ಹತ್ತು ಅಪೂರ್ಣ ಸಣ್ಣ ಕತೆಗಳು

ಅಪೂರ್ಣತೆಯೊಂದೇ ಸ್ಪಷ್ಟತೆಯನ್ನು ತರಬಲ್ಲದು. ಹಾಗಾಗಿ‌ ಇಲ್ಲಿರುವ ಹತ್ತು (ಅ)ಪೂರ್ಣ ಕತೆಗಳಲ್ಲಿರಬಹುದಾದ ಪೂರ್ಣತೆಯನ್ನು ನೀವೇ ತುಂಬಿಕೊಳ್ಳಬೇಕು. ಒಬ್ಬೊಬ್ಬರ ಪೂರ್ಣತೆಯೂ ಅವರವರ ಅಪೂರ್ಣತೆಯನ್ನು ಅವಲಂಬಿಸಿರುತ್ತದೆ. * * * * *

* ಬ್ಯುಸಿ ಸರ್ಕಲ್ ಒಂದರಲ್ಲಿ ಕೂತಿದ್ದ ಕುರುಡ ಭಿಕ್ಷುಕನ ತಟ್ಟೆಗೆ ೨೦ ರೂಪಾಯಿ ನೋಟು ಹಾಕಿ, ಹತ್ತು ರೂಪಾಯಿ ನೋಟು ತೆಗೆದುಕೊಂಡಿದ್ದವನಿಗೆ ಮನೆಗೆ ಬಂದಮೇಲೆ ಆತ ತನ್ನ ಬಗ್ಗೆ ಏನು ಯೋಚಿಸಿರಬಹುದೆಂಬ ವಿಷಯ ಕೊರೆಯತೊಡಗಿತು…

* ಒಂದು ಕೋಟಿ ರೂಪಾಯಿ ಲಾಟರಿ ಗೆದ್ದಿದ್ದವನೊಬ್ಬ ಅದನ್ನು ನಿರಾಕರಿಸಿದ್ದರ ಕಾರಣ ಹೇಳಲೇಬೇಕೆಂದು ಮಾಧ್ಯಮದವರು ಒಂದು ವಾರ ಒತ್ತಾಯಿಸಿದರೂ ತನಗೆ ಸೂಕ್ತ ಕಾರಣ ಸಿಗುತ್ತಿಲ್ಲವೆಂದೇ ಹೇಳಿದ…

* ‘ಇದು ನಿಮ್ಮದೇನಾ ಹ್ಯಾಂಡ್ ರೈಟಿಂಗ್ ? ಅವಳ ಡೈರಿಯಲ್ಲಿ ಈ ಪತ್ರ ಸಿಕ್ತು!’ ಎಂದು ಪೋಲೀಸ್ ಆಫೀಸರ್ ಕೇಳಿದಾಗ ಅವನು ‘ ಅಲ್ಲ, ಅದು ನನ್ನ ಹಾರ್ಟ್ ರೈಟಿಂಗ್ ‘ ಎಂದು‌‌ ಹೇಳುವುದರಲ್ಲಿ ಯಾವ ಲಾಭವೂ ಇಲ್ಲದ್ದನ್ನು ನನೆದು ತಲೆಯಲ್ಲಾಡಿಸಿದ.

* ಇಂದು ಬೆಳಿಗ್ಗೆ ನಾನು ವಾಕಿಂಗ್ ಹೋದಾಗ ಸರ್ಕಲ್ ಬಳಿಯಲ್ಲಿ ನಾಯಿಯೊಂದು ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆ ದಾಟಿ ತಾನು ನಡೆದು ಬಂದ ದಾರಿಯನ್ನು ದಿಟ್ಟಿಸುತ್ತ ನಿಂತಿತು. ಆ ನಾಯಿ ಹಾಗೆ ರಸ್ತೆ ದಾಟಿದ್ದು ಕ್ಷುಲ್ಲಕ ವಿಚಾರ ಎಂದು ನನಗೆ ಅನ್ನಿಸದೆ, ಅದರ ಬಗ್ಗೆ ಯೋಚಿಸುತ್ತಲೇ ಇದ್ದೇನೆ…

* ‎ಶತೃ ದೇಶದ ಸೈನಿಕನೋರ್ವನನ್ನು ಹೊಡೆದುರುಳಿಸಿದ‌ ದೇಶೀಯ ಸೈನಿಕ ‘ಆತ’ನೊಂದಿಗೆ ತನಗಿದ್ದ ಶತೃತ್ವವೇತರದ್ದು ಎಂದು ಜೀವನವಿಡೀ ಯೋಚಿಸಿಬಿಟ್ಟ…

* ಕುರುಡನೊಬ್ಬನನ್ನು ರಸ್ತೆ ದಾಟಿಸಿದ ನಂತರ ಕೇಳಿದೆ :
‎’ ಏನು ಸಹಾಯ ಮಾಡಲಿ ?’
‘ ಬೆಳಕು ಎಂದರೇನು ತಿಳಿಸಿಕೊಡಿ’ ಎಂದನಾತ. ಹೇಗೆಲ್ಲಾ ಪ್ರಯತ್ನಿಸಿದರೂ ಬೆಳಕಿನ ಬಗ್ಗೆ ವಿವರಿಸಲಾಗಲಿಲ್ಲ. ಪ್ರಾಯಶಃ ಅವನಿಗೆ ಕತ್ತಲನ್ನು ವಿವರಿಸು ಎಂದಿದ್ದರೆ ಅವನೂ ಹೀಗೆ ಚಡಪಡಿಸುತ್ತಿದ್ದನೇನೋ !

* ‘ ಈಗ ಹೋದವರ ಬಗ್ಗೆ ನಿಮ್ಮ ಅಭಿಪ್ರಾಯವೇನು ?’ ಎಂದು ಕೇಳಿದಾಗ ಆತ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹೇಳಲೇ ಇಲ್ಲ.‌ ಹಾಗಾಗಿಯೇ ‘ಆಕೆ’ಯನ್ನು ಕರೆಸಿ ಕೇಳಬೇಕಾಯಿತು.

* ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂಬ ಕಾರಣದಿಂದ ಆತ ಉದ್ಯೋಗ ಬಿಟ್ಟು ಮನೆಯಲ್ಲೇ ಉಳಿದ. ಮನೆಯವರಿಗೆ ಅವನು ಮನೆಯಲ್ಲಿಯೇ ಉಳಿಯುವುದು ಆಸಕ್ತಿದಯಾಕವಾಗಿ ಇರಲಿಲ್ಲ…

* ‘ ಹುಟ್ಟ’ ನ್ನು ಭೇಟಿ ಮಾಡಿದ ‘ಸಾವು’ ನನಗೊಂದು ಪಾರ್ಟಿ ಕೊಡಿಸು ಎಂದು ಪೀಡಿಸಿತು‌.‌ ಇಬ್ಬರೂ ಮೇಲ್ಮಹಡಿಯ ಹೋಟೆಲ್ ನಲ್ಲಿ ಪಾರ್ಟಿ ಮಾಡುತ್ತಾ ಇರುವಾಗ ಹೋಟೆಲ್ ಮಾಲಿಕ ಸತ್ತ ಸುದ್ದಿ ಬಂತು.‌ಸಾವು ಎದ್ದು ಹೋಯಿತು. ಪಕ್ಕದಲ್ಲೇ ಇದ್ದ ಆಸ್ಪತ್ರೆಯ ವಾರ್ಡಿನಿಂದ ಆಗತಾನೆ ಹುಟ್ಟಿದ ಮಗು ಅಳುವ ಸದ್ದು ಕೇಳಿಬಂತು. ಹುಟ್ಟು ಎದ್ದು ಹೋಯಿತು.

* ಫ್ಲೈ ಓವರ್ ನಲ್ಲಿ ನಿಂತಿದ್ದ ಯುವತಿಯೋರ್ವಳು ಕೈಬೀಸಿದಳೆಂಬ ಕಾರಣಕ್ಕೆ ಬೈಕ್ ನಿಲ್ಲಿಸಿದರೆ ಆಕೆ
‘ನನಗೊಂದು ಮುತ್ತು ಕೊಡು’ ಎಂಬ ವಿಚಿತ್ರ ಬೇಡಿಕೆಯಿಟ್ಟಳು. ಅದಕ್ಕವನು ‘ ಪ್ರೀ ಆರ್ಡರ್ ಇಲ್ಲದೆ ನಾವು ಏನನ್ನೂ ಡೆಲಿವರ್ ಮಾಡೋ ಹಾಗಿಲ್ಲ’ ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿದ…

1 comment

Leave a Reply