ಭುವನಾ ‘ಟ್ರಯಲ್ ರೂಮಿನ ಅಪ್ಸರೆ’

ಕಾಲ ನಿಲ್ಲುವುದಿಲ್ಲ

ಬಾನಂಚಿನ ಅಂಗೈಗೆ
ಮುತ್ತಿಡುವ ಬೆಳಕಿನಲಿ
ಮೈಯೆಲ್ಲ ಅರಿಶಿನ ಮೆತ್ತಿಕೊಂಡ
ಅಚ್ಚರಿಯ ಸಂಜೆಯೊಂದನು
ಗಟ್ಟಿಯಾಗಿ ತಬ್ಬಲೆಂದೇ
ತಲತಲೆಮಾರುಗಳಿಂದ
ಸಿಂಗರಿಸಿಕೊಂಡು ನಿಂತಿದ್ದೇನೆ.

ಮಾತು ಬಾರದ ಅಶೋಕವೃಕ್ಷ
ಮಮ್ಮಲ ಮರುಗುತ್ತ
ಆಚೀಚೆ ಬಾಗಿ ಸಂತೈಸುತ್ತದೆ
ತಲೆಸವರುವ ಅವ್ವನಂತೆ

ಕಂಬಳಿಯೊಳಗವಿತ ಮೊದಲಗಿತ್ತಿಯ ಕಣ್ಣುಗಳಲ್ಲಿ
ಅದ್ಯಾವುದೋ ದಿವ್ಯಕಾಂತಿ
ಯಾವ ಪುರಾಣದ ಆಧ್ಯಾತ್ಮ ಅರೆದು ಕುಡಿದಿರುವಳೋ,
ನಾನಿನ್ನೂ ಕಾಯಬೇಕು
ವಯಸ್ಸಾಗುವವರೆಗೆ
ಇದೇ ಹಣ್ಣುಹಣ್ಣಾದ ಅಶೋಕದ ಎಲೆಗಳ ಹಾಸಿನ ಮೇಲೆ,
ಸಂಜೆಗಳೇ ಓಡಿಬಂದು
ನಡುಬಳಸಿ ಕಣ್ಣಲ್ಲಿ ಕಣ್ಣಿಡುವ ತನಕ ಬಲ ಬರುವುದಿಲ್ಲ,
ತವರಿನಂತೆ ಆವರಿಸುವ ಹಳದಿ ಹೂವುಗಳ ಸಂತೆಯಲ್ಲಿ ಕಳೆದುಹೋಗಿದ್ದೇನೆ.

ಅದೆಷ್ಟು ಜಗತ್ತುಗಳಡಗಿವೆ
ನನ್ನೂರಿನ ಹಾಲುಹಾದಿಯಲ್ಲಿ,
ಒಂಟಿ ತಾರೆಯ ಬೆಳಕಿಗೂ ಕರುಣೆಯಿಲ್ಲ,
ಕಾಲದ ಅಂಗಿ ಜಗ್ಗಿ
ನನ್ನ ಸೀರೆಯ ಸೆರಗಿನೊಂದಿಗೆ
ಗಂಟು ಬಿಗಿಯಲೇಯಿಲ್ಲ,

ಇನ್ನೂ ಕಾಯುತ್ತಿದ್ದೇನೆ
ಬೋಳು ಅಶೋಕವೃಕ್ಷಕ್ಕೀಗ
ಮುಪ್ಪು
ಹಿಮ್ಮಡಿ ಸವೆಯುವಷ್ಟು ದಾರಿ ಸಾಗಿದರೂ
ನನ್ನ ವಯಸ್ಸಿಗೆ ಹಿರಿತನವೇ ಬರಲಿಲ್ಲ
ಕಾಲ ನಿಲ್ಲುವುದಿಲ್ಲ
ನಾವು ಕೂಡುವುದಿಲ್ಲ.

-ಭುವನಾ ಹಿರೇಮಠ 

1 comment

  1. ಧಾರವಾಡದಲ್ಲಿ ಜರುಗಿದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದಲಿ ಈ ಕವನ ಸಂಕಲನ ವನ್ನು ಕೊಂಡುಕೊಂಡೆ . ಎಲ್ಲಾ ಕವಿತೆಗಳು ಬಹಳ ಚೆನ್ನಾಗಿವೆ.
    ” ಕಳೆದುಕೊಂಡ ನಕ್ಷತ್ರ ” ಬಹಳ ಇಷ್ಟವಾಯಿತು.
    – ಮಠದ ಮೆಹಬೂಬ್
    ಕೊಪ್ಪಳ.

Leave a Reply