ಉಳಿದಾವ ‘ಉಮಾ’ ಸಾಲು

ರಾಜಕುಮಾರ ಮಡಿವಾಳರ 

ಹಾಸಾದ ಮಿಂಚಿನಿಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು

ಉಮಾ ಮುಕುಂದ ಅವರ ಕವನ ಸಂಕಲನದ ಹೆಸರು ಘೋಷಣೆ ಆದಾಗಲೇ ನನಗೆ ನೆನಪಾಗಿದ್ದು ಈ ಮೇಲಿನ ನನ್ನ ಕವಿ ಬೇಂದ್ರೆ ಕವಿತೆಯ ಸಾಲು.

ಒಂದು ಕವಿತೆಯಲ್ಲಿ ಇಷ್ಟವಾಗುವುದೆ ‘ಕಡೇ ನಾಲ್ಕು ಸಾಲು’! ಒಂದು ಕವಿತೆ ಹುಟ್ಟುವುದೆ ಕಡೆ ನಾಲ್ಕು ಸಾಲಿನಲ್ಲಿ ಅನ್ನುವುದು ನನ್ನ ಓದಿನ ನಿಲುಕು. ಇಡೀ ಕವಿತೆ ನಿಲ್ಲುವುದೇ ಕಡೇ ನಾಲ್ಕು ಸಾಲೆಂಬ ಸುಭದ್ರ ಅಡಿಪಾಯದ ಮೇಲೆ. ಅದಕ್ಕೇ ಏನೋ? ಪ್ರಾಯಶಃ ಕಡೇ ಸಾಲನ್ನ “ಪಾದ” ಅನ್ನುವುದು. ಅವು ದಿವ್ಯ-ಭವ್ಯ-ಮುಗಿಸಿಕೊಳ್ಳುವ ಪಾದ ಆಗುವುದು ಮೇಲಿನ ಸಾಲುಗಳು ಶಿಖರ, ಕಳಸ, ಧ್ವಜಪ್ರಾಯವಾದಾಗ.

ಉಮಕ್ಕಳ ಕವಿತೆ ಹಾಗಿವೆ, ಹೆಸರು (ಶೀರ್ಷಿಕೆ) ಮೊದಲಾಗಿ ಓದಿಸಿಕೊಂಡು ಹೋಗುವ ವಿಶಿಷ್ಟ ಕವಿತೆಗಳ ಭರ್ಜರಿ ಸಂಕಲನ “ಕಡೇ ನಾಲ್ಕು ಸಾಲು”

ಸಂಕಲನದ ಮೊದಲ ಕವಿತೆ “ಹಿತ್ತಲು ”

ನಮ್ಮ ಸರಸ-ಸಲ್ಲಾಪಕ್ಕೆ
ಉಕ್ಕಿ ಹರಿಯುವ ಪ್ರೀತಿಗೆ
ಸಿಟ್ಟು ಸೆಡವಿಗೆ
ದುಃಖ ದುಮ್ಮಾನಕ್ಕೆ
ಸಾಕ್ಷಿಯಾಗಿದೆ
ಈ ನಮ್ಮ ಹಿತ್ತಲು..

ಅನ್ನುತ್ತಾರೆ, ಮನೆ ಮುಗಿಯುತ್ತಲೇ ಕಾಂಪೌಂಡು, ಅದರ ಬೆನ್ನಿಗೆ ಇನ್ನೊಬ್ಬರ ಮನೆಯಿರುವ ಅಥವ ಅಪಾರ್ಟ್ಮೆಂಟ್ ವಾಸಿಗಳಿಗೆ ಈ ಅನುಭವ ಈಗ ಬೃಹತ್ ಕಲ್ಪನೆ. ನನಗೆ ಒಂದು ಕ್ಷಣ ನನ್ನ ಹಳ್ಳಿಗೆ ಹೋಗಿ, ಹಿತ್ತಲದ ದೊಡ್ಡ ಹುಣಸಿ ಮರದ ಕೆಳಗೆ ಕೂತು, ಎಂಥದೋ ಆನಂದ ಅನುಭವಿಸಿ, ಈಗ ಆಸ್ತಿ ಭಾಗವಾಗಿ, ಹುಣಸೆ ಮರ ನೆಲಕಚ್ಚಿದ ನೆನಪಾಗಿ, ಹಿತ್ತಲ ಬಾಗಿಲು ಹಾಕಿಕೊಂಡು, ಗೌರಿಯ ಗೋದಲೆ ಮುಂದೆ ಅತ್ತ ಹಾಗೆ ಮನಸು!

* * *
ಇರಲಿ, ಎಲ್ಲ ಹೀಗೆ ಹೀಗೆ…

ಈ ಪದ್ಯ ಓದಬೇಕು ನೀವು, ಅಲ್ಲಲ್ಲ ಓದಲೇ ಬೇಕು ನೀವು, ಕ್ಷಣ ಕಣ್ಣು ತೇವವಾಗದೆ ಇರದು, (ನನಗಾಗಿವೆ)

ಕತ್ತಲಾವರಿಸುತ್ತಿದ್ದಂತೆ
ಕೇಳುತಿದೆ ತಾಯಂದಿರ ಕೂಗು
ರೀತು….ನೀತು….
ರಶೀದ್.. ಜೂಡಿತ್…
ಬಿಟ್ಟೋಡಿವೆ ಎಲ್ಲ ಹಾಗೆ ಹಾಗೆ…
ಗುಡಿಸಬೇಕೆನಿಸುವುದಿಲ್ಲ

ಇರಲಿ ಇಳೆಯಲ್ಲ ಹೀಗೆ ಹೀಗೆ…
*
ಈ ಗುಡಿಸಲಾರದ್ದಾದರೂ ಏನು?
ಗೋದಲಿಯಾಗಿದೆ ರಟ್ಟಿನ ಪೆಟ್ಟಿಗೆ
ಹುಲ್ಲ ತೊಟ್ಟಿಲಲಿ ಶಿಶು ಏಸು
ಇಟ್ಟಿಗೆ ಜೋಡಿಸಿ ಮಸೀದಿ ಕಟ್ಟಿಗೆ
ಹಾಡುತ್ತಿವೆ ಅಲ್ಲಾ ಹು ಅಕ್ಬರ್
ಎಲೆಯ ತಟ್ಟೆಯಲಿ ಬೀಜದ ರೊಟ್ಟಿ
ಹೂವಿನೊಬ್ಬಟ್ಟು, ಕಲ್ಲೇ ಸ್ವೀಟು
ಉಂಡಾಯಿತು, ಮಲಗಾಯಿತು
ಎದ್ದರಾಯಿತು ಹೊಸದೆ ಆಟ..

ಹೀಗೆ ಹೀಗೆ ಇರಲಿ ಅಂದದ್ದು ಈ ಇಂಥ ಆಟದ ಮಕ್ಕಳ ಆಟಿಕೆ ತುಂಬಿದ ಅಂಗಳ, ಪಡಸಾಲೆ ಮತ್ತೊಂದು.
(ಹೂವಿನೊಬ್ಬಟ್ಟು, ಕಲ್ಲೇ ಸ್ವೀಟು, ಅಬ್ಬಾ ರೂಪಕವೆ! ಈಗ ಆಟ ಆಡೋಣ ಅನಸ್ತಿದೆ, ಬನ್ನಿ ರಶೀದ್. ಜೂಡಿತ್)

ಅಲ್ಲಿ ಉಮಕ್ಕ ಅಂದೆ ಇಷ್ಟು ದಿನದ ಸರಳ ಸಲಿಗೆಯಿಂದ, ಇಷ್ಟು ಓದಿ ಮುಗಿಸುವಷ್ಚೊತ್ತಿಗೆ ಉಮಕ್ಕ ಉಮಾತಾಯಿ ಆಗಿದ್ದಾಳೆ ನನಗೆ.

ಈ ನೋಟ, ಈ ಪ್ರತಿಮೆ, ಈ ಕಲ್ಪನೆಗಳೆ ‘ಕಡೇ ನಾಲ್ಕುಸಾಲಿ’ನ ಪ್ರತಿ ಪದ್ಯದಲ್ಲಿವೆ..

ನಾನು ಈ ಪದ್ಯ ಎಷ್ಟು ಸಲ ಓದಿದೆ, ಅಸಲು ಸಮ್ಮೇಳನದ ಭರಾಟೆಯಲ್ಲಿ ಪುರುಸೊತ್ತಿಲ್ಲ ಅಂತಿದ್ದರು, ಇದೊಂದು ಪದ್ಯ ಹೊರಟ ನನ್ನ ತೊಡೆಗಡರಿ ಓದಿಕೊಂಡು ಹೋಗು ಪಪ್ಪ ಅನ್ನುವ ಮುದ್ದು ಮಗಳ ರಚ್ಚೆ ಹಿಡಿದು ನಿಲ್ಲಿಸಿತು, ಓದಿ ಆದ ಮೇಲೆ ಈ ಮಗಳಷ್ಟೇ ಮುದ್ದು ಪದ್ಯ, ಮಗಳ ಜೊತೆಗೆ ಕೂತಿರುವೆ, ಇದಕ್ಕಿಂತ ಇನ್ಯಾವ ಸಂಭ್ರಮ?

‘ಬಹುರೂಪಿ’ ಟೇಸ್ಟ್ ಒನ್ಸ್ ಅಗೇನ್ ಬೆಸ್ಟ್ ಅಂತ ಈ ಪ್ರಕಟಣೆಯ ಮೂಲಕವೂ ಸಾಬೀತು ಮಾಡಿದೆ.
ದೊಡ್ಡವರೆಲ್ಲ ಅದ್ಭುತವಾಗಿ ಮುನ್ನುಡಿ- ಬೆನ್ನುಡಿಯಾಗಿದ್ದಾರೆ, ನಮ್ಮ ಉಮ್ಮಕ್ಕ, “ಹೌದು ನಾನು facebook ಕವಿ” ಅಂತ ತುಂಬ ಹೆಮ್ಮೆಯಿಂದ ಹೇಳಿದ್ದು ನಮ್ಮ ಹೆಮ್ಮೆ!

ಉಮಾ ಮುಕುಂದ, ಉಮಕ್ಕ, ಉಮಾತಾಯಿ ಶುಭವಾಗಲಿ, ಅಕ್ಕರೆಯಿಂದ ” ರಾಜಣ್ಣನಿಗೆ” ಅಂತ ಬರೆದು ಪುಸ್ತಕ ಕಳುಹಿಸಿದ್ದೀರಿ, ಧನ್ಯತೆಯಿದೆ ಓದಿದ ನನ್ನ ಎದೆಯಲ್ಲಿ, ಆ ಜನ್ಮ ಋಣಿ ಕವಿತೆಗಳಿಗೆ.

1 comment

Leave a Reply