ಸಾಂಸ್ಕೃತಿಕ ಅಧಿಪತ್ಯವೂ ಸಂವೇದನೆಯ ಗೋಡೆಯೂ

ನಾ ದಿವಾಕರ


ಶ್ರೇಷ್ಠತೆಯ ವ್ಯಸನ-ಶುದ್ಧೀಕರಣದ ವ್ಯಾಧಿ

ಶಬರಿಮಲೆ ಅಯ್ಯಪ್ಪ ಮತ್ತೊಮ್ಮೆ ವಿವಾದದ ಕೇಂದ್ರವಾಗಿದ್ದಾನೆ. ದೇವರು ಮತ್ತು ಮತಧರ್ಮಗಳು ಮಾನವ ಸೃಷ್ಟಿಯಾಗಿರುವುದರಿಂದಲೇ ದೇವ ದೇವತೆಯರನ್ನು ಮತ್ತು ಮತಧರ್ಮಗಳನ್ನು ಮಾನವ ಸಮಾಜ ತನ್ನಿಚ್ಚೆಯಂತೆ ಬಳಸಿಕೊಳ್ಳುತ್ತಿದೆ. ಸಮಸ್ತ ಮನುಕುಲ ಪೂರ್ವ ನಿರ್ಧರಿತ ಮತಧರ್ಮಗಳ ಬುನಾದಿಯ ಮೇಲೆಯೇ ರೂಪುಗೊಂಡಿದೆ ಎಂದು ಭ್ರಮೆ ಸೃಷ್ಟಿಸುವ ವ್ಯವಸ್ಥಿತ ಸಂಚು ಕಾಲಾನುಕಾಲದಿಂದಲೂ ನಡೆಯುತ್ತಾ ಬಂದಿದೆ. ಇಸ್ಲಾಂ, ಕ್ರೈಸ್ತ, ಯಹೂದಿ, ಸಿಖ್ ಮತ್ತು ಹಿಂದೂ ಎಂದು ಕರೆಯಲ್ಪಡುವ ಮತಧರ್ಮಗಳು ಈ ಸಂಚಿನ ಭಾಗವಾಗಿಯೇ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಏಕ ದೇವತೆ, ದೇವದೂತ, ಪವಿತ್ರ ಗ್ರಂಥ ಮತ್ತು ದೈವಾಂಶ ಪುರುಷರ ಕಲ್ಪಿತ ಅಧಿಪತ್ಯದಲ್ಲಿ ಈ ಮತಧರ್ಮಗಳು ವಿಶ್ವದಾದ್ಯಂತ ತಮ್ಮದೇ ಆದ ನಿಯಮಗಳನ್ನೂ ರೂಪಿಸಿವೆ. ಹಾಗೆಯೇ ಮಾನವ ಸಮಾಜವನ್ನು ಸಾಂಸ್ಕೃತಿಕ ನೆಲೆಯಲ್ಲಿ, ಆಚರಣೆಗಳ ಚೌಕಟ್ಟಿನಲ್ಲಿ, ಸಂಪ್ರದಾಯಗಳ ಕಂದರದಲ್ಲಿ ಬಂಧಿಸುವ ಮೂಲಕ ತಮ್ಮ ಹಿಡಿತವನ್ನು ಬಿಗಿಪಡಿಸಿಕೊಳ್ಳುತ್ತಿವೆ. ಸಮಕಾಲೀನ ಸಂದರ್ಭದ ಸಮಾಜೋ ರಾಜಕೀಯ ಹಾಗೂ ಸಾಂಸ್ಕೃತಿಕ ಸಂದರ್ಭಗಳಲ್ಲಿ ನೋಡುವಾಗ ಮತಧರ್ಮಗಳ ಸೃಷ್ಟಿಯಲ್ಲೂ, ದೇವಾನುದೇವತೆಗಳ ಸೃಷ್ಟಿಯಲ್ಲೂ ಪುರುಷಾಧಿಪತ್ಯವೇ ಏಕೆ ಮುನ್ನೆಲೆಗೆ ಬರುತ್ತದೆ ಎನ್ನುವ ಸಂಕೀರ್ಣ ಪ್ರಶ್ನೆ ಉದ್ಭವಿಸುತ್ತದೆ.

ಪಿತೃ ಪ್ರಧಾನ ವ್ಯವಸ್ಥೆ ಮತ್ತು ಈ ವ್ಯವಸ್ಥೆ ಪೋಷಿಸಿಕೊಂಡೇ ಬಂದಿರುವ ಪುರುಷಾಧಿಪತ್ಯದ ಸಾಂಸ್ಕೃತಿಕ ರಾಜಕಾರಣ ಮತಧರ್ಮಗಳ ಉಗಮ ಕಾಲದಿಂದಲೂ ನಡೆದುಬಂದಿರುವುದನ್ನು ಎಲ್ಲ ಧರ್ಮಗಳ, ಎಲ್ಲ ದೇಶಗಳ ಪುರಾಣ ಕಥನಗಳಲ್ಲಿ, ಪವಿತ್ರ ಗ್ರಂಥಗಳಲ್ಲಿ, ವೀರಗಾಥೆಗಳಲ್ಲಿ, ಧಾರ್ಮಿಕ ಸಂಹಿತೆಗಳಲ್ಲಿ ಕಾಣಬಹುದು. ಭೂಮಿಯನ್ನು ಸ್ತ್ರೀಲಿಂಗ ಸ್ವರೂಪಿಯಾಗಿಯೇ ಎಲ್ಲ ಧರ್ಮಗಳಲ್ಲೂ ಪರಿಗಣಿಸಿದರೂ ಸಹ ಈ ಸ್ತ್ರೀ ಸ್ವರೂಪಿಯ ಸೂತ್ರಧಾರ ಪುರುಷನೇ ಆಗಿರುವುದನ್ನೂ ಇಲ್ಲಿ ಕಾಣಬಹುದು. ಪುರಾಣ ಕಥನಗಳಲ್ಲಿ ಕಂಡುಬರುವ ದೇವತೆಗಳು ಈ ಪುರುಷ ಸೂತ್ರಧಾರನ ಕೃಪೆಯಿಂದಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದನ್ನೂ ಸಹ ಇಲ್ಲಿ ಗಮನಿಸಬಹುದು. ರಾಮಾಯಣ ಮಹಾಭಾರತದಂತಹ ಬೃಹತ್ ಕಾವ್ಯಗಳಲ್ಲೂ ಸಹ ಸ್ತ್ರೀ ಪಾತ್ರಗಳು ಇಬ್ಬರು ಪುರುಷರ ನಡುವಿನ ಅಥವಾ ಎರಡು ಪುರುಷಾಧಿಪತ್ಯದ ನಡುವಿನ ಸಂಘರ್ಷದ ಕೊಂಡಿಯಾಗಿ ಕಂಡುಬರುವುದನ್ನು ಸೀತೆ ಮತ್ತು ದ್ರೌಪದಿಯ ಪಾತ್ರಗಳಲ್ಲಿ ಕಾಣಬಹುದು. ಸರ್ವಶಕ್ತ, ಸರ್ವಾಂತರ್ಯಾಮಿಯಾಗಿ ಇಡೀ ಜಗತ್ತನ್ನು ತನ್ನ ಅಧಿಪತ್ಯಕ್ಕೊಳಪಡಿಸುವ ದೇವರ ಪರಿಕಲ್ಪನೆಯಲ್ಲೇ ಮಹಿಳೆಯ ಅಸ್ಮಿತೆಯನ್ನು ನೇಪಥ್ಯಕ್ಕೆ ಸರಿಸುವ ಒಂದು ಸಂಚು ಇರುವುದನ್ನು ಬಹುಶಃ ಎಲ್ಲ ಮತಧರ್ಮಗಳ ಪುರಾಣ ಕಥನಗಳಲ್ಲೂ ಕಾಣಬಹುದು.

ಈ ಹಿನ್ನೆಲೆಯಲ್ಲಿ ನೋಡಿದಾಗ ಶಬರಿಮಲೆ ವಿವಾದ ಮತಧರ್ಮಗಳ ಸಾಂಸ್ಕೃತಿಕ ರಾಜಕಾರಣದ ಮತ್ತೊಂದು ವಿಸ್ತ್ರುತ ರೂಪದಂತೆ ಕಾಣುತ್ತದೆ. ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ವಿಭಿನ್ನ ಐತಿಹ್ಯಗಳಿವೆ. ಈ ಐತಿಹ್ಯಗಳ ಹಿಂದೆ ಹಲವಾರು ಕಥನಗಳಿವೆ. ಜನಪದ, ಬೌದ್ಧ, ಬುಡಕಟ್ಟು, ಪವಾಡ ಸದೃಶ ಹೀಗೆ ಹಲವಾರು ಮಜಲುಗಳಲ್ಲಿ ಅಯ್ಯಪ್ಪ ವ್ಯಾಖ್ಯಾನಕ್ಕೊಳಗಾಗಿದ್ದಾನೆ. ಆದರೆ ಭಾರತದಲ್ಲಿ ಶತಮಾನಗಳಿಂದಲೂ ಮತಧರ್ಮ ಮತ್ತು ಸಾಂಸ್ಕೃತಿಕ ಎಲ್ಲ ನೆಲೆಗಳ ಮೇಲೆ ತನ್ನ ಅಧಿಪತ್ಯ ಸಾಧಿಸಿರುವ ವೈದಿಕ ಸಂಪ್ರದಾಯಗಳು ಪ್ರಸ್ತುತ ಶಬರಿಮಲೆಯ ಒಡೆಯನ ಮೇಲೆ ತನ್ನ ಅಧಿಕಾರ ಸ್ಥಾಪಿಸಿವೆ. ಅಯ್ಯಪ್ಪನನ್ನು ಒಬ್ಬ ಬ್ರಹ್ಮಚಾರಿ ಎಂದು ಭಾವಿಸುವ ಈ ಮನಸುಗಳು ಅಯ್ಯಪ್ಪನ ದರ್ಶನ ಮಾಡುವ ಮಾನದಂಡಗಳನ್ನು ಸಹ ನಿಗದಿಪಡಿಸಿದ್ದಾರೆ. ಈ ಮಾನದಂಡಗಳಿಗೆ ಅಯ್ಯಪ್ಪ ಸ್ವಾಮಿಯ ಅನುಮತಿ, ಅನುಮೋದನೆ, ಸಮ್ಮತಿ ಇದೆಯೋ ಇಲ್ಲವೋ ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ. ಆದರೆ ಈ ಮಾನದಂಡಗಳನ್ನು ನಿರ್ಧರಿಸುವವರು ಮಾತ್ರ ವೈದಿಕ ಸಂಸ್ಕೃತಿಯ ಪ್ರತಿಪಾದಕರು ಎನ್ನುವುದು ಖಚಿತ.

ಪ್ರಸ್ತುತ ವಿವಾದದ ಕೇಂದ್ರ ಬಿಂದು ಮಹಿಳೆಯಲ್ಲಿ ಉಂಟಾಗುವ ಜೈವಿಕ ಕ್ರಿಯೆಯೇ ಆಗಿದೆ. ವಿಶೇಷ ಎಂದರೆ ಈ ನಿಯಮ ಎಲ್ಲ ಬ್ರಹ್ಮಚಾರಿ ದೇವರುಗಳಿಗೂ ಅನ್ವಯಿಸುವುದಿಲ್ಲ. ಶಬರಿಮಲೆಯ ಅಯ್ಯಪ್ಪನ ಹಿಂದೆ ರೂಪಿಸಲಾಗಿರುವ ಕಥನಗಳು ಇಂತಹ ನಿಯಮಗಳಿಗೆ ಕಾರಣವಾಗಿವೆ. ಇದು ದೈವ ಪ್ರೇರಿತವೋ, ಮಾನವ ನಿರ್ಮಿತವೋ ಎನ್ನುವುದು ಪ್ರಸ್ತುತವೇನಲ್ಲ. ಏಕೆಂದರೆ ಜಗತ್ತಿನ ಎಲ್ಲ ಮತಧರ್ಮಗಳ ಆಚರಣೆಯಲ್ಲಿ ಕಂಡುಬರುವ ಎಲ್ಲ ನಿಯಮಗಳೂ ಮಾನವ ನಿರ್ಮಿತವೇ ಆಗಿದೆ. ಮಾನವ ಮತ್ತು ದೇವರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಪುರೋಹಿತóಶಾಹಿ ವರ್ಗ ಮತ್ತು ಈ ವರ್ಗಕ್ಕೆ ಒಂದು ಪಾವಿತ್ರ್ಯವನ್ನು ಕಲ್ಪಿಸಿ ಪೋಷಿಸಿಕೊಂಡೇ ಬಂದಿರುವ ವೈದಿಕ ಮನಸುಗಳು ಈ ನಿಯಮಗಳನ್ನು ರೂಪಿಸುತ್ತಾ, ಕಾಲದಿಂದ ಕಾಲಕ್ಕೆ ಬದಲಾವಣೆಗೊಳಪಡಿಸುತ್ತಾ ಬಂದಿವೆ. ರಾಜಪ್ರಭುತ್ವದ ಕಾಲಘಟ್ಟದಲ್ಲಿ ರಾಜಮಹಾರಾಜರುಗಳು ಇದರ ಉಸ್ತುವಾರಿ ವಹಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವದ ಕೃಪಾಕಟಾಕ್ಷದಲ್ಲಿರುವ ಸಾಂಸ್ಕೃತಿಕ ಸಂಸ್ಥೆಗಳು ವಹಿಸುತ್ತಿವೆ. ಹಾಗಾಗಿಯೇ ಇಂತಹ ಸಂದರ್ಭಗಳಲ್ಲಿ ಜಾತಿ ನಗಣ್ಯವಾಗುತ್ತದೆ, ವೈದಿಕ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಎಲ್ಲ ಜಾತಿಗಳೂ, ಸ್ತ್ರೀ ಪುರುಷರೂ, ಎಲ್ಲ ಸಮುದಾಯಗಳೂ ಇಂತಹ ನಿಯಮಗಳಿಗೆ ಬದ್ಧರಾಗಿರುತ್ತಾರೆ.

ಕೇರಳದ ಮಹಿಳೆಯರು 620 ಕಿಲೋಮೀಟರ್ ವ್ಯಾಪ್ತಿಯಲ್ಲಿ 50 ಲಕ್ಷ ಸಂಖ್ಯೆಯಲ್ಲಿ ನಿರ್ಮಿಸಿದ ಮಹಾಗೋಡೆ ಈ ಮನಸುಗಳನ್ನು ಕಂಗೆಡಿಸಿದೆ. ಶತಮಾನಗಳಿಂದ ಬೇರುಬಿಟ್ಟಿರುವ ಶ್ರೇಷ್ಠತೆಯ ವ್ಯಸನಕ್ಕೆ ಶರಣಾಗಿರುವ ಸಾಂಪ್ರದಾಯಿಕ ಶಕ್ತಿಗಳು ಈ ಮಹಾಗೋಡೆಯ ಎರಡು ಇಟ್ಟಿಗೆಗಳು ದೇವಾಲಯ ಪ್ರವೇಶಿಸಿದ್ದರಿಂದ ಅಯ್ಯಪ್ಪನ ಸನ್ನಿಧಿ ಮಲಿನವಾಯಿತೆಂದು ಶುದ್ಧೀಕರಿಸಿವೆ. ಇಲ್ಲಿ ಯಾವುದು ಶ್ರೇಷ್ಠ ಯಾವುದು ಮಲಿನ ಎನ್ನುವ ಪ್ರಶ್ನೆಗಿಂತಲೂ ದೈವ ಸನ್ನಿಧಿಯೊಂದು ಹೇಗೆ ಮಲಿನವಾಗುತ್ತದೆ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಶ್ರೇಷ್ಠತೆಯ ಮನೋಭಾವ ಭಾರತೀಯ ಸಮಾಜಕ್ಕೆ ಶತಮಾನಗಳಿಂದಲೂ ಅಂಟಿರುವ ಒಂದು ಸಾಂಕ್ರಾಮಿಕ ರೋಗ. ಭಾರತದ ಜಾತಿ ವ್ಯವಸ್ಥೆಯ ಅಂತಃಸತ್ವವೂ ಸಹ ಇದೇ ಶ್ರೇಷ್ಠತೆಯಲ್ಲೇ ಅಡಗಿದೆ. ಸಮಾಜದ ಒಂದು ವರ್ಗ ಮತ್ತೊಂದು ವರ್ಗವನ್ನು ಕೀಳರಿಮೆಯಿಂದ ನೋಡುವ ವಿಕೃತ ಪರಂಪರೆಗೆ ಅಧಿಕೃತ ಮನ್ನಣೆ ನೀಡಲು ಶ್ರೇಷ್ಠತೆಯ ಪರಂಪರೆ ನೆರವಾಗುತ್ತದೆ. ಜಾತಿ, ಧರ್ಮ ಮತ್ತು ವರ್ಗಗಳ ನೆಲೆಯಲ್ಲಿ ಈ ಶ್ರೇಷ್ಠತೆಯ ಪರಿಕಲ್ಪನೆ ಏಕರೂಪಿಯಾಗಿಲ್ಲವಾದರೂ ಮಹಿಳೆಯರಿಗೆ ಸಂಬಂಧಿಸಿದಂತೆ ಎಲ್ಲ ಜಾತಿ, ವರ್ಗ ಮತ್ತು ಧರ್ಮಗಳಲ್ಲೂ ಒಂದೇ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ. ಪಿತೃಪ್ರಧಾನ ವ್ಯವಸ್ಥೆ ಪೋಷಿಸುವ ಪುರುಷಾಧಿಪತ್ಯ ಈ ಶ್ರೇಷ್ಠತೆಗೆ ತನ್ನದೇ ಆದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಂದರ್ಭಿಕ ವ್ಯಾಖ್ಯಾನವನ್ನು ನೀಡುತ್ತಲೇ ಬಂದಿದೆ.

ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಶುದ್ಧೀಕರಣ ಕಾರ್ಯ ನಡೆಸಿದ ಕೆಲವು ವೈದಿಕ ಮನಸುಗಳನ್ನು ಸಾಂಕೇತಿಕವಾಗಿಯೇ ನೋಡುವುದು ಒಳಿತು. ಏಕೆಂದರೆ ವೈದಿಕವಲ್ಲದ ಪುರುಷ ಸಮಾಜವೂ ಸಹ ಇದೇ ರೀತಿಯ ಶುದ್ಧೀಕರಣವನ್ನು ಬೌದ್ಧಿಕ ನೆಲೆಯಲ್ಲಿ ಮಾಡುತ್ತಿರುತ್ತದೆ. ಕೇರಳ ಮಹಿಳೆಯರ ಮಹಾಗೋಡೆ ಕೇವಲ ಸಂಪ್ರದಾಯದ ವಿರುದ್ಧ ನಡೆದ ಸಂಘರ್ಷವಲ್ಲ ಅಥವಾ ಕೇವಲ ಮಹಿಳೆಯರ ಹಕ್ಕುಗಳ ಪ್ರತಿಪಾದನೆಯಲ್ಲ. ಇದು ಹೆಣ್ತನ ಮತ್ತು ಹೆಣ್ಣಿನ ಘನತೆಯ ಪ್ರಶ್ನೆ. ಹೆಣ್ತನವನ್ನೇ ಪ್ರಶ್ನಿಸುವ ಯಾವುದೇ ಸಂಪ್ರದಾಯವೂ ಮಾನವ ಸಮಾಜದಲ್ಲಿ ಇರಲು ಅರ್ಹತೆ ಪಡೆಯುವುದಿಲ್ಲ ಎನ್ನುವುದನ್ನು ಅಯ್ಯಪ್ಪ ಭಕ್ತರೇ ಅಲ್ಲ ಎಲ್ಲ ದೈವಭಕ್ತರೂ ಅರಿಯುವಂತೆ ಮಹಾಗೋಡೆ ನಿರ್ಮಾಣವಾಗಿದೆ. ಇಲ್ಲಿ ಅಯ್ಯಪ್ಪ ನಿಮಿತ್ತ ಮಾತ್ರ. ಈ ದಿಟ್ಟ ನಿಲುವನ್ನು ಸಹಿಸಿಕೊಳ್ಳಲಾರದ ಮನಸುಗಳು ಶುದ್ಧೀಕರಣದಲ್ಲಿ ತೊಡಗಿವೆ. ಹಾಗಾಗಿಯೇ ವೈದಿಕ ಮನಸುಗಳು ಆಸ್ತಿಕತೆ ನಾಸ್ತಿಕತೆಯನ್ನು ಮುನ್ನೆಲೆಗೆ ತಂದಿವೆ. ದೇವಾಲಯ ಪ್ರವೇಶಿಸಿದ ಮಹಿಳೆಯರು ನಿಜವಾದ ಅಯ್ಯಪ್ಪ ಭಕ್ತರೇ ಎಂಬ ಅಪ್ರಬುದ್ಧ ಪ್ರಶ್ನೆಗಳು ಸಂಪ್ರದಾಯವಾದಿಗಳಿಂದ ಕೇಳಿಬಂದಿವೆ.

ಇಲ್ಲಿ ಪ್ರಶ್ನೆ ಇರುವುದು ದೈವ ಭಕ್ತಿಯಲ್ಲ ಅಥವಾ ದೇವರಲ್ಲಿನ ನಂಬಿಕೆಯೂ ಅಲ್ಲ. ಇದು ಹೆಣ್ಣು ತನ್ನ ಅಸ್ತಿತ್ವ ಮತ್ತು ಘನತೆಯನ್ನು ಎತ್ತಿಹಿಡಿಯಲು ಇರುವ ಸಾಂಪ್ರದಾಯಿಕ ಅಡ್ಡಗೋಡೆಗಳನ್ನು ಭಗ್ನಗೊಳಿಸುವ ಒಂದು ಪ್ರಯತ್ನ. ಇದನ್ನು ಅರಿತೇ ಧರ್ಮಸ್ಥಳದ ಹೆಗ್ಡೆ, ಪೇಜಾವರದ ಮಹನೀಯರು ತಮ್ಮ ಎಡಬಿಡಂಗಿ ನಿಲುವನ್ನು ವ್ಯಕ್ತಪಡಿಸಿದ್ದಾರೆ. “ ಮಹಿಳೆಯರು ದೇವಾಲಯ ಪ್ರವೇಶಿಸುವುದು ತಪ್ಪೇನಲ್ಲ ಆದರೆ ಸಂಪ್ರದಾಯವನ್ನು ಅನುಸರಿಸಬೇಕಲ್ಲವೇ ? ” ಈ ಪ್ರಶ್ನೆ ಸಾರ್ವಜನಿಕ ವಲಯದಲ್ಲೂ ಕೇಳಿಬಂದಿದೆ. ಆದರೆ ಈ ಸಂಪ್ರದಾಯವನ್ನು ರೂಪಿಸಿರುವುದು ಯಾರು ? ಮಹಿಳೆಯಲ್ಲಿ ಸಂಭವಿಸುವ ಜೈವಿಕ ಕ್ರಿಯೆಯೊಂದು ಆಕೆಯನ್ನು ಮೈಲಿಗೆ ಎಂದು ಪ್ರತ್ಯೇಕಿಸುವಂತೆ ಮಾಡುವ ವಿಕೃತ ಸಂಪ್ರದಾಯದ ಹರಿಕಾರರು ಪೇಜಾವರರಲ್ಲ ಅಥವಾ ಹೆಗ್ಡೆಯವರಲ್ಲ. ಇದು ಪುರುಷಪ್ರಧಾನ ಸಮಾಜದ ಸಾಂಸ್ಕೃತಿಕ ಅಧಿಪತ್ಯದ ಒಂದು ನಿಯಮ. ಇದು ಕೌಟುಂಬಿಕ ನೆಲೆಯಲ್ಲೂ ಹೀಗೆಯೇ ವ್ಯಕ್ತವಾಗುತ್ತಿದ್ದರೂ ಸುಶಿಕ್ಷಿತರಲ್ಲೂ ಸ್ವೀಕೃತವಾಗಿರುವುದನ್ನೂ ಗಮನಿಸಬಹುದು.

ಅಯ್ಯಪ್ಪ ಅಥವಾ ಹನುಮ ಅಥವಾ ಮತ್ತಾವುದೋ ಬ್ರಹ್ಮಚಾರಿ ದೇವರು ಇಲ್ಲಿ ಅಪ್ರಸ್ತುತ. ಪ್ರಸ್ತುತ ಎನಿಸುವುದು ಮಾನವ ಘನತೆ ಮತ್ತು ಸಂವೇದನೆ. ಮಹಿಳೆಯ ಅಸ್ತಿತ್ವ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ. ಜಾತಿ, ಮತಧರ್ಮ, ವರ್ಗಗಳ ಗೋಡೆಗಳನ್ನು ದಾಟಿ ಮಹಿಳೆಯರನ್ನು ಸಮಾನತೆಯಿಂದ ಕಾಣುವ ಆಶಯವನ್ನು ಕೇರಳದ ಮಹಾಗೋಡೆಯಲ್ಲಿ ಕಾಣಬಹುದಾಗಿತ್ತು. ಆದರೆ ಸಾಂಪ್ರದಾಯಿಕ ಸಮಾಜ ಮಾತ್ರವೇ ಅಲ್ಲ ಅಸಾಂಪ್ರದಾಯಿಕ ಎನ್ನಬಹುದಾದ ಆಧುನಿಕ ಸಮಾಜವೂ ಸಹ ಈ ಕಾಣ್ಕೆಯನ್ನು ಹೊಂದದಿರುವುದು ದುರಂತ. ತಮ್ಮ ಶ್ರೇಷ್ಠತೆಯನ್ನು ಸಂರಕ್ಷಿಸಲು ಕೆಳಸ್ತರದ ಪ್ರತಿಯೊಂದು ಸ್ಥಾವರ ರೂಪಿ ವ್ಯವಸ್ಥೆಯನ್ನೂ ದಮನಿಸುತ್ತಲೇ ಇರುವ ಮನಸುಗಳಿಗೆ ಶುದ್ಧೀಕರಣ ಎನ್ನುವ ಪ್ರಕ್ರಿಯೆ ತೊಳೆದುಹಾಕುವ ಸಹಜ ಕ್ರಿಯೆಯಾಗಿ ತೋರುತ್ತದೆ. ಆದರೆ ಸಮಾಜದಲ್ಲಿ ಜಂಗಮ ಸ್ವರೂಪಿ ಚಿಂತನೆಗಳನ್ನು ತೊಳೆದುಹಾಕಲಾಗುವುದಿಲ್ಲ. ಅಳಿಸಿಹಾಕಲೂ ಆಗುವುದಿಲ್ಲ ಎನ್ನುವುದನ್ನು ಇತಿಹಾಸವೇ ನಿರೂಪಿಸಿದೆ. ಕೇರಳದ ಮಹಾಗೋಡೆ ಒಂದು ದಿಟ್ಟ ನಿದರ್ಶನವಷ್ಟೆ.

Leave a Reply