ಯಶೋಧರೆದೊಂದು ಪ್ರಶ್ನೆ !

ಜಮುನಾ ರಾಣಿ ಹೆಚ್.ಎಸ್.

ನಾನು ಯಶೋಧರೆ
ಸಿದ್ಧಾರ್ಥನ ಪ್ರಾಣಸಖಿ, ಸಹನಶೀಲೆ, ತ್ಯಾಗಮಯಿ
ಎಂದು ಕರೆಸಿಕೊಂಡ ಯಶೋಧರಾ…

ನನ್ನ ನಯ ನಾಜೂಕಿಗೆ
ಮನ ಸೋತು ಕೈಹಿಡಿದರು,
ಅರಮನೆಯ ಪ್ರತಿ ಅಂಗುಲಕೂ ಗೊತ್ತು
ಅವರ ಕಚಗುಳಿಯ ಮೋಜು,
ಶುಕಗಳೂ ನಾಚಿ ನೀರಾಗಿದ್ದವು
ಮುಂಗುರುಳ ನೇವರಿಸಿ ಮುತ್ತನಿಟ್ಟ
ಅವರ ಅಧರಗಳ ಕಂಡು,
ನಾವು ಜಲಕ್ರೀಡೆಗೆ ತೊಡಗಿದರೆ
ಹಂಸ ಪಕ್ಷಿಗಳಿಗೂ ಮತ್ಸರ…
ಅಬ್ಬಾ, ಅದೆಷ್ಟು ಸೊಗಸು
ಆ ದಿನಗಳು.

ಒಡಲ ಗರ್ಭದಲಿ ಅವರ
ಕುಡಿಯೊಡೆವಾಗ
ಸ್ವತಃ ಮಾವಿನ ಮರವೇರಿ
ಬಾಯಿಯ ಬಯಕೆಯ ತಣಿಸಿದ್ದರು,
ತೊಡೆಗೆ ತಲೆಯಾನಿಸಲು ಹೇಳಿ
ತಾಯಿ ಮಗುವಿಗೆ ಹಾಡುವಂತೆ
ಲಾಲಿ ಹಾಡಿದ್ದರು,
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಪ್ರೀತಿ ನೂರ್ಮಡಿಗೊಳಿಸಿದ್ದ ಅವರು
ಮುತ್ತನೊತ್ತದೆ
ವಸಿಲು ದಾಟಿದ್ದ ನೆನಪೇ ಇಲ್ಲ.

ದೇವದತ್ತನು ಹಂಸವ ಹೊಡೆದಾಗ,
ಹುಳುಗಳನ್ನು ಹಕ್ಕಿಗಳು
ಹೆಕ್ಕಿ ಹೆಕ್ಕಿ ತಿನ್ನುವಾಗ
ಅವರು ಪರಿತಪಿಸಿದ ರೀತಿ ಮರೆಯಲಾರೆ,
ಮಗನ ಬೆಳೆಸಲು ಅಘಾದ
ಕನಸುಗಳನ್ನು ಕಂಡಿದ್ದರು,
ಅದೆಷ್ಟು ಸಂವೇದನಾ ಶೀಲರು ನನ್ನವರು!

ಅರಮನೆಯ ಜೋಯಿಸರು ನುಡಿದಿದ್ದರಂತೆ;
ಶ್ರೇಷ್ಠ ದೊರೆ ಅಥವಾ ವಿರಾಗಿಯಾಗುವನೆಂದು
ಆಗಾಗದಿರಲಿ ಎಂದು ಸುಖದ ಸುಪ್ಪತ್ತಿನಲ್ಲಿ
ತೇಲಿಸಿದ್ದರಂತೆ,
ಸಕಲ ವಿದ್ಯಾಪಾರಂಗತರೂ ತಡೆಲಾಗಲಿಲ್ಲ
ವಿಧಿಲಿಖಿತವ ಎಂದು ಮಾವಯ್ಯ
ಕೈತೊಳೆದುಕೊಂಡರು

ಕುದುರೆಲಾಯದ ಚೆನ್ನ ಹೇಳಿದ;
ನಿನ್ನೆ ಭಿಕ್ಷುಕ… ಸನ್ಯಾಸಿ… ಶವಯಾತ್ರೆಯ…
ಕಂಡವರು ಚಿಂತಾಕ್ರಾಂತರಾಗಿದ್ದರಂತೆ
ಇಂದು ಸರಿರಾತ್ರಿ ಹೋಗಿ ಎಬ್ಬಿಸಿ
ಸಾರೋಟಿನೊಂದಿಗೆ ಹೊರಟವರು
ಕಾಡಿನಲ್ಲಿ ಇಳಿದು ಅವನ ಬೀಳ್ಕೊಟ್ಟರಂತೆ

ಪ್ರೇಮಲೋಕದ ಅಮೃತವ
ಕುಡಿದರಗಿಸಿಕೊಂಡ ಬದುಕು
ಈಗ ಕಂಬನಿಯಧಾರೆಯಲಿ ಮುಳುಗಿದೆ,
ಒಂದೇ ಒಂದು ಮಾತನೇಳಿದ್ದರೆ
ಆ ಸೀತೆ ರಾಮನ ಅನುಸರಿಸಿದಂತೆ
ನಾನೂ ಜೊತೆಯಾಗುತಿದ್ದೆ,
ಮತ್ತೆ ಮೋಹಿಯಾಗುವ ಭಯ ಕಾಡಿ
ಬೆಚ್ಚಿಬೀಳಿಸಿರಬೇಕು,
ಇಹಲೋಕದ ಭೋಗಗಳಿಗೆ
ಕೊನೆಯ ಚುಕ್ಕಿ ಇಡಲು ಹೊರಟು
ನನ್ನನು ಒಂಟಿಯಾಗಿಸಿದರು

ಸಾಕು ಸಾಕಾಯಿತು ಅವರಿಲ್ಲದ ಈ ಬದುಕು
ಆತ್ಮಾಹುತಿಯೇ ಸರಿಯೆಂದು ನಿರ್ಧರಿಸಿದಾಗ
ಕಣ್ಣೆದುರು ಮಲಗಿರುವ ರಾಹುಲ
ಮಗ್ಗಲು ಬದಲಿಸಿದ
ನಿದ್ರೆಯಲ್ಲಿದ್ದರೂ ಅಪ್ಪಿ ಮುದ್ದಿಸಿದೆ
ಅವರದೇ ಪ್ರತಿರೂಪ
ಬಿಟ್ಟೋಗಲು ಮನಸಾಗಲಿಲ್ಲ.
ಇಲ್ಲಾ, ಇದ್ದು ಜಯಿಸಬೇಕು
ಗಂಡನಿಂದ ಪರಿತ್ಯಕ್ತಳೆಂಬ
ಬಿರುಮಾತು, ಕಟು ನುಡಿಗಳಿಗೆ ಕಿವುಡಿಯಾಗಿ
ಕಾಯದ ಕಾಲನ ದೂಡುತಾ

ಅದೆಷ್ಟೋ ಬಾರಿ ರಾಹುಲ ಕೇಳಿದ್ದ
ಅಪ್ಪ ಎಲ್ಲಿರುವರೆಂದು,
ಅವರೆಡೆಗಿನ ಗೌರವ ಮಾಸದಿರಲು
ಜ್ಞಾನಾರ್ಜನೆಗೆ ತೆರಳಿರುವರೆಂದು ಹೇಳಿದ್ದೆ
ಆದರೆ ಪ್ರತಿದಿನವೂ ಕೊಲ್ಲುತ್ತಿದ್ದ ಕೊರಗು
ಕಾಳರಾತ್ರಿಯ ಮಾಯೆಗೆ ಸಿಕ್ಕಿದ
ಅಪ್ಪನ ಹಾದಿಯ
ಮಗನೂ ಹಿಡಿದರೆ…

ಯಾರೋ ದಾರಿಹೋಕರು ಹೇಳಿದರು
ಮಹಾರಾಜರು ಬುದ್ಧರಾದರೆಂದು
ಹೆಣ್ಣು ಜನ್ಮವ ಅವಮಾನಿಸಿ
ಹೇಳದೆ-ಕೇಳದೆ ಹೋದ
ಅವರಿಲ್ಲದ ಬದುಕಿನ ಇಹದ ಬೇಗೆಯಲಿ
ನಾನು ಬೇಯುತಿರುವುದು
ಯಾರಿಗೂ ಬೇಕಿರಲಿಲ್ಲ.

ಆರು ಸುದೀರ್ಘ ಸಂವತ್ಸರಗಳ ಕಳೆದು
ಮರಳಿ ಬಂದವರು
ನನ್ನೆಲ್ಲಾ ಪ್ರಶ್ನೆಗಳಿಗೆ ನಿರ್ಲಿಪ್ತತೆಯ
ಉತ್ತರ ನೀಡಿ ಮಗನನ್ನೂ ಕರೆದೊಯ್ದರು
ಯಾರ ಸಲುವಾಗಿ ಬದುಕನರಸಿದೆನೋ
ಅವರೆಲ್ಲರೂ ನನ್ನ ತೊರೆದರು,
ಒಂಟಿಯಾಗಿಸಿದರು.

ಕೊನೆವರೆಗೂ ಕಾಡಿದ್ದು ಒಂದೇ ಪ್ರಶ್ನೆ
ಅವರಂತೆಯೇ ನಾನೂ ಮಧ್ಯರಾತ್ರಿಯಲ್ಲಿ
ಮಗ, ಮನೆ, ಸಂಸಾರ ತೊರೆದಿದ್ದರೆ
ಸಮಾಜ ನನ್ನನು
ಪ್ರಬುದ್ಧಳೆನ್ನುತ್ತಿತ್ತೇನು ?

6 comments

  1. ” ಅವರಂತೆಯೇ ನಾನೂ ಮಧ್ಯರಾತ್ರಿಯಲ್ಲಿ ಮಗ, ಮನೆ, ಸಂಸಾರ ತೊರೆದಿದ್ದರೆ ಸಮಾಜ ನನ್ನನ್ನು ಪ್ರಬುದ್ಧಳೆನ್ನುತಿತ್ತೇನು?”- ಖಂಡಿತ ಇಲ್ಲ. ಏಕೆಂದರೆ ಸಾಮಾಜಿಕ ಜಗತ್ತು ರೂಪುಗೊಂಡಿರುವುದೇ ಗಂಡಿಗಾಗಿ. ಆದ್ದರಿಂದಲೇ ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಶಿಕ್ಷಣ, ಕಾನೂನು, ನ್ಯಾಯ, ಆಡಳಿತ , ಧರ್ಮಗಳೆಲ್ಲವೂ ಗಂಡಸಿನ ಪರವಾದ ನಿಲುವುಗಳನ್ನೇ ತಳೆದಿವೆ.ಒಂದೇ ಬಗೆಯ ಕಾರ್ಯವನ್ನು ಗಂಡಸು/ಹೆಂಗಸು ಮಾಡಿದಾಗ, ಅದನ್ನು ಸಮಾಜ ಅಳೆಯುವ/ಸ್ವೀಕರಿಸುವ ಮಾನದಂಡಗಳು ಬೇರೆಬೇರೆಯಾಗಿರುತ್ತವೆ.

  2. ಕವಿತೆ ಇಷ್ಟವಾಯಿತು .
    ಯಶೋಧರೆಯ ಅಂತರಾಳದ ನೋವು ಸ್ತ್ರೀಯರನೇಕರ ನೋವಾಗಿದೆ. ಸಮಾಜವು ಈ ಕುಲವನ್ನು ನೋಡುವ ಬಗೆ ಎಂತದ್ದು ಹಾಗೂ ನೋಡಬೇಕಾದ ಬಗೆ ಎಂತದ್ದು ಎನ್ನವ ಸೂಕ್ಷ್ಮಭಾವ ಕವಿತೆದ್ದು. ಕೌಟುಂಬಿಕತೆ ಸಾಗಬೇಕಾದ ಪರಿಯನ್ನು ರೀತಿಯನ್ನು ಕವಿತೆ ಕಟ್ಟಿಕೊಟ್ಟಿದೆ. ಧನ್ಯವಾದಗಳು

  3. ‘ಯಶೋಧರೆದೊಂದು ಪ್ರಶ್ನೆ’ ಮನಸ್ಸನ್ನು ಮುಟ್ಟುವ, ಹೃದಯವನ್ನು ತಟ್ಟುವ ಕವಿತೆ. ಜಮುನಾ ರಾಣಿಯವರಿಗೆ ಅಭಿನಂದನೆಗಳು. – ರಾಬು

Leave a Reply