ಕಂಬಾರರೂ.. ಅವರ ಅಮಂಗಲ ಮೆರವಣಿಗೆಯೂ…

ಎಚ್ ಎಸ್ ರೇಣುಕಾರಾಧ್ಯ 

ಕನ್ನಡ ನಾಡಿನ ಜೀವಪರ ಲೇಖಕರು, ಪ್ರಗತಿಪರರು, ಹೋರಾಟಗಾರರು ಇವತ್ತು ಧಾರವಾಡದಲ್ಲಿ ನಡೆದ 84ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಡೆದ ಸುಮಂಗಲಿಯರ ಪೂರ್ಣಕುಂಭ ಮೆರವಣಿಗೆಯನ್ನು ಖಂಡಿಸಿ ಕಸಾಪದ ಅಧ್ಯಕ್ಷರು ಮತ್ತು ಸ್ವಾಗತ ಸಮಿತಿಯ ಪದಾಧಿಕಾರಿಗಳಿಗೆ ಪತ್ರ ಬರೆದಿರುವುದು ಸರಿಯಷ್ಟೆ.

ಆದರೆ ಸೂಕ್ಷ್ಮತೆಯನ್ನು, ಸಂವೇದನೆಯನ್ನು ಹೊಂದಿರುವ ನಾವೆಲ್ಲರೂ ಖಂಡಿಸಬೇಕಾಗಿರುವುದು, ಪತ್ರ ಬರೆಯಬೇಕಾದ್ದು (ಬರೆಯಬೇಕಾಗಿದ್ದು) ಎಂದೋ ಕ್ಯಾನ್ಸರ್ ಕಾಯಿಲೆ ಬಂದು ಜೀವ ಕಳೆದುಕೊಂಡು, ಬರಿ ಅಸ್ಥಿಪಂಜರವಾಗಿರುವ ಕಸಾಪ ಮತ್ತು ಅದು ನಡೆಸುವ ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯರಿಗಲ್ಲ ಎಂದು ನನಗೆ ಈಗ ಅನ್ನಿಸುತ್ತಿದೆ.

ಏಕೆಂದರೆ ಅವರಿಗೆ ಈ ಖಂಡನೆ, ವಿರೋಧ ಹೊಸತೂ ಅಲ್ಲ, ವಿಶೇಷವೂ ಅಲ್ಲ, ಅದು ಅವರಿಗೆ ಅರ್ಥವೂ ಆಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಅಂಗವನ್ನು ಅವರು ಕಸಾಪದೊಳಗೆ ಬರುವ ಮೊದಲೇ ಕಳೆದುಕೊಂಡಿರುತ್ತಾರೆ ಎಂಬುದು ನಮಗೆಲ್ಲ ಅರಿವಿದ್ದು ಮತ್ತೆ ಅವರಿಗೆ ಪತ್ರ ಬರೆಯುವುದರಲ್ಲಿ ಯಾವುದೇ ಅರ್ಥವೂ ಇಲ್ಲ.

ಅದರ ಬದಲು ಈ ಪೂರ್ಣಕುಂಭ ಮೆರವಣಿಗೆ ವಿಷಯ ಗಮನಕ್ಕೆ ಬಂದ ಕೂಡಲೇ
ಕೊಂಚ ಸೂಕ್ಮತೆ, ಮತ್ತು ಎಚ್ಚರದಿಂದ, ನೇರವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಮ್ಮ ನಾಡಿನ ಹೆಮ್ಮೆಯ ದೇಸಿ ಕವಿ, ಜೀವಪರ ಸಾಹಿತಿ ಎಂದು ನಾಡು ನಂಬಿಕೊಂಡಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕಂಬಾರರಿಗೆ ಪತ್ರ ಬರೆಯುವ ಕೆಲಸ ಮಾಡಿದ್ದರೆ ಪೂರ್ಣಕುಂಭ ಮೆರವಣಿಗೆಯನ್ನು ತಡೆಯಬಹುದಿತ್ತೇನೋ?

ಆಗ ಕಂಬಾರರು ಈ ಬಗ್ಗೆ ಕೊಂಚವಾದರೂ ಚಿಂತಿಸುತ್ತಿದ್ದರೇನೋ?
(ಆದರೆ ಈಗ ಕಂಬಾರರು ಇದರಲ್ಲಿ ನನ್ನದೇನೂ ಪಾತ್ರವಿಲ್ಲ, ಎಲ್ಲಾ ಪರಿಷತ್ತಿನ ಪರಂಪರೆಯ ಆಚರಣೆ ಅದರಂತೆ ಅವರು ಮಾಡಿದ್ದಾರೆ, ಅಧ್ಯಕ್ಷನಾಗಿ ನಾನು ಮಾಡಿಸಿಕೊಂಡಿದ್ದೇನೆ ಎಂದು ಜಾರಿಕೊಳ್ಳುತ್ತಾರೆ, ಜಾರಿಕೊಂಡಿದ್ದಾರೆ ಕೂಡ )

ಪೂರ್ಣಕುಂಭ ಮೆರವಣಿಗೆಯ ಬಗ್ಗೆ ಈ ಮೊದಲೇ ಗೊತ್ತಿದ್ದೂ,ಇಂತಹ ಅಮಾನವೀಯ ಮೆರವಣಿಗೆಯನ್ನು, ವಿರೋಧಿಸದೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಭ್ರಮಿಸುತ್ತಿರುವ ಕಂಬಾರರು ಅದೆಂತಹ ಕನ್ನಡ ಸಾಹಿತಿ !.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು ಇಡೀ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಕನ್ನಡದ ಹಬ್ಬವೆಂಬ ಅರಿವಿದ್ದೂ, ಇಂಥ ಅಮಾನವೀಯ ಮೆರವಣಿಗೆಗಳನ್ನು ಒಪ್ಪುವ ಮನಸ್ಥಿತಿಯನ್ನು ಹೊಂದಿರುವವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ, ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಧ್ಯಕ್ಷೀಯ ಭಾಷಣ ಮಾಡಲು ಅವರ ಮನಸ್ಸು ಅದ್ಹೇಗೆ ಒಪ್ಪಿತು ಎಂಬುದು ಅಚ್ಚರಿಯಾಗಿದೆ.

ಹೇಳಲೇಬೇಕಾದ ಕಡೇ ಮಾತು
——
ಪೂರ್ಣಕುಂಭ ಮೆರವಣಿಗೆ ನಡೆಯುವುದೇ ಆಗಿದ್ದರೆ ನಾನು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವುದಿಲ್ಲ, ಸಮ್ಮೇಳನದಿಂದ ಹಿಂದೆ ಸರಿಯುತ್ತೇನೆ ಎನ್ನುವ ಒಂದು ಬೆದರಿಕೆಯನ್ನಾದರೂ ಕಸಾಪದ ಅಧ್ಯಕ್ಷರಿಗೆ ನಮ್ಮ ಕಂಬಾರರು ಹಾಕಬಹುದೆಂದು (ಹಾಕಿದ್ದರೆ ಖಂಡಿತಾ ಪೂರ್ಣಕುಂಭ ಮೆರವಣಿಗೆ ನಡೆಯುತ್ತಿರಲಿಲ್ಲ) ಕನಸ ಕಾಣುತ್ತಿದ್ದ ನನ್ನಂತಹ ಕಂಬಾರ ಅಭಿಮಾನಿಗಳಿಗೆ ( ಕವಿ/ ನಾಟಕಕಾರ ಕಂಬಾರ ಅಭಿಮಾನಿ) ಕಂಬಾರರು ಕನ್ನಡ ಪರಂಪರೆಯ ‘ಜೋಕುಮಾರಸ್ವಾಮಿ’ಯಾಗದೇ ಕನ್ನಡ ಸಾಹಿತ್ಯದ ಜೋಕ್ ಕುಮಾರ, ಮುಂಭಾರ, ಹಿಂಭಾರ ಎಲ್ಲವೂ ಆಗಿರುವುದು ಕನ್ನಡ ಸಾಹಿತ್ಯ ಲೋಕದ ದುರಂತ…

2 comments

  1. Go to Karnataka villages how many women’s daily duty water taking in plastic koda?…… In a drama how many children’s/Animals using; that was not a human or animals torched.

  2. ಈ ಸಂದರ್ಭದಲ್ಲಿ ಕಂಬಾರರನ್ನು “ಜೋಕ್ ಕುಮಾರ”ರೆಂದೇ ಕರೆಯಬೇಕಾಗುತ್ತದೆ. ಒಳ್ಳೆಯ ಜನಪದ ಬರಹಗಾರಾದರೂ, ಅವರು ಈಗಿನ ವಿದ್ಯಮಾನಗಳಲ್ಲಿ, ಈವರೆಗೂ ಯಾವ ಜನಪರ ಚಿಂತನೆಯಲ್ಲೂ ತೊಡಗದೆ ಜಾರಿಕೊಂಡವರು. ಸರ್ಕಾರ ಮತ್ತಿತರ ಸಂಸ್ಥೆಗಳ ಸವಲತ್ತುಗಳ ಲಾಭ ಗಳಿಸಿಕೊಂಡವರು. “ಎಲ್ಲಾ ಪರಿಷತ್ತಿನ ಆಚರಣೆ” ಎಂದು ಹೇಳುವ ಹೇಡಿತನವು ಎದ್ದು ಕಾಣುತ್ತದೆ.

Leave a Reply