ಅಣ್ಣ ಸ್ನೇಹಿತರಿಗೆ ಬೆಲ್ಲವಿದ್ದಂತೆ..

ಮೊನ್ನೆ ಮೊನ್ನೆ ಕೆರೆಕೋಣದಲ್ಲಿ ‘ಸಹಯಾನ ಸಾಹಿತ್ಯೋತ್ಸವ’ವನ್ನು ಯಶಸ್ವಿಯಾಗಿ ಮಾಡಿದೆವು. ಅಣ್ಣನಿಗೆ ಪ್ರಿಯವಾಗುವ ಹಾಗೆ ಹೆಚ್ಚು ವಿದ್ಯಾರ್ಥಿಗಳು- ಯುವಜನರು ಪಾಲ್ಗೊಂಡ ಖುಷಿ. ಅದರಲ್ಲೂ ಸಹಯಾನವನ್ನು ಉದ್ಘಾಟಿಸಿದ ಪ್ರಿಯ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಪಾಲ್ಗೊಂಡಿದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ.

ಡಾ. ಬಿಳಿಮಲೆಯವರು, ಡಾ. ಶರ್ಮ ಅವರು, ಡಾ. ಕೆ. ಶರೀಫಾ ಅವರು ಪ್ರಕಾಶ ಕಡಮೆ, ಎಂ. ಜಿ. ಹೆಗಡೆ, ಎನ್. ಆರ್. ನಾಯಕ, ಜಿ. ಯು. ಭಟ್ ಸರಸ್ವತಿ ಮೇಡಂ… ಹೀಗೆ ಅಂದು ಕಾರ್ಯಕ್ರಮಕ್ಕೆ ಬಂದ ಬಹುತೇಕ ಅತಿಥಿಗಳು ಅಣ್ಣನ ಗೆಳೆಯರು, ಸಮಕಾಲೀನರು ಮತ್ತು ಆತನ ಪ್ರಭಾವಕ್ಕೆ ಒಳಗಾದವರೆ. ಈ ವರೆಗೆ 9 ಸಹಯಾನ ಉತ್ಸವಗಳು ನಡೆದವು. ಅಲ್ಲಿ ಅಣ್ಣನ ನೆನಪಿನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಹಲವರು ಬಂದು ಹೋಗಿದ್ದಾರೆ. ಅವರೆಲ್ಲರ ಪ್ರೀತಿ ಅಣ್ಣಗಳಿಸಿದ ಆಸ್ತಿ.

ಅಣ್ಣ ಗಳಿಸಿಕೊಂಡ ಸ್ನೇಹ ವಲಯ ಬಹು ದೊಡ್ಡದು. ಅದು ಅಣ್ಣನಿಗೆ ಮಾತ್ರ ಸಾಧ್ಯವೆನ್ನಬಹುದಾದ ಅವನ ಗುಣಕ್ಕೆ ಕೈಗನ್ನಡಿ. ಆತನ ಸ್ನೇಹವಲಯದಲ್ಲಿ ಆತನ ಸಮವಯಸ್ಸಿನವರು ಮಾತ್ರ ಇರಲಿಲ್ಲ. ಸಾಮಾನ್ಯವಾಗಿ ಸ್ನೇಹ ಸಮಾನ ವಯಸ್ಕರು, ಸಮಾನ ಆಸಕ್ತರು, ಸಹೋದ್ಯೋಗಿಗಳು, ಸಮಾನ ಸ್ಥಿತಿಯವರು, ಸಮಾನ ಸಂತ್ರಸ್ತರು ಇದ್ದರು.

ಅಣ್ಣನ ಸ್ನೇಹ ಬಳಗಕ್ಕ್ಕೆ ಯಾವ ಬೇಲಿಯೂ ಇರಲಿಲ್ಲ. ಆತನಿಗಿಂತ ತೀರಾ ಹಿರಿಯರಾದ ಎಸ್.ಆರ್. ನಾರಾಯಣರಾವ್, ಗೌರೀಶ ಕಾಯ್ಕಿಣಿ, ಅಕಬರ ಅಲಿಯವರಿಂದ ಪ್ರಾರಂಭವಾಗಿ ಅತ್ಯಂತ ಕಿರಿಯರಾದ ಮಾಸ್ತಿ ಗೌಡ, ಶ್ರೀಪಾದ, ಕಿರಣ, ಶಾಂತಾರಾಮ, ಶಂಕರ ಸಿ.ಎ., ಗಣಪತಿ, ಕೃಷ್ಣ ನಾಯಕ, ಡಿ.ರಾಮಪ್ಪ, ಅನಂತ ನಾಯ್ಕ, ಮಮತಾ, ಅವನ ಓರಗೆಯವರಾದ ಕೆರೆಮನೆ ಶಂಭು ಹೆಗಡೆ, ಗೋವಿಂದ ಹೆಗಡೆ ಕಲ್ಬಾಗ, ವಿಷ್ಣು ನಾಯ್ಕ, ಶಾಂತಾರಾಮ ನಾಯ್ಕ ಹಿಚ್ಕಡ, ಜಿ ಎಸ್ ಅವಧಾನಿ, ಅಮ್ಮೆಂಬಳ ಅವರಂತ ಜಿಲ್ಲೆಯ ಸಾಹಿತಿಗಳು/ಕಲಾವಿದರು, ನಮ್ಮೂರ ಅನಕ್ಷರಸ್ತ ದಲಿತ ಹೋಡ್‍ಪುತ್ತು, ಅನಕ್ಷರಸ್ತರಾದ ಶೇಸು, ತಾಳಮದ್ದಲೆಯ ಜೊತೆಗಾರ ಬಿಳಿಗಣಪತಿ, ಮಾಬ್ಲ ನಾಯ್ಕ, ಗಜಾನನ, ಬಾಲ್ಯದ ಜೊತೆಗಾರ ಬಿ.ವಿ. ಭಂಡಾರಿ, ದೀನು, ಜಿ.ವಿ. ಹೆಗಡೆ…… ಹೀಗೆ ಸಾವಿರ ಹೆಸರುಗಳನ್ನು ಹೇಳಬಹುದು.

ಅವನ ಬಾಲ್ಯದಿಂದಲೇ ಇದನ್ನು ಪ್ರಾರಂಭಿಸುವುದಿದ್ದರೆ ತಟ್ಟನೆ ನೆನಪಾಗುವ ಒಂದು ಹೆಸರು ಬಿ.ವಿ. ಭಂಡಾರಿ (ಬಾಬುರಾವ್ ಭಂಡಾರಿ). ಅವರೂ ನಮ್ಮೂರಿನವರೆ. ಮನೆಯಲ್ಲಿ ಒಂದು ಸಣ್ಣ ಅಣ್ಣನ ಮೂರ್ತಿ ಇದೆ. ಬಂದವರೆಲ್ಲ ಬೆಕ್ಕಸ ಬೆರಗಾಗಿ ಇದನ್ನು ನೋಡುತ್ತಾರೆ. ಹೂಬೇಹೂಬಾಗಿ ಇಂತದ್ದೊಂದು ಮೂರ್ತಿ ಮಾಡಲು ಹೇಗೆ ಸಾಧ್ಯ? ಎಂದು ಹಲವರು ಕೇಳುತ್ತಾರೆ. ‘ಇಂತದ್ದೊಂದು ಮೂರ್ತಿ ಸಿದ್ಧಪಡಿಸುವದಾದರೆ ಸಾವೂ ಖುಷಿಯ ಸಂಗತಿಯೆ.’ ಎಂದು ಕೆಲವರು ಹೇಳಿದ್ದಿದೆ.

“ಈ ಮೂರ್ತಿ ಮಾಡಿದ ಬಿ.ವಿ. ಭಂಡಾರಿ ಮತ್ತು ಅಣ್ಣನ ಸ್ನೇಹ ಅಂತಹದ್ದು. 70 ವರ್ಷಗಳ ಅವರ ಸ್ನೇಹದ ಫಲ ಇದು. ಅಣ್ಣನ ಪ್ರತಿಯೊಂದು ನಡೆ ಬಿ.ವಿ.ಯವರಿಗೆ, ಬಿ. ವಿಯವರ ನಡೆ ಅಣ್ಣನಿಗೆ ಪರಿಚಿತವಿತ್ತು” ಎನ್ನುತ್ತೇನೆ. ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ಅವರೊಂದಿಗಿನ ಅಣ್ಣನ  ಸ್ನೇಹದ ಬಗ್ಗೆ ಒಂದೆರಡು ಮಾತು.

ಬಿ.ವಿಯವರಿಗೆ ನಾವು ಅಪ್ಪಚ್ಚಿ ಎನ್ನುತ್ತಿದ್ದೆವು. ದೂರದ ಸಂಬಂಧಿ ಕೂಡ. ಮೊದಲು ಈತ ಅಣ್ಣನಿಗೆ ರೋಹಿದಾಸ ಭಾವ ಎನ್ನುತ್ತಿದ್ದನಂತೆ. ನಂತರ ಆತ ಅಣ್ಣನಿಗೆ ಆರ್. ವಿ ಎಂದು ಕರೆಯುತ್ತಿದ್ದ. ಅಣ್ಣ ಅವನಿಗೆ ಬೀ.ವಿ ಎಂದು ಕರೆಯುತ್ತಿದ್ದ. ಆತನ ಹೆಂಡತಿ ನಮಗೆಲ್ಲ ಸಣ್ಣತ್ತೆ. ಅಣ್ಣನಿಗೆ ಆಕೆ ಚೆಚ್ಚ. ಆತನ ಚಿಕ್ಕಪ್ಪನ ಮಗಳು. ಅಣ್ಣನಿಗೆ ಆಕೆ ದಾಸಣ್ಣ ಅಂತ ಕರೆಯುತ್ತಿದ್ದಳು. ಅಪ್ಪಚ್ಚಿಯ ಮತ್ತು ಅಣ್ಣನ ಕೂದಲ ಸ್ಟೈಲ್ ಒಂದೇ ರೀತಿ ಇರುವುದರಿಂದ, ಯಾವಾಗಲೂ ಇಬ್ಬರೂ ಹೆಗಲಿಗೊಂದು ಬಟ್ವಿ (ಹೆಗಲ ಚೀಲ) ಹಾಕುವುದರಿಂದ ಅಪರೂಪಕ್ಕೆ ನೋಡುವವರಿಗೆ ಒಂದೇ ರೀತಿ ಕಾಣುತ್ತಿದ್ದರು. ಹಲವರು ಇವರಿಬ್ಬರನ್ನು ಹಲವರು ಅಣ್ಣ -ತಮ್ಮ ಅಂದುಕೊಂಡಿದ್ದೂ ಇದೆ.

ಒಮ್ಮೆ ಯಾರೋ ಒಬ್ಬ ಆಗುಂತಕರು ಅಪ್ಪಚ್ಚಿಗೆ ಭೇಟಿಯಾಗಿ, “ನಿನ್ನೆ ನಿಮ್ಮ ಭಾಷಣ ತುಂಬಾ ಚೆನ್ನಾಗಿತ್ತು, ಖುಷಿ ಆಯ್ತು” ಅಂತೆಲ್ಲಾ ಹೇಳಿದರಂತೆ. ಈತ ಕಂಗಾಲು. ತಕ್ಷಣ ಸುಧಾರಿಸಿಕೊಂಡು ನಗಾಡಿ ಬಂದಿರಬೇಕು. ಪಾಪ, ಬಂದವರು ಇವನನ್ನೇ ಆರ್.ವಿ. ಭಂಡಾರಿ ಎಂದು ತಿಳಿದು – ಯಾವುದೋ ಕಾರ್ಯಕ್ರಮದಲ್ಲಿ ಅಣ್ಣನ ಭಾಷಣ ಕೇಳಿ – ಹೊಗಳಿ ಹೋಗಿದ್ದನ್ನು ಆತ ಹೇಳುತ್ತಿದ್ದ.

ಅಣ್ಣ ಶಾಲಾ ಶಿಕ್ಷಕನಾಗಿರುವಾಗ ಮಾಡುವ ಹಲವು ಶೈಕ್ಷಣಿಕ ಪ್ರಯೋಗಗಳಿಗೆ ಚಿತ್ರ ಬಿಡಿಸಿ ಕೊಡುವ, ಚಾರ್ಟ್ ಸಿದ್ಧಪಡಿಸಿಕೊಡುವ ಕೆಲಸವನ್ನು ಬಿ.ವಿ. ಯವರು ಮಾಡುತ್ತಿದ್ದರು. ಆನಂತರ ಅವರ ಮಗ ಹರೀಶ – ಆತ ನನ್ನ ತರಗತಿಯವನೆ – ಚಿತ್ರ ಬಿಡಿಸಿಕೊಡುತ್ತಿದ್ದ. ಅಪ್ಪ ಮಗ ಇಬ್ಬರೂ ಅತ್ಯುತ್ತಮ ಚಿತ್ರಕಾರರು, ಮಣ್ಣಿನ ಮೂರ್ತಿ ಮಾಡುವುದರಲ್ಲಿ ಸಿದ್ಧಹಸ್ತರು, ತಬಲಾ, ಮೃದಂಗ, ಪಂಚವಾದ್ಯ ಹೀಗೆ ಎಲ್ಲದಲ್ಲಿಯೂ ಗತಿ ಉಳ್ಳವರು.

ಬಿ.ವಿ. ಯವರು ಅಲ್ಲೇ ಹತ್ತಿರದ ತೊಳಸಾಣೆಯಲ್ಲಿ ಶಿಕ್ಷಕರಾಗಿದ್ದರು. ಅದು ಕುಣಬಿ ಮರಾಠಿಗರು ಹೆಚ್ಚಿರುವ ಊರು. ಕುಣಬಿಗಳ ವೃತ್ತಿ ವ್ಯವಸಾಯದೊಂದಿಗೆ ಬೇಟೆ ಕೂಡ ಆಗಿತ್ತು. 40-50 ವರ್ಷಗಳ ಹಿಂದೆ ಸಾಕಷ್ಟು ಪ್ರಾಣಿಗಳು ಕಾಡಿನಲ್ಲಿ ಇದ್ದವು. ತಿಂಗಳಿಗೆರಡು ಬಾರಿಯಾದರೂ ಅವರು ಬೇಟೆ ಆಡಿದ ಪ್ರಾಣಿಯ ಮಾಂಸವನ್ನು ಮಾಸ್ತರರ ಪಾಲೆಂದು ಕೊಡುತ್ತಿದ್ದರು. ಹಾಗೆ ಬೀ.ವಿಯವರ ಮನೆಗೆ ಬಂದಾಗೆಲ್ಲಾ ಅದು ನಮ್ಮ ಮನೆಗೂ ಬರುತ್ತಿತ್ತು. ಹಂದಿ, ಕಡು, ಮೊಲ….. ಹೀಗೆ ತರಾವರಿ ಮಾಂಸಗಳು. ನಮ್ಮ ಮನೆಯಲ್ಲಿ ತಿನ್ನುವವರು ನಾನು ಮತ್ತು ಅಣ್ಣ ಇಬ್ಬರೆ. ಒಮ್ಮೊಮ್ಮೆ ಅವರ ಮನೆಯಿಂದ ಸಾರನ್ನು ಸಿದ್ಧಪಡಿಸಿಯೇ ಕಳುಹಿಸುತ್ತಿದ್ದರೆ, ಇನ್ನೂ ಕೆಲವು ಬಾರಿ ನಾವೇ ರಾತ್ರಿ ಬ್ಯಾಟರಿ ಹಿಡಿದು ಅವರ ಮನೆಗೆ ಹೋಗುತ್ತಿದ್ದೆವು. ಹಾಗಾಗಿ ಸಣ್ಣವನಿರುವಾಗ ನನಗಂತೂ ಆತ ತೊಳಸಾಣೆಯಲ್ಲಿ ಮಾಸ್ತರನಾಗಿರುವುದು ತುಂಬಾ ಖುಷಿಯ ಸಂಗತಿಯಾಗಿತ್ತು.

ಆಗಾಗ ಆತ ಅಣ್ಣನೊಂದಿಗಿನ ಸ್ನೇಹದ ನೆನಪನ್ನು ಹಂಚಿಕೊಂಡಿದ್ದು ಹೀಗೆ.

“ನನಗೆ ಅವನಿಗೆ ದೋಸ್ತಿ ಆಗಿದ್ದು ಅವನು postman ಆಗಿದ್ದಾಗ. ಆತ ಬಾಡಿಗೆ ಸೈಕಲ್ ತೆಗೆದುಕೊಂಡು ಹೊನ್ನಾವರಕ್ಕೆ ಹೋಗ್ತಿದ್ದ. ನಾನು ಬರ್ತೆ ಅಂತ ಅವನಿಗೆ ದಂಬಾಲು ಬೀಳ್ತಿದ್ದೆ. ನನ್ನನ್ನು ಸೈಕಲ್ ಮುಂದಿನ ಹಾರೆಯ ಮೇಲೆ ಕೂಡ್ರಿಸಿಕೊಂಡು ಹೋಗ್ತಿದ್ದ. ತುಂಬಾ ತ್ರಾಸಾದರೂ ಆತ ನನ್ನನ್ನು ಬಿಟ್ಟು ಹೋಗ್ತಿರಲಿಲ್ಲ. ಅಲ್ಲಿಂದ ಬಂದ ಮೇಲೆ post ಬಟವಡೆ ಮಾಡಲೂ ಹೋಗ್ತಿದ್ದೆ.” ಅಲ್ಲಿಂದಲೇ ಇಬ್ಬರ ದೋಸ್ತಿ ಪ್ರಾರಂಭ. ಅಣ್ಣನಿಗಿಂತ ಆತನದು ಸಣ್ಣ ವಯಸ್ಸು. ಅಣ್ಣ ಬಾಲ್ಯದಲ್ಲಿ ಶಾಲೆಗೆ ಹೋಗುವಾಗಲೂ ಇವರ ಮನೆಗೆ ರಾತ್ರಿ ಮಲಗಲು ಹೋಗ್ತಿದ್ದ. ಯಾಕೆಂದ್ರೆ ಅವರ ಮನೆಯಲ್ಲಿ ಮಾತ್ರ ದೀಪಕ್ಕೆ ಚಿಮಣಿ ಎಣ್ಣೆ ಇರ್ತಿತ್ತು.

“ಅವನಿಗೂ ಬಡತನ. ನನಗೂ ಬಡತನ, ಅವನ ಚೆಡ್ಡಿ ಹರಿದು ಹೋದಾಗ ಅದರ ತುದಿ ಹರಿದು ಕೊಂಡು ನಾನು ಹಾಕ್ಕೋತ್ತಿದ್ದೆ. ಅವನು ಬೆಳಿಗ್ಗೆ ಸೊಪ್ಪಿಗೆ ಬೆಟ್ಟಕ್ಕೆ ಹೋದಾಗಲೂ ಹೋಗ್ತಿದ್ದೆ. ನನ್ನದು ಅವನು ಬರೇ ಸ್ನೇಹ ಮಾತ್ರ ಅಲ್ಲ. ಎರಡು ದೇಹ ಒಂದೇ ಆತ್ಮ’. ಅವನ ಅಂತರಂಗವನ್ನು ನನಗೆ ಹೇಳ್ತಿದ್ದ. ನಾನೂ ಯಾವ ಸಂಗತಿಯನ್ನೂ ಹೇಳದೇ ಇರ್ತಿರಲಿಲ್ಲ. ನನ್ನ ಅವ್ವನಿಗೂ ಆತನೆಂದರೆ ತುಂಬಾ ಇಷ್ಟ… ರೋಹಿದಾಸ ಎಂದು ಬಾಯ್ತುಂಬಾ ಕರೆಯುತ್ತಿದ್ದಳು.

ಮೊದಲಿನಿಂದಲೂ ಆತ ಸಾಮಾಜಿಕ ತಾರತಮ್ಯವನ್ನೂ ವಿರೋಧಿಸುತ್ತಿದ್ದ. ಈ ವಿಷಯದಲ್ಲಿ ಆತ ಯಾವುದೇ ಮುಲಾಜು ಇಟ್ಟುಕೊಳ್ಳುತ್ತಿರಲಿಲ್ಲ. ಈ ಗುಣವನ್ನೂ ಇನ್ನೊಬ್ಬರಲ್ಲಿಯೂ ಪ್ರಚೋದಿಸುತ್ತಿದ್ದ. ಈ ಕುರಿತು ಒಂದು ಘಟನೆಯನ್ನು ಬಿ.ವಿ. ಭಂಡಾರಿಯವರು ನೆನಪಿಸಿಕೊಳ್ಳುತ್ತಾರೆ.
“ನಾನು, ನನ್ನ ತಂದೆ ಮತ್ತು ಅಣ್ಣಯ್ಯನ ಜೊತೆಗೆ ಪಂಚವಾದ್ಯ ಮಾಡಲು ಹೋಗುತ್ತಿದ್ದೆ. ಒಮ್ಮೆ ಮೂಕಾಂಬೆಗದ್ದೆಗೆ ವಾದ್ಯಕ್ಕೆ ಹೋಗಿದ್ದೆ. ಎಲ್ಲರ ಊಟ ಆದ್ಮೇಲೆ ನಮಗೆ ಕೊನೆಗೆ ಹೊಳ್ಳಿಯ ತುದಿಯಲ್ಲಿ ಚಾ ಕೊಡ್ತಿದ್ದರು. ಅದು ಬ್ರಾಹ್ಮಣರ ಮನೆ ‘ ಚಾ ಕೊಟ್ರು. ನಾ ಕುಡಿದು ಅಲ್ಲೆ ಇಟ್ಟೆ; ತೊಳಕೊಂಡು ಬಾ ಅಂದ್ರು. ಮುಜುಗರ ಆಯ್ತು. ಒಳಗೊಳಗೇ ಸಿಟ್ಟೂ ಬಂತು. ತಟ್ಟೆ ತಗೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಒಗೆದು ಬಂದೆ. ಇದಕ್ಕೆ ಪ್ರೇರಣೆ ಆರ್.ವಿ. ಅಗಿದ್ದ.” ಎಂದು ತನ್ನಲ್ಲಿ ವೈಚಾರಿಕತೆ ಮೂಡಿಸಿದ ಹಳೆಯ ನೆನಪನ್ನು ಕೆದಕುತ್ತಾನೆ.

ಕನ್ನಡ ಶಾಲೆ ಮುಗಿದಾಗ ನನಗೆ ಶಾಲೆ ಬಿಡಲು ಹೊರಟಿದ್ದರು. ಬಡತನ ಬೇರೆ; ಬೇರೆ ಮನೆಯ ಕೆಲಸಕ್ಕೆ ಹೋದರೆ ನಾಲ್ಕು ಕಾಸು ಬರ್ತದೆ ಎಂದು ಅಪ್ಪನ ಆಲೋಚನೆ. ಅಪ್ಪ ಕೆಲವು ಕಡೆ ವಿಚಾರಿಸಿದ. ಕೆಲವರನ್ನು ಕೇಳಿದರೆ ಶಾಲೆ ಬಿಡಿಸುವುದು ಒಳ್ಳೆಯದು ಅಂದರಂತೆ. ಆತ ಕಲಿತು ಏನು ಮಾಡುವುದಿದೆ? ಎಂದು ಇನ್ನು ಕೆಲವರು ಹೇಳಿದರಂತೆ!! ಆದರೆ ಆರ್.ವಿ, ನಾನು ಶಾಲೆ ಬಿಡುವುದನ್ನು ವಿರೋಧಿಸಿದ. ನನಗೆ ಓದಲೇ ಬೇಕೆಂದು ಹೇಳಿದ. ಅವನ ಒತ್ತಾಯಕ್ಕೆ ಮಣಿದು ನನ್ನನ್ನು ಶಾಲೆಗೆ ಕಳಿಸಿದರು. ಇಲ್ಲದಿದ್ದರೆ ನಾನು ಮಾಸ್ತರನಾಗಲು ಆಗುತ್ತಿರಲಿಲ್ಲ. ಆಗಲೇ ನಾನು ತಬಲ, ಮೃದಂಗ ನುಡಿಸುತ್ತಿದ್ದೆ. ಕೆರೆಮನೆ ಮಹಾಬಲ ಹೆಗಡೆಯವರೊಂದಿಗೆ ಮದ್ದಲೆ ಬಾರಿಸಿದ್ದೆ. ಕೆರೆಮನೆ ಶಿವರಾಮ ಹೆಗಡೆಯವರೊಂದಿಗೆ ಹೆಣ್ಣು ಪಾರ್ಟು ಮಾಡಿದ್ದೆ. ಹಾಗಾಗಿ ನನ್ನ ಚುರುಕುತನ ನೋಡಿ ಆರ್.ವಿ ಯವರಿಗೆ ನನ್ನ ಮೇಲೆ ಬಹು ಪ್ರೀತಿ ಇತ್ತು.

“ಆರ್.ವಿ ಓದುವುದರಲ್ಲಿ ತುಂಬಾ ಮುಂದು. ಒಂದು ಕ್ಷಣವನ್ನೂ ಹಾಳು ಮಾಡದೆ ಓದುತ್ತಿದ್ದ. ಅವನಿಗೂ ಪಂಚವಾದ್ಯ ಕಲಿಯಬೇಕು ಅಂತ ಅಸೆ. ಆದರೆ ತಾಳಜ್ಞಾನ ಇರಲಿಲ್ಲ. ನಾವಿಬ್ರು ಸುಬ್ರಾಯ ಭಂಡಾರಿಯವರ(ಆ ಕಾಲದ ಒಳ್ಳೆಯ ದೋಳುವಾದಕ.) ಮನೆಗೆ ವಾದ್ಯ ಕಲಿಯಲು ಹೋಗುತ್ತಿದ್ದೆವು. ‘ಬಾಬು ಅಡ್ಡಿಲ್ಲ, ರೋಹಿದಾಸನಿಗೆ ಏನೂ ಬರೋದಿಲ್ಲ’ ಅಂತಿದ್ದ. ಆದರೆ ಆರ್.ವಿ. ಗೆ ಮಾಡಿದ ವಾದ್ಯ ಚಲೋ ಆಯ್ತೋ ಇಲ್ವೋ, ಅನ್ನುವಷ್ಟು ಬರ್ತಿತ್ತು. ವಾದ್ಯ ಬಾರ್ಸೋದಕ್ಕೆ ಬರದೇ ಇದ್ರೂ ತಿಂಡಿ ಕೊಡ್ತ್ರು ಅಂತ ವಾದ್ಯಕ್ಕೆ ಬರ್ತಿದ್ದ. ಬಹುಶಃ ಆತನಿಗೆ ವಾದ್ಯದಲ್ಲಿ ಅಷ್ಟೊಂದು ಆಸಕ್ತಿಯಿರಲಿಲ್ಲ. ಇದ್ದಿದ್ರೆ ಆತ ಕಲೀತಿದ್ದ. ಅಂದ್ಕೊಂಡಿದ್ದನ್ನು ಕಲೀದೇ ಬಿಟ್ಟವನಲ್ಲ. ಹೆಗಡೆಯ ಆತನ ಮನೆಯಲ್ಲಿ ಎಲ್ಲರು ವಾದ್ಯ ನುಡಿಸೋರೆ. ಆಮೇಲೆ ಅವನು ಬರವಣಿಗೆಯ ಹುಚ್ಚು ಹಿಡಿಸಿಕೊಂಡ. ವೈಚಾರಿಕವಾಗಿ ಬೆಳೆದ. ನಾನು ನನ್ನ ಮೂರು ಮಕ್ಕಳ ಮದುವೆಯನ್ನು ಸರಳವಾಗಿ ರಿಜಿಸ್ಟ್ರಾರ್ ಮದುವೆ ಮೂಲಕ ಮಾಡಿದೆ. ಅದಕ್ಕೆ ನನಗೆ ಪ್ರೇರಣೆ ಕೊಟ್ಟಿದ್ದು ಆರ್.ವಿ.”

ಅವರಿಬ್ಬರ ನಡುವೆ ಆದ ಜಗಳವನ್ನೂ ಆತ ಹೇಳಿದ. “ಅವನು ಯಾರೊಂದಿಗೂ ಜಗಳ ಮಾಡುತ್ತಿರಲಿಲ್ಲ. ಒಮ್ಮೆ ಏನೋ ಒಂದು ಕೆಲಸ ಹೇಳಿದ. ನಾನು ನಿನ್ನ ಕ್ಲರ್ಕ್ ಅಲ್ಲ ಅಂದೆ. ಅವನಿಗೆ ಬೇಜಾರಾಗಿ ಒಂದು ತಿಂಗಳುಗಳ ಕಾಲ ಮಾತೇ ಆಡಲಿಲ್ಲ. ಬೇಜಾರಾಯ್ತು. ಆಮೇಲೆ ಆತನೇ ಬಂದು ನನ್ನ ಸಂತೈಸಿದ. ಮೊದಮೊದಲು ನಾನು ಅವನಿಗೆ ರೋಹಿದಾಸ ಭಾವ ಅಂತಿದ್ದೆ. ಆಮೇಲೆ ಆರ್.ವಿ ಅಂತ ಕರೆಯುವುದಕ್ಕೆ ಪ್ರಾರಂಭಿಸಿದೆ.”
ನಾನೂ ಕೂಡ ಆತ ಬರೇ ಓದೋದು ಬರೆಯೋದು ಮಾಡ್ತಿದ್ದ ಅಂದ್ಕೊಂಡಿದ್ದೆ. “ಹಲವರು ಆತನ ಬರವಣಿಗೆ ಬಗ್ಗೆ ಮಾತ್ರ ಮಾತನಾಡ್ತಾರೆ. ಆದರೆ ಆತ ಒಳ್ಳೆಯ ಸ್ಪೋರ್ಟ್ಸ್ ಮನ್ ಕೂಡ ಆಗಿದ್ದ. ವಾಲೀಬಾಲ್ ಆಡ್ತಿದ್ದ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ. ಆಮೇಲೆ ಶಿಕ್ಷಕ ಆದ್ಮೇಲೆ ಶಿಕ್ಷಕರಿಗಾಗಿರುವ ವಾರ್ಷಿಕ ಪಂದ್ಯಾಟದಲ್ಲಿಯೂ ಮೊದಮೊದಲು ಭಾಗವಹಿಸಿದ್ದ. ಶಾಲೆಗೆ ಹೋಗುವಾಗ ನಾವಿಬ್ಬರೂ ಓಟದ ಸ್ಪರ್ಧೆ ಇಟ್ಕೋತಿದ್ವಿ, ಹೈನುಗದ್ದೆ ಏರಲಿ. ಯಾವಾಗಲೂ ಅವನೇ ಮುಂದು.” ಎಂದಾಗ ಆತ ಶಾಲೆಯಲ್ಲಿ ಮಕ್ಕಳಿಗೆ ಕೋಕೋ ಆಡಿಸ್ತಿದ್ದಿದ್ದು, ಕಬ್ಬಡ್ಡಿ ಆಡಿಸ್ತಿದ್ದಿದ್ದು ನೆನಪಾಯ್ತು. ಆತ ಒಳ್ಳಡ ನಿರ್ಣಾಯಕ ಕೂಡ ಆಗಿದ್ದ.

“ಒಂದ್ಸಲ ಒಂದು ಅವಮಾನಕಾರಿ ಘಟನೆ ನಡೆಯಿತು. ಊರಲ್ಲಿ ಯಾರದೋ ಪ್ರೇಮ ಪ್ರಕರಣ ನಡೆದಿತ್ತು. ಅದಕ್ಕೂ ಇವನಿಗೂ ಸಂಬಂಧ ಇದೆ ಅಂತ ಯಾರೋ ಸ್ಟೇಷನ್ನಿಗೆ ತಳ್ಳಿ ಅರ್ಜಿ ಹಾಕಿದ್ರು. ಪೊಲೀಸರು ಇವನನ್ನು ಹೊನ್ನಾವರ ಸ್ಪೇಷನ್ನಿಗೆ ಕರೆಸ್ಕೊಂಡಿದ್ರು. ನಾನು ಅವನ ಜೊತೆ ಹೋಗಿದ್ದೆ. ಹಾಗೇ ಹೀಗೇ ಮಾತಾಡ್ತಾ ಪೋಲೀಸರು ಅವನ ಕಪಾಲಕ್ಕೆ ಎರಡು ಹೊಡೆದು ಬಿಟ್ರು. ಆಗ ಆತ ತುಂಬ ನೊಂದುಕೊಂಡಿದ್ದ. ತಾನು ಮಾಡದ ತಪ್ಪಿಗೆ ಶಿಕ್ಷೆ ಆಗಿದ್ದು ಅವನಿಗೆ ಸಹಿಸಲಾಗಿರಲಿಲ್ಲ. ಹೊರಗೆ ಗೊತ್ತಾದರೆ ಅವಮಾನ ಅಂತ ಇನ್ನೊಂದ್ಕಡೆ ಬೇಸರ. ಯಾರಿಗೂ ಹೇಳಬೇಡ ಅಂತಲೂ ನನಗೆ ಹೇಳ್ತಿದ್ದ.” ಎಂದು ಮೊದಲ ಬಾರಿಗೆ ಪೋಲೀಸ್ ಸ್ಟೇಷನ್ನಿಗೆ ಮಟ್ಟಿಲು ಹತ್ತಿದ ಘಟನೆಯನ್ನು ನೆನಪಿಸಿದ.

ಅಣ್ಣನ ಜೊತೆಗೆ ಆತ ತಾಳಮದ್ದಲೆಯಲ್ಲಿ ಹಲವು ಬಾರಿ ಅರ್ಥ ಹೇಳಿದ್ದು ಕೇಳಿದ್ದೆ. ತುಂಬ ಕಡೆ ಅವನ ಜೊತೆ ಸಾಹಿತ್ಯದ ಕಾರ್ಯಕ್ರಮಕ್ಕೆ ಹೋಗ್ತಿದ್ದ. ಅಣ್ಣ ಕತೆ ಬರೆದರೆ, ಕವಿತೆ ಬರೆದರೆ, ಮಕ್ಕಳ ನಾಟಕ ಬರೆದಾಗ ಹಲವು ಬಾರಿ ಇವನೆದುರು ಓದಿ ಹೇಳ್ತಾ ಇದ್ದ.

ಹೀಗೆ ತನ್ನ ಮತ್ತು ಅಣ್ಣನ ಸ್ನೇಹದ ಕುರಿತು ಹೇಳಿದ ಆತನ ಮಾತುಗಳು ಅಣ್ಣನ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಅನಾವರಣಗೊಳಿಸುತಿತ್ತು. ಇವರಿಬ್ಬರ ಸಂಬಂಧ ಕೇವಲ ನೆಂಟರ ಸಂಬಂಧ ಮಾತ್ರವಾಗಿರದೆ ಅದರಾಚೆಯ ಸ್ನೇಹ-ಸಂಬಂಧವೂ ಆಗಿತ್ತು.

ಅದರ ಫಲವೇ ಆತ ಮನೆಯಲ್ಲಿ ಮಾಡಿಟ್ಟ ಅಣ್ಣನ ಮೂರ್ತಿ ಕೂಡಾ.

2 comments

  1. ಡಾ.ಆರ್ ವಿ ಭಂಡಾರಿಯವರು ಸದಾ ಉಳಿಯುವ ಆದರ್ಶ…. ನಿಮ್ಮ ಬರಹದ ಮೂಲಕ ನಮ್ಮೆದೆಗೆ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ….ನಿಮಗೆ ಅಭಿನಂದನೆ

  2. ಪ್ರೀತಿ ಮತ್ತು ಬದುಕಿನ ರೀತಿಯ ಪಾಠ ಕಲಿಸಿದ ಮಹಾನುಭಾವರ ಆತ್ಮೀಯ ಪರಿಚಯವಿದು

Leave a Reply