ಸಾಹಿತ್ಯ ಸಮ್ಮೇಳನವೇ ಬೇರೆ.. ಸಮ್ಮೇಳನದ ಸಾಹಿತ್ಯವೇ ಬೇರೆ..

ಸಾಹಿತ್ಯ ಸಮ್ಮೇಳನ ಬೇಕು. ಆದರೆ ಸ್ವರೂಪ_ಬದಲಾಗಬೇಕು. ಈ ಬಗ್ಗೆ ಚರ್ಚಿಸಿ ಒಂದು ಮಾದರಿಯನ್ನು ಪರಿಷತ್ತಿನ ಮುಂದಿಡಬೇಕು.

ಲಕ್ಷಾಂತರ ಜನ ಸೇರುವ ಸಮಾವೇಶ ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ ಹುಟ್ಟಿಸುವ ಉತ್ಸಾಹ, ರೂಪಿಸುವ ವಾತಾವರಣ ಸಾಹಿತ್ಯದ ಓದಿನ ಪ್ರಸರಣಕ್ಕೆ ಅವಶ್ಯಕ.

ಆದರೆ ಅದರ ನಡವಳಿ, ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಬದ್ಧವಾಗಿರಬೇಕು. ಅದರಂತೆ ಪೂರ್ಣ ಕುಂಭ ಸ್ವಾಗತ, ಮೆರವಣಿಗೆ ಮೊದಲಾದವನ್ನು ಕೈ ಬಿಡಬೇಕು.

ಹೆಚ್ಚಾಗಿ ಸಾಹಿತಿಗಳು, ಸಾಹಿತ್ಯದ ವಿದ್ಯಾರ್ಥಿಗಳಿಗೆ ಪ್ರಯೋಜನಕರವಾದ, ಜನ ಸಾಮಾನ್ಯರು ಭಾಗವಹಿಸದಿರುವ ಗೋಷ್ಠಿಗಳಿಗೆ ಬದಲಾಗಿ ಅಲ್ಲಿ ಸೇರುವ ಜನ ಸಮುದಾಯಕ್ಕೆ ಅವಶ್ಯವಾದ , ಕನ್ನಡ ಸಾಹಿತ್ಯದ ಬಗ್ಗೆ, ಕರ್ನಾಟಕದ ಜನ ಸಮಸ್ಯೆಗಳ ಬಗ್ಗೆ ಪರಿಚಯಾತ್ಮಕವಾದ ಉಪನ್ಯಾಸಗಳು ಮತ್ತು‌ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು.

ವಿವಿಧ ವಿಷಯಗಳ ಬಗೆಗಿನ ಗೋಷ್ಠಿಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಆ ಬಗೆಗಿನ ಪರಿಣತರು ಮತ್ತು‌ ಆಸಕ್ತರನ್ನು ಆಹ್ವಾನಿಸಿ ಬೇರೆ ಬೇರೆ ಸಮಯದಲ್ಲಿ ನಡೆಸಬಹುದು. ಸಮ್ಮೇಳನದೊಂದಿಗೆ ಅವುಗಳನ್ನು ತಳುಕು ಹಾಕುವುದು ಅವಶ್ಯಕತೆಯಿಲ್ಲ.

ಹೀಗೆ ಒಂದು ಚರ್ಚಿಸಿ ರೂಪಿಸಿದ ಮಾದರಿಯನ್ನು ನಾಡಿನ ಸಾಹಿತಿಗಳು, ವಿದ್ವಾಂಸರ ಸಹಿಯೊಂದಿಗೆ ಪರಿಷತ್ತಿಗೆ ಸಲ್ಲಿಸಬಹುದು ಮತ್ತು ಅದನ್ನು ಮತ್ತಷ್ಟು ಚರ್ಚೆಗೊಳಪಡಿಸಿ ಅಂಗೀಕರಿಸುವಂತೆ ಒತ್ತಾಯಿಸಬಹುದು.

-ಜಿ ಎನ್ ನಾಗರಾಜ್ 

ನನ್ನನಾಡಿನ ಜ್ಞಾನಪೀಠ ಸಾಹಿತಿಯೊಬ್ಬರು ಸಾವಿರಾರು ಹೆಣ್ಣುಮಕ್ಕಳ ತಲೆಗೆ ಬಿಂದಿಗೆ ಹೊರಿಸಿ ಅವರನ್ನು ಬಿಸಿಲಲ್ಲಿ ಬರಿಗಾಲಲ್ಲಿ ನಡೆಯ ಹಚ್ಚಿ, ತಾವು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ನಾಚುವುದಿಲ್ಲ ಎಂದರೆ ಇದು ನಾಡು ನಾಚಿಕೆಪಡುವ ಸಂಗತಿ. ಇವರ ಸಂಭ್ರಮ ಪ್ರಜಾತಂತ್ರ ಘಾತಕ.

-ಪೀರ್ ಭಾಷಾ 

ಸಾಹಿತ್ಯ ಸಮ್ಮೇಳದ ಮಾಧ್ಯಮ ಕೇಂದ್ರದಲ್ಲಿ ಗುಜರಿ ಕಂಪ್ಯೂಟರ್ ಹಾಕಿದ ಐನಾತಿ ಗುತ್ತಿಗೆದಾರಿಗೆ ಸಾರೋಟದ ಹಿಂದೆ ಕಟ್ಟಿ ಓಡಿಸ ಬೇಕು, ಇಂಥ ಗಂಟುಕಳ್ಳ ರು ಇನ್ನು ಎಷ್ಷು ಮಂದಿ ಇದ್ದಾರೋ?

-ದೊಡ್ಡಬಳ್ಳಾಪುರ ವೆಂಕಿ 

ಮುಖ್ಯ ಮಂತ್ರಿ ಇಂಗ್ಲಿಷ್ ಶಾಲೆಯ ಮಾತಾಡಿದ್ದಾರೆ. ಚಂಪಾ ಎಂದಿನಂತೆ ವೀರಾವೇಶದಿಂದ ಕೂಗಾಡಿದ್ದಾರೆ. ಕಂಬಾರರ ಎಡೆಬಿಡಂಗಿತನ ಮುಂದುವರೆದಿದೆ. ಯಾವಾಗ ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಪರವಾನಗಿ ದೊರೆಯತೊಡಗಿತೋ ಅಂದೇ ಕನ್ನಡ ಶಾಲೆಗಳ ಅವಸಾನ ಪ್ರಾರಂಭವಾಯಿತು.

ಆಗ ಕಣ್ಣು ಮುಚ್ಚಿ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಶಾಲೆಗೆ ಕಳುಹಿಸಿ. “ಖನ್ನಡಕೆ ಹೋರಾಡು ಖನ್ನಡದ ಖಂದಾ” ಎಂದು ಕಂಡವರ ಮಕ್ಕಳನ್ನು ಬಾವಿಗೆ ನೂಕುತ್ತ ಕೂತವರು ಈಗ ಸರ್ಕಾರ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತೇನೆಂದರೆ ಉಗ್ರ ಹೋರಾಟದ ಮಾತಾಡುತ್ತಾರೆ.

ಮೊನ್ನೆ ಸಿಧ್ದರಾಮಯ್ಯನವರೂ ಕೂಡಾ ಇಂಗ್ಲಿಷ್ ಶಾಲೆ ಬೇಡ ಎಂದರು . ಸರಿ ಆದ್ರೆ ಅವರ ಆಡಳಿತದಲ್ಲೇ ಪರವಾನಗಿ ಕೊಟ್ಟ ಖಾಸಗಿ ಇಂಗ್ಲಿಷ್ ಶಾಲೆಗಳೆಷ್ಟು ಕೇಳಿ?,

ಕಂಬಾರರೇ ವೇದಿಕೆಯಿಂದ ನುಡಿಮುತ್ತನ್ನು ಉದುರಿಸುವ ಜಾಣತನ ಬೇಡ. ಹೇಳಿದ್ದನ್ನು (ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮತ್ತು ಮತ್ತು ಕನ್ನಡ ಮಾಧ್ಯಮದಲ್ಲಿ ಎಂದು) ನಡೆಸಿಕೊಂಡುವಂತೆ ಬೀದಿಗಿಳಿಯಿರಿ ಸ್ವಾಮಿ ನಾವು ನಿಮ್ಮ ಹಿಂದಿರುತ್ತೇವೆ. ನಿಮ್ಮಂಥವರು ಯಾವುದೇ ಸರ್ಕಾರವನ್ನೂ ಎದುರುಹಾಕಿಕೊಂಡ ಉದಾಹರಣೆ ಇದೆಯೇ ?

-ಪ್ರಸಾದ್ ರಕ್ಷಿದಿ 

ಸಾಹಿತ್ಯ ಸಮ್ಮೇಳನವೇ ಬೇರೆ
ಸಮ್ಮೇಳನದ ಸಾಹಿತ್ಯವೇ ಬೇರೆ

-ಸಂದೀಪ್ ಈಶಾನ್ಯ 

Leave a Reply