ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಹೋರಾಟದ ಹಿಂದಿನ ಕಳವಳ

ಕರ್ನಾಟಕ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಜನೆಯನ್ನು ಮುಂದಿಡುತ್ತಿದ್ದಂತೆ ನೂತನ ಶೈಲಿಯ ಕನ್ನಡ ಉಳಿವಿನ ಹೋರಾಟವೇ ಆರಂಭವಾದಂತೆ ತೋರುತ್ತಿದೆ. ಆದರೆ, ಈ ಹೋರಾಟದ ಪರ ಅಥವಾ ವಿರೋಧದ ಆಲೋಚನೆಯನ್ನು ಮಾಡುವ ಬದಲಿಗೆ, ಸರ್ಕಾರದ ಈ ನಿಲುವು ಹಾಗೂ ಸರ್ಕಾರ ಆರಂಭಿಸಲು ಹೊರಟಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವವರ ಆಲೋಚನೆಯ ಹಿಂದಿನ ಮನೋಧರ್ಮವನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಇಲ್ಲಿ ಮುಖ್ಯ ಎನಿಸುತ್ತಿದೆ.

ಇಂದು ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿಯಷ್ಟೇ ಉಳಿದುಕೊಂಡಿಲ್ಲ ಎನ್ನುವುದನ್ನು ಮೊದಲು ಒಪ್ಪಿಕೊಳ್ಳಬೇಕು. ಈಗಾಗಲೇ ಇಂಗ್ಲಿಷ್ ಎನ್ನುವುದು ನಮ್ಮನ್ನು ಬೇಕು ಎನ್ನುವ ಎತ್ತರಕ್ಕೆ ಜಿಗಿಸಬಲ್ಲ ಚಿಮ್ಮುವ ಹಲಗೆಯ ರೂಪ ಧರಿಸಿ ನಿಂತಿದೆ ಮತ್ತು ಎಂದೋ ಕಟ್ಟಿಕೊಂಡ ಕನಸಿನ ಅರಮನೆಯ ಬಾಗಿಲು ತೆರೆಯಲು ಅಗತ್ಯವಾಗಿ ಬೇಕಾಗುವ ಕೀಲಿ ಕೈಯಾಗಿ ರೂಪುಗೊಂಡಿದೆ. ಆದರೆ ಅಂತಹ ಕನಸಿನ ಅರಮನೆಯನ್ನು ಪ್ರವೇಶಿಲು ಸಾಧ್ಯಗೊಳಿಸುತ್ತಿರುವ ಕೀಲಿ ಕೈ ಸಮಾಜದ ಯಾವ ಸ್ತರದಲ್ಲಿ ಜೀವಿಸುತ್ತಿರುವವರ  ಬಳಿ ಇದೆ ಎನ್ನುವುದಷ್ಟೇ ನಾವು ಎದುರುಗೊಳ್ಳಬೇಕಾಗಿರುವ ಸದ್ಯದ ಅನಿವಾರ್ಯ ಪ್ರಶ್ನೆ.

ಮುಖ್ಯವಾಗಿ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಉದ್ದಾನುದ್ದ ಭಾಷಣ ಮಾಡುವ ಸ್ವಯಂಘೋಷಿತ ಪಂಡಿತರಲ್ಲಿ ಬಹುತೇಕರು ಸದ್ಯದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನೋಡಿರುವುದೇ ಇಲ್ಲ. ಗತಕಾಲದಲ್ಲಿ ತಾವು ಓದಿದ ಸರ್ಕಾರಿ ಶಾಲೆಗಳನ್ನು ಉದಾಹರಿಸುತ್ತ ಕಾಲ ಸವೆಸುವ ಇವರು ವಾಸ್ತವದಲ್ಲಿ ಜೀವಿಸುವುದೇ ಇಲ್ಲ ಎನಿಸುತ್ತದೆ. ಸದ್ಯ ಸರ್ಕಾರದ ಕನ್ನಡ ಶಾಲೆಗಳು ಎಂತಹ ದುಸ್ಥಿತಿಯನ್ನು ತಲುಪಿವೆ ಎಂದರೆ, ಒಂದು ಕಡೆ ಸರ್ಕಾರಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ನೂರಾರು ಮೇಮ್, ಟ್ರಾಲ್‍ಗಳು ಹರಿದಾಡುವಷ್ಟು ಪಾತಾಳಕ್ಕೆ ಕುಸಿದಿದ್ದು, ನೂರಾರು ಜೋಕ್‍ಗಳಿಗೆ ವಸ್ತುವಾಗಿ ಪರಿವರ್ತಿತವಾಗಿಹೋಗಿವೆ.

ಮತ್ತೊಂದು ಕಡೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವಂತೆ ಪುಸಲಾಯಿಸಲು ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್‍ಗಳನ್ನು ಆಮೀಷದ ರೂಪದಲ್ಲಿ ಪೂರೈಸಬೇಕಾಗಿರುವ ಸ್ಥಿತಿ ಎದುರಾಗಿದೆ. ಆದರೂ ಸರ್ಕಾರದ ಕನ್ನಡ ಶಾಲೆಗಳಿಗೆ ನಿರೀಕ್ಷೆಯ ಮಟ್ಟದಲ್ಲಿ ಮಕ್ಕಳು ಬರುತ್ತಿಲ್ಲ ಎನ್ನುವುದು ಪ್ರತಿನಿತ್ಯದ ಸಾಮಾನ್ಯ ದೂರು. ಈ ಸಂಖ್ಯೆ ಇಳಿಮುಖವಾಗುವುದಕ್ಕೆ ಕಾರಣವೇನು? ಹಾಗಾದರೆ ಈವರೆಗೂ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದವರ ಮಕ್ಕಳು ತಮ್ಮ ಪಥವನ್ನು ಬದಲಿಸಿಲು ಯೋಚಿಸುತ್ತಿದ್ದಾರಾ?

ಇನ್ನು ಇವತ್ತು ಇಂಗ್ಲಿಷ್ ಮಾಧ್ಯಮದ ಬಗ್ಗೆ ನಮ್ಮ ಜನರಿಗೆ ಇರುವುದು ಇಂಗ್ಲಿಷ್ ಮೇಲಿನ ವ್ಯಾವೋಹ ಖಂಡಿತಾ ಅಲ್ಲ. ಇಂಗ್ಲಿಷ್ ಕಲಿಯುವ ಮೂಲಕ ಮಿಲ್ಟನ್, ಡಬ್ಲ್ಯೂ ಎಚ್ ಆಡೆನ್, ಹಾರ್ಪರ್ ಲೀ ಯಂತಹ ಶ್ರೇಷ್ಠ ಲೇಖಕರನ್ನು ಓದಿಕೊಳ್ಳಬಹುದು, ಇಂಗ್ಲಿಷ್ ಕಲಿಯುವ ಮೂಲಕ ವಿಶ್ವದ ಅನೇಕ ಮೂಲೆಗಳಿಂದ ದೊರೆಯಬಹುದಾದ ಅಪರಿಮಿತ ಜ್ಞಾನವನ್ನು ವಶಮಾಡಿಕೊಂಡು ಮತ್ತೊಬ್ಬರೊಂದಿಗೆ ಪೈಪೋಟಿಗಿಳಿಯಬಹುದು ಎನ್ನುವ ಇರಾದೆಯೂ ಅಲ್ಲ. ಅವರಿಗೆ ಇಂಗ್ಲಿಷ್ ಎನ್ನುವುದು ಒಂದು ಜೀವನಶೈಲಿ ಮತ್ತು ಇಂಗ್ಲಿಷ್ ಕಲಿಯುವ ಮೂಲಕ ಬದುಕಿನ ಮತ್ತೊಂದು ಸ್ತರಕ್ಕೆ ಜಿಗಿಯಬಹುದು ಎನ್ನುವ ತೀವ್ರತರವಾದ ಹಂಬಲವಷ್ಟೇ. ಅದಕ್ಕಿಂತ ಖಂಡಿತಾ ಹಚ್ಚಿನದಲ್ಲ.

ಇಂದು ನಾವು ಯಾವುದಾದರೂ ಪ್ರತಿಷ್ಠಿತ ಅಥವಾ ಸೆಮಿ ರೀಜನಲ್ ಇಂಗ್ಲಿಷ್ ಸ್ಕೂಲಿನ ಆನ್ಯೂಯಲ್ ರ್ಯಾಂಕಿಂಗ್ ಚಾರ್ಟ್‍ನ್ನ ಒಮ್ಮೆ ನೋಡಿದರೂ ಸಾಕು, ದೇಶದ ದೊಡ್ಡ ದೊಡ್ಡ ಆಯಕಟ್ಟಿನ ಜಾಗಗಳನ್ನು ಅಲಂಕರಿಸುವುದು ಯಾರಿಗಷ್ಟೇ ಸಾಧ್ಯವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗಿಬಿಡುತ್ತದೆ. ಇನ್ನು ಲಕ್ಷಾಂತರ ಡೊನೇಷನ್ ಕಟ್ಟುವ ಮೂಲಕ ಆ ಬಗೆಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರ ಮಕ್ಕಳು ಯಾರು ಎನ್ನುವುದೂ ಅರ್ಥವಾಗುತ್ತದೆ.

ವಾಸ್ತವದ ಸತ್ಯ ಎನ್ನುವುದು ಹೀಗೆ ಬಿಡಿಸಲಾರದ ಭೂತದ ಸಾವಿರಾರು ಗಂಟುಗಳಲ್ಲಿ ಸಿಲುಕಿರುವಾಗ, ನಮ್ಮ ಕನ್ನಡ ಪ್ರೇಮವನ್ನು ಯಾರೋ ಸಾಹಿತಿಯೊಬ್ಬರ ಕವಿತೆಯನ್ನು ಉದಾಹರಿಸುತ್ತ, ಅವರು ನೀಡಿದ ಅರ್ಧಶತಮಾನದ ಹಿಂದಿನ ಹೇಳಿಕೆಯನ್ನು ಸಂದರ್ಭಕ್ಕೆ ಅಯೋಗ್ಯವಾಗಿ ಉಲ್ಲೇಖಿಸುತ್ತ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವಂತಹ ಬೂಶ್ರ್ವಾ ಪ್ರೇಮವನ್ನು ಮೆರೆಯುವುದು ಬಹಿರಂಗವಾಗಿ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತ, ಗುಪ್ತವಾಗಿ ಜಾತೀಯತೆಯನ್ನು ಪೋಷಿಸುವ ಜನರ ನಡೆಯಷ್ಟೇ ಅಪಾಯಕಾರಿಯಾದದ್ದು.
ಅಷ್ಟಕ್ಕೂ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವವರ  ಮಕ್ಕಳು ಯಾರು? ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಎನ್ನುವ ಪ್ರತ್ಯೇಕತೆಯಿಂದ ನಮ್ಮ ಶಿಕ್ಷಣಕ್ಷೇತ್ರದಲ್ಲಿ ಎರಡು ವರ್ಗಗಳನ್ನು ಈಗಾಗಲೇ ಸೃಷ್ಠಿಸಿದ್ದೇವೆ. ಇನ್ನು ಇಂತಹ ಕಂದರವನ್ನ ಇನ್ನಷ್ಟು ಹಿಗ್ಗಿಸಲು ಇಂತಹ ಅನಿಷ್ಠಗಳನ್ನು ಬಳಸಿಕೊಳ್ಳುತ್ತಾ ಓಡುವವರನ್ನು ಹುಬ್ಬೇರಿಸಿ ನೋಡುತ್ತಾ, ಓಡುವ ಇರಾದೆಯನ್ನು ಹೊಂದಿದ್ದು, ಇಂದಿಗೂ ತೆವಳುತ್ತಲೇ ಇರುವವರನ್ನು ಸಾಧ್ಯವಾದಷ್ಟು ತುಳಿಯುತ್ತಾ ಆ ಇಬ್ಬರ ನಡುವಿನ ಕಂದರವನ್ನು ವಿಸ್ತರಿಸುತ್ತಲೇ ಇದ್ದೇವೆ.

ನಾಲ್ಕೈದು ತಲೆಮಾರುಗಳ ಅಕ್ಷರ ಸಹವಾಸ ಹೊಂದಿದ ಮೇಲ್ವರ್ಗದವರು ಅಥವಾ ಉಳ್ಳವರ ಮಕ್ಕಳು ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ, ಒಡನಾಡಿಗಳೊಂದಿಗೆ ಮಾತೃಭಾಷೆ ಕಲಿಯುವ ಸಮಯದಿಂದಲೇ ಇಂಗ್ಲಿಷ್‍ನ್ನು ಕೂಡ ಒಂದು ಭಾಷೆಯನ್ನಾಗಿ ಕಲಿಯುವ ಹಾದಿಯಲ್ಲಿದ್ದಾರೆ. ಹೀಗಾಗೇ ಆ ಮಕ್ಕಳಿಗೆ ಪ್ರೈಮರಿ ಶಾಲೆ ತಲುಪುವಷ್ಟರಲ್ಲಿ ಇಂಗ್ಲಿಷ್ ಭಾಷೆಯನ್ನು ಕೂಡ ಅವರ ಮಾತೃಭಾಷೆಯಷ್ಟೇ ಸರಳವಾಗಿ ಒಳಗಿಳಿಸಿಕೊಳ್ಳುವುದು, ವ್ಯವಹರಿಸುವುದು ಸಾಧ್ಯವಾಗುತ್ತಿದೆ. ಆದರೆ ಹುಟ್ಟಿದಾಗಿನಿಂದ ಕನ್ನಡವನ್ನಲ್ಲದೆ ಬೇರೆ ಯಾವ ಭಾಷೆಯನ್ನು ಕಲಿಯಲು ಸಾಧ್ಯವಾಗದ ಸರ್ಕಾರಿ ಶಾಲೆಯ ಮಕ್ಕಳು ಕಾಲೇಜಿನಲ್ಲಿ ಇಂಗ್ಲಿಷ್ ಕಲಿಯಲು ಆರಂಭಿಸಿದಾಗ ಇಂಗ್ಲಿಷ್ ಭೂತದ ವೇಷತೊಟ್ಟು ಎದುರು ನಿಂತಂತೆ ಕಾಣುತ್ತದೆ.

ಮೇಲ್ವರ್ಗ, ಅಧಿಕಾರಿಶಾಹಿ ಹಾಗೂ ಧನಿಕರ ಮಕ್ಕಳು ತಮ್ಮ ಹಾದಿಯನ್ನು ತಲುಪಲು ನೆರವಾಗುವ ಇಂಗ್ಲಿಷ್ ಭಾಷೆಯನ್ನು ಮನೆಯಿಂದಲೇ ಕಲಿಯಲು ಸಾಧ್ಯವಾಗುವುದಾದರೇ, ಹಿಂದುಳಿದವರು, ದನಿಯಿಲ್ಲದವರು, ದಲಿತರು ಮತ್ತು ಇದೇ ಮೊದಲ ತಲೆಮಾರಿನವರಾಗಿ ಆಕ್ಷರ ಪಡೆದುಕೊಳ್ಳಲು ಬೆನ್ನಮಾಡದೇ ನಿಂತಿರುವ ಕೆಳವರ್ಗದವರ ಮಕ್ಕಳು, ಶಾಲೆಯ ಮೊದಲ ದಿನದಿಂದಲೇ ಇಂಗ್ಲಿಷ್‍ನ್ನು ಸಂವಹನ ಮತ್ತು ವ್ಯವಹಾರಿಕ ಮಾಧ್ಯಮದ ಭಾಷೆಯಾಗಿ ಕಲಿಯಲು ಸಾಧ್ಯವಾಗುವುದಾದರೆ ಆಗಲಿ.

ಆ ಮೂಲಕವಾದರೂ ಎಲ್ಲಾ ವರ್ಗದವರು, ಎಲ್ಲಾ ಜನಾಂಗದವರು ಸಮಾಜದಲ್ಲಿ ಒಂದೇ ತೆರನಾಗಿ ನಿಲ್ಲಲು ಸಾಧ್ಯವಾಗುತ್ತದೆ, ಇಂದಿನ ಮಕ್ಕಳಿಗೆ ವರ್ಗರಹಿತವಾಗಿ ಒಂದೇ ಗಮ್ಯದ ಕಡೆಗೆ ಹೊರಡಲು ಸಾಧ್ಯವಾಗುತ್ತದೆ ಎನ್ನುವುದಾದರೆ ಸರ್ಕಾರ ಪ್ರತಿವರ್ಷ ತನ್ನ ಬಡ್ಜೆಟ್‍ನಲ್ಲಿ ಶಿಕ್ಷಣಕ್ಷೇತ್ರಕ್ಕೆ ಮೀಸಲಿಡುವ ಆರ್ಥಿಕ ಹಾಗೂ ಬೌದ್ಧಿಕ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಾಗಿ ವಿನಿಯೋಗಿಸಲಿ! ಇದು ಒಳ್ಳೆಯದೇ ಅಲ್ಲವಾ? ಈ ಮೂಲಕವಾದರೂ ಈ ಜಾತಿ ಹಾಗೂ ವರ್ಗವ್ಯವಸ್ಥೆ ಎಂಬ ಮಾನಸಿಕ ಅಂಟುಜಾಢ್ಯದಂತ ಖಾಯಿಲೆಯಿಂದ ಕೆಲವರಾದರೂ ತಪ್ಪಿಸಿಕೊಂಡು ಆರೋಗ್ಯವಂತರಾಗಿ ಬದುಕುಬಹುದು ಅಲ್ಲವಾ?

ಈ ಎಲ್ಲದರ ನಡುವೆ ಇವುಗಳು ಸಾಧ್ಯವಾದ ಮಾತ್ರಕ್ಕೆ ಸಮಾಜದಲ್ಲಿ ಮಹತ್ವದ ಬದಲಾವಣೆಯೊಂದು ಕೂಡಲೇ ಸಿದ್ಧಿಸಿಬಿಡುತ್ತದೆ ಎನ್ನುವ ಭ್ರಮೆಯನ್ನು ನಾವು ಇಟ್ಟುಕೊಳ್ಳಬೇಕಾಗಿಲ್ಲ. ಆದರೆ ಭವಿಷ್ಯದ ಒಂದು ಶತಮಾನದ ನಂತರವಾದರೂ ಈ ನಡೆಯ ಮೂಲಕ ಅಂತಹ ಸಮಾನತೆಯ ದಿಗಂತವನ್ನು ಸ್ಪರ್ಶಿಸುವುದು ಸಾಧ್ಯವಾಗುವುದಾದರೇ, ಅದು ಇಲ್ಲಿಂದಲೇ ಆರಂಭವಾಗಲಿ ಎನ್ನುವುದಷ್ಟೇ ನನ್ನ ಇಂಗಿತ.

ಅಕ್ಷರವನ್ನೇ ಕಾಣದವರು ಶತಮಾನಗಳ ಹೋರಾಟದ ನಂತರ ಇದೀಗ ಕಾಲೇಜು, ಯೂನಿವರ್ಸಿಟಿಗಳನ್ನು ತಲುಪುವುದು ಸಾಧ್ಯವಾಗಿದೆ. ಇನ್ನು ಇಂದು ವಿಶ್ವಭಾಷೆಯಾಗಿರುವ ಇಂಗ್ಲಿಷ್ ಕಲಿಯುವುದರಿಂದ ಭವಿಷ್ಯದಲ್ಲಿ ಇದುವರೆಗೂ ತುಳಿದವರ ಮಕ್ಕಳ ಹೆಗಲ ಸಮಕ್ಕೆ ನಿಲ್ಲುವುದು ಸಾಧ್ಯವಾಗುವುದರಲ್ಲಿ ಅನುಮಾನಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ. ಏಕೆಂದರೆ ಈ ಮೊದಲೇ ಹೇಳಿದಂತೆ ಇಂಗ್ಲಿಷ್ ಕೇವಲ ಒಂದು ಸಂವಹನ ಭಾಷೆಯಷ್ಟೇ ಅಲ್ಲ. ಅದೊಂದು ಸಾಧ್ಯತೆ.

ಆದರೆ ಅನೇಕ ಸಾಧ್ಯತೆ ಹಾಗೂ ಆಯಾಮಗಳನ್ನು ಹೊಂದಿದೆ ಎಂದ ಮಾತ್ರಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಪಡೆಯುವುದೇ ಮೂಲ ಧ್ಯೇಯವಾಗಬಾರದು. ಸದ್ಯ ನಿಂತಿರುವ ರಣರಂಗದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸುವುದಕ್ಕೆ ಬತ್ತಳಿಕೆಯಲ್ಲಿ ಹೊಂದಿರಬೇಕಾದ ಮತ್ತೊಂದು ಪ್ರಭಲ ಅಸ್ತ್ರವನ್ನಾಗಿ ಇದನ್ನು ಬಳಸಿಕೊಳ್ಳಬೇಕು ಅಷ್ಟೇ.

ಆದರೆ ಈ ಎಲ್ಲದರ ನಡುವೆಯೇ ಯಾವುದೇ ವಿಚಾರವನ್ನೂ ಮಾತೃಭಾಷೆಯ ಸಹಾಯದಿಂದ ಕಲಿತರೇ ಮಾತ್ರ ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗುವುದು ಎನ್ನುವ ಸತ್ಯವನ್ನ ತಳ್ಳಿಹಾಕುವಂತಿಲ್ಲ. ಕನ್ನಡದ ಮಾಧ್ಯಮದ ಉತ್ತಮ ಶಾಲೆಗಳಲ್ಲಿ ಕಲಿತ ಮಕ್ಕಳು ಎಷ್ಟೋ ವಿಷಯಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳಿಗಿಂತ ಚುರುಕಾಗಿರುತ್ತಾರೆ ಎನ್ನುವುದು ವೈಜ್ಞಾನಿಕ ಸತ್ಯ. ಆದರೆ ಅದೇ ಕನ್ನಡದ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಇಂದಿನ ದಿನಗಳಲ್ಲಿ ಬಹುತೇಕ ಆವರಿಸಿಕೊಂಡಿರುವ ಇಂಗ್ಲಿಷ್ ಭಾಷೆಯನ್ನು ಬಳಸುವ ವಿಧಾನ ಹಾಗೂ ಆ ವಿಧಾನದ ಹಿಂದೆಯೇ ಸುಪ್ತವಾಗಿ ಚಿಗುರೊಡೆಯುತ್ತಿರುವ ಜೀವಶೈಲಿಯೊಂದನ್ನು ಪರಿಪಾಲಿಸುವುದು ಮಾತ್ರ ಕಷ್ಟಸಾಧ್ಯ.

ಅಂತಹ ಜೀವನಶೈಲಿಯನ್ನು ಕಲಿಯಲು ಅಸಾಧ್ಯವಾಗುವುದು ಮತ್ತು ಆ ಬಗೆಯ ಜೀವನಶೈಲಿಯಲ್ಲಿ ಜೀವಿಸುತ್ತಿರುವವರಿಂದ ಕೀಳರಿಮೆಯಿಂದಲೋ ಅಥವಾ ಕಲಿತವರನ್ನು ಭಿನ್ನಶ್ರೇಷ್ಠ ಎನ್ನುವಂತಹ ಆರೋಪಿತ ಧೋರಣೆಯಿಂದ ಕಾಣುತ್ತಾ ಅಂತರ ಕಾಯ್ದುಕೊಳ್ಳುವುದು ಮತ್ತದೇ ಅಸ್ಪೃಶ್ಯತೆಯನ್ನು ಮತ್ತೊಂದು ರೀತಿಯಿಂದ ಜಾರಿಗೊಳಿಸಿದಂತಲ್ಲದೇ ಮತ್ತೇನೂ ಅಲ್ಲ. ನಮ್ಮ ಎಚ್ಚರ ಇರಬೇಕಾಗಿರುವುದು ಈ ದಿಸೆಯಲ್ಲಿ.

ಇಲ್ಲಿ ಎರಡು ಉದಾಹರಣೆಗಳನ್ನು ನೀಡುವುದು ಸೂಕ್ತ ಎಂದುಕೊಳ್ಳುತ್ತೇನೆ. ಕೆಲವು ದಿನಗಳ ಹಿಂದೆ ನನ್ನ ಹಿರಿಯ ಮಿತ್ರರೂ ಹಾಗೂ ಗುರುಗಳಾದ ಹರಿಪ್ರಸಾದರೊಂದಿಗೆ ಮಾತನಾಡುತ್ತಾ, ಯು.ಆರ್ ಅನಂತಮೂರ್ತಿ ಅವರ ತಂದೆ ಚಿಕ್ಕಮಗಳೂರಿನ ಗೋಣಿಬೀಡಿನಲ್ಲಿದ್ದಾಗಲೇ ಲಂಡನ್ ಮೆಟ್ರಿಕ್ಯುಲೇಶನ್ ಎಕ್ಸಾಂ ಪಾಸ್ ಮಾಡಿದ್ದರು ಎಂದು ಹುಬ್ಬೇರಿಸಿ ಹೇಳಿದ್ದೆ. ನನ್ನ ಮಾತಿಗೆ ಕಿರುನಗೆಯಾಡಿದ ಅವರು ಪ್ರತ್ಯುತ್ತರವಾಗಿ, ಅದೇ ಕಾಲದಲ್ಲಿ ಬದುಕಿದ್ದ ದೇವನೂರು ಮಹಾದೇವಾರ ಅಪ್ಪನಿಗೆ ಮೆಟ್ರಿಕ್ಯುಲೇಶನ್ ಆಗಲಿ, ಲಂಡನ್ ಆಗಲಿ ಇದೆ ಎನ್ನುವುದೂ ಕೂಡ ಗೊತ್ತೇ ಇರಲಿಲ್ಲ ಎನ್ನುವುದು ನಿನಗೆ ಗೊತ್ತಿದೆಯಾ? ನೀನು ಆಲೋಚನೆ ಮಾಡಬೇಕಾಗಿರುವುದು ಅದನ್ನು ಎಂದಿದ್ದರು. ನಾನು ಈಗಲೂ ಅದನ್ನೇ ಆಲೋಚಿಸುತ್ತಿದ್ದೇನೆ. ನನ್ನ ಆಲೋಚನೆ ವಿಸ್ತಾರಗೊಂಡಿರಲೂಬಹುದು.

ಅಕ್ಷರದ ಸಹವಾಹವಿರದ ದೇವನೂರರ ಅಪ್ಪ, ಅನಂತಮೂರ್ತಿ ತಂದೆಯಂತೆ ಲಂಡನ್ ಅಥವಾ ಮೆಟ್ರಿಕ್ಯೂಲೇಷನ್‍ನ ಸಾಧಿಸುವುದು ಅಸಾಧ್ಯವಾಗಿತ್ತು. ಆದರೆ ಅದೇ ಮನೆಯಲ್ಲಿ ಹುಟ್ಟಿದ ದೇವನೂರರಿಗೆ ಅಕ್ಷರ ಕಲಿತ ನಂತರ ಅನಂತಮೂರ್ತಿಯ ಅವರಂತೆಯೇ ಬರೆಯುವುದು ಮತ್ತು ಆಲೋಚಿಸುವುದು ಸಾಧ್ಯವಾಯಿತು.
ಇದು ಸಾಧ್ಯವಾಗಿದ್ದು ಹೇಗೆ? ಶಿಕ್ಷಣದಿಂದ. ಶಿಕ್ಷಣ ಎನ್ನುವುದು ಯಾವುದೇ ಭಾಷೆಯಿಂದ ಬರಲಿ, ಶಿಕ್ಷಣವಷ್ಟೇ ಮುಖ್ಯ. ಆವತ್ತಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೋರಾಟವೇ ದೈತ್ಯವಾಗಿತ್ತು. ಇಂದು ಆ ಹಾದಿಯಲ್ಲಿ ಬಹುದೂರ ಕ್ರಮಿಸಿದವರು ಈಗ ಇಂಗ್ಲಿಷ್ ಶಿಕ್ಷಣದ ಮೂಲಕ ಮತ್ತೊಂದು ಹಂತಕ್ಕೆ ಎದುರು ನೋಡುತ್ತಿದ್ದಾರೆ ಅಷ್ಟೇ.

ವಾಸ್ತವ ಹೀಗೆ ಜಡ್ಡುಗಟ್ಟಿರುವಾಗ ಕನ್ನಡದ ಬಗೆಗಿನ ನಮ್ಮ ಕುರುಡು ಸೂಡೋ ಪ್ರೇಮವನ್ನ ಮೆರೆಯುವ ಅಗತ್ಯವಿಲ್ಲ. ಇನ್ನು ಯು.ಆರ್ ಅನಂತಮೂರ್ತಿ ಹಾಗೂ ದೇವನೂರು ಮಹಾದೇವಾ ಎನ್ನುವ ಎರಡು ವ್ಯಕ್ತಿತ್ವಗಳನ್ನು ಕೇವಲ ಎರಡು ಜಾತಿಗಳ ಸಂಕೇತವಾಗಿ ಪರಿಗಣಿಸದೆ, ಕಾಲದೇಶದ ಅಂತರ ಬಿಂಬಿಸುವ ರೂಪಕವಾಗಿ ನೋಡುವುದು ಸಾಧ್ಯವಾದರೆ ನನ್ನ ಧೋರಣೆ ಸಲೀಸಾಗಿ ಅರ್ಥವಾಗಬಹುದು.

ಮತ್ತೊಂದು ಉದಾಹರಣೆ: ನನ್ನ ಗೆಳೆಯನೊಬ್ಬ ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ರಾಜಕೀಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಆಫೀಸಿನ ಸಮಯದಲ್ಲಿ ಫೋನ್ ಮಾಡುವ ಅವನು ಯಾವುದಾದರೂ ರಾಜಕಾರಣಿಗಳು ಮಾಡಿರುವ ಟ್ವೀಟ್ ಅಥವಾ ನ್ಯಾಷನಲ್ ಮೀಡಿಯಾಗಳಲ್ಲಿ ಕೇಂದ್ರದ ನಾಯಕರು ಇಂಗ್ಲಿಷ್‍ನಲ್ಲಿ ನೀಡಿದ ಹೇಳಿಕೆಯನ್ನು ಗ್ರಹಿಸಲಾರದೇ ಅದು ಏನು ಹೇಳುತ್ತಿದ್ದಾರೆ ಎನ್ನುವುದು ಬೇಗ ಹೇಳು, ಬ್ರೇಕಿಂಗ್ ಹೋಗಬೇಕು ಎಂದು ಚಡಪಡಿಸುತ್ತಾನೆ.

(ನನಗೆ ಇಂಗ್ಲಿಷ್ ಬರುತ್ತದೆ ಎನ್ನುವುದು ಇಲ್ಲಿ ಮುಖ್ಯವಲ್ಲ) ಅವನು ಪತ್ರಿಕೋಧ್ಯಮವನ್ನ ಕಲಿಯದೇ ಬಂದವನಲ್ಲ. ಎಂ.ಎ ಇನ್ ಮಾಸ್‍ಕಮ್ಯೂನಿಕೇಷನ್ ಓದಿರುವಂತೆ, ದೂರಶಿಕ್ಷಣದಲ್ಲಿ ಎಂ.ಎ ಇನ್ ಜರ್ನಲಿಸಂ ಸಹ ಓದಿದ್ದಾನೆ. ಆದರೆ ಅವನಿಗೆ ಇಂಗ್ಲಿಷ್ ಎನ್ನುವುದು ಏಕೆ ತೊಡಕಾಗಿದೆ? ಇದನ್ನು ಅವನನ್ನೇ ಎದುರು ನಿಲ್ಲಿಸಿಕೊಂಡು ಕೇಳಿದರೆ “ನಾನು ಇಂಗ್ಲಿಷ್ ಕಲಿಯಲು ಆರಂಭಿಸಿದ್ದು ಪಿ.ಯು.ಸಿಗೆ ಬಂದ ನಂತರ. ಮೊದಲು ಇಂಗ್ಲಿಷ್ ಭಯವಾಗಿತ್ತು, ನಂತರ ಸ್ಕೂಲಿನಿಂದಲೇ ಕಲಿತವರು ಸರಾಗವಾಗಿ ಬಳಸುತ್ತಿದ್ದಾಗ ಕೀಳರಿಮೆ ಉಂಟಾಗಿತ್ತು” ಎನ್ನುವುದಷ್ಟೇ ಅವನ ಉತ್ತರ. ಇವನಂತೆ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಯಲು ಆರಂಭಿಸಿದವರು ಅದರಲ್ಲಿ ಪ್ರೌಢಿಮೆಯನ್ನು ಸಾಧಿಸಿರಲೂಬಹುದು. ಆದರೆ ಶೇಖಡವಾರು ನೋಡಿದರೆ ಖಂಡಿತವಾಗಿಯೂ ಕಳವಳವಾಗುತ್ತದೆ.

ಸದ್ಯ ನಮ್ಮ ಸರ್ಕಾರ ಮುಂದಿರುವ ಸವಾಲುಗಳು ಇಷ್ಟೇ. ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ತೋರುತ್ತಿರುವ ಉತ್ಸಾಹವನ್ನ ಧೀರ್ಘಕಾಲದವರೆಗೂ ಜೀವಂತವಾಗಿಟ್ಟುಕೊಳ್ಳಬೇಕು. ಇಂಗ್ಲಿಷ್ ಶಾಲೆಯಲ್ಲಿ ಕಲಿಯುವ ಮಕ್ಕಳು ಬೆದರಿ ಹೋಗುವಂತಹ ಗಂಭೀರ ಪಾಠ, ಪದ್ಯ ಹಾಗೂ ಪ್ರಬಂಧಗಳನ್ನು ಪಠ್ಯಪುಸ್ತಕದಲ್ಲಿ ಜೋಡಿಸಿ ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ ಎನ್ನುವ ಮನೋಭಾವವನ್ನು ಭಿತ್ತುವ ಕೆಲಸ ಮಾಡದೇ, ಸರಳವಾದ ರೀತಿಯಲ್ಲಿ ಕಲಿಸಲು ಯತ್ನಿಸಬೇಕು. ಇಂಗ್ಲಿಷ್ ಎಂದರೆ ಅದೊಂದು ಅನ್ಯ ಭಾಷೆಯಷ್ಟೇ ಎನ್ನುವ ಸಖ್ಯ ಬೆಳೆಸುವ ಪ್ರಯತ್ನ ನಡೆಸಬೇಕು. ಮುಖ್ಯವಾಗಿ ಅಂತಹ ಶಾಲೆಗಳಲ್ಲಿ ಕಲಿಸುವ ಶಿಕ್ಷಕರ ಅರ್ಹತೆಯನ್ನು ವಿವೇಚನೆಯಿಂದ ಹೆಜ್ಜೆ ಇಡಬೇಕು.

ಸದಾ ಆರಂಭ ಶೂರತ್ವ ಮೆರೆಯುವ ಸರ್ಕಾರ ಇಂತಹ ಯೋಜನೆಗಳಲ್ಲೂ ಅದೇ ನಡೆಯನ್ನು ತೋರಿದರೆ ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟವೇ ಸಂಭವಿಸುತ್ತದೆ. ಒಂದಿಷ್ಟೇ ನಿರುತ್ಸಾಹ ತೋರಿದರೂ ಇಂಗ್ಲಿಷ್ ಶಾಲೆಯಲ್ಲಿ ಕಲಿಯಲು ಉತ್ಸಾಹ ತೋರುವ ಮಕ್ಕಳು ಅರೆಬೆಂದ ಮಡಕೆಗಳಾಗಿಬಿಡುವ ಸಾಧ್ಯತೆಗಳಿವೆ. ಇನ್ನು ಸರ್ಕಾರ ನಿರುತ್ಸಾಹಗೊಂಡು ಇಂತಹ ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬೇಜವಾಬ್ದಾರಿ ಕಾರಣಗಳನ್ನು ನೀಡಿ ಯಾವುದಾದರೂ ಕಾರ್ಪೊರೇಟ್ ಮಾದರಿಯ ಖಾಸಗಿ ಯೂನಿವರ್ಸಿಟಿಗಳೊಂದಿಗೆ ಒಪ್ಪಂದಕ್ಕಿಳಿದರೆ ಕೆಲವೇ ವರ್ಷಗಳಲ್ಲಿ ಈವರಗೆ ಬಡಿದಾಡಿ ಕೆಳವರ್ಗದವರು ಪಡೆದ ಶಿಕ್ಷಣ ಅಧಃಪತನವಾಗುತ್ತದೆ.

ನಮ್ಮ ಕಾಳಜಿ ಇರಬೇಕಾಗಿರುವುದು ಈ ನಿಟ್ಟಿನಲ್ಲಿ. ನಮ್ಮ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎನ್ನುವುದರಲ್ಲಿ ಸಮಾಜ ಸ್ವಾಸ್ಥ್ಯವಿದೆಯೇ ಹೊರತು, ಯಾವ ಭಾಷೆಯಲ್ಲಿ ಕಲಿಯುತ್ತಿದ್ದಾರೆ ಎನ್ನುವುದರಲ್ಲಿ ಖಂಡಿತಾ ಅಲ್ಲ. ಹೀಗಾಗಿ ಸರ್ಕಾರದ ಈ ನಿಲುವನ್ನು ಪ್ರಜ್ಞಾವಂತರಾಗಿ ಸ್ವಾಗತಿಸಿ, ಗುಪ್ತವಾಗಿ ಹೋರಾಟ ಮಾಡುತ್ತಿರುವವರ ಹಿಂದಿನ ಕಳವಳವನ್ನು ಎಚ್ಚರಿಕೆಯಿಂದ ಭವಿಷ್ಯದಲ್ಲಿ ಎದುರುಗೊಳ್ಳಬೇಕಾದ ಅಗತ್ಯ ಪಾಠ ಎಂದು ಪರಿಗಣಿಸುವುದು ಮುಖ್ಯ ಅಷ್ಟೇ.

1 comment

  1. ಕಾರ್ಯರೂಪಕ್ಕೆ ತರಲು ಸಾಧ್ಯವಾದರೆ ಇದೊಂದು ಮಹಾ ಉಡುಗೊರೆಯೆ ಸರಿ

Leave a Reply