‘ಕಡೇ ನಾಲ್ಕು ಸಾಲು’ಪುಸ್ತಕ ಬಿಡುಗಡೆ ಫೋಟೋ ಆಲ್ಬಮ್

ಮಹಿಳಾ ಲೋಕದ ದನಿ ‘ಕಡೇ ನಾಲ್ಕು ಸಾಲು: ಪ್ರೊ ಸಿ ಎನ್ ಆರ್
——
ಉಮಾ ಮುಕುಂದ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತೆ ಶಕುಂತಲೆಯ ದನಿಯನ್ನು ಪರಿಚಯಿಸಿದ್ದಾರೆ ಎಂದು ಖ್ಯಾತ ವಿಮರ್ಶಕರಾದ ಪ್ರೊ ಸಿ ಎನ್ ರಾಮಚಂದ್ರನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನಲ್ಲಿ ‘ಬಹುರೂಪಿ ಪ್ರಕಾಶನ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಮಾ ಮುಕುಂದ್ ಅವರ ‘ಕಡೇ ನಾಲ್ಕು ಸಾಲು’  ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೈನಂದಿನ ಬದುಕಿನ ಕ್ಷುದ್ರ ವಿವರಗಳನ್ನು ಸೂಕ್ಷ್ಮವಾಗಿ ಬರೆದಿರುವ ಉಮಾ ಮುಕುಂದ್ ಅವರ ಕವನಗಳು ಅಬ್ಬರವಿಲ್ಲದ ಸದಾ ಕಾಡುವ ಸಾಲುಗಳು. ಅವರ ಕಾವ್ಯದ ಕಡೇ ನಾಲ್ಕು ಸಾಲುಗಳು ಸದಾ ಹೊಸ ತಿರುವನ್ನು ನೀಡುತ್ತದೆ ಎಂದರು.
ಕೃತಿ ಕುರಿತು ಮಾತನಾಡಿದ ಸಾಹಿತಿ ಎಂ ಆರ್ ಕಮಲ ಅವರು  ಉಮಾ ಮುಕುಂದ್ ಕವಿತೆಗಳು ಸೂಕ್ಷ್ಮ ಮನಸ್ಸಿನ ಹೆಣ್ಣೊಬ್ಬಳು ಒಂದು ಜಗತ್ತಿಗೆ ಅಥವಾ ಬದುಕಿಗೆ ಮುಖಾಮುಖಿಯಾದ ಕ್ಷಣಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ತನ್ನೊಳಗಿಗೆ ಮುಖಾಮುಖಿಯಾಗುವ ಶಕ್ತ ಸಂಕಲನವನ್ನು ಉಮಾ ಕೊಟ್ಟಿದ್ದಾರೆ ಎಂದರು.
ಸಾಹಿತಿ ಜಿ ಎನ್ ಮೋಹನ್ ಮಾತನಾಡಿ ಕ್ಯಾಮೆರಾದಲ್ಲಿ ಕಾಣುವ ಲೋಕಕ್ಕೂ, ಕವಿತೆಯೆಂಬ ಕ್ಯಾಮೆರಾದಲ್ಲಿ ಕಾಣುವ ಲೋಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಉಮಾ ಮುಕುಂದ ಅವರು ಕಾವ್ಯವೆಂಬ ಕ್ಯಾಮೆರಾದ ಮೂಲಕ ಹೊಸ ಜಗತ್ತನ್ನು ಕಟ್ಟಿ ಕೊಟ್ಟಿದ್ದಾರೆ ಎಂದರು. ಉಮಾ ಮುಕುಂದ್ ಅವರು ಮಾತನಾಡಿ ನನ್ನ ಕವಿತೆಗಳು ನನ್ನೊಳಗೆ ಅಡಗಿದ್ದ ಬಹು ದಿನದ ಮಾತುಗಳು. ಛಾಯಾಗ್ರಹಣ ಲೋಕದ ಒಡನಾಟ ಇದ್ದ ಕಾರಣ ನನ್ನ ಗ್ರಹಿಕೆಗೆ ಭಿನ್ನ ತಿರುವು ಸಿಕ್ಕಿರಬಹುದು ಎಂದರು.
ಬಹುರೂಪಿ ಪ್ರಕಾಶನದ ಮುಖ್ಯಸ್ಥರಾದ ಶ್ರೀಜಾ ವಿ ಎನ್, ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

 

 

Leave a Reply