ಒಂದು `ನಾಯಿ ಫ್ಯಾಮಿಲಿ’ಯ `ಮಾತುಕತೆ’!

ಎಂ.ಆರ್. ಕಮಲ

ರಜೆಯ ದಿನಗಳಲ್ಲಿ ಬೆಳಗ್ಗೆ ನಮ್ಮ ಮನೆಯ ಮಾತುಗಳು ಹೇಗಿರುತ್ತದೆಂದು ನೀವು ಕೇಳಿದರೆ ತಲೆಚಿಟ್ಟು ಹಿಡಿದು ಓಡಿ ಹೋಗಬೇಕು. ಎಲ್ಲರ ಮನೆಯಲ್ಲಿ ನಸುಕಿನಲ್ಲಿ ಎದ್ದು, ಸುದ್ದಿ ಪತ್ರಿಕೆ ಓದಿ, ಟಿವಿ ನೋಡಿ, ಫೇಸ್ ಬುಕ್ ಗಮನಿಸಿ ಅಲ್ಲಿರುವ `ಘೋರಾತಿಘೋರ ‘ ವಿಷಯಗಳ ಬಗ್ಗೆ ಅಥವಾ ನೆಂಟರಿಷ್ಟರ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ, ತಿಂಡಿ ತಿಂದು, ಕಾಫಿ ಕುಡಿದರೆ ನಮ್ಮ ಮನೆಯದ್ದು ಮಾತ್ರ ವಿಭಿನ್ನ! ವಿಷಯಗಳನ್ನು ತಿಳಿಯಲು ಸದಾ ಕಾತರಳಾಗಿರುವ ಗಂಗಮ್ಮನಿಗೆ ಅದೆಷ್ಟು ನಿರಾಶೆಯಾಗಿಬಿಡುತ್ತದೆಂದರೆ ಪಾತ್ರೆ ಕುಕ್ಕಿ ಗ್ಯಾರೇಜಿಗೆ ಹೋಗಿ ಕುಳಿತುಕೊಳ್ಳುತ್ತಾಳೆ. ಬೇರೆಯವರ ವಿಷಯಗಳನ್ನು ಸಂಗ್ರಹಿಸುವ, ವಿಪರೀತ ಕುತೂಹಲಿ ಹೆಣ್ಣುಮಕ್ಕಳನ್ನು ನೀವು ಕಂಡೇ ಇರುತ್ತೀರ. `ಅಯ್ಯಪ್ಪ ಬ್ರೈನ್ ಗೆ ಕೈ ಹಾಕ್ತಾರೆ’ ಅನ್ನೋದು ಈಗಿನ ಹುಡುಗರ ನುಡಿಗಟ್ಟು. ಇನ್ನೊಬ್ಬರ ಜೀವನವನ್ನು ಅರ್ಥಮಾಡಿಕೊಳ್ಳುವ ಅಂತಃಕರಣವೇ ಬೇರೆ, ಮನರಂಜನೆಗಾಗಿ ಬಗೆದು ಬಗೆದು ಹಿಂಡಿ ಹಿಪ್ಪೆ ಮಾಡಿ ವಿಷಯ ಸಂಗ್ರಹ ಮಾಡಿಕೊಳ್ಳುವ ನಡವಳಿಕೆಯೇ ಬೇರೆ. ಇವರು ಪಕ್ಕದಲ್ಲಿರುವವರನ್ನು ನೂರು ಪ್ರಶ್ನೆ ಕೇಳುತ್ತಾರೆ. ಇವರಿಗೆ ನಾವೊಂದು ಪ್ರಶ್ನೆ ಒಗೆದರೆ ಸಾಕು ನಡುಗಿ, ಮಾತು ಬದಲಾಯಿಸುತ್ತಾರೆ!

ನಮ್ಮ ಗಂಗಮ್ಮನಿಗೆ ಸದಾ ಎಲ್ಲಾದರೂ, ಏನಾದರೂ ನಡೆಯುತ್ತಿರಬೇಕು. ಯಾರೋ ಏರು ದನಿಯಲ್ಲಿ ಜಗಳವಾಡುತ್ತಿರಬೇಕು. ಮನೆಯ ಮುಂದೆ ಜಾತ್ರೆ ನೆರೆಯಬೇಕು, ಮೆರವಣಿಗೆ ಹೋಗುತ್ತಿರಬೇಕು, ಎಲ್ಲೂ ಏನೂ ನಡೆಯುತ್ತಿಲ್ಲವೆಂದಾದರೆ ನಮ್ಮ ಮನೆಯೊಳಗಾದರು ಯಾರ್ಯಾರನ್ನೋ ಬೈದು ಮಾತಾಡಬೇಕು. ನಮ್ಮ ಮನೆಯಲ್ಲಿ ಅವರಿವರ ವಿಷಯಗಳನ್ನು ಮಾತಾಡಿ, ಆಡಿಕೊಳ್ಳುವುದಕ್ಕೆ ನಾನೆಂದೂ ಆಸ್ಪದವನ್ನೇ ಕೊಡುವುದಿಲ್ಲ. ಕಾಲೇಜಿನಲ್ಲಿ ಮತ್ತು ಮನೆಯಲ್ಲಿ ಮಕ್ಕಳ ಹೃದಯದಲ್ಲಿ ಪೂರ್ವಾಗ್ರಹಗಳನ್ನು ಬಿತ್ತಲು ಅವಕಾಶ ಕೊಡುತ್ತಿರಲಿಲ್ಲ. ನಾವೇನನ್ನು ಬಿತ್ತುತ್ತೇವೋ ಅದನ್ನು ಖಂಡಿತ ಬೆಳೆಯುತ್ತೇವೆ ಎಂಬ ಅರಿವು ಇಟ್ಟುಕೊಂಡೇ ಪ್ರಜ್ಞಾಪೂರ್ವಕವಾಗಿ ಜೀವನ ನಡೆಸುವುದುಂಟು. ಬೇವು ಬಿತ್ತಿ ಮಾವು ಬೆಳೆವ ತವಕ ನನಗಿಲ್ಲ. ಪ್ರೀತಿಯನ್ನು ಬಿತ್ತಿದರೆ ಮಾತ್ರ ಪ್ರೀತಿಫಲ ಸಿಗುವುದೆಂದು ಅರ್ಥವಾಗಿದೆ. ಹಾಗಾಗಿ ಬಾಗಲೋಡಿ ದೇವರಾಯರ `ಅಜ್ಜ ನೆಟ್ಟ ಮರ(?)’ ಕತೆ ಈ ವಿಷಯದಲ್ಲಿ ಆದರ್ಶ. ನೂರಾರು ಹಕ್ಕಿಗಳಿಗೆ ನೆಲೆಯಾಗಿದ್ದ, ಬೇಸರವಾದವರಿಗೆ ಹರಟೆ ಹೊಡೆಯಲು ಜಾಗವಾಗಿದ್ದ, ನಡೆದು ದಣಿವಾರಿಸಿಕೊಳ್ಳುವವರಿಗೆ, ಮಕ್ಕಳಿಗೆ ಪ್ರಿಯವಾಗಿದ್ದ ಮರವನ್ನು ದುಡ್ಡಿನಾಸೆಗೆ ಕತ್ತರಿಸಲು ಹೊರಡುವ ತಂದೆ, ಅದಕ್ಕೆ ಅಡ್ಡಿ ಪಡಿಸುವ ಮಗ ನೆನಪಿಗೆ ಬರುತ್ತಾರೆ. ಮರ ಮುದಿಯಾಗಿದೆಯೆಂದು, ಮುದಿಯಾದ ಮೇಲೆ ವ್ಯರ್ಥವೆಂದು ಮಗನನ್ನು ಒಪ್ಪಿಸಿ, ಮರವನ್ನು ತಂದೆ ಕಡಿಸುತ್ತಾನೆ. ಮುಂದೆ ಮಗ ದೊಡ್ಡವನಾದ ಮೇಲೆ ತಂದೆಯ ವೃದ್ಧಾಪ್ಯದ ಸಮಯದಲ್ಲಿ ತಿರುಗಿ ಕೂಡ ನೋಡದೆ ಹೊರಟು ಹೋಗುತ್ತಾನೆ. ಪ್ರಶ್ನಿಸಿದಾಗ `ತಂದೆ-ತಾಯಿಗಳು ವೃದ್ಧರಾದ ಮೇಲೆ ವ್ಯರ್ಥ ವಸ್ತುಗಳು’ ಎನ್ನುವಂತೆ ಮಾತಾಡುತ್ತಾನೆ.

ಈ ಕತೆ ಸರಿಯಾಗಿ ನನಗೆ ನೆನಪಿಲ್ಲ, ಮತ್ತೊಮ್ಮೆ ಓದಬೇಕು. ಹಣವೇ ಎಲ್ಲವೆಂದು ಹೇಳಿಕೊಟ್ಟು ಬೆಳೆಸಿ, ವೃದ್ಧಾಪ್ಯದಲ್ಲಿ ಗುಣವನ್ನು ಹಂಬಲಿಸಿದರೆ ಸಿಕ್ಕಬಹುದೇ? ನಾನು ಹೇಳಬೇಕೆಂದು ಹೊರಟಿದ್ದು ಅದಲ್ಲ. ಬೆಳಗ್ಗೆ ಎದ್ದು ರಜೆಯ ದಿನಗಳಲ್ಲಿ ತಿಂಡಿಯನ್ನು ತಿನ್ನಲು ಕೂತಾಗ ನಡೆಯುವ ನಮ್ಮ ಮಾತುಕತೆ!

ರಮೇಶ್: ಯಾಕೋ ಒಂದು ವಾರದಿಂದ ನಾಮದ ನಾಯಿ ಕಾಣಲೇ ಇಲ್ಲ

ಪುಟ್ಟು: ನಿನ್ನೆಯಿನ್ನೂ ನೋಡಿದನಲ್ಲ. ಏನೇನೋ ಹೇಳ್ತಿಯಲ್ಲ ಅಪ್ಪ ನೀನು

ಮಧುರ: ಅಪ್ಪ, ಈ ರಸ್ತೆಯಲ್ಲಿ ಇಷ್ಟೊಂದು ನಾಯಿಗಳಿವೆಯಲ್ಲ, ಯಾರಾದರೂ ತಂದು ಬಿಡ್ತಾರಾ?

ಅಮ್ಮಿ: ಅಮ್ಮ, ನಿನ್ನೆ ಆ ಅಂಡಾವುಂಡಿ ನಾಯಿಯನ್ನು ಮುದ್ದು ಮಾಡೋದಕ್ಕೆ ಹೋದರೆ, ಆ ಕೆಂಚಿ ಎನ್ನುವ ಕಳ್ಳ ಲೌಡಿ ಹೊಟ್ಟೆ ಕಿಚ್ಚು ಹತ್ತಿ ಸತ್ತು ಹೋದಳು. ಎರಡು ಬೀದಿನಾಯಿಗಳೇ. ಅಲ್ಲೂ ಅಷ್ಟು ಪೈಪೋಟಿ. ದರಿದ್ರ ಕೆಂಚಿ ಅದೆಷ್ಟು ಹಾಲು, ಅನ್ನ ನಮ್ಮ ಮನೆಯಲ್ಲಿ ತಿಂದಿದ್ದಾಳೆ, ಪಾಪದ ಆ ನಾಯಿಯನ್ನು ಮುಟ್ಟಿದರೂ ಸಹಿಸಲ್ಲ…ಥು

ನಾನು: ಅಯ್ಯೋ, ಅಮ್ಮಿ, ಆ ಮೂರನೆಯ ಬೀದಿಯಲ್ಲಿ ಒಂದು ನಾಯಿ ಮರಿ ಹಾಕಿದೆ ಕಣೆ, ದಿನಾ ವಾಕ್ ಮಾಡಬೇಕಾದರೆ ಕಾಲು ಕಾಲನ್ನೇ ಸುತ್ತಿಕೊಳ್ಳುತ್ತೆ. ಬಿಸ್ಕತ್ತು ಹಾಕಿದರೆ ತಿನ್ನಲ್ಲ, ಮುದ್ದು ಮಾಡು ಅನ್ನುತ್ತೆ

ರಮೇಶ್: ಪುಟ್ಟು, ಮೊನ್ನೆ ಏನಾಯ್ತು ಗೊತ್ತಾ? ಒಂದು ಮರಿಯನ್ನು ಈ ಯಶೋದೆ ವಾಕ್ ಕರೆದುಕೊಂಡು ಹೋಗಿ ಅಲ್ಲೇ ಬಿಟ್ಟುಬಿಟ್ಟಿದ್ದಾಳೆ. ನಿಮ್ಮಮ್ಮ ನೋಡಿದಳಂತೆ. ಕಾಳನನ್ನ ಕರೆದುಕೊಂಡು ಹೋಗ್ತಿದ್ದಳಲ್ಲ, ಹೋದರೆ ಹೊಟ್ಟೆ ಕಿಚ್ಚಿಗೆ ಏನು ಮಾಡ್ತಾನೋ ಅಂತ ಮನೆಯಲ್ಲಿ ಬಿಟ್ಟು ಹೋದರೆ ನಾಯಿಮರಿ ಅಲ್ಲಿರಲಿಲ್ವಂತೆ. ಮನೆಗೆ ಬಂದು ನಾಯಿ ಮರಿ ಎಲ್ಲಿ ಹೋಯ್ತೋ ಅಂತ ಬಡ್ಕೋತಿದ್ದಳು.

(ಪುಟ್ಟುವಿಗೆ ಈಗ ವಿಷಯದಲ್ಲಿ ಆಸಕ್ತಿ ಕೆರಳಿದೆ. ಇವರು ಯಾರ ಬಗ್ಗೆಯಾದರೂ ಮಾತಾಡುತ್ತಾರೋ ಎಂದು ಕೇಳಿಸಿಕೊಳ್ಳಲು ಬಂದು, ಪಾತ್ರೆ ತೊಳೆಯುತ್ತಿರುವಂತೆ ನಟಿಸುತ್ತಿರುವ ಗಂಗಮ್ಮನ ಕಿವಿ ಇಲ್ಲಿಯೇ ಇದೆ)

ರಮೇಶ್: ಆಮೇಲೇನಾಯ್ತು ಗೊತ್ತಾ? ರಾತ್ರಿ ವಾಕ್ ಹೋಗಬೇಕಾದರೆ ನಿಮ್ಮಮ್ಮ ಮರಿ ಹುಡುಕುತ್ತಿದ್ದಳು. ಅದ್ಯಾರೋ ದಾರಿಹೋಕರು, `ಅಯ್ಯೋ, ಗಣೇಶ ಜ್ಯೂಸು ಅಂಗಡಿ ಮುಂದೆ ಒಂದು ನಾಯಿ ಮರಿ ಅಳ್ತಾ ಕೂತಿದೆ. ಮೇನ್ ರೋಡಿನಲ್ಲಿ’ ಅಂದರು. ತಕ್ಷಣ ನನ್ನ ಕೈನಲ್ಲಿದ್ದ ಕಾಳನನ್ನು ಕಿತ್ತುಕೊಂಡು `ರಮೇಶ್ ಓಡು’ ಅಂದಳು. ನಾನು ಓಡಿದೆ.

(ಪುಟ್ಟು, ಮಧುರ ಮತ್ತು ಅಮ್ಮಿಗೆ ಕುತೂಹಲ ಇಮ್ಮಡಿಸುತ್ತಿದೆ.. ಗಂಗಮ್ಮನಿಗೆ ಇವರು ಮತ್ತೆ ಸುಡುಗಾಡು ನಾಯಿಗಳ ಬಗ್ಗೆ ಮಾತಾಡ್ತಿದ್ದಾರೆ ಅಂತ ರೇಗಿ ಹೋಗ್ತಿದೆ. ಒಂದು ಪಾತ್ರೆಯನ್ನು ಕುಕ್ಕುತ್ತಾಳೆ)

ರಮೇಶ್: ನೋಡಿದರೆ, ರಸ್ತೆ ಮಧ್ಯದಲ್ಲಿ ನಾಯಿಮರಿ ಅಳ್ತಾ ಇತ್ತು. ಈ ಕಡೆ ಕಾರು, ಆ ಕಡೆ ಬಸ್. ನಾನು ಕಿರುಚಿಕೊಂಡು ಓಡಿ, ನಿಲ್ಲಿಸಿ ಮರಿಯನ್ನು ಎತ್ತುಕೊಂಡು ಬಂದೆ.

ಮಧುರ: ಅದೇ ಅಮ್ಮ, ಒಂದೇ ಮರಿ ಅಂತಿದ್ದರಲ್ಲ. ಅದಕ್ಕೆ ಇವತ್ತು ಎರಡು ಮರಿಗಳಾಗಿವೆ.

ನಾನು: ಇಲ್ಲಮ್ಮ, ಇವತ್ತು ಬೆಳಗ್ಗೆ ಯಾರೋ ಎತ್ತಿಕೊಂಡು ಹೋಗಿದ್ದವರು ತಂದು ಬಿಟ್ಟಿದ್ದಾರೆ. ಅಲ್ಲೊಂದು ಹುಡುಗ ಈ ಮರಿ ಎತ್ಕೊಂಡು ಹೋಗಿ ಐನೂರು ರೂಪಾಯಿ ಅಂತ ಮಾರಾಟಕ್ಕಿಟ್ಟಿದ್ದ ಅಂತ ಕೇತಮಾರನಹಳ್ಳಿ ಮುದುಕರು ಹೇಳಿದರು. ಯಾರು ಕೊಂಡುಕೊಂಡಿಲ್ಲ ಕಂತ್ರಿ ನಾಯಿ ಅಂತ. ತಂದು ವಾಪಸ್ ಬಿಟ್ಟಿದ್ದಾನೆ.

(ಅಷ್ಟು ಹೊತ್ತಿಗೆ ಗಂಗಮ್ಮನಿಗೆ ಕೋಪ ನೆತ್ತಿಗೇರಿದ್ದರಿಂದ `ದರಿದ್ರ ನಾಯಿಗಳು’ ಅಂತ ನಾಯಿಗಳನ್ನು ಬೈದ ಹಾಗೆ ನಮ್ಮನ್ನು ಬೈದು ಪಾತ್ರೆ ಎಸೆದು ಹೋದಳು ಎನ್ನುವಲ್ಲಿ ನಮ್ಮ ಹರಟೆ ಮುಕ್ತಾಯವಾಯಿತು! )

1 comment

Leave a Reply