ನಾನು ಕವಿಯಲ್ಲ ಸ್ವಾಮಿ..

ಬಿ.ಎಂ. ಹನೀಫ್

ದೇವರಾಣೆಗೂ ಹೇಳುತ್ತೇನೆ
ನಾನು ಕವಿಯಲ್ಲ ಸ್ವಾಮಿ
ಅಲ್ಲೊಂದಿಷ್ಟು ಕೆರೆದು ಇಲ್ಲೊಂದಿಷ್ಟು ಬರೆದು
ತಿಂದುಂಡು ಸುಖವಾಗಿರುವ ನಾನು ಕವಿಯಾಗುವುದಾದರೂ
ಹೇಗೆ ಸ್ವಾಮಿ?

ಭಕ್ತಿಯಿಂದ ಇಟ್ಟಿಗೆ ಹೊತ್ತವರು
ಅದರಿಂದಲೇ ಸೋದರರ ತಲೆ ಜಜ್ಜಿ ಕೊಂದಾಗ ನಾನು ಮಾತನಾಡಲಿಲ್ಲ
ಬಿಸ್ಮಿಲ್ಲಾ ಎಂದವರು ಬಾಂಬುಗಳ ಮಳೆಗರೆದು ಮಸೀದಿಯ ಮಿನಾರಗಳಲ್ಲಿ
ಪಾರಿವಾಳಗಳ ರಕ್ತ ಹೆಪ್ಪುಗಟ್ಟಿದಾಗ
ನಾನು ಮಾತನಾಡಲಿಲ್ಲ
ಹೇಳಿ, ನಾನು ಕವಿ
ಆಗುವುದಾದರೂ ಹೇಗೆ ಸ್ವಾಮಿ

ಇಲ್ಲಿ ನಿಂತು ಕಲ್ಲೆಸೆದರೆ ಯಾರಾದರೊಬ್ಬ ಕವಿಯ
ಮನೆಗೇ ಹೋಗಿ ಬೀಳುತ್ತಂತೆ
ಕಲ್ಲೆಸೆಯುವುದು ಬಿಡಿ ಸದ್ದಿಲ್ಲದೆ
ಮನೆಬಾಗಿಲಿಗೆ ಬಂದು ಹಣೆಗೇ
ಗುಂಡಿಕ್ಕಿ ಹೋದರಲ್ಲ
ಗುಂಡಿನ ಸದ್ದು ಕೇಳಿಯೂ
ಕೇಳಿಸದಂತೆ ತಿಂದುಂಡು
ಸುಖವಾಗಿರುವ ನಾನು, ಹೇಳಿ
ಕವಿಯಾಗುವುದಾದರೂ
ಹೇಗೆ ಸ್ವಾಮಿ?

ಹಜಾರದಲ್ಲಿ ರಕ್ತ ತೊಟ್ಟಿಕ್ಕುತ್ತಿದೆ
ಅಂಗಳದಲ್ಲಿ ರಂಗೋಲಿ
ಬಿಡಿಸುತ್ತಿದ್ದೇನೆ
ಒಲೆಯ ಮೇಲೆ ಕಣ್ಣೀರು ಬೇಯುತ್ತಿದೆ, ಶಯ್ಯಾಗೃಹದಲ್ಲಿ ಕೇಕೆ ಹಾಕುತ್ತಿದ್ದೇನೆ
ಬೆನ್ನ ಹಿಂದಿನ ಚೂರಿಯ ಚೂಪು ಕಾಣುತ್ತಿದ್ದರೂ
ಕಣ್ಣ ಮುಂದಿನ ಸ್ವರ್ಗಕ್ಕೆ
ಮಾರುಹೋಗಿದ್ದೇನೆ, ಹೇಳಿ
ನಾನು ಕವಿಯಾಗುವುದಾದರೂ
ಹೇಗೆ ಸ್ವಾಮಿ?

ಗಾಂಧಿಯ ಕನ್ನಡಕ ಕದ್ದೊಯ್ದವರು
ಸ್ವಚ್ಛ ಭಾರತದ ಮಂತ್ರ
ಪಠಿಸುತ್ತಿದ್ದಾರೆ
ಗೋಡ್ಸೆಯ ಹೆಗಲ ಮೇಲೆ ಎಡಗೈ ಇಟ್ಟವರು ಹಸ್ತಲಾಘವ
ಮಾಡುತ್ತಿದ್ದಾರೆ
ಎದೆಯೊಳಗಿನ ರಾಗತಂತುಗಳ
ಸ್ವರ ಗೊತ್ತಿಲ್ಲದವರು, ಮೇರು
ಸಂಗೀತದ ವಿಮರ್ಶೆ ಬರೆಯುತ್ತಿದ್ದಾರೆ
ಇದನ್ನೆಲ್ಲ ನೆನಪಿಟ್ಟು ಬರೆಯದಿದ್ದರೆ ನಾನು
ಕವಿಯಾಗುವುದಾದರೂ
ಹೇಗೆ ಸ್ವಾಮಿ?

ದೇವರಾಣೆಗೂ ಹೇಳುತ್ತೇನೆ
ನಾನು ಕವಿಯಲ್ಲ ಸ್ವಾಮಿ…

2 comments

  1. ರಾಜ್ಯ ಸಮ್ಮೇಳನದಲ್ಲಿ ಇದೇ ಕವನವನ್ನು ಚೆನ್ನಾಗಿ ಓದಿದಿರಿ ಕೂಡಾ .ಅಭಿನಂದನೆಗಳು.

Leave a Reply