ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೊಂದು ಬಹಿರಂಗ ಪತ್ರ

ಸತೀಶ್ ಚಪ್ಪರಿಕೆ 

ಆತ್ಮೀಯ ಬಳಿಗಾರರೇ,

ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದಕ್ಕೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು.

ದೂರದಲ್ಲೇ ಕುಳಿತು, ಹತ್ತಿರದಿಂದ ಸಾಹಿತ್ಯ ಸಮ್ಮೇಳನವನ್ನು ಅನುಭವಿಸಿದ ನನಗೆ ಅನಿಸಿದ ಕೆಲವು ವಿಷಯಗಳನ್ನು ನಿಮ್ಮ ಮುಂದೆ ಸಾರ್ವಜನಿಕವಾಗಿ ಇಡುತ್ತಿದ್ದೇನೆ. ನೀವು ಅನ್ಯಥಾ ಭಾವಿಸಿದರೂ ನನಗೇನೂ ತೊಂದರೆಯಿಲ್ಲ. ಏಕೆಂದರೆ ಒಟ್ಟಾರೆ ಕನ್ನಡ ಸಾಹಿತ್ಯ ಜಗತ್ತಿನ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಮುಖ್ಯ ಎಂದು ನನಗನಿಸಿದೆ. ಆ ಹಿನ್ನಲೆಯಲ್ಲಿ ಈ ಪತ್ರ ಬರೆಯುತ್ತಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂದರೆ ನನ್ನ ಪ್ರಕಾರ ಮನೆಯ ಯಜಮಾನ ಇದ್ದಂತೆ. ಸಾಹಿತ್ಯ ಸಮ್ಮೇಳನ ಎಂದರೆ ನಿಮ್ಮ ಮನೆಯ ಮದುವೆಯಿದ್ದಂತೆ. ಅದೊಂದು ಸಂಭ್ರಮ ಪಡುವ ಸಮಾರಂಭ. ಅಂತಹ ಸಂಭ್ರಮಾಚರಣೆಯ ಜವಾಬ್ದಾರಿ ಹೊತ್ತ ತಾವು ‘ಯಜಮಾನ’ ರಾಗಿ ಇರಬೇಕಾಗಿತ್ತೇ ಹೊರತು, ‘ಮದು ಮಗ- ಮದು ಮಗಳ’ ಜೊತೆ ಸಮ್ಮೇಳನದುದ್ದಕ್ಕೂ ಮೆರೆದಿದ್ದು ನನ್ನ ಪ್ರಕಾರ ಲಜ್ಜೆಗೇಡಿತನದ ಪರಮಾವಧಿ. ಧಾರವಾಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಚಂದ್ರಶೇಖರ ಕಂಬಾರ ದಂಪತಿ ಜೊತೆ ನೀವು ರಥವೇರಿ ಕೂತಿದ್ದು ಮತ್ತು ಆನಂತರ ಸಮ್ಮೇಳನದುದ್ದಕ್ಕೂ ವೇದಿಕೆಗಳ ಮೇಲೆ ಪ್ರಧಾನ ಸ್ಥಾನ ಅಲಂಕರಿಸಿದ್ದು ಅಕ್ಷೇಪಾರ್ಹ ನಡವಳಿಕೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಅದರ ಘನತೆ ಏನು ಎಂದು ಅರಿಯದೇ, ಆ ಸ್ಥಾನವನ್ನು ವೈಯಕ್ತಿಕ ಮೆರೆದಾಟಕ್ಕೆ ನೀವು ಬಳಸಿಕೊಂಡಿದ್ದು ಖಂಡನೀಯ ನಡೆ. ಅದೇ ರೀತಿ ವೇದಿಕೆಯ ಹಿಂಭಾಗದ ಪ್ರತಿಯೊಂದು ಬ್ಯಾಕ್ಡ್ರಾಪ್ನಲ್ಲಿ ನಿಮ್ಮ ಚಿತ್ರ! ಕಂಬಾರರಷ್ಟೇ ದೊಡ್ಡ ಚಿತ್ರಗಳನ್ನು ಹಾಕಿಸಿಕೊಂಡಿದ್ದು ನಿಮ್ಮ ‘ಮೆರೆಯುವ’ ಮನೋಭಾವಕ್ಕೆ ಹಿಡಿದ ಕನ್ನಡಿ. ಈ ಹಿಂದೆ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು 3 ರಿಂದ 5 ವರ್ಷಕ್ಕೆ ವಿಸ್ತರಿಸಲು ನೀವು ಮಾಡಿದ ಹರಸಾಹಸ ಕೂಡ ಇದೇ ಮನೋಭಾವದ ಪ್ರತೀಕ ಎನ್ನಬಹುದು.

ಇನ್ನು ಪೂರ್ಣಕುಂಭ ಮೆರವಣಿಗೆ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು ಮತ್ತು ನೀವು ಛಲ ಬಿಡದ ತ್ರಿವಿಕ್ರಮನಂತೆ ‘ಮಾಡಿಯೇ ಮಾಡುತ್ತೇವೆ’ ಎಂದು ಮೆರವಣಿಗೆ ಮಾಡಿದ್ದು ನಿಮ್ಮ ‘ಅಧಿಕಾರ’ದ ಮದದ ಪ್ರತೀಕವೇ ಆಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಬಾರರ ನಡೆ ಕೂಡ ಸಹ್ಯವಲ್ಲದ್ದು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಮೆರವಣಿಗೆ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ, ವ್ಯಕ್ತಿಪೂಜೆಯ ಬದಲು, ‘ಕನ್ನಡ’, ‘ಕನ್ನಡ ಭಾಷೆ’ ಮತ್ತು ‘ಕನ್ನಡ ತಾಯಿ’ ಎಂಬ ಭಾವನೆಯನ್ನು ಮೆರವಣಿಗೆ ಮಾಡಬೇಕು. ಹಲವಾರು ದಶಕಗಳ ಹಿಂದೆಯೇ ಕುವೆಂಪು ಧಾರವಾಡ ಸಮ್ಮೇಳನದಲ್ಲಿಯೇ ಅದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ನೆನಪು ನಿಮಗೆ ಮತ್ತು ಕಂಬಾರರಿಗೆ ಇದೆಯೋ? ಇಲ್ಲವೋ? ಕನ್ನಡ ಸಾರಸ್ವತ ಲೋಕದ ಬಹುತೇಕರಿಗೆ ನೆನಪಿದೆ. ಕನ್ನಡ ಪುಸ್ತಕಗಳನ್ನೋ ಅಥವಾ ಭುವನೇಶ್ವರಿ ತಾಯಿಯ ಛಾಯಾಚಿತ್ರವನ್ನೋ ರಥದಲ್ಲಿ ಕೂರಿಸಿ ಮೆರಣಿಗೆ ಮಾಡಬಹುದಲ್ಲಾ! ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಘನ’ವೆತ್ತ ಅಧ್ಯಕ್ಷರು ರಥದ ಹಿಂದೆ (ಬೇಕಿದ್ದರೆ ತಲೆಯ ಮೇಲೆ ಪೂರ್ಣಕುಂಭ ಹೊತ್ತುಕೊಂಡು!) ನಡೆದು ಹೋಗಬಹುದು.

ಈ ರಥದ ಮೇಲೆ ವಿಜೃಂಭಿಸುವ ಮತ್ತು ಮೆರೆಯುವ ಚಾಳಿ ಈಗ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ, ಪ್ರತಿಯೊಂದು ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ‘ಸರ್ವಾಧ್ಯಕ್ಷರು’ ಮತ್ತು ಆಯಾ ಮಟ್ಟದ ‘ಅಧ್ಯಕ್ಷರು’ ಕೂಡ ‘ಪೂರ್ಣ ಕುಂಭ’ ಮೆರವಣಿಗೆಯಲ್ಲಿ ಮೆರೆಯಲಾರಂಭಿಸಿದ್ದಾರೆ. ಅದರ ರುಚಿಯನ್ನು ಸ್ವತಃ ಅನುಭವಿಸುವ ಅಕವಾಶ ನನಗೆ ಕೂಡ ಸಿಕ್ಕಿತ್ತು! ಸುಮಾರು ಎರಡು ವರ್ಷಗಳ ಹಿಂದೆ ನನ್ನ ಹುಟ್ಟೂರು ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನನ್ನ ಮೇಲೆ ಹೊರಿಸಲಾಗಿತ್ತು. ಊರಿನ ಹಿರಿಯರ ಒತ್ತಾಯಕ್ಕೆ ಮಣಿದು ಆ         ಜವಾಬ್ದಾರಿಯನ್ನು ಹೊತ್ತಿದ್ದೆ. ಕಿರಿಮಂಜೇಶ್ವರದಲ್ಲಿ ನಡೆದ ಆ ಸಮ್ಮೇಳನದಲ್ಲಿ ನನ್ನನ್ನು ಕೂಡ ರಥವೇರಿಸುವ ಭಯಂಕರ ಯತ್ನ ನಡೆಯಿತು. ನಾನು ಅತ್ಯಂತ ಗೌರವಿಸುವ ನನ್ನ ಊರಿನ ಹಿರಿಯರು ಎಷ್ಟೇ ಒತ್ತಾಯ ಮಾಡಿದರೂ, ನಾನು ರಥವೇರಲಿಲ್ಲ. ಕೊನೆಗೆ ತಾಯಿ ಭುವನೇಶ್ವರಿಯ ವೇಷ ಧರಿಸಿದ್ದ ಒಬ್ಬ ಪುಟಾಣಿಯನ್ನು ರಥವೇರಿಸಿ, ನಾವೆಲ್ಲ ಅದರ ಹಿಂದೆ ನಡೆದು ಹೋದೆವು. ಸುನಾಮಿ ಬೀಸಲಿಲ್ಲ! ಭೀಕರ ಭೂಕಂಪವೇನೂ ಆಗಲಿಲ್ಲ!

ದುರಂತವೆಂದರೆ ಸಾಹಿತ್ಯ ಸಮ್ಮೇಳನದ ವೇದಿಕೆ, ರಾಜಕೀಯ ಓಲೈಕೆಯ ಕೇಂದ್ರಬಿಂದುವಾಗುತ್ತಿರುವುದು. ಸರ್ಕಾರ 40 ಕೋಟಿ ಅನುದಾನ ನೀಡಿದೆ. ಆ ಕಾರಣಕ್ಕೆ ಮುಖ್ಯಮಂತ್ರಿಗಳೇ ಸಮ್ಮೇಳನ ಉದ್ಘಾಟನೆ ಮಾಡಬೇಕು ಎಂಬ ಅಲಿಖಿತ ನಿಯಮವೇ ಹೇಸಿಗೆ ಹುಟ್ಟಿಸುವಂತದ್ದು. ಕನ್ನಡ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಆ ದುಡ್ಡೇನೂ ಯಾವುದೇ ರಾಜಕಾರಣಿಯ ಜೇಬಿಂದ ಬರುವುದಿಲ್ಲ. ಬದಲಾಗಿ ಜನಸಾಮಾನ್ಯರು ನೀಡುವ ತೆರಿಗೆಯ ಮೂಲಕವೇ ಬರುವುದು. ಆ ಪ್ರಜ್ಞೆ ರಾಜಕಾರಣಿಗಳಿಗೆ  ಮತ್ತು ಸಾಹಿತ್ಯ ಸಮ್ಮೇಳನ ನಡೆಸುವವರಿಗೆ- ಸಾಹಿತಿಗಳಿಗೆ ಇರಬೇಕು. ನಿಜಕ್ಕೂ ಸಾಹಿತ್ಯ ಬಗ್ಗೆ ಅಪಾರ ಗೌರವವಿರುವ ರಾಜಕಾರಣಿ ಸಾಹಿತ್ಯ ಸಮ್ಮೇಳನಗಳ ವೇದಿಕೆಯಿಂದ ದೂರವಿರಬೇಕು. ಅಷ್ಟಕ್ಕೂ ಒಬ್ಬ ಮುಖ್ಯಮಂತ್ರಿ, ಸಚಿವ, ಸಂಸತ್- ವಿಧಾನ ಸಭೆಯ ಸದಸ್ಯ ಅಥವಾ ಯಾವುದೇ ಜನಪ್ರತಿನಿಧಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು ಎನಿಸಿದರೆ, ಜನಸಾಮಾನ್ಯರಂತೆ ಬಂದು ವೇದಿಕೆಯ ಮುಂದೆ ಕೂತು ಅನುಭವಿಸಲಿ.

ಧಾರವಾಡ ಸಾಹಿತ್ಯ ಸಮ್ಮೇಳನವನ್ನೇ ತೆಗೆದುಕೊಂಡರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದ ಕಾರಣಕ್ಕಾಗಿಯೇ ‘ಚಾಣಾಕ್ಷ’ ಆಯೋಜಕರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರನ್ನೂ ಸಮಾರಂಭದಲ್ಲಿ ತೂರಿಸಿದರು. ಆ ಮೂಲಕ ರಾಜಕೀಯ ಸಮತೋಲನ ಸಾಧಿಸುವಲ್ಲಿ ಮನು ಬಳಿಗಾರ ಅವರು ಯಶಸ್ವಿಯಾದರು. ಈ ರಾಜಕೀಯ ಓಲೈಕೆ ತಕ್ಷಣವೇ ನಿಲ್ಲಬೇಕು. ರಾಜಕಾರಣಿಗಳನ್ನು ಸಂಪೂರ್ಣ ಹೊರಗಿಟ್ಟು ಸಾಹಿತ್ಯ ಸಮ್ಮೇಳನ ನಡೆಸುವಂತಹ ಆರೋಗ್ಯಪೂರ್ಣ ವಾತಾವರಣದ ಸೃಷ್ಟಿಗೆ ಸಾಹಿತಿಗಳು, ಸಾಹಿತ್ಯ ಪರಿಷತ್ತು ಮತ್ತು ರಾಜಕಾರಣಿಗಳು ಸಹಕಾರ ನೀಡಬೇಕು. ಆದರೆ, ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದದ್ದು ಇದಕ್ಕೆ ತದ್ವಿರುದ್ಧವಾದದ್ದು.  ಈ ರೀತಿ ರಾಜಕಾರಣಿಗಳನ್ನು ಓಲೈಸುವ ಕಲಾ ಪ್ರವೀಣರ ವೈಯಕ್ತಿಕ ಮೆರೆದಾಟ ಮತ್ತು ವೈಯಕ್ತಿಕ ಅಭಿಲಾಷೆಗಳ ಈಡೇರಿಕೆಗೆ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಬಲಿಯಾಗುತ್ತಿರುವುದು ವಿಷಾದನೀಯ.

ಮನು ಬಳಿಗಾರರೇ, ಯಾವುದೇ ಸಾಹಿತ್ಯ ಸಮ್ಮೇಳನವಾಗಲಿ, ಅಲ್ಲಿ ಪ್ರಾಮುಖ್ಯತೆ ಇರಬೇಕಾಗಿರುವುದು ‘ಸಮ್ಮೇಳನದ ಸರ್ವಾಧ್ಯಕ್ಷ’ರಿಗೆ. ಉಳಿದ ಗೋಷ್ಠಿಗಳ ಅಧ್ಯಕ್ಷರಿಗೆ. ಗೋಷ್ಠಿಗಳಲ್ಲಿ ಭಾಗವಹಿಸುವ ಸಾಹಿತಿಗಳಿಗೆ. ಸಮ್ಮೇಳನಕ್ಕೆ ಬಂದ ಗುರು-ಹಿರಿಯರಿಗೆ. ಅದನ್ನು ಬಿಟ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅವರೆಲ್ಲರನ್ನೂ ಮೀರಿ ಮೆರೆಯುವುದು ಸಭ್ಯವಲ್ಲ. ಸ್ವಲ್ಪ ಸಾಮಾನ್ಯ ಜ್ಞಾನವಿರುವ ಯಾವುದೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಮ್ಮೇಳನದ ‘ಸರ್ವಾಧ್ಯಕ್ಷ’ ದಂಪತಿ ಜೊತೆ ಮೆರವಣಿಗೆಯ ರಥವೇರಿ ಕೂರಲಾರ. ಪ್ರತಿಯೊಂದು ಸಂದರ್ಭದಲ್ಲೂ ವೇದಿಕೆಯ ಮೇಲೆ ಅವರಿಗೆ ಸಮಾನ- ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ವಿಜೃಂಭಿಸಲು ಮುಂದಾಗುವುದಿಲ್ಲ. ಮದುವೆಯ ಮೇಲುಸ್ತುವಾರಿ ನಡೆಸುವ ಬದಲು ಮನೆಯ ಯಜಮಾನನೇ ‘ಹಸೆಮಣೆ’ ಏರಿ ಕೂತರೆ ಹೇಗೆ ಸ್ವಾಮಿ!?

ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಕನ್ನಡ ಸಾಹಿತ್ಯ ಲೋಕ ನಿಮಗೆ ಕೊಟ್ಟ ಅಪೂರ್ವವಾದ ಅವಕಾಶ. ಆ ಅವಕಾಶವನ್ನು ಇನ್ನು ಮುಂದಾದರೂ ವಿನಮ್ರರಾಗಿ ಸದುಪಯೋಗ ಪಡಿಸಿಕೊಂಡು ಸಾಹಿತ್ಯ ಸೇವೆ ಮುಂದುವರಿಸಿ. ನಿಮಗೆ ಶುಭವಾಗಲಿ.

ಪ್ರೀತಿ-ವಿಶ್ವಾಸದಿಂದ.

ವಂದನೆಗಳು.

5 comments

  1. ಕರಾವಳಿ ಜಿಲ್ಲೆಯಲ್ಲಿಯಂತೂ ಇತ್ತೀಚೆಗೆ ಪ್ರತಿ ಸಾಹಿತ್ಯ ಸಮ್ಮೇಳನವೂ ಹತ್ತಿರದ ದೇವಸ್ಥಾನದಲ್ಲಿ ಪೂಜೆ ನಡೆಸಿ, ಶೋಭಾಯಾತ್ರೆ ಮಾಡುವುದರೊಂದಿಗೇ ಪ್ರಾರಂಭಗೊಳ್ಳುವುದು ಸಂಪ್ರದಾಯವೇ ಆಗಿಹೋಗಿದೆ

  2. ಸಮ್ಮೇಳನ ತುಂಬಾ ವಿಜ್ರುಂಭಣೆಯಿಂದ ನಡೆಯಿತು, ಆದರೆ ಊಟದ ನಂತರ ಕೈತೊಳೆಯಲು ಸಹ ನೀರು ಇರಲಿಲ್ಲ, ನೋಡೋದಕ್ಕೆ ದೊಡ್ಡ ದೊಡ್ಡ ವಾಟರ್ ಟ್ಯಾಂಕರ್ ಇತ್ತು ನಲ್ಲಿಯಲ್ಲಿ ನೀರು ತೊಟ್ಟು ತೊಟ್ಟು ಬರ್ತಿತ್ತು, ಕುಡಿಯುವ ನೀರು ಇಲ್ಲ ಅಂದ್ರೆ ಹೇಗೆ ನೀವೇ ಹೇಳಿ, ತುಂಬಾ ಬೇಜಾರು.
    ಧನ್ಯವಾದಗಳು

  3. ಸತೀಶ ಅವರೇ, ನಿಮ್ಮ ನೇರ ನುಡಿಯ ಲೇಖನ ತುಂಬಾ ಮೆಚ್ಚುಗೆಯಾಯ್ತು. ಹೀಗೆ ಬರೆಯುವವರು, ವಿರೋಧಿಸುವವರು ಹೆಚ್ಚಾದಾಗಲೇ ಜನಪರ ಧ್ವನಿ ಶಕ್ತಿಯುತವಾಗುತ್ತದೆ. ಜ್ಞಾನಪೀಠ ಜ್ಞಾನಿ ಕಂಬಾರರಿಗೂ ಮದವೇರಿದ ಜ್ಞಾನ ಕವಿದಿತ್ತು ಅಂತ ತೋರುತ್ತದೆ.

  4. ಬಹುಶಃ ಈ ಸರ್ವಾಧಿಕಾರಿ ಮನೋಭಾವದ ಹಟಮಾರಿ‌ ಧೋರಣೆಯ ಮಹಾ ಸಾಧನೆಗೇ ಹಂಪಿ ಕನ್ನಡ ವಿ.ವಿ.ಮನು ಬಳಿಗಾರರಿಗೆ “ನಾಡೋಜ”ಪದವಿ ಪ್ರದಾನ ಮಾಡಿ ಗೌರವಿಸಿರಬೇಕು.

Leave a Reply