ಚಿಯರ್ಸ್-ಕುಡಿತ ಪರಮ ಧ್ಯಾನ

ಜಯರಾಮಚಾರಿ 

ರಪ್ಪಂತ ಬಾರಿನೊಳಗೆ ನುಗ್ಗಿ
ಥರ್ಟಿ ಸಿಕ್ಸ್ಟಿ ನೈಂಟಿ ಸರ್ರನೆ ಏರಿಸಿ
ಕಡ್ಲೆ ಬೀಜವೋ ಗೋಡಂಬಿಯೋ
ಕಡ್ಲೆಪುರಿಯೋ ಬಾಯಿಗೆ ಮುಕ್ಕಿ
ಇಲ್ಲ ಉಪ್ಪಿನಕಾಯಿ ನೆಕ್ಕಿ
ರೋಡಿಗೆ ಬಿದ್ದು ತೂರಾಡುವವರ
ಕಂಡರೆ ನನಗೆ ಎಲ್ಲಿಲ್ಲದ ಸಿಟ್ಟು
ಕೆಲವೊಮ್ಮೆ ಸಿಂಪತಿ
ಕೆಲವೊಮ್ಮೆ ವಾಕರಿಕೆ

ಕುಡಿತವೆಂದರೆ ಬರೀ ಕುಡಿತವಲ್ಲ
ಕುಡಿತ ಪರಮ ಧ್ಯಾನ

ವಿಸ್ಕಿ ಜಿನ್ನು
ರಮ್ಮು ಬ್ರಾಂದಿ
ವೋಡ್ಕ ಬೀರು
ವೈನು ಸೇಂದಿ
ಎಷ್ಟೆಲ್ಲ ಜೀವರಸಗಳಿವೆ
ದಿನಕ್ಕೊಮ್ಮೆ ಹೀರಿದರೂ
ವಾರಕ್ಕೊಮ್ಮೆ ಕಾಮನಬಿಲ್ಲು

ಕುಡಿಯಲಿಕ್ಕೆ ಮೊದ ಮೊದಲು
ಬೇಕಾದರೂ ಕಾರಣ
ಕಾಲಕ್ರಮೇಣ ಕುಡಿಯಬಹುದು ವಿನಾಕಾರಣ
ನೋವಿಗೂ ನಲಿವಿಗೂ
ಸಂಭ್ರಮಕ್ಕೂ ಸೂತಕಕ್ಕೂ
ಸಾಕ್ಷಿಯಾಗಬಹುದು
ಬಣ್ಣ ಬಣ್ಣದ ಬಾಟಲಿಗಳು

ಹಾಗೇ ನೋಡಿದರೆ
ಬಲದವರು ಎಡದವರು
ಪ್ರಗತಿಪರರು ಬುದ್ದಿಜೀವಿಗಳು
ಮೇಲಿನವರು ಕೆಳಗಿನವರು
ಆಸ್ತಿಕರು ನಾಸ್ತಿಕರು
ಶ್ರೀಮಂತರು ಬಡವರು
ಸಿನಿಮಾದವರು ಸಾಹಿತಿಗಳು ಕಮ್ಯೂನಿಷ್ಟರು
ಜೊತೆಗೆ ಗಂಡಸರು ಹೆಂಗಸರೂ
ಸಹ ಕುಡಿಯುತ್ತಾರೆ
ತಾರತಮ್ಯವ ತೊಡೆದು ಹಾಕುವ ದಿವ್ಯ ತೀರ್ಥ
ಏಕತೆಯ ಅದ್ವೀತಿಯ ಮೂರ್ತ

ಇರಲೀ
ಮೊದಲಿಗೆ ಹೇಳಿದೆ ನಾನು
ಈ ಕೌಂಟರು ಕುಡುಕರೆಂದರೆ
ನನಗೆ ಪರಮ ಸಿಟ್ಟು
ಯಾಕೆಂದರೆ
ಕುಡಿತ ಪರಮ ಪುಣ್ಯ ಕಾರ್ಯ
ಜಾತಿ ಧರ್ಮ ಸಿದ್ದಾಂತ ಕರ್ಮ
ಮರೆಸುವ ಪವಿತ್ರ ಪಾನ
ಕುಡಿತ ಪರಮ ಧ್ಯಾನ

ಕುಡಿಯಲಿಕ್ಕೆ ಸಿದ್ದತೆ ಬೇಕು
ಸಂಜೆ ಕುಡಿಯುವುದು
ಸುರಕ್ಷವೂ ಹೌದು ಸುಭಿಕ್ಷವೂ ಹೌದು
ಹೊತ್ತಲ್ಲದ ಹೊತ್ತಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೇ
ಕುಡಿಯುವುದು
ಅನಾರೋಗ್ಯಕರ ,ಅಸಭ್ಯ
ಮತ್ತು ಶಿಕ್ಷಾರ್ಹ ಅಪರಾಧ ನನ್ನಭಿಪ್ರಾಯ

ಕುಡಿಯಲು
ಜೀವಿಗಳು ಬೇಕು
ಕನಿಷ್ಟ ಪಕ್ಷ ಒಂದು ,ಗರಿಷ್ಟ ನಿಮ್ಮಿಷ್ಟ
ಡಾಬಾವೋ
ಪಬ್ಬೊ
ಬಾರಿನ ಬೆಂಚೋ
ರೂಮಿನ ಚಾಪೆಯೋ
ಸಮುದ್ರದ ದಂಡೆಯೋ
ರೋಡು ಬ್ರಿಡ್ಜು ಡ್ಯಾಮಿನ ಬದಿಯೋ
ಬಳಿಯೇ ಕೂರಬೇಕು

ಬ್ರಾಂಡಿಗಟಿದವರಿಗೆ ಬ್ರಾಂಡು
ಅಂಟದವರಿಗೆ ಮಿಕ್ಸು ಮಲ್ಟಿ ಬ್ರಾಂಡು
ಕೆಲವು ನಿರಪಾಯ ಕುಡುಕರಿಗೆ
ಬೀರೋ ಬ್ರೀಜರೋ ಸರಿ
ಕೊಕೊ ಕೋಲ ಪೆಪ್ಸಿ ಸಿಹಿ ಮಿಕ್ಸು
ಸ್ಪ್ರೈಟು ಹಲವರ ಫೆವರೆಟ್ಟು
ಸೋಡಾ ಕೆಲವರಿಗೆ
ಜ್ಯೂಸು ಪ್ರತಿಭಾವಂತರಿಗೆ
ಕಾಫಿ ಬೆರಕೆದಾರರು ಇದ್ದಾರೆ
ಎಲ್ಲಕ್ಕೂ ಮೀರಿ ಬೆಳದವರು
ನೀರು ಬಳಸುವವರು
ಅದೇ ಸರಿ
ನೀರು ಕೂಡ ಮದ್ಯದಂತೆ ನಿರ್ಮಲ

ಕುಡಿದರೆ ಖುಶಿ ಸಿಗಬೇಕು
ನಶೆ ಹತ್ತಬೇಕು
ಅಳುವುದು ತಪ್ಪಾದರೂ ಅಳುವುದರಲ್ಲಿ ತಪ್ಪಿಲ್ಲ
ನಗುವುದು ಕುಡುಕ ಧರ್ಮ
ಮರೆಯಬೇಕು
ಹಾಡಬೇಕು
ಕುಣಿಯಬೇಕು
ವಾದಿಸಬೇಕು
ಇದ್ಯಾವುದು ಇಲ್ಲದೇ ಮೌನದೀ ತೇಲುವುದು ಪರಮೋತ್ತಮ
ಪರಮ ಸುಖದ ತುತ್ತತುದಿ

ಕುಡಿದು
ಗಲಾಟೆ ಮಾಡುವುದು
ಕಿರುಚುವುದು
ಹೆಂಡರಿಗೆ ಬಾರಿಸುವುದು
ಕೊಲೆ ಮಾಡುವುದು
ಗಾಡಿ ಓಡಿಸುವುದು
ಕುಡಿತದ ಹಿರಿಮೆ ಕುಗ್ಗಿಸುತ್ತದೆ
ಕುಡುಕರ ಆತ್ಮಾಭಿಮಾನ ತಗ್ಗಿಸುತ್ತದೆ
ಕುಡಿದು ಹೀಗೆ ಮಾಡುವುದಕ್ಕಿಂತ
ಕುಡಿತ ಬಿಟ್ಟು ಹಾಳಾಗುವುದು ಒಳ್ಳೆಯದು
ಮತ್ತು ಕುಡುಕೋಪಕಾರಿ

ಕುಡಿಯಲು ಕೂತರೆ ಹೇಗೆ ಎದ್ದೇಳಲಾಗುವುದಿಲ್ಲವೋ
ಕುಡಿತದ ಕವನವೂ ಕೂಡ ಮುಗಿಯದು
ರೌಂಡು ಮೇಲೆ ರೌಂಡು
ಕುಡಿತ ಮುಗಿಯದ ಕವನ
ಮತ್ತೆ ಹೇಳುವೆ ಕುಡಿತ ಪರಮ ಧ್ಯಾನ

ಕೊನೆಗೆ,
ಕುಡಿತ ಕೆಟ್ಟದೆನುವವರಿಗೆ ನನ್ನ ನಮಸ್ಕಾರ
ಹೌದು ಸ್ವಾಮಿ ,
ಲಿಮಿಟ್ಟು ಮೀರಿ ಬೇರೇನೂ ಮಾಡದೇ ಕುಡಿಯುವುದು
ಇನ್ನೂ ಕುಡಿತದ ಲಿಮಿಟ್ಟು
ಅವರವರಿಗೆ ಬಿಟ್ಟಿದ್ದು
ಬಿಟ್ಟುಕೊಳ್ಳುವ ಸಾಮರ್ಥ್ಯಕ್ಕನುಸಾರವಾಗಿ.

ಮತ್ತೆ ಸಿಗೋಣ
ಬಾಟಲಿಯೊಂದಿಗೆ.

2 comments

Leave a Reply