ತರಮತದ ಗೋಡೆಯೊಂದ ಕೆಡವಿದ ಕ್ಷಣ!

ಶಬರಿಮಲೆಗೆ ಎಲ್ಲಾ ವಯಸ್ಸಿನ ಸ್ತ್ರೀಯರಿಗೂ ಪ್ರವೇಶ ಇರಲಿ ಎಂದು ಸುಪ್ರೀಂ ಕೋರ್ಟು ನೀಡಿದ ಐತಿಹಾಸಿಕ ತೀರ್ಪುನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಜ.1 ರಂದು ಕೇರಳದಲ್ಲಿ 620 ಕಿ.ಮೀಗಟ್ಟಲೆ ಹೆಣ್ಣುಮಕ್ಕಳು ಪರಸ್ಪರ ಕೈ ಹಿಡಿದುಕೊಂಡು ‘ಮಹಿಳಾಗೋಡೆ’ ನಿರ್ಮಿಸುವ ಮೂಲಕ ಮಹಿಳಾವಿಮೋಚನೆಯ ಉದ್ಘೋಷ ಮೊಳಗಿಸಿದ್ದರೆ ಅದೇ ದಿನ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಳವನ್ನು ಇಬ್ಬರು ಸ್ತ್ರೀಯರು ಪ್ರವೇಶಿಸುವ ಮೂಲಕ ಸಂಪ್ರದಾಯವಾದಿಗಳು, ಮೂಲಭೂತವಾದಿಗಳು ಕಟ್ಟಿದ್ದ ತರತಮದ ಗೋಡೆಯನ್ನು ನುಚ್ಚುನೂರು ಮಾಡಿ ಇತಿಹಾಸವನ್ನು ನಿರ್ಮಿಸಿದರು.

ಈ ಘಟನೆಯೂ 1930, ಮಾರ್ಚ್ 20 ರಂದು ಬಾಬಾಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಕಾಳರಾಂ ದೇವಸ್ಥಾನ ಪ್ರವೇಶ ಮಾಡಿದ ಐತಿಹಾಸಿಕ ಘಟನೆಯಷ್ಟೇ ಮುಖ್ಯವಾಗುತ್ತದೆ. ಮಹಿಳೆಯರಿಬ್ಬರು (ಕನಕ ದುರ್ಗ -ಬಿಂದು ) ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶ ಮಾಡಿದ್ದನ್ನು ಮಹಾ ಪ್ರಮಾದವೆಂಬಂತೆ, ಹಿಂದೂ ಸಮಾಜದ ಸಂಪ್ರದಾಯ, ನಂಬಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಂತೆ ಅರಚುತ್ತಿರುವವರಿಗೆ ಹಿಂದೂ ಸಮಾಜದೊಳಗಿನ ಪಾಚಿಕಟ್ಟಿದ ದೋಷಗಳು ನಿರ್ನಾಮವಾಗಬೇಕಿಲ್ಲ. ಅಂಬೇಡ್ಕರ್ ಅವರು ಹಿಂದೂ ಸಮಾಜದಲ್ಲಿನ ತರತಮ, ದೋಷ, ಕೆಡುಕಗಳನ್ನು ಸುಧಾರಿಸಲೆಂದು  ತಂದ ‘ಹಿಂದೂ ಕೋಡ್ ಬಿಲ್’ ನ್ನು ವಿರೋಧಿಸಿದ ಶಕ್ತಿಗಳೇ ಇಂದು ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶವನ್ನು ವಿರೋಧಿಸುತ್ತಿವೆ.

ಕೇರಳದಲ್ಲಿ ಎಡಪಂಥೀಯ ಪಕ್ಷದ ಪ್ರಭುತ್ವವಿದೆ. ಈ ಕಾರಣಕ್ಕಾಗಿ ಸುಪ್ರೀಂಕೋರ್ಟು ನ ತೀರ್ಪು ಜಾರಿಗೊಳಿಸಲು ಸರ್ಕಾರ ಅಸ್ಥೆವಹಿಸಿದೆ. ಅದಕ್ಕೂ ಮುಂಚೆ ಸರ್ಕಾರವೇ ಹಿಂದೂ ನಂಬಿಕೆಗಳ ಭಾವನೆಯನ್ನು ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿಕೊಡದೆ ಇಂತಹದ್ದೊಂದು ತೀರ್ಪು ಬರಲು ಕಾರಣವಾಗಿದೆ ಎಂಬ ಆರೋಪನಿರತ ಇತರ ಪಾರ್ಲಿಮೆಂಟರಿ ಪಕ್ಷಗಳು, ಮತಾಂಧ ಸಂಘಟನೆಗಳು ಇಂದು ಎಂದಿನಂತೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭಕ್ಕಿಳಿದಿವೆ.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶವನ್ನು ರಾಜಕೀಯ ವಿಷಯಸೂಚಿಯಾಗಿ ನೋಡುತ್ತಾ ಹೋದಂತೆಲ್ಲಾ ಅದು ಮತ್ತೊಂದು ರಾಮಜನ್ಮಭೂಮಿ ವಿವಾದದಂತೆ ಕಾಣುತ್ತದೆ ಮತ್ತು ಅದು ರಾಜಕೀಯ ಫಲದ ಪೈಪೋಟಿಗೆ ಕ್ರೀಯಾಶೀಲವಾಗಿಯೇ ಇರುತ್ತದೆ. ಕೇರಳದ ಎಡಪಂಥೀಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸುವ ಮೂಲಕ ಆಂತರಿಕವಾಗಿ ತನ್ನ ಸೈದ್ಧಾಂತಿಕ ನಿಲುವನ್ನು ಪ್ರತಿಪಾದಿಸುವುದು ರಾಜಕೀಯ ಲಾಭವೇ ಆಗಬಹುದು. ಅದೇ ಕಾಲಕ್ಕೆ ಅದನ್ನು ವಿರೋಧಿಸುವ ಪ್ರತಿಪಕ್ಷಗಳ ಉದ್ದೇಶವೂ ಗದ್ದುಗೆ ಹಿಡಿಯಲು ದಾರಿ ಕಂಡುಕೊಂಡಂತೆಯೂ ಆಗಬಹುದು. ಅಂತಿಮವಾಗಿ ಕೇರಳದಲ್ಲಿ ನೆಲೆ ಇಲ್ಲದ ಬಿಜೆಪಿ ಇದನ್ನೆ ಅಸ್ತ್ರವಾಗಿಸಿಕೊಂಡು ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಮುಂದಿನ ದಿನಗಳಲ್ಲಿ ನೆಲೆ ಕಂಡುಕೊಳ್ಳಲೂಬಹುದು.

 

2016 ರ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಶೇ. 15.10 ರಷ್ಟು ಮತಗಳನ್ನು ಪಡೆದಿದೆ. ಇದನ್ನು ಮುಂದಿನ ಲೋಕಸಭಾ ಚುನಾವಣೆ ಮತ್ತು ಆ ನಂತರದ ವಿಧಾನಸಭಾ ಚುನಾವಣೆಯಲ್ಲಿ ಶೇ. 35ಕ್ಕೆ ಬಲಗೊಳಿಸಿಕೊಳ್ಳಲು ಶಬರಿಮಲೆಯನ್ನು ಎಲ್ಲಾ ರೀತಿಯಲ್ಲೂ ಬಿಜೆಪಿ ಮತ್ತದರ ಪರಿವಾರ ಬಳಸಿಕೊಳ್ಳದೆ ಸುಮ್ಮನಿರುವುದೇ?

ಕೋಮುವಾದಿ ಬಿಜೆಪಿ ವಿರುದ್ದ ದೇಶದಲ್ಲಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಕೇರಳದಲ್ಲಿ ಮಾತ್ರ ಶಬರಿಮಲೆ ವಿಷಯದಲ್ಲಿ ತನ್ನ ಅಂತರಂಗದಲ್ಲಿ ಅಡಗಿರುವ ಮೃದು ಹಿಂದೂತ್ವವನ್ನು ಬಹಿರಂಗಗೊಳಿಸಿಕೊಂಡಿದೆ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಹುದೊಡ್ಡ ಅಂತರವೇನೂ ಇಲ್ಲ. ಬಿಜೆಪಿ ನೇರಾ ನೇರಾ ಹಿಂದೂತ್ವ , ಮೂಲಭೂತವಾದವನ್ನೆ ಮುಂದಿಟ್ಟುಕೊಂಡು ಮತ ಬೇಟೆ ನಡೆಸಿದ್ದರೆ ಕಾಂಗ್ರೇಸ್ ಹುಲ್ಲಿನೊಳಗಿನ ಹಾವಿನಂತೆ ಮೃದು ಹಿಂದುತ್ವವನ್ನು ಅನುಸರಿಸುತ್ತಾ ಬಂದಿರುವುದು ಹೊಸತೇನಲ್ಲ.

ವೈಚಾರಿಕವಾಗಿ, ಸುಪ್ರೀಂ ಕೋರ್ಟು ತೀರ್ಪಿನ ಪರವಾಗಿ ಅಂದರೆ ಸಂವಿಧಾನ ನಿಷ್ಠೆಯಿಂದ ಗಟ್ಟಿಯಾಗಿ ಕಾಲೂರಿ ನಿಲ್ಲಬೇಕಾದ ಕಾಂಗ್ರೆಸ್ ಕೇರಳದಲ್ಲಿ ಬಹುಸಂಖ್ಯಾತ ಹಿಂದೂಗಳ ಮತ ಕಾಯ್ದುಕೊಳ್ಳಲು ಹೊರಟಿರುವುದು ಅದರ ಅವಕಾಶವಾದಿತವನ್ನು ಜಗಜ್ಜಾಹೀರುಗೊಳಿಸಿದೆ. ಪ್ರಾದೇಶಿಕ ರಾಜಕಾರಣದಲ್ಲಿ ಅಧಿಕಾರದ ಬೆನ್ನತ್ತಿರುವ ಕಾಂಗ್ರೆಸ್ ಸಿದ್ದಾಂತ ದ್ರೋಹದಿಂದ ವರ್ತಿಸುತ್ತಿದೆ. ಸಂಸತ್ತಿನಲ್ಲಿ ಅಂಬೇಡ್ಕರ್ ಅವರು ಮಂಡಿಸಿದ ‘ಹಿಂದೂ ಕೋಡ್ ಬಿಲ್’ ಬಿದ್ದುಹೋಗಲು ಇದೇ ಕಾಂಗ್ರೆಸ್ ನ ಮೃದು ಹಿಂದೂತ್ವ ಧೋರಣೆಯೂ ಕಾರಣ ಎಂಬುದನ್ನು ಮರೆಯಲು ಸಾಧ್ಯವೆ.? ಬಲಪಂಥೀಯ ಕೋಮುವಾದದ ಬಗ್ಗೆ ನೆಹರು ಹೊಂದಿದ್ದ ಸ್ಪಷ್ಟ ಧೋರಣೆಯಿಂದ ಕಾಂಗ್ರೆಸ್ ಎಂದೋ ವಿಮುಖವಾಗಿದೆ.

ನೆಹರೂ ಅವರಿಗೆ ಹಿಂದೂ ಕೋಮುವಾದದ ಪರಿಣಾಮ, ಅದರ ವಿಶ್ವಾಸಘಾತುಕತನದ ಬಗ್ಗೆ ತೀವ್ರವಾದ ಒಳನೋಟವೊಂದಿತ್ತು. ಆ ಕಾರಣಕ್ಕಾಗಿಯೇ ಅವರು ‘ಭಾರತಕ್ಕೆ ಅಪಾಯವಿರುವುದು ಕಮ್ಯೂನಿಸಂನಿಂದಲ್ಲ. ಬಲಪಂಥೀಯ ಕೋಮುವಾದದಿಂದ’ ಎಂದು ಹೇಳಿದ್ದರು. ಆದರೆ ಇಂದು ಕೇರಳದಲ್ಲಿ ಕಾಂಗ್ರೆಸ್ ಹಿಂದೂ ಕೋಮುವಾದವನ್ನೆ ಬಲಪಂಥೀಯ ಕೋಮುವಾದಿಗಳಿಗಿಂತಲೂ ಒಂದು ಹೆಜ್ಜೆ ಮುಂದು ಎಂಬಂತೆ ಹೊದ್ದು ಹೋರಾಟಕ್ಕಿಳಿದಿರುವುದು ಅದರ ಸೈದ್ದಾಂತಿಕ ದಿವಾಳಿತನವನ್ನು ತೋರಿಸುತ್ತಿದೆ.

ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದ್ದನ್ನು ರಾಜಕೀಯ ಪರಿಭಾಷೆಗಳಿಂದ, ಅದರ ಒಳನೋಟಗಳಿಂದ ವಾದ-ವಿವಾದಕ್ಕಿಳಿಯದೆ. ಅದಕ್ಕಿಂತಲೂ ಮಿಗಿಲಾದ ಸಂವಿಧಾನದತ್ತವಾದ ಸಾಮಾಜಿಕ ನ್ಯಾಯ ಮತ್ತು ಧಾರ್ಮಿಕ ಹಕ್ಕಿನ ಕಡೆಗೆ ಲಕ್ಷ್ಯವನ್ನು ಹರಿಸಬೇಕಿದೆ. ಮಹಿಳೆ ಜಗತ್ತಿನ ಮೊದಲ ಶೋಷಿತೆ. ಜಾತ್ಯಾತೀತವಾಗಿಯೂ ಆಕೆ ನಿರಂತರ ಸಂತ್ರಸ್ಥೆಯಾಗಿಯೇ ನರಳುತ್ತಾಳೆ.

ಇವತ್ತಿನ ಜಾಗತಿಕ ಕಾಲಘಟ್ಟದಲ್ಲೂ ಧಾರ್ಮಿಕವಾಗಿ, ಸಾಮಾಜಿಕವಾಗಿ ಆಕೆ ತನ್ನ ಸುತ್ತ ಸುತ್ತಿಗೊಂಡಿರುವ ರೇಷ್ಮೆ ಹುಳುವಿನ ಲೋಳೆಯ ಗೂಡಿನಂತ ಧರ್ಮ, ದೇವರು ಪ್ರಚೋದಿತ ಸಂಕೋಲೆಗಳಿಂದ ವಿಮೋಚನೆ ಗೊಳ್ಳಬೇಕಾದರೆ ಹೋರಾಡಲೇಬೇಕಾಗಿರುವುದು ವಿಪರ್ಯಾಸ. ಸುಪ್ರೀಂಕೋರ್ಟ್ ತೀರ್ಪನ್ನು ಈ ನೆಲದ ನ್ಯಾಯದ ಘನತೆಯಾಗಿ, ಸಾಮಾಜಿಕ ಚಳವಳಿಯ ಅಂತಃಸತ್ವವಾಗಿ, ಲಿಂಗ ತಾರತಮ್ಯವನ್ನು ಮೆಟ್ಟಿ ನಿಲ್ಲುವ ಮಹಿಳಾ ವಿಮೋಚನೆಯ ಬಹುದೊಡ್ಡ ಸೂತ್ರ ಸಂಬಂಧವಾಗಿ, ಹಿಂದೂ ಧರ್ಮದ ಸುಧಾರಣೆಯ ಮಹತ್ತರ ಹೆಜ್ಜೆಯಾಗಿ ಕಾಣಬೇಕಾಗಿರುವ ಈ ಹೊತ್ತಿನಲ್ಲಿ ಮೂಲಭೂತವಾದಿಗಳು, ಈ ದೇಶದ ಸಂಪ್ರದಾಯವಾದಿಗಳು ನಂಬಿಕೆಗಳ ಹೆಸರಿನಲ್ಲಿ ಮತ್ತದೆ ಅಸಹನೆ, ಕ್ರೌರ್ಯಕ್ಕಿಳಿದಿರುವುದು ‘ಅವರು’ಗಳು ಬದಲಾಗಿಲ್ಲ ಎಂಬುದು ಮತ್ತೆ ಮತ್ತೆ ದಿಟವಾಗಿದೆ.

 

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರಿರುತ್ತಾನೆ ಎಂದು ಹೇಳುವವರು ಅದೇ ದೇವರು ನೆಲಸಿರುವ ಸ್ಥಳಕ್ಕೆ ಹೆಣ್ಣಿನ ಪ್ರವೇಶ ನಿರಾಕರಿಸುವುದು, ಮತ್ತು ಅದನ್ನು ಧರ್ಮವಿರೋಧಿ ಎನ್ನುವುದು ಹಿಂದೂ ಧರ್ಮಿಷ್ಠರ ದ್ವಂಧ್ವಕ್ಕೆ ಸಾಕ್ಷಿ. ಹೆಣ್ಣು ನಡೆದಾಡಿದ ಜಾಗವನ್ನು ಮೈಲಿಗೆ, ಮಾಸು ಎಂದು ಗಂಜಲ, ಗರಿಕೆ ಹಾಕಿ ತೊಳೆದರೇನೋ ಸರಿ, ಆದರೆ ಆ ಮೂಲಕ ಅವರು ತಮ್ಮ ಕೊಳೆತು ಪಾಚಿಕಟ್ಟಿದ ಮನದ ಅಶುದ್ದೀಯನ್ನು ಜಗತ್ತಿಗೆ ಸಾರಿಕೊಂಡಿದ್ದಾಗಿದೆ. ತೊಳೆಯಬೇಕಾಗಿರುವುದು ಜಡತ್ವದ ಕಲ್ಲು ಮಣ್ಣುಗಳ ಕಟ್ಟಡ, ಅಂಗಳವನ್ನಲ್ಲ . ತೊಳೆಯಬೇಕಾಗಿರುವುದು, ಶುದ್ದೀಕರಿಸಿಕೊಳ್ಳಬೇಕಾಗಿರುವುದು ಜೀವ ಕಾರುಣ್ಯವೇ ಸತ್ತು , ಮಲೆತು ನಾರುತ್ತಿರುವ ತಮ್ಮ ಮೆದುಳು, ಮನಸ್ಸುಗಳನ್ನು.

ಇಂತಹ ಆತ್ಮವಂಚಕತನಗಳಿಂದಲೇ ಹಿಂದೂ ಧರ್ಮವನ್ನು ರಕ್ಷಿಸಬೇಕು, ಕಾಪಾಡಬೇಕು ಎಂದು ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು, ಭಗತ್ ಸಿಂಗ್ , ಅಂಬೇಡ್ಕರ್ ಹೋರಾಡಿದ್ದರು. ಅದರ ಮುಂದುವರೆದ ಭಾಗ ಸುಪ್ರೀಂ ಕೋರ್ಟ್‍ನ ತೀರ್ಪು ಎಂದು ಭಾವಿಸಬೇಕಾಗಿದೆ. ಕನಕದುರ್ಗ-ಬಿಂದು ಇಲ್ಲಿ ದೇವಸ್ಥಾನ ಪ್ರವೇಶ ಹೆಣ್ಣಿನ ವಿಮೋಚನೆಯ ಒಂದು ಸಂಕೇತವಷ್ಟೆ. ಶಬರಿಮಲೆಯಲ್ಲಿ ನಡೆದ ಈ ಘಟನೆ 21 ನೇ ಶತಮಾನದ ಮಹಿಳಾ ವಿಮೋಚನೆಯ ಅಗ್ರ ಸಾಮಾಜಿಕ ಚಳವಳಿ. ಈ ನೆಲದ ಕಾನೂನು, ಸಂವಿಧಾನದ ಆಶಯವನ್ನು, ಧಾರ್ಮಿಕ ಹಕ್ಕನ್ನು ಅನುಷ್ಟಾನಗೊಳಿಸುವ ಸಹಜ ಪ್ರಕ್ರಿಯೆ ಅಷ್ಟೆ ಎಂದು ಭಾವಿಸಿದರೂ ತಲಾತಲಾಂತರಗಳಿಂದ ಬಂದ ಧಾರ್ಮಿಕ ಗುಲಾಮಿ ಪದ್ದತಿಯನ್ನು ಮತ್ತೆ ಮತ್ತೆ ಮುಖಾಮುಖಿಗೊಳ್ಳುವ ಸಂಘರ್ಷದಿಂದ ನ್ಯಾಯ ಧಕ್ಕಿಸಿಕೊಳ್ಳುವ ಸಂದರ್ಭವೂ ಇದಾಗಿದೆ.

ನಮ್ಮನ್ನು ಧಾರುಣವಾಗಿ ಕಾಡುತ್ತಿರುವ ಹಸಿವು, ಬಡತನ ,ನಿರುದ್ಯೋಗಗಳ ಮೆಟ್ಟಿ ನಿಲ್ಲಲು ದಾರಿಗಳನ್ನು ಕಂಡುಕೊಳ್ಳುವ ಮತ್ತು ಶಾಂತಿ, ಸೌಹಾರ್ದತೆ, ಸಮಾನತೆಯನ್ನು ಕಾಯ್ದುಕೊಳ್ಳಲು ಸದಾ ಮುಂದಾಗಬೇಕಾದ ಈ ಹೊತ್ತಿನಲ್ಲಿ ದೇವರು, ಧರ್ಮ ಎಂಬ ಸೋಂಕು ಸನ್ನಿಯಿಂದಲೂ ಪಾರಾಗಬೇಕಿದೆ. ದೇವರ ಕೃಪೆಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುದು ಎನ್ನುವ ದೇವರ ನಂಬುಗೆಸ್ಥರ ಪ್ರಕಾರವೇ ಆದರೂ ಸುಪ್ರೀಂಕೋರ್ಟ್ ನ ತೀರ್ಪು ಮತ್ತು ಮಹಿಳೆಯರಿಬ್ಬರು ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದು ದೇವರ ಸಂಕಲ್ಪವೇ ಯಾಕೆ ಆಗಿರಬಾರದು? ಹೆಣ್ಣಿನ ಸೃಷ್ಟಿದತ್ತ ಮುಟ್ಟು ಕೂಡ ದೈವ ನಿಯಮವೇ ಆಗಿರುವಾಗ ಮುಟ್ಟು ಹೆಪ್ಪಾಗಿ ಹುಟ್ಟುವ ಮನುಷ್ಯ ಅದೇ ಮುಟ್ಟನ್ನು ಮೈಲಿಗೆ ಎನ್ನುವುದು ಕರುಳಘಾತುಕತನವೇ ಆಗಿರುತ್ತದೆ. ಕಾಡು-ಮೇಡುಗಳಲ್ಲಿನ ಮಾನವ ನಿರ್ಮಿತ ದೇವರುಗಳನ್ನು ಎಡತಾಕದೆ. ಪುರೋಹಿತಶಾಹಿಗಳ ಪ್ರಾಯೋಜಿತ ದೇವರುಗಳನ್ನು ಮೊರೆ ಹೋಗದೆ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಸವಯ್ಯ…..’ ಎಂಬ ಆತ್ಮದ ಅನುಸಂಧಾನದಲ್ಲಿ ದೇವರು ಕಾಣಬೇಕಾಗಿದೆ.

ವೈಚಾರಿಕ ಮನೋಬಲವನ್ನು– ಅರಿವಿನಿ ವಿಸ್ತಾರ ಇನ್ನಷ್ಟು ಗಟ್ಟಿಗೊಳ್ಳಬೇಕಾದ ಕಾಲದ ಗತಿಯನ್ನೆ ಗ್ರಹಿಸದೆ ಜನಸಮುದಾಯವನ್ನು ಯಥಾಸ್ಥಿತಿವಾದದ ಹಿಮ್ಮಖ ಚಲನೆಗೆ ಒಡ್ಡುತ್ತಿರುವ ಮೂಲಭೂತವಾದಿಗಳು ಅವರೊಂದಿಗೆ ಕೈ ಮಿಲಾಯಿಸಿರುವ ಅಥವಾ ಪೋಷಾಕು ಹಾಕಿಕೊಂಡು ರಾಜಕೀಯ ಸಿದ್ದಾಂತವನ್ನಾಗಿಸಿಕೊಂಡವರು ಜನಸಮುದಾಯದ ಮೆದುಳನ್ನು ಕದಡುವ ಕೆಲಸವನ್ನು ಎಲ್ಲಾ ಕಾಲದಲೂ ನಡೆಸುತ್ತಾ ಬಂದಿದ್ದಾರೆ. ಪ್ರಗತಿಗಾಮಿ ಆಲೋಚನೆಯನ್ನೆ ನಿಸ್ತೇಜನಗೊಳಿಸುವ ಸಂಚುಗಳನ್ನು ಹೆಣೆಯುತ್ತಿದ್ದಾರೆ. ಬದುಕಿನ ಉನ್ನತಿಯ ಮಾದರಿಯನ್ನು ನಂಬಿಕೆ , ಸಂಪ್ರದಾಯಗಳಿಂದ ಅಳೆಯುತ್ತಾ ಜಡಸಿದ್ದಾಂತವನ್ನು ವಿಸ್ತರಿಸುವುದು ನಡೆದಿದೆ. ಇದು ಕೇವಲ ಹಿಂದೂ ಧರ್ಮವನ್ನಷ್ಟೆ ಅಲ್ಲ. ಯಾವ ಧರ್ಮವನ್ನೂ ಬಿಟ್ಟಿಲ್ಲ. ಇಂತಹ ಮೂಲಭೂತವಾದಕ್ಕೀಗ ರಾಜಕೀಯ ನಂಟು ಬೆಳೆದಿರುವುದು, ಅಧಿಕಾರ ಶಕ್ತಿ ದಕ್ಕಿರುವುದು ಬಹುದೊಡ್ಡ ಅಪಾಯ. ಇದನ್ನು ಹಿಮ್ಮೆಟ್ಟಿಸಲು ಜನಪರ ಚಳವಳಿಯ ಮರುಹುಟ್ಟು ಮತ್ತು ಆಳವಾದ ಜನಪರ ರಾಜಕೀಯ ಪ್ರಜ್ಞೆಯೊಂದನ್ನು ಬಿತ್ತಬೇಕಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿರುವವರನ್ನು ಕಂಡಾಗ ಕಾರ್ಲ್ ಮಾಕ್ಸ್ ನ ಈ ಮಾತುಗಳು ನೆನಪಾಗುತ್ತಿವೆ. ಈ ಮಾತುಗಳನ್ನು ಈ ದೇಶದ ಅಸಂಖ್ಯಾತ ದಮನಿತ ಹೆಣ್ಣುಗಳೇ ಹೇಳಿದಂತೆ ಭಾಸವಾಗುತ್ತಿದೆ. “ಈ ಜಗತ್ತಿನೊಳಗೆ ಸ್ಥಾಪಿತಗೊಂಡ ಅದರದ್ದೇ ಆದ ಆದರ್ಶಗಳ ಒಳಗಿನಿಂದಲೇ ನಾವು ಹೊಸ ಬಗೆಯ ಆದರ್ಶಗಳನ್ನು ರೂಪಿಸುತ್ತೇವೆ ಮತ್ತು ವಿಕಸನಗೊಳಿಸುತ್ತೇವೆ. ನಿಮ್ಮ ಹೋರಾಟಗಳು ಮೂರ್ಖತನದಿಂದ ಕೂಡಿವೆ ಅವನ್ನು ಸ್ಥಗಿತಗೊಳಿಸಿ ಎಂದು ಈ ಜಗತ್ತಿಗೆ ನಾವು ಹೇಳುವುದಿಲ್ಲ. ಆದರೆ ನಾವು ನಿಮಗೆ ನವ ಹೋರಾಟದ ನಿಜದ ಘೋಷಣೆಯನ್ನು ನೀಡುತ್ತೇವೆ. ನಾವು ನಿಜಕ್ಕೂ ಯಾವುದಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಜಗತ್ತಿಗೆ ಮನವರಿಕೆ ಮಾಡಿಕೊಡುತ್ತೇವೆ. ಮತ್ತು ಮುಖ್ಯವಾಗಿ ನೀವು ಜಾಗೃತಿಯ, ಹೊಸ ಅರಿವಿನ ಪ್ರಜ್ಞೆಯನ್ನು ನಿಮ್ಮೊಳಗೆ ಬೆಳಸಿಕೊಳ್ಳಲೇ ಬೇಕಾಗುತ್ತದೆ. ಅದು ನಿಮಗೆ ಇಷ್ಟವಿಲ್ಲದಿದ್ದರೂ ಸಹ.”

Leave a Reply