ಸಿಂಗಪುರ್ ನ ‘ಕಮ್ಯೂನಿಟಿ ಗಾರ್ಡನಿಂಗ್’

ಹಚ್ಚ ಹಸಿರ ಸೊಬಗು ಅಂದ್ರೆ ನಿಮಗೆ ಪ್ರೀತಿಯೇ ? ಪ್ರಕೃತಿ, ಮರಗಿಡಗಳ ಬಗ್ಗೆ ಆಸಕ್ತಿ ಇದೆಯೇ..? ಸದಾ ಕಾಲ ಇವುಗಳ ಮಧ್ಯೆ ಇರಲು ಬಯಸುವಿರಾ..? ಅಂಥದ್ದೇ ವಾತಾವರಣವನ್ನು ನೀವಿರುವ ಬಳಿ ಸೃಷ್ಟಿಸಲು ಇಚ್ಛೆ ಪಡುವಿರಾ..? ಹಾಗಾದರೆ ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದೆಯಾ..?

ಇನ್ನೂ ನೆನಪಿದೆ.. ಇಂತಹದ್ದೇ ರೀತಿಯ ಆದರೆ ಮಾಧ್ಯಮಕ್ಕೆ ಸಂಬಂಧಿಸಿದ ಜಾಹೀರಾತನ್ನು ಉಜಿರೆಯ ಎಸ್ ಡಿ ಎಮ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ನೋಡಿದ್ದೆವು. ಅದು ಈಟಿವಿ ಕನ್ನಡದ ಜಾಹೀರಾತು ಆಗಿತ್ತು. ಸಿಕ್ಕಿದ್ರೆ ಸಿಗುತ್ತೆ ಇಲ್ಲಾ ಒಂದು ಅನುಭವ ಆದ್ರೂ ಆಗುತ್ತೆ ಎಂಬ ಲೆಕ್ಕಾಚಾರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಫ್ರೆಂಡ್ಸ್ ಜೊತೆ ನಾನು ಅರ್ಜಿ ಸಲ್ಲಿಸಿದ್ದೆ. ಈ ಮೂಲಕ ಆರಂಭವಾಗಿತ್ತು ಪತ್ರಿಕೋದ್ಯಮದಲ್ಲಿನ ಪಯಣ.

ಅದೊಂದು ಕಾಲವಿತ್ತು ಸ್ಪರ್ಧಾತ್ಮಕ ಜಗತ್ತು. ದುಬಾರಿ ಬದುಕು. ಹಾಗಾಗಿ ಉದ್ಯೋಗ ಅನಿವಾರ್ಯ. ನಿರುದ್ಯೋಗಿಗಳನ್ನು ಅಂತೂ ಸಂಪೂರ್ಣ ಕಡೆಗಣಿಸುವ ಪರಿಸ್ಥಿತಿ. ಸಮಾಜಕ್ಕೆ ಹೆದರಿ, ಶತಾಯಗತಾಯ ಕೆಲಸ ಗಳಿಸಬೇಕೆಂಬ ಹಟ. ಈ ಮಧ್ಯೆ, ಏನು ಬಾರದವರು ಕೃಷಿ ಮಾಡೋದು ಅನ್ನುವ ಮಾತು.

ಆದರೆ ಈಗ, ಪಟ್ಟಣದ ಬ್ಯುಸಿ ಲೈಫ್, ವಾಹನಗಳ ದಟ್ಟಣೆ, ಯಾಂತ್ರಿಕ ಬದುಕುಗಳಿಂದ ಬೇಸತ್ತ ಅದೆಷ್ಟೋ ಮಂದಿ ಕೈ ತುಂಬಾ ಬರುತ್ತಿದ್ದ ಸಂಬಳಗಳನ್ನೂ ಬಿಟ್ಟು ಕೃಷಿ, ತೋಟಗಾರಿಕೆಯತ್ತ ಒಲವು ತೋರಿಸುತ್ತಾ ಇದ್ದಾರೆ.

ಆದರೆ ಮೇಲೆ ತಿಳಿಸಿದ ತೋಟಗಾರಿಕೆಯ ವಿಷಯ, ಯಾವುದೇ ಕಂಪೆನಿಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನವೂ ಅಲ್ಲ. ಕಲಿಯುವ ಕೋರ್ಸ್ ಕೂಡ ಅಲ್ಲ. ದುಡ್ಡು ಮಾಡುವ ಉದ್ದೇಶವಂತೂ ಅಲ್ವೇ ಅಲ್ಲ. ಹಾಗಾದ್ರೆ ಏನಿದು ಅಂತೀರಾ.
ಅಂದ ಹಾಗೆ ಇಷ್ಟೊಂದು ಪ್ರಶ್ನೆಗಳನ್ನು ಮುಂದಿಟ್ಟಿರೋದು ಸಿಂಗಾಪುರ ಸರ್ಕಾರ. ಅದು ಈ ದೇಶದ ಜನತೆಗೆ. ಈ ನ್ಯೂಸ್ ಮಾತ್ರ ತುಂಬಾ ಹಳೆಯದು. ಆದರೆ ಇಂದಿಗೂ ಅದು ತನ್ನ ಹೊಸತನವನ್ನು ಮಾತ್ರ ಕಾಯ್ದುಕೊಳ್ಳುತ್ತಾ ಬಂದಿದೆ. ಸರ್ಕಾರದ ಉದ್ದೇಶ, ಜನರ ಉತ್ಸಾಹ ಇದನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿಯ ಟಾಪಿಕ್ ತುಂಬಾ ಸಿಂಪಲ್ ಹೆಸರು ಕಮ್ಯೂನಿಟೀ ಗಾರ್ಡೆನಿಂಗ್. ತರಕಾರಿ, ಹಣ್ಣುಗಳು, ಹೂವುಗಳು ಬೆಳೆಯುವುದು ಹಾಗೂ ಬೆಳೆಸುವುದು ಅಷ್ಟೇ. ತೋಟಗಾರಿಕಾ ವಿಚಾರದಲ್ಲಿ ನಾವು ಏನು ಹಿಂದೆ ಇಲ್ಲ. ನಮಗೆ ಸೇರಿರೋ ಜಾಗದಲ್ಲಿ ಬೇಕಾದನ್ನು ಬೆಳೆಸಲು ಸಂಪೂರ್ಣ ಸ್ವಾತಂತ್ರ್ಯವಿದೆ. ಗಾಳಿ, ಬೆಳಕು, ನೀರು ಯಥೇಚ್ಛವಾಗಿ ಇರಬೇಕು. ಹಾಗಿದ್ದಲ್ಲಿ ತೋಟಗಾರಿಕೆಗೆ ಸುಗ್ಗಿಯೋ ಸುಗ್ಗಿ.

ಆದರೆ ಸಿಂಗಾಪುರದ ಕಥೆಯೇ ಬೇರೆ. ಒಂದೊಂದು ಇಂಚು ಜಾಗವು ತುಂಬಾ ತುಟ್ಟಿ. ಬಾಡಿಗೆಯೋ ಅಥವಾ ಸ್ವಂತದ್ದೋ ಮನೆಯೊಳಗಿನ ಜಾಗ ಮಾತ್ರ ಅವರವರಿಗೆ ಸೇರಿದ್ದು. ಉಳಿದಂತೆ ಯಾವುದೇ ಹೆಚ್ಚುವರಿ ಆಸ್ತಿ ಪಡೆಯಲು ಇಲ್ಲಿಯವರು ಯಾರು ಕೂಡ ಹಕ್ಕುದಾರರಲ್ಲ. ಅತ್ಯಂತ ದುಬಾರಿ ದೇಶಗಳಲ್ಲಿ ಸಿಂಗಾಪುರಕ್ಕೆ ೮ ನೇ ಸ್ಥಾನ. ಮನೆ ನಡೆಸೋದೇ ತುಂಬಾ ಕಷ್ಟದ ಕೆಲಸ. ಇನ್ನೂ ಆಸ್ತಿ – ಪಾಸ್ತಿ ಬಗ್ಗೆ ಕೇಳೋದೇ ಬೇಡ.
ಆದ್ರೆ ತೋಟಗಾರಿಕಾ ವಿಚಾರದಲ್ಲಿ ಹೆಚ್ಚಿಲ್ಲಾಂದ್ರು ಈ ದೇಶದ ಮಟ್ಟಿಗೆ ಕಾನೂನು ಕೊಂಚ ಸಡಿಲಗೊಂಡಂತಿದೆ. ಸರ್ಕಾರವೇ ಖುದ್ದಾಗಿ ಜನತೆಯತ್ತ ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ. ಸರ್ಕಾರ ನೀಡಿದ ಜಾಗದಲ್ಲಿ ತೋಟಗಾರಿಕೆಗೆ ಅವಕಾಶ. ನೀವು ಏನು ಬೇಕಾದರೂ ಬೆಳೆಯಬಹುದು. ಬೆಳೆದ ತರಕಾರಿ, ಹೂವು, ಹಣ್ಣು ಎಲ್ಲವೂ ನಿಮಗೆ ಸೇರಿದ್ದು. ಕೆಲ ಮಂದಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸಿಕೊಂಡರೆ, ಮತ್ತೆ ಕೆಲವರು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಿ ಸಂಪಾದನೆ ಮಾಡುವವರು ಇದ್ದಾರೆ.

ಸರ್ಕಾರ ನೀಡೋದು ಕೇವಲ ೨.೫ ಚದರ ಮೀಟರ್. ಸರ್ಕಾರದಿಂದ ಒಮ್ಮೆ ದಕ್ಕಿದ ಭೂಮಿ, ಸತತ ೩ ವರ್ಷದವರೆಗೆ ನಿಮ್ಮ ಕೈಯಲ್ಲೇ. ವರ್ಷಕ್ಕೆ ೫೭ ಡಾಲರ್ ಪಾವತಿ ಮಾಡಿದರೆ ಸಾಕು. ಆಸಕ್ತರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕುಟುಂಬವೊಂದಕ್ಕೆ ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ.
ಈ ಮೂಲಕ ನೆರೆಹೊರೆಯವರ ಜೊತೆ ಸಂಪರ್ಕ, ಅವರಲ್ಲಿನ ಜ್ಞಾನ ಹಾಗೂ ಅನುಭವ ಹಂಚಿಕೆಯಾಗುತ್ತ ಅವರವರಿಗೆ ದೊರೆತ ಭೂಮಿಯಲ್ಲಿ ವಿಭಿನ್ನ ಬಗೆಯ ಬೆಳೆಗಳು ಬೆಳೆಯುತ್ತಾ ಸಾಗುತ್ತದೆ. ಇಲ್ಲೂ ಕೂಡ ಸಿಂಗಾಪುರ ಸರ್ಕಾರ, “ಬಹು ಜನಾಂಗೀಯ ಸಮಾಜ” ಅನ್ನುವ ವಿಚಾರವನ್ನು ಮರೆಯುವುದಿಲ್ಲ. ವಿಷಯ ಎಷ್ಟೇ ಸರಳವಾಗಿರಲಿ, ಜನಾಂಗೀಯ ಸಾಮರಸ್ಯ ಕಾಪಾಡುವ ಬಗ್ಗೆಯೂ ಕೂಡ ಈ ದೇಶ ಅಷ್ಟೇ ಮಹತ್ವವನ್ನು ನೀಡುತ್ತಾ ಬರುತ್ತಿದೆ.

ಮೇಲ್ನೋಟಕ್ಕೆ ಈ ಯೋಜನೆ, ಸಿಂಗಾಪುರದ ಗ್ರೀನ್ ಸಿಟಿ ಅನ್ನುವ ಪರಿಕಲ್ಪನೆಗೆ ಪೂರಕವಾದುದು. ಆದರೆ ತೋಟಗಾರಿಕೆಯ ವಿಭಿನ್ನ ಹಂತಗಳನ್ನು ಒಳಹೊಕ್ಕಂತೆ ಸಮುದಾಯ, ಜನರು, ಪ್ರಕೃತಿ, ಜಾಗೃತಿ ಹೀಗೆ ಎಲ್ಲಾ ರೀತಿಯ ಕೊಂಡಿಗಳು ಸವಿವಿಸ್ತಾರವಾಗಿ ನಮ್ಮ ಕಣ್ಣೆದುರಿಗೆ ತೆರೆಯುತ್ತಾ ಹೋಗುತ್ತದೆ.

ಈ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದವರಿಗೂ ಹಲವು ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಅಪಾರ್ಟ್ಮೆಂಟ್ ಗಳಲ್ಲಿ ನೆಲೆಸಿರುವವರಿಗೆ ಪ್ರತ್ಯೇಕ ಗುಂಪು. ಶಾಲಾ ಮಕ್ಕಳು ಸೇರಿದಂತೆ ಶಿಕ್ಷಣ ಸಂಸ್ಥೆಗಳದ್ದು ಒಂದು ವರ್ಗ. ಇನ್ನಿತರೆ ಸಂಸ್ಥೆಗಳ ಸದಸ್ಯ ರಿಗೆ ಮತ್ತೊಂದು ವರ್ಗವನ್ನಾಗಿ ವಿಭಾಗಿಸಲಾಗುತ್ತದೆ. ಉದ್ಯಾನವನದ ಯೋಜನೆಗಳನ್ನು ಪ್ರಾರಂಭಿಸಲು ಉತ್ಸುಕರಾಗುವ ನಿವಾಸಿಗಳು ಹಾಗೂ ಇನ್ನಿತರರಿಗೆ ಇದನ್ನು ಆಯೋಜಿಸುವ ನ್ಯಾಶನಲ್ ಪಾರ್ಕ್ ನ ಸಿಬ್ಬಂದಿ ಮತ್ತು ಸ್ವಯಂಸೇವಕ ರಿಂದ, ತೋಟಗಾರಿಕೆ ಜ್ಞಾನ, ತೋಟಗಾರಿಕೆ ಕೌಶಲ್ಯಗಳು ಮತ್ತು ಸಲಹೆಗಳು. ಜೊತೆಗೆ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ.

ಇನ್ನೊಂದು ಇಲ್ಲಿನ ವಿಶೇಷವೆಂದರೆ, ಭಿನ್ನಾಭಿರುಚಿಯ ನಿವಾಸಿಗರಿಗೆ ಬಗೆ ಬಗೆಯ ತೋಟಗಳು ಇಲ್ಲಿ ತಲೆಯೆತ್ತಿವೆ.
ಬರ್ಡ್-ಅಟ್ರಾಕ್ಟಿಂಗ್ ಸಮುದಾಯ ಗಾರ್ಡನ್ಸ್, ಬಟರ್ ಫ್ಲೈ ಕಮ್ಯುನಿಟಿ ಗಾರ್ಡನ್ಸ್, ಡ್ರೈ ಕಮ್ಯುನಿಟಿ ಗಾರ್ಡನ್ಸ್
ಖಾದ್ಯಗಳನ್ನು ಬೆಳೆಸುವ ಸಮುದಾಯ ಗಾರ್ಡನ್ಸ್, ಫೆರ್ನರಿ ಕಮ್ಯೂನಿಟಿ ಗಾರ್ಡನ್ಸ್, ಪರಿಮಳಯುಕ್ತ ಸಮುದಾಯ ಉದ್ಯಾನಗಳು, ಹೀಲಿಂಗ್ ಸಮುದಾಯ ಗಾರ್ಡನ್ಸ್, ಗಿಡಮೂಲಿಕೆಗಳು ಮತ್ತು ಮಸಾಲೆಗಳು ಸಮುದಾಯ ಗಾರ್ಡನ್ಸ್, ಒಳಾಂಗಣ ಸಮುದಾಯ ಉದ್ಯಾನಗಳು., ಅಲಂಕಾರಿಕ ವಸ್ತುಗಳಿಗೆ ಸಂಬಂಧಿಸಿದ ಸಮುದಾಯ ಗಾರ್ಡನ್ಸ್…. ಜನರ ಆಸಕ್ತಿಗೆ ತಕ್ಕಂತೆ ಯೋಜನೆಗಳೇನೋ ಸಿದ್ಧವಾಗಿದೆ. ಆಯ್ಕೆ ಮಾತ್ರ ಇಲ್ಲಿನ ನಿವಾಸಿಗರದ್ದು. ಬೆಳೆದ ಪದಾರ್ಥಗಳಿಗೂ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿ ಮತ್ತಷ್ಟು ಪ್ರೋತ್ಸಾಹವನ್ನು ತುಂಬಲಾಗುತ್ತದೆ. ತೋಟಗಾರಿಕೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡವರು, ಸೇವೆಯಿಂದ ನಿವೃತ್ತಿಯಾದವರು , ಹಾಗೂ ಆಸಕ್ತ ಮಂದಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಇಲ್ಲಿನ ತೋಟಗಳು ಕೂಡ ಸಾರ್ವಜನಿಕ ಪಾರ್ಕ್ ರೀತಿಯಲ್ಲೂ ನಿರ್ಮಾಣಗೊಂಡಿರುತ್ತವೆ. ಸಾರ್ವಜನಿಕ ವೀಕ್ಷಣೆಗೆ ಸಮಯಗಳನ್ನು ಕೂಡ ಇಲ್ಲಿ ನಿಗದಿ ಪಡಿಸಲಾಗಿರುತ್ತದೆ. ಮತ್ತೆ ಕೆಲವು ಪಾರ್ಕ್ ಗಳಲ್ಲಿ ಜಾಗಿಂಗ್, ವಾಕಿಂಗ್ ಜೊತೆಗೆ ವಿಶ್ರಮಿಸಲು ಅಲ್ಲಲ್ಲಿ ಬೆಂಚ್ ಗಳ ವ್ಯವಸ್ಥೆ ಮಾಡಲಾಗಿರುತ್ತದೆ.
ನಮ್ಮ ಊರಿನ ಹಳ್ಳಿಯವರೇ ಸೀನಿಯರ್ ಈ ತೋಟಗಾರಿಕಾ ವಿಚಾರದಲ್ಲಿ. ಆದರೆ ಪಟ್ಟಣಗಳ ಪರಿಸ್ಥಿಯೆ ಬೇರೆ. ಮನೆಯಿಂದ ಹೊರ ನಡೆದರೆ ಪಕ್ಕದ ಮನೆ, ರಸ್ತೆಗಳು, ಪಾರ್ಕಿಂಗ್ ಮಾಡಿರುವ ಸಾಲು ಸಾಲು ವಾಹನಗಳದ್ದೇ ಚಿತ್ರಣ. ಹಾಗೇನಾದ್ರೂ ಖಾಲಿ ಜಾಗ ಇದ್ರೆ ಎಲ್ಲಕ್ಕಿಂತ ಮೊದಲು ಭರ್ತಿ ಆಗೋದು ಕಸಗಳಿಂದ. ಆದರೆ ನಮ್ಮ ಸುತ್ತಮುತ್ತಲಿನ ಪ್ರದೇಶ ಸುಂದರವಾಗಿ ಕಾಣಲು ಎಷ್ಟೊಂದು ಅವಕಾಶಗಳಿವೆ.

Leave a Reply