ಸಾಹಿತ್ಯ ಸಮ್ಮೇಳನವೆಂಬ ಮೂರು ದಿನದ ಆಟವು!

ಸದಾಶಿವ್ ಸೊರಟೂರು

‘ಏನ್ರೀ ಕನ್ನಡಿಗರಾಗಿ ಸಾಹಿತ್ಯ ಸಮ್ಮೇಳವನ್ನ ಒಂದು ಆಟ ಅಂತ ಕರೆದುಬಿಟ್ರಲ್ಲಾ’ ಎಂದು ಬರೆಯುವಾಗಲೇ ಬಂದು ಕೇಳಿದ ಗೆಳೆಯನಿಗೆ ಆಟಕ್ಕಿಂತ ಬೇರೆ ಪದ ಸಿಗುತ್ತಿಲ್ಲ ನನಗೆ ಅಂದೆ. ಆದರೆ ನೋಡಿ ಆಟದಿಂದ ಒಂದು ಸ್ಪಷ್ಟ ಫಲಿತಾಂಶ ಅಂತನಾದರೂ ಇರುತ್ತೇ. ಸಮ್ಮೇಳನದಿಂದ ಅಂತದೊಂದು ಪರಿಣಾಮಕಾರಿಯಾದ ಫಲಿತಾಂಶ ಇತ್ತೀಚಿನ ದಿನಗಳಲ್ಲಿ ಮರೀಚಿಕೆಯಾಗುತ್ತಿದೆ ಎಂದೆ. ಅನುಮಾನವೇ ಇಲ್ಲ ‘ಕನ್ನಡ ಸಾಹಿತ್ಯ ಸಮ್ಮೇಳ’ನ  ಅನ್ನೋ ಹಬ್ಬದ ಪರಿಯಿದೆಯಲ್ಲಾ ಅದು ಉತ್ತಮವಾದದ್ದು, ಅಷ್ಟೇ ಪರಿಣಾಮಕಾರಿಯಾಗಿ ತನ್ನ ಕಾರ್ಯವನ್ನು ಮಾಡಿಕೊಂಡು ಬಂದಿತ್ತು ಕೂಡ. ಆದರೆ ಇತ್ತೀಚಿಗೆ ಸಾಹಿತ್ಯ ಸಮ್ಮೇಳನ ಮೂರು ದಿನದ ಆಟವಾಗಿ ಹೋಗಿದೆ ಎಂಬ ಅನುಮಾನ ಕಾಡದೇ ಇರದು.

‘ನೀವು ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಿ’ ಅಂತ ಕಳೆದ ಬಾರಿ ಕೇಳಲು ಹೋದವರಿಗೆ ಸಾಹಿತಿ ದೇವನೂರು ಮಹಾದೇವ ಅವರು ಆಡಿದ ಮಾತುಗಳು ನಿಜಕ್ಕೂ ಸಮ್ಮೇಳನದ ವಿಷಯವಾಗಿ ಗಂಭೀರ ಚಿಂತನೆಗೆ ತೊಡಗುವಂತೆ ಮಾಡುತ್ತವೆ. ‘ಕನ್ನಡ ಹಾಳು ಮಾಡಿ, ಹಾಳಾದ ಕನ್ನಡ ನಾಡಿನ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ನಯವಾಗಿಯೇ ತಿರಸ್ಕರಿಸಿದ್ದರು. ರಾಜಕೀಯ ಪೋಷಿತ, ಸರ್ಕಾರ ಪೋಷಿತ ಕಾರ್ಯಕ್ರಮವಾದ ಸಮ್ಮೇಳನಗಳಿಂದ ಕನ್ನಡ ಮತ್ತು ಕನ್ನಡ ನಾಡಿಗೆ ಏನಾಗ್ತಿದೆ? ಏನಾದರೂ ಉಪಯೋಗ ಆಗ್ತದೀಯಾ? ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕಾಗಿದೆ.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ವ್ಯತ್ಯಾಸವಿದೆ. ಭಾಷೆಯಿಂದ ಸಾಹಿತ್ಯ ಬೆಳೆದಿದೆ. ಸಾಹಿತ್ಯ ಭಾಷೆಯನ್ನು ಶ್ರೀಮಂತಗೊಳಿಸಿದೆ. ಇದು ಸಾಹಿತ್ಯ ಸಮ್ಮೇಳನವೇ ಹೊರೆತು ಭಾಷಾ ಸಮ್ಮೇಳನವಲ್ಲ. ಸಾಹಿತ್ಯ ಸಮ್ಮೇಳನದಿಂದ ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ಕೇವಲ ಸಾಹಿತಿಗಳದು ಎಂಬ ಪ್ರಜ್ಞೆ ಕನ್ನಡಿಗರಲ್ಲಿ ಮೂಡುವಂತಾಗಿದೆ. ಭಾಷೆಯ ಬೆಳವಣೆಗೆ ಯಾರದೋ ಹೊಣೆ ಎನ್ನುವಂತಾಗಿದೆ. ಸಮ್ಮೇಳನವು ಸಮಗ್ರವಾಗಿ ಭಾಷೆ ಮತ್ತು ಸಾಹಿತ್ಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಕನ್ನಡಕ್ಕಾಗಿ ದುಡಿಯುವ ಎಲ್ಲಾ ಕೈಗಳಿಗೂ ಅಲ್ಲಿ ಅವಕಾಶವಿರಬೇಕು. ಕೇವಲ ಸಾಹಿತಿಗಳಿಗೆ ಮಾತ್ರವಲ್ಲ. ಒಂದು ಉದಾಹರಣೆ ನೀಡುವುದಾದರೆ ಪ್ರಾಥಮಿಕ ಹಂತದಿಂದ ಪದವಿಯ ಹಂತದವರೆಗೆ ಕನ್ನಡವನ್ನು ಕಲಿಸಿ, ತಿದ್ದಿ, ತೀಡಿ ಬೆಳೆಸಿದ ಶಿಕ್ಷಕರ ಕಡೆಗೆ ಅವರನ್ನು ಗುರುತಿಸುವ, ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ಅವರ ವಿಚಾರ ಮಂಡಿಸುವ ಶಿಕ್ಷಕರಿಗೆ ಒಂದು ವೇದಿಕೆ ಇಲ್ಲ. ಅಷ್ಟೋ ಇಷ್ಟೋ ಕನ್ನಡ ಕಲಿಸಿ, ಅಭಿಮಾನ ಮೂಡಿಸುವ ಶಿಕ್ಷಕರಿಗೆ ಒಂದು ವೇದಿಕೆ ಇಲ್ಲ ಅಂದ ಮೇಲೆ ಅದರ ಔಚಿತ್ಯ ನೀವೆ ಊಹಿಸಿಕೊಳ್ಳಿ.

ಕನ್ನಡದ ಸಾರ್ವಭೌಮತೆ, ಜನಜಾಗೃತಿ, ಕನ್ನಡಿಗರನ್ನು ಒಂದು ಗೂಡಿಸುವ, ಕನ್ನಡಿಗರ ಹಿತ ಕಾಯುವ, ಭಾಷೆಯನ್ನು ಬೆಳೆಸುವ ಆಶಯದೊಂದಿಗೆ 1915ರಿಂದ ತನ್ನ ಕಾರ್ಯ ಆರಂಭಿಸಿ ಕರ್ನಾಟಕ ಏಕೀಕರಣಕ್ಕೆ, ಆ ಮೂಲಕ ಕನ್ನಡಿಗರಲ್ಲಿ ಜಾಗೃತಿ ತರುವ ಸಾಕಷ್ಟು ಸಾರ್ಥಕ ಕೆಲಸವಾಗುತ್ತಾ ಬಂದಿತ್ತು. ಈ ನಡುವೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಎರಡನೇ ಸ್ಥಾನಕ್ಕೆ ಕುಸಿಯುತ್ತಿದ್ದರೂ, ಗಡಿನಾಡಿನಲ್ಲಿ ಕನ್ನಡ ದಿನೇ ದಿನೇ ಕರಗಿ ಹೋಗುತ್ತಿದ್ದರೂ, ಕನ್ನಡಿಗರ ಉದ್ಯೋಗಗಳು ಅನ್ಯರ ಪಾಲಾಗುತ್ತಿದ್ದರೂ, ಕರ್ನಾಟಕ ರಾಜಧಾನಿಯೆಂದು ಬೀಗುವ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ 30ರ ಸಮೀಪ ತಲುಪುತ್ತಿದ್ದರೂ, ಕನ್ನಡ ಶಾಲೆಗಳು ಶರವೇಗದಲ್ಲಿ ಮುಚ್ಚುತ್ತಿದ್ದರೂ, ನಮ್ಮ ಭಾಷೆ ಸದಾ ಅನ್ನ ನೀಡುವಲ್ಲಿ ಸೋಲುತ್ತಿದ್ದರೂ. ಬಹುಮುಖ ಸಾಹಿತ್ಯ ಬೆಳೆಸುವಲ್ಲಿ ಸರ್ಕಾರ ವಿಫಲವಾಗುತ್ತಿದ್ದರೂ, ನಿಜವಾದ ಸಾಹಿತ್ಯ ಗುರುತಿಸುವಲ್ಲಿ ರಾಜಕೀಯಗಳು ನಡೆಯುತ್ತಿದ್ದರೂ ಸಮ್ಮೇಳನದಲ್ಲಿ ಕನ್ನಡ ತಾಯಿ ಖುಷಿಯಾಗಿರಲು ಹೇಗೆ ಸಾಧ್ಯ! ಹಳ್ಳಿಯ ಮೂಲೆಯಲ್ಲಿ ಸಾಹಿತ್ಯ ರಚನೆ ಮಾಡಿಕೊಂಡು ಒಂದು ಪುಸ್ತಕ ಹೊರ ತರಲು ಒದ್ದಾಡುವ ಯುವಕನ ಮುಂದೆ ತೋಚಿದನ್ನೆ ಗೀಚುವುದನ್ನು ಸಾಹಿತ್ಯವೆಂದು ಪ್ರಕಟಿಸುವ ಈ ವ್ಯವಸ್ಥೆಯನ್ನು ನೋಡಿ ಆ ಸಮ್ಮೇಳನದ ಅದ್ದೂರಿತನ ಅದೆಷ್ಟು ಮರುಗೀತು!

ಇನ್ನೂ ಇತ್ತೀಚಿನ ಸಮ್ಮೇಳನಗಳಲ್ಲಿ ಆಗುತ್ತಿರುವುದೇನು? ಅಲ್ಲಿ ರಾಜಕೀಯವೇ ಹೆಚ್ಚು. ಜಿಲ್ಲೆಗಳಿಂದ ಸಮ್ಮೇಳನಕ್ಕೆ ಕವನ ವಾಚನಕ್ಕೆ ಆಯ್ಕೆ ಮಾಡುವಾಗಲೂ ಅಲ್ಲಲ್ಲಿ ರಾಜಕೀಯ ಕಾಣುತ್ತೇವೆ. ಕೆಲವೊಮ್ಮೆ ಪ್ರತಿಭೆಗಳು ಹೆದ್ದಾರಿ ಪಕ್ಕದಲ್ಲಿ ಸುಮ್ಮನೆ ಮಲಗಿ ಬಿಡುತ್ತವೆ. ಮೂರು ದಿನದ ಸಮ್ಮೇಳನದಲ್ಲಿ ಆಗುವ ಚರ್ಚೆಗಳೆಷ್ಟು? ಅಲ್ಲಿ ನಿಜಕ್ಕೂ ಭಾಗವಹಿಸುವವರು ಎಷ್ಟು? ಕೂತು ಕೇಳುವವರೆಷ್ಟು? ಆಗುವ ಪರಿಣಾಮಗಳೆಷ್ಟು? ಪ್ರಾಮಾಣಿಕ ಚರ್ಚೆಗಳೆಷ್ಟು? ಮೂರು ದಿನಗಳೂ ಕೂಡ ಮಾತಿನಲ್ಲಿ ಮುಗಿದು ಹೋಗುತ್ತವೆ. ದೊಡ್ಡ ಮಟ್ಟದ ಪರಿಣಾಮ ಮಾತ್ರ ಕಾಣಲಾಗುತ್ತಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರು ತಮ್ಮ ಕೊನೆಯ ಭಾಷಣದಲ್ಲಿ ಸಮ್ಮೇಳನದಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಹೇಳಿ ಆಮೂಲಕ ಸಮಗ್ರ ಕನ್ನಡಿಗರ ಪರವಾಗಿ ಸರ್ಕಾರಕ್ಕೆ ಸಲ್ಲಿಸುವ, ಆಗ್ರಹಿಸುವ ಪರಿಪಾಠವಿದೆ. ಇಷ್ಟು ದಿನಗಳಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಆದ ತೀರ್ಮಾನಗಳನ್ನು ಸರ್ಕಾರ ಜಾರಿಗೊಳಿಸಿದನ್ನು ಈ ಕಣ್ಣುಗಳು ನೋಡಿಲ್ಲ. ಪ್ರತಿಬಾರಿಯೂ ಕನ್ನಡವನ್ನು ಮಾಧ್ಯಮ ಭಾಷೆಯಾಗಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಮತ್ತು ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ವಿಷಯವಾಗಿ ಮಾತುಗಳಿರುತ್ತವೆ.. ಬರವಣಿಗೆ ರೂಪದ ಒತ್ತಾಯಗಳಿರುತ್ತವೆ. ಅವರು ಕಳುಹಿಸಿದ ಪತ್ರ ಯಾರ ಬೀರುವಿನಲ್ಲಿ ನಿದ್ದೆ ಮಾಡುತ್ತಿದೆಯೋ? ಸರ್ಕಾರಗಳು ಸಮ್ಮೇಳನದ ತೀರ್ಮಾನಗಳನ್ನು ಅಷ್ಟೊಂದು ಕೇವಲವಾಗಿ ಕಾಣುವಾಗ ಸಮ್ಮೇಳನ ಅರ್ಥ ಪಡೆಯುವುದಾದರೂ ಹೇಗೆ?

ಕನ್ನಡ ಪ್ರೇಮ ಅದ್ದೂರಿತನದಲ್ಲೇ ಉಳಿದು ಹೋಗಿದೆ. ಬರೀ ಮಾತುಗಳಲೇ ಮರೆತು ಹೋಗಿದೆ. ಬರೀ ಸಮಾರಂಭಗಳಲ್ಲೇ ಕಳೆದುಹೋಗಿದೆ. ಭಾಷೆಯ ವಿಷಯದಲ್ಲಿ ಒಂದು ಪ್ರಬಲ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿಲ್ಲ ನಮಗೆ. ಸಮ್ಮೇಳನಗಳು ಯಾಕೆ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿಲ್ಲ. ಸರ್ಕಾರಗಳು ಯಾಕೆ ಸಮ್ಮೇಳನದ ತೀರ್ಮಾನಗಳಿಗೆ ಗೌರವ ಸೂಚಿಸಿ ಅವನ್ನು ಜಾರಿಗೊಳಿಸುತ್ತಿಲ್ಲ. ಅವೆಲ್ಲಾ ಆಗದ ಮೇಲೆ ಇವೆಲ್ಲಾ ಏನಕ್ಕೆ?

ಧಾರಾವಾಡದ ಸುತ್ತ ಮುತ್ತ ನೋಡುವ ಪ್ಲೇಸ್ ಯಾವಿದಾವೆ? ಹೋಗಿ ನೊಂದಾಯಿಸಿಕೊಂಡು ಮೂರು ದಿನ ಟೂರ್ ಮಾಡೋಣ, ಐದು ದಿನ ಒಒಡಿ ಸಿಗುತ್ತೆ ಬಾ ಮಗಾ! ಬಾರೋ ಒಂದು ಟ್ರಿಪ್ ತರಹ ಇರುತ್ತೆ ಎಂಜಾಯ್ ಮಾಡೋಣ, ಒಳ್ಳೆ ಊಟ ಇರುತ್ತೆ ಕಣೋ ಮೂರು ದಿನಾನೂ ಅಂತ ಹೋಗುವವರೇ ಜಾಸ್ತಿಯಾಗಿದ್ದಾರೆ. ಬಹುತೇಕ ಬಾರಿ ವಿಚಾರ ವೇದಿಕೆಗಳು  ವೀಕ್ಷಕರಿಲ್ಲದೆ ಭಣಗುಟ್ಟಿದ್ದು ಇದೆ. ಆದರೆ ಸಮ್ಮೇಳನಕ್ಕೆ ಬಂದವರ ಸಂಖ್ಯೆ ಐವತ್ತು ಸಾವಿರ ದಾಟಿರುತ್ತದೆ. ವಿಚಾರಗೋಷ್ಠಿಯ ಬದಲಿಗೆ ಊಟದ ಸರತಿಯ ಸಾಲು ಹೆಚ್ಚಿರುತ್ತದೆ. ನಮ್ಮ ಜನರಲ್ಲಿ ಈ ಪರಿ ಇಚ್ಚಾಶಕ್ತಿ ಕಡಿಮೆಯಾಗುತ್ತಿರುವುದಕ್ಕೆ ಕಾರಣವೇನು? ನಮ್ಮ ವ್ಯವಸ್ಥೆ ಹೇಗಿದಿಯೋ ಹಾಗೆ ನಮ್ಮ ಕನ್ನಡಿಗರು ಆಗಿಬಿಟ್ಟರೆ? ಸಮ್ಮೇಳನಗಳು ಒಂದಿಷ್ಟು ಖುಷಿಯ ದಿನಗಳಾಗಿ ಕಳೆದು ಬಿಡುತ್ತೇವೆ. ಅವೇ ಭಾಷಣ, ಮೆರವಣಿಗೆಯಲ್ಲಿ ಮುಗಿದು ಹೋಗುತ್ತದೆ.

ಏನೋ ಒಳ್ಳೆಯದು ಅಂತ ಆಗುತ್ತಿದ್ದರೆ ಕೇವಲ ಮೂರು ವಿಷಯಗಳು. ಅದರಲ್ಲಿ ಒಂದು ಕನ್ನಡ ಸಾಹಿತ್ಯದಲ್ಲಿ ಸಾಧನೆ ಮೆರೆದ ಸಾಹಿತಿಗೆ ಅಧ್ಯಕ್ಷ ಸ್ಥಾನ ನೀಡಿ ಒಂದು ಗೌರವ ಸೂಚಿಸುವ, ಅವರ ಸಾಹಿತ್ಯ ಕುರಿತು ತಿಳಿದುಕೊಳ್ಳುವ, ಅವರ ಕನ್ನಡ ಸೇವೆಯನ್ನು ಕೊಂಡಾಡುವ. ಅದನ್ನು ಪರಿಚಯಿಸುವ ಕೆಲಸವಾಗುತ್ತದೆ. ಎರಡನೇಯದು ಪುಸ್ತಕಗಳು. ಹೌದು ಪುಸ್ತಕ ಪ್ರಿಯರಿಗೆ ಅದೊಂದು ಸ್ವರ್ಗ. ಎಲ್ಲೂ ಸಿಗದ ಕನ್ನಡ ಪುಸ್ತಕಗಳು ಅಲ್ಲಿ ಸಿಕ್ಕಿಬಿಡುತ್ತವೆ. ಪುಸ್ತಕದ ಮೇಲೆ ಮೋಹ ಇಲ್ಲದವರು ಕೂಡ ಒಂದಿಷ್ಟು ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುತ್ತಾರೆ. ಅಂತದೊಂದು ಮೋಡಿ ಮಾಡುತ್ತದೆ ಅದು. ಮೂರನೆಯದು ನಾಡಿನಾದ್ಯಂತ ಮೂಲೆ ಮೂಲೆಯಿಂದ ಜನಗಳು ಬರುವುದರಿಂದ ಎಲ್ಲಾ ಕನ್ನಡಿಗರು ಒಂದು ಕಡೆ ಸೇರುವ ಪರಸ್ಪರ ಪರಿಚಯವಾಗುವ ಕಾರ್ಯವಾಗುತ್ತದೆ. ಆ ಮೂಲಕ ನಾವೆಲ್ಲಾ ಒಂದು ಎನ್ನುವ ಸಣ್ಣ ಅರಿವು ಮನಸ್ಸಿನಲ್ಲಿ ಬಂದು ಹೋಗುತ್ತದೆ.

ಇಂಥದೊಂದು ಒಳ್ಳೆಯ ಕಾರ್ಯಕ್ರಮ, ಖರ್ಚಿನ ಕಾರ್ಯಕ್ರಮ, ಸಾಕಷ್ಟು ರಿಸ್ಕ್ ನ ಕಾರ್ಯಕ್ರಮ ನಾಡಿಗಾಗಿ ಏನನ್ನೂ ಮಾಡದೇ ಸವೆದು ಹೋದರೆ ಹೇಗೆ? ಕಾಲಹರಣವಾದಂತೆ ಆದರೆ ಹೇಗೆ? ಬೇರೆ ಭಾಷೆಯಂತೆ ನಾವೇಕೆ ಬೆಳೆಯಲಾಗುತ್ತಿಲ್ಲ ಎಂಬುದನ್ನು ಸದಾ ಚರ್ಚೆಯಲ್ಲಿಡುವ ಬದಲು ಕಾರ್ಯಪ್ರವೃತರಾಗಬೇಕಿದೆ. ಕನ್ನಡಿಗರು ಶ್ರಮಿಸಬೇಕಾದ ದಾರಿ ಸಾಕಷ್ಟಿದೆ. ಅದರ ಬಗೆಗೆ ಗಮನಹರಿಸಬೇಕಿದೆ. ಮೂರು ದಿನಗಳಲ್ಲಿ ಕಳೆದುಹೋಗದಂತೆ ಅಲ್ಲವೇ?

Leave a Reply