ಸದ್ದು ಮಾಡದ ಕವಿ ಉಮಾ, ಸುಂದರ ಸಂಕಲನ ತಂದಿದ್ದಾರೆ. 

ಪ್ರೀತಿಯ ಉಮಾ ನಿಮ್ಮ ‘ಕಡೇ ನಾಲ್ಕು ಸಾಲು’ ಚೊಚ್ಚಿಲ ಕೂಸನ್ನು ನನಗೆ ಕಳುಹಿಸಿಕೊಟ್ಟಿದ್ದೀರಿ. ಧನ್ಯವಾದಗಳು ಮತ್ತು ಅಭಿನಂದನೆಗಳು. ಇಲ್ಲಿರುವ ಕವಿತೆಗಳನ್ನು ಮುಖಪುಸ್ತಿಕೆಯಲ್ಲಿ ಆಗಾಗ ಓದಿರುವೆನಾದರೂ ಅವು ಸಂಕಲನದ ರೂಪದಲ್ಲಿ ಕೈಗೆ ಬರುವಾಗ ಮುದ್ದಾದ ಮಗುವೊಂದು ಕೈಗೆ ಬಂದ ಹಾಗೆ. ಹೊಸ ರೂಪ, ಹೊಸ ವಾಸನೆ, ಹೊಸ ಸ್ಪರ್ಷ ಕೊಡುವ ಅನುಭವ ಅನಿರ್ವಚನೀಯವಾದುದು. ತಾಯಂದಿರಿಗೆ ಇದರ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ನಿಮ್ಮ ಕವಿತೆಗಳು ಸಹಜವಾಗಿ ಅರಳಿರುವಂತಹವು. ಅವುಗಳನ್ನು ಗುದ್ದಿ, ಕೃತಕ ಬಣ್ಣ ಬಳಿದು ಬಲವಂತವಾಗಿ ಹಣ್ಣು ಮಾಡಿ ಮಾರುಕಟ್ಟೆಗೆ ಇಳಿಸಲಾಗಿಲ್ಲ. ದೈನಂದಿನ ನಗಣ್ಯವೆನ್ನಬಹುದಾದ ಎಲ್ಲಾ ವ್ಯಾಪಾರಗಳೂ ಇಲ್ಲಿ ಮೊಗ ಪಡೆದಿವೆ. ಸಾಮಾನ್ಯವಾಗಿ ಚಲಿಸುವ ಸಾಲುಗಳು ಕೊನೆಗೆ ಪಡೆದುಕೊಳ್ಳುವ ತಿರುವಿನಿಂದಾಗಿ (punch lines) ಇಡೀ ಕವಿತೆಯನ್ನು ಹೊಸ ಬೆಳಕಲ್ಲಿ ನಿಲ್ಲಿಸುತ್ತವೆ. ಕಡೇ ನಾಲ್ಕು ಸಾಲಿನಿಂದಾಗಿಯೇ ಸಾರ್ಥಕವೆನಿಸುತ್ತವೆ. ಒಂದು ರೀತಿಯಲ್ಲಿ ಈ ಸಂಕಲನದ ಶೀರ್ಷಿಕೆಯನ್ನು ಅನ್ವರ್ಥಗೊಳಿಸಿಬಿಡುತ್ತವೆ. ಶಿರ್ಷಿಕೆಯ ಕವಿತೆಯಲ್ಲಿ ‘ನಾಪತ್ತೆಯಾದ ಕಡೇ ನಾಲ್ಕು ಸಾಲನ್ನು ಬರೆದುಬಿಟಿದ್ದರೆ ಕವಿತೆಯಲ್ಲಿನ ಕತೆ ಬಹುಶಃ ಪೂರ್ಣಗೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅಪೂರ್ಣತೆಯೇ ಕವಿತೆಯ ಶಕ್ತಿ.

ಅನೇಕ ಸಲ ಕವಿಗಳಿಗೆ ಓದುಗರ ಗ್ರಹಿಕೆಯ ಶಕ್ತಿಯ ಬಗ್ಗೆ ಅನುಮಾನ. ಈ ಅನುಮಾನವೇ ಅನೇಕ ಸಲ ಕವಿತೆಯನ್ನು ವಾಚ್ಯದತ್ತ ತಳ್ಳಿಬಿಡುತ್ತದೆ. ನಿರಾಸಕ್ತ/ಅನಾಸಕ್ತ ಕವಿಗೆ ಮಾತ್ರ ‘ಹೊಳೆದದ್ದೇ ತಾರೆ ಉಳಿದದ್ದು ಆಕಾಶ’ ಎನ್ನುವ ಒಂದು ಸಮತೋಲ ಮನಸ್ಥಿತಿ ಸಾಧ್ಯವಾಗುತ್ತದೆ. ಅಪೂರ್ಣತೆಯೇ ಸತ್ಯ. ಆದುದರಿಂದ ನಿಮ್ಮ ಕಡೇ ನಾಲ್ಕು ಸಾಲಿನ ಗೈರು ಹಾಜರಿಯೂ ಮಹತ್ವವಾದುದೇ.

ಸೊಪ್ಪು ಮಾರುವವಳು, ಅಡುಗೆ ಮನೆ ಜಗತ್ತು, ಕಳೆದು ಹೋದ ಗೆಳತಿ, ದಾರಿ, ಪಾದ ಕಾರಣ,ಪುಟ್ಟಕ್ಕನ ಓಲೆ, ವಾಸನೆ, ಹಿತ್ತಲು… ಈ ಕವಿತೆಗಳ ಜಗತ್ತು ನಮಗೆ ಬಹಳ ಪರಿಚಿತವಾದುದು. ಆದುದರಿದಲೇ ಬಹಳ ಅಪ್ಯಾಯಮಾನ ಎನಿಸುತ್ತವೆ. ಹೀಗೆ ಪರಿಚಿತವಾದುದರ ಮೂಲಕವೇ ಅಪರಿಚಿತವಾದುದರತ್ತ ಕೊಂಡೊಯ್ಯುವ ‘ಕಡೇ ನಾಲ್ಕು ಸಾಲು’ಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆಳ ಹರಹುಗಳು ಸಿದ್ಧಿಸಲಿ. ನಿಮಗೆ ಒಳಿತಾಗಲಿ.

ಮೊದಲ ಪ್ರಯತ್ನದಲ್ಲೇ ಒಳ್ಳೆಯ ಕವಿತೆಗಳನ್ನು ಕೊಟ್ಟಿರುವಿರಿ. ಅಭಿನಂದನೆಗಳು. ನಿಮ್ಮ ಕೂಸುಗಳನ್ನು ನನ್ನೊಡನೆ ಆಡಲು ಬಿಟ್ಟು ನನ್ನ ಖುಷಿಗೆ ಕಾರಣರಾಗಿರುವ ನಿಮಗೆ ಧನ್ಯವಾದಗಳು.

-ಗಿರಿಜಾ ಶಾಸ್ತ್ರಿ 

ಅತಿ ಸುಂದರ ಕವನಗಳು.

ಓದುತ್ತಿದ್ದ ಹಾಗೆ ನನ್ನ ಕಣ್ಣ ಮುಂದೆ ಅದೇ ಚಿತ್ರಣ..
ನನ್ನ ಜೀವನದಲ್ಲಿ ನಡೆದಿದೆಯೇನೋ ಅನ್ನುವಷ್ಟು ನೈಜತೆ,
ನಮ್ಮ ನಿಮ್ಮ ಅನುಭವಗಳು ಇವು ಅನ್ನುವಷ್ಟು ಸಹಜತೆ,
ಇದೆ ನಿಮ್ಮ ಕವಿತೆ..

ಆ..ನಂತರ ಓದಿ ಕಣ್ಣುಗಳು ತುಂಬಿಕೊಂಡವು..
ಪುಟ್ಟಕ್ಕನ ಒಲೆ ನಮ್ಮ ಮನೆ ಕೆಲಸದವರ ಕಥೆ..
ಹಿತ್ತಲು ನಾವೆಲ್ಲ ತಿಳಿಯಬೇಕಾದ ಬದುಕಿನ ಗೂಡಾರ್ಥ…

ದೈನಂದಿನ ಬದುಕಿನಲ್ಲಿ ನಡೆಯುವ ಎಲ್ಲ ವಿಷಯಗಲ್ಲಿ ಏನೋ ಅಡಗಿವೆ..
ತಿಳಿಯಬೇಕಾದ ಅಂಶಗಳು ಸುಮಾರಿವೆ..
ನಿಮ್ಮ ಕವನಗಳು ಇದನ್ನು ಸಾರಿ ಸಾರಿ ಹೇಳುತ್ತಿವೆ..
ನಿಜಕ್ಕೂ ಒಳ್ಳೆ filter coffee 😊👌🏻👌🏻

ನಿಮ್ಮ ಕವಿತೆಗಳು ನನ್ನಲ್ಲಿನ ಸುಪ್ತ ಕವಿಯನ್ನು ಬಡಿದೆಬ್ಬಿಸಿದವು..ಇದಕ್ಕಿಂತ ಹಿರಿದು ಬೇರೊಂದಿಲ್ಲ..
ಮುಂಗಾರು ಮಳೆ ಭೂಮಿಯಿಂದ ಹಸಿರನ್ನು ಹೊರತೆಗೆಯುವ ಹಾಗೆ.

ಇಡೀ ಸಂಕಲನದ ತುಂಬಾ ಇಂಥ ಮನೋಜ್ಞ ಕವನಗಳೇ..
ಹಿತ್ತಲಿನಿಂದ ಹನಿಗಳವರೆಗೆ

-ಎಂ ವಿ ಭಾವನಾ 

ಉಮಾ ಮುಕುಂದ್ ಕವಿತೆ ಬೇಡುವ ಬಿಂದುವಿನಂತಹ ಪದಗಳ ಮುತ್ತುಗಳುದುರಿ ಸಿಂಧುವಿನಷ್ಟು ಭಾವ ಮೊಗೆದು ಕೊಡುವ ಕವನಗಳು! ನಾಲ್ಕಾರು ಪದಗಳು, ನಾಲ್ಕಾರು ಸಾಲುಗಳು, ಕಡೆ ನಾಲ್ಕು ಸಾಲುಗಳುಳಿಸುವ ಅನುಭೂತಿ ಮಾತ್ರ “ಕಡೆ ನಾಲ್ಕು ಸಾಲು” ಅಲ್ಲ ಸಾವಿರಾರು…ಅಭಿನಂದನೆಗಳು ಹೊಸ ವರುಷದಲ್ಲಿ ಮತ್ತೊಂದು ಸಂಕಲನ ಮೂಡಿಬರಲಿ ಉಮಾ!

-ರೋಹಿಣಿ ಸತ್ಯ 

ಸದ್ದು ಮಾಡದ ಕವಿ ಉಮಾ. ಸುಂದರ ಸಂಕಲನ ತಂದಿದ್ದಾರೆ.

-ವಿಜಯ ರಾಘವನ್ 

ಪಾಂಡಿತ್ಯದ ಭಾರವಿಲ್ಲದ, ಸಹಜತೆಯ ಸಾಲುಗಳ ಓದಿನ ಸುಖದ ಅವಕಾಶ!

-ಚಂದ್ರಶೇಖರ ಆಲೂರು 

Leave a Reply