ನಟಿಸುವುದೆಂದರೆ…

ಲಕ್ಹ್ಮಣ್ ಕೆಪಿ 

1929ರಲ್ಲಿ ಬರ್ಲಿನಲ್ಲಿ ಬ್ರೆಕ್ಟ್ ಸಂದರ್ಶನವೊಂದರಲ್ಲಿ ನಟನೆಯ ಕುರಿತು ವಿವರವಾಗಿ ಮಾತಾಡುತ್ತಾನೆ.ಆ ಹೊತ್ತಿಗೆ ಅವನು ಸ್ವತಃ ತರಬೇತಿ ನೀಡುತ್ತಿದ್ದ ನಟ ನಟಿಯರನ್ನು ಮತ್ತು ಅವನು ಆ ತನಕ ಜರ್ಮನಿಯಲ್ಲಿ ಹಾಗು ಇತರೆ ದೇಶಗಳಲ್ಲಿ ತಾನು ಕಂಡ ವಿವಿಧ ಬಗೆಯ ರಂಗಭೂಮಿಯನ್ನು ಗಮನಿಸುತ್ತಾ, ಆ ಕಾಲವು ಬಯಸುತ್ತಿರುವ ಮತ್ತು ಆ ಕಾಲಕ್ಕೆ ಅನಿವಾರ್ಯವಿರುವ ನಟನೆಯ ಕುರಿತು ದೀರ್ಘವಾಗಿ ಮತ್ತು ಬಹಳ ನಿಖರವಾಗಿ ಮಾತಾಡುತ್ತಾನೆ.(ಪ್ರತಿಯೊಂದು ಕಾಲವು ಅದರದೇ ಆದ ನಟನೆಯ ರೀತಿಯನ್ನು,ಕ್ರಮವನ್ನು ಬಯಸುತ್ತದೆ ಅನ್ನುವುದೇ ಬಹಳ ಮಹತ್ವ ಮಾತು ಹಾಗಾಗಿ ಬ್ರೆಕ್ಟ್ ಮಾದರಿಯ ಅಭಿನಯವೂ ನಿಂತ ನೀರಲ್ಲ.ಇನ್ನು ರಂಗದ ಮೇಲಿನ ಕಾಲದ ಲೆಕ್ಕಾಚಾರ ಬೇರೆಯ ಮಾತು).

ಈ ಕಾಲದ ನಟರು ವೈಜ್ಞಾನಿಕ ಯುಗ ಪ್ರೇಕ್ಷಕರಿಗಾಗಿ ನಟಿಸಬೇಕು.ಪ್ರಜ್ಞಾಪೂರ್ವಕವಾಗಿ ನಟರು ಮನುಷ್ಯ ಸಂಭಂದಗಳ,ಮನುಷ್ಯನ ವರ್ತನೆಗಳ,ಮನುಷ್ಯನ ಸಾಧ್ಯತೆಗಳ ಕುರಿತು ತಮ್ಮ ಅರಿವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಬೇಕು.ಮನುಷ್ಯ ಕುಲದ ದೊಡ್ಡಅರಿವು ನಟರಿಗೆ ಅಗತ್ಯ.ಇದಲ್ಲದೆ ಬರಿಯ ಪ್ರೇಕ್ಷಕರನ್ನು ಮೆಚ್ಚಿಸುವ ಹಾಗು ಚಪ್ಪಾಳೆ ಗಿಟ್ಟಿಸುವ ಉಮೇದಿಯಲ್ಲಿ ನಟಿಸಿದರೆ ಅದು “ಕೆಟ್ಟ” ನಟನೆಯಲ್ಲ “ತಪ್ಪು” ನಟನೆ” ಅನ್ನುತ್ತಾನೆ.ನಟನೆಯು ಒಂದು “ವೈಜ್ಞಾನಿಕ ಅಭಿವ್ಯಕ್ತಿ” ಅನ್ನುತ್ತಾನೆ.ಬ್ರೆಕ್ಟ್ನ “ವೈಜ್ಞಾನಿಕ ಅಭಿವ್ಯಕ್ತಿ” ಅನ್ನುವುದು ನಾವು ತಿಳಿದು ಕೊಳ್ಳುವ “ಲೆಕ್ಕಾಚಾರದ ನಟನೆ”ಗಿಂತ ತುಂಬ ಭಿನ್ನವಾದ್ದು .

ಮನುಷ್ಯನ ವರ್ತನೆಯನ್ನು, ಸ್ವಭಾವನ್ನು ಆದಷ್ಟು ನಿಕರವಾಗಿ ಜಾಲಾಡಿ ಗ್ರಹಿಸಿ ಪ್ರೇಕ್ಷಕನಿಗೆ ತಿಳಿಸುವುದು. ಯಾವುದೇ ನಾಟಕವು ಕಾವ್ಯಮಯವಾಗುವುದು ಈ ರೀತಿಯ ನಟನೆಯಿಂದಲೇ. ಈ ರೀತಿಯ ವರ್ತನೆಗಳ ಪಲ್ಲಟದ ಗ್ರಹಿಕೆಯೇ ನಮ್ಮ ಸುತ್ತಲು ಆಗುವ ಎಲ್ಲ ರೀತಿಯ ಸಾಮಾಜಿಕ ,ರಾಜಕೀಯ ಪಲ್ಲಟಗಳ ಗ್ರಹಿಕೆಯೂ ಹೌದು .ಆತನ ಪ್ರಕಾರ ಮನುಷ್ಯನ ವರ್ತನೆಯನ್ನು ಮತ್ತು ಇಡಿಯಾಗಿ ಮನುಷ್ಯನನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುವ ಮಾಧ್ಯಮ ರಂಗಭೂಮಿಯೊಂದೆ.

Leave a Reply