ವಸಂತ ನಮ್ಮ ತವರೂರು!

ಅರಬಗಟ್ಟೆ ಅಣ್ಣಪ್ಪ

ಜಗ-ಬಡತನ ಚಳಿಗೆ ನಲುಗಿ
ತನ್ನದೆಲ್ಲ ತೊರೆದು-ನಿಂತ ಪ್ರಕೃತಿ
ಹೊಸಗಾಲದ ಹಸೆಯನೇರಿ
ಅರಶಿನಮೆದ್ದ ನವದಂಪತಿ

ಕಳೆದುಕೊಂಡ ಸಿರಿಯ ಗರಿಯು
ನೆತ್ತಿಯಲಿ ಮಿನುಗಿ ಕಳಸ
ಅಲ್ಲಲ್ಲಿ ಚಿಗುರೆಲೆ
ಮೈದುಂಬಿವೆ ಮರಬಾವುಟ

ಪಚ್ಚೆ ಪಾಚಿ ಹಚ್ಚ ಹಸಿರು
ಕೆಂಗ ಕೆಂದ ಕೇಸರಿ
ಕಿರಣದಭಿಷೇಕವಾಗಿ
ಹೊಳೆವ ಮೊಳಕೆ ಸಗ್ಗಸಿರಿ

ಧರೆಯ ತುಂಬ ಮರಬಾವುಟ
ಸೂರ್ಯ-ಚಂದ್ರರೇ ಚಕ್ರ
ತಿಳಿಮಂಜಿನ ಹಾಲ ಸುರಿದು
ಪ್ರಸಾದವಾಯ್ತು ಕಿರಣಪಾಕ

ಜ್ಞಾನಭಕುತಿ ಹಗ್ಗ ಹೊಸೆದು
ಆಕಾಶ ಗಾಳಿಯಾಗಿ ಹಿಡಿದು
ಅಜ್ಞಾನ ಮೌಢ್ಯ ಕಗ್ಗತ್ತಲನು
ಕೀಲೆಣ್ಣೆಯಾಗಿ ಸವರು
ಆಡಿ ನಲಿವ ಚಿಣ್ಣರು
ಹೊಸಕಾಲದ ದೇವರು

ಎಳೆಯೆಳೆಯುತ ಭುವಿಯ ತೇರು
ಜೊಳ್ಳು ಪೊಳ್ಳು ಮಂಡಕ್ಕಿಕಾಳು
ಕಾಲಕಸವಾಗಿ ಬಿದ್ದು
ತೆನೆಗಟ್ಟಲೆಲ್ಲೆಲ್ಲು
ನವಮಾಸದ ಹೊಸಚಿಗುರು
ಒಗರುಣ್ಣುತ ಸಿಹಿ ಹರಡುತ
ಕೋಗಿಲೆಯಾಗಬೇಕು ನಾನು
ವಸಂತ ನಮ್ಮ ತವರೂರು!

 

Leave a Reply