಿದೆ. ಬದ್ಧತೆಗೆ ಪರೀಕ್ಷೆ ಎಂದರೆ-ಇದಾಗುವವರೆಗಾದರೂ ತಾನು ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಿಲ್ಲವೆಂಬ ದಿಟ್ಟತನದ ನಿರ್ಧಾರ ಮಾತ್ರ. ಆಗ ಕಸಾಪಕ್ಕೆ ಮರುಜೀವ ಬಂದಂತಾಗುತ್ತದೆ.

Leave a Reply