‘ಮಿತ್ರ’ಎಂಬ ಮಣಿಪುರ ರಾಜ್ಯದ ಹುಡುಗ..  

ಜಿ.ಎನ್.ನಾಗರಾಜ್

ಮಿತ್ರ_ಎಂಬ_ಮಣಿಪುರ_ರಾಜ್ಯದ_ಹುಡುಗ. ಇಲ್ಲಿ ಕನ್ನಡ ಕಲಿತಿದ್ದಾನೆ. ಕೇವಲ ಮಾತನಾಡಲು ಮಾತ್ರ ಅಲ್ಲ. ಓದಲು, ಬರೆಯಲು.

ಮೊನ್ನೆ ಅವನಿಂದ ಫೋನು.
ಅವನು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದಾಗ , ಅವನು ಓದಿದ ಕಾದಂಬರಿ ಮತ್ತಿತರ ಪುಸ್ತಕಗಳ ಉದಾಹರಣೆ ಕೊಡುತ್ತಿದ್ದಾಗ ಅವನು ಕನ್ನಡದ ಹುಡುಗನೆಂದೇ ಭಾವಿಸಿದೆ. ಹೀಗೆ ಅನೇಕ ಕಾದಂಬರಿಗಳನ್ನು ಓದಿದ್ದಾನೆ.
ಅವನಿಗೆ ನನ್ನ ಫೋನು #ನಿಜ_ರಾಮಾಯಣ ದಲ್ಲಿ ಸಿಕ್ಕಿತಂತೆ. ಅವನು ಫೋನ್ ಮಾಡಿದ್ದು ಅದರ ಬಗ್ಗೆ ಮಾತನಾಡಲು. ಈ ಪುಸ್ತಕದ ಬಗ್ಗೆ ಅವನಿಗೆ ಗೊತ್ತಾಗಿದ್ದು ‘ ಓದು ‘ ಎಂಬ ವಾಟ್ಸಪ್ ಗುಂಪಿನಲ್ಲಿ. ನೋಡಿದವನೇ ಅದನ್ನು ಪಡೆದನಂತೆ. ಅದು ತಲುಪಿದ ಕೂಡಲೇ ಓದಿ ಮುಗಿಸಿದ್ದಾನೆ. ಮುಗಿಸಿದ ಕೂಡಲೇ ಉದ್ವೇಗ ತಡೆಯಲಾಗದೆ ಫೋನ್ ಮಾಡಿದ್ದಾನೆ.
ಒಂದೇ ಬಾರಿಗೆ ಓದಿ ಮುಗಿಸಿದ್ದು ಮಾತ್ರವಲ್ಲ, ಶಿವಮೊಗ್ಗದ ಜಿಲ್ಲಾಧಿಕಾರಿಗಳನ್ನು ಬೇರಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ಅಲ್ಲಿ ಇತ್ತೀಚೆಗೆ ನಡೆದ ರಾಮಾಯಣ ದರ್ಶನಂ ರಂಗ ಪ್ರದರ್ಶನದ ಮಾತು ಬಂದರೆ ಈ ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಗೆಳೆಯರ ಜೊತೆ , ವಾಟ್ಸಪ್‌ ಗುಂಪಿನಲ್ಲಿ ಉತ್ಸಾಹದಿಂದ ಪುಸ್ತಕದ ಬಗ್ಗೆ ಮಾತನಾಡಿದ್ದಾನೆ.
ಜೊತೆಗೆ ಜಾಲತಾಣದ ಮೂಲಕ ಹತ್ತಾರು ಪುಸ್ತಕ ಪಡೆದು ಗೆಳೆಯರಿಗೆ ಓದಿಸುತ್ತಿದ್ದಾನೆ.

ಪರಿಸರ ವಿಜ್ಞಾನ ಓದುತ್ತಿರುವ, ಉಪಗ್ರಹದಿಂದ ಪಡೆದ ಸಂಕೇತಗಳ ಮೂಲಕ ಪಶ್ಚಿಮ ಘಟ್ಟಗಳ ಅರಣ್ಯ ಮತ್ತು ಪರಿಸರವನ್ನು ಅಧ್ಯಯನ ಮಾಡುತ್ತಿರುವ ಈ ಮಣಿಪುರಿ ಯುವಕ ಕನ್ನಡ ಓದು ಕಲಿತು ಕಾದಂಬರಿಗಳನ್ನು ಮಾತ್ರವಲ್ಲದೆ ರಾಮಾಯಣ ದರ್ಶನಂ ಪ್ರದರ್ಶನದಿಂದ ಸಂತೋಷ ಪಡೆಯುತ್ತಾನೆಂದರೆ , ‘ನಿಜ ರಾಮಾಯಣದ ಅನ್ವೇಷಣೆ ‘ ಓದಿ ಉತ್ಸಾಹದಿಂದ ಅಲ್ಲಿಯ ಅನ್ವೇಷಣೆಯ ವಿಧಾನ, ವಿವಿಧ ಜ್ಞಾನ ಕ್ಷೇತ್ರಗಳ ಸಮ್ಮಿಲನದ‌ ಅಧ್ಯಯನದ ಬಗ್ಗೆ, ಅಲ್ಲಿಯ conclusions ಬಗ್ಗೆ ಮಾತನಾಡುತ್ತಾನೆಂದರೆ ಸಂತೋಷಕರವಲ್ಲವೆ ?
ಪುಸ್ತಕದ ಬಗ್ಗೆ ಹಾಕಿದ ಒಂದು ಪೋಸ್ಟ್‌ಗೆ ಅವನು ಕನ್ನಡದಲ್ಲಿಯೇ ನೀಡಿದ ಪ್ರತಿಕ್ರಿಯೆ ಇಲ್ಲಿ :

ನಿಜಕ್ಕೂ ಓದಲೇ ಬೇಕಾದ ಕೃತಿ ಇದು.. ರಾಮಾಯಣದ ಹಲವು ಆಯಾಮಗಳನ್ನು ಲೇಖಕರು ಸಂಶೋದಿಸಿದ್ದಾರೆ. ಸರಳವಾಗಿ ಓದುಗನ ಮುಂದಿಟ್ಟಿ.. ಯೋಚನೆಗೆ ಹಚ್ಚಿದ್ದಾರೆ.

#ನಿಜ_ರಾಮಾಯಣದ_ಅನ್ವೇಷಣೆ ಯನ್ನು ಓದಿದ ಹಲವಾರು ಜನರು ಕರ್ನಾಟಕದ ಎಲ್ಲೆಡೆಯಿಂದ ಫೋನ್ ಮಾಡಿ ನನ್ನ ದಿನಗಳನ್ನು ಸಾರ್ಥಕ ಪಡಿಸುತ್ತಿದ್ದಾರೆ. ಕಿವಿಯಿಂದ ಕಿವಿಗೆ ಪುಸ್ತಕದ ಬಿಡುಗಡೆ ನಡೆಯುತ್ತಿದೆ. ಈ ಸರಪಳಿ ಕ್ರಿಯೆ ಭರದಿಂದ ಸಾಗಲಿ.
ನೀವೂ ಓದಿ. ಪ್ರತಿಕ್ರಿಯಿಸಿ.

Leave a Reply