ತೊರೆಯುವ ಮುನ್ನ…

ಚೈತ್ರ ಶಿವಯೋಗಿಮಠ್ 

ಅರಳುವ ಹೂವಿಗಿಲ್ಲ
ತಾ ಶ್ರೇಷ್ಠವೆಂಬ ಬಿಂಕ
ಹರಿಯುವ ನೀರಿಗಿಲ್ಲ
ತಾ ಪವಿತ್ರವೆಂಬ ಅಭಿಮಾನ
ಉಸಿರಾಡುವ ಗಾಳಿಗೂ ಇಲ್ಲ
ತಾ ಅವಶ್ಯವೆಂಬ ಬಿಗುಮಾನ

ಸಾವಿರುವ ನಮಗೇಕೆ
ಅಹಂಕಾರದ ದರ್ಪ??
ಅರಿಷಡ್ವರ್ಗಿಗಳಾದ ನಮ್ಮ ಕೊರಳಿಗೇಕೆ
ಮಡಿ-ಮೈಲಿಗೆಯ ಸರ್ಪ ?
ಅನಿವಾರ್ಯವಲ್ಲದ ನಮಗೇಕೆ
“ನಾನು” ಎಂಬ ಗರ್ವ?

ತೊರೆದು ಹೋಗುವ ಮುನ್ನ
ನೊಂದ ಹೃದಯವೊಂದಕೆ
ನೀಡೋಣ ಸಾಂತ್ವನ…
ಕಣ್ಣು ಮುಚ್ಚುವ ಮುನ್ನ
ರೋಧಿಸುವೆರಡು ಕಂಗಳ
ಮಾಡೋಣ ಕಣ್ಣೀರ ಶಮನ

ಉಸಿರು ನಿಲ್ಲುವ ಮುನ್ನ,
ಮನದೊಳಗೆ ಮೂಡಲಿ
ಉಸಿರಾಡಿದ್ದು ಸಾರ್ಥಕವೆಂಬ ಭಾವನ…
ಹೆಣವೆಂದು ಕರೆಸಿಕೊಳ್ಳುವ ಮುನ್ನ
ಹುಟ್ಟಿದ ಕಿಚ್ಚಿಗಾದರೂ, ಆಗಲಿ
ನಮ್ಮೊಳಗಿನ ಅಂಧಕಾರದ ದಮನ

ನೋವುಂಡು ನಲಿವು ನೀಡುತ
ನಾವಾಗುವ ನಗುವ ಹೂವು,
ಹರಿವ ನೀರು
ಪ್ರಾಣ ವಾಯು
ನಮ್ಮ ಪೂರ್ಣಾಯು…..

Leave a Reply