ಮುಕುಂದಸ್ವಾಮಿಯ ಇಬ್ಬರು ಗಲಾಟೆ ಅಪ್ಸರೆಯರು..

ಗೋಡೆಯ ಅದೊಂದು ಮೂಲೆಯಲ್ಲಿ ನೇತುಹಾಕಿದ್ದ ಫೋಟೋದಲಿದ್ದ ಅವರ ಮಗನ ಮುಖದಲ್ಲಿ ಸಾವಿನ ಕಳೆಯ ಎಳೆಯೂ ಇರಲಿಲ್ಲ. ನನ್ನ ಇಷ್ಟದ ಹುಡುಗಿಗೆ ಕಳುಹಿಸುವುದಕ್ಕಾಗಿ ಈ ಫೋಟೋ ತೆಗೆಸಿದ್ದೇನೆ, ನೀವು ನಾನು ಬರುವವರೆಗೂ ಈ ಫೋಟೋವನ್ನ ಬೀರುವಿನಲ್ಲೋ ಅಥವಾ ಕಬ್ಬಿಣದ ಟ್ರಂಕಿನಲ್ಲೋ ಇಟ್ಟು ಧೂಳಿಡಿಯುವಂತೆ ಮಾಡಬೇಡಿ. ಸಾಧ್ಯವಾದರೆ ಮನೆಯ ಗೋಡೆಗೆ ನೇತುಹಾಕಿ, ನಾನು ಮುಂದೊಂದು ದಿನ ಬಂದು ಸ್ಪೀಡ್‍ಪೋಸ್ಟ್ನಲ್ಲಿ ಅವಳಿಗೆ ಈ ಫೋಟೋ ಕಳಿಸಿಕೊಡುತ್ತೇನೆ ಎನ್ನುವುದನ್ನು ಆ ಫೋಟೋದಲ್ಲಿದ್ದವನು ಹೇಳಲು ಯತ್ನಿಸುತ್ತಿರಬಹುದು ಎನ್ನುವುದು ಅವನ ಮಾಯದ ಕಣ್ಣುಗಳ ಹೊಳಪಿನಿಂದ ಗೋಚರವಾಗುತ್ತಿತ್ತು.

ಸ್ಪೀಡ್‍ಪೋಸ್ಟ್ ನಲ್ಲಿಯೋ  ಅಥವಾ ಕೊರಿಯರ್ ಮೂಲಕವೂ ಈ ಫೋಟೋವನ್ನ ಇಷ್ಟದ ಹುಡುಗಿಗೆ ಕಳುಹಿಸುವ ಸಲುವಾಗಿಯಾದರೂ ಮಗ ಬರಬಹುದು ಎನ್ನುವುದನ್ನು ಬಲವಾಗಿ ನಂಬಿ, ಆ ಮನೆಯವರು ಕಾಯುತ್ತಿದ್ದವರಂತೆ ಕಾಣುತ್ತಿದ್ದರು. ಗೋಡೆಗೆ ನೇತುಬಿದ್ದಿದ್ದ ಫೋಟೋ ಫ್ರೇಮಿನ ಸುತ್ತಲೂ ಪೇಯಿಂಟ್ ಬ್ರಶ್‍ನ ಸಹಾಯದಿಂದ ಹಬ್ಬಿಕೊಂಡಿದ್ದ, ಕುರಿಂಜಿ ಹೂವಿನ ಬಳ್ಳಿ ಎಷ್ಟೋ ವರ್ಷಗಳ ನಂತರವೂ ಹಸಿರಾಗೇ ಉಳಿದಿದ್ದೇವೆ, ಬೇಕಿದ್ದರೇ ನೀನೇ ಚಿವುಟಿ ನೋಡು ಎನ್ನುವುದನ್ನ ಪರೋಕ್ಷವಾಗಿ ಹೇಳುತ್ತಿರುವಂತೆ ತೋರುತ್ತಿದ್ದವು.

ಸಣ್ಣ ಕುರಿಮರಿಯನ್ನು ಹೋಲುವ ಫೋಟೋದಲ್ಲಿದ್ದವನ ಮುಖವನ್ನು ನೋಡಿದ್ದು ನನಗೆ ಸಾಕು ಎನಿಸಿದ ಮೇಲೆ, ಬಲವಂತವಾಗಿ ಎರಡು ಬಾಗಿಲುಗಳನ್ನು ಮೈಗಂಟಿಸಿಕೊಂಡಂತೆ ಕಾಣುತ್ತಿದ್ದ ಸಣ್ಣ ಹೆಂಚಿನ ಮನೆಯನ್ನು ದಾಟಿ ಬಾವಿಯ ಎದುರು ಬಂದು ನಿಂತುಕೊಂಡೆ. ಅಷ್ಟರಲ್ಲಾಗಲೇ ಅರವತ್ತರ ಅಂಚಿನ ಮುಕುಂದಸ್ವಾಮಿ ಅರ್ಧಸ್ನಾನ ಮುಗಿಸಿ ಮತ್ತೊಂದು ಕೊಡ ನೀರಿಗಾಗಿ ಹಗ್ಗವನ್ನ ಬಾವಿಗಿಳಿಸಿ ನೀರು ತುಂಬುವುದನ್ನು ಮುಖತಗ್ಗಿಸಿ ಇಣುಕಿ ನೋಡುತ್ತಿದ್ದ.

ಅಸ್ತಿಪಂಜರಕ್ಕೆ ಚರ್ಮದ ಹೊದಿಕೆಯನ್ನು ಹೊದಿಸಿದವನಂತೆ ಕಾಣುತ್ತಿದ್ದ ಅವನನ್ನು ಪಕ್ಕದ ಸಣ್ಣ ಬಂಡೆ ಮೇಲೆ ಕೂರಿಸಿಕೊಂಡು ಅವನ ದೇಹದಲ್ಲಿದ್ದ ಅಷ್ಟೂ ಎಲುಬುಗಳನ್ನು ಅರ್ಧ ತಾಸಿನಲ್ಲಿ ಎಣಿಸಿಬಿಡಬಹುದಿತ್ತು. ಹೀಗಿದ್ದರೂ, ಕೇರಳದ ಚಳಿಯ ಪರಿಚಯ ನನಗಿದೆ ಎನ್ನುವಂತೆ ಬಾವಿಯ ನೀರನ್ನು ಮುಕುಂದಸ್ವಾಮಿ ಧಬಧಬನೇ ಮೈ ಮೇಲೆ ಸುರಿದುಕೊಳ್ಳುತ್ತಿದ್ದ. ಹಾಗೇ ನೀರನ್ನು ಸುರಿದುಕೊಳ್ಳುವಾಗೆಲ್ಲ, ಬೆಂಗಳೂರಿನ ನಿನ್ನಂತಹ ಎಳೆಯ ಹುಡುಗನಿಗೆ ಅಸಾಧ್ಯವಾಗಿರುವ ಅಪೂರ್ವ ಸಾಧನೆಯೊಂದು ನನ್ನಂತಹ ಅರವತ್ತರ ಅಂಚಿನ ಮುದುಕನಿಗೆ ಸಾಧ್ಯವಾಗುತ್ತಿದೆ ನೋಡು, ಎನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದ್ದಾನೆ ಎನ್ನುವ ಅನುಮಾನವನ್ನ ಇನ್ನಷ್ಟು ಜೋರಾಗಿ ಮೂಡಿಸುವಂತೆ ಮಾಡುತ್ತಿದ್ದ.

ಅದರಲ್ಲೂ ತುಂಬಿದ್ದ ಕೊಡದ ನೀರನ್ನ ಅನಾಮತ್ತಾಗಿ ಮೈ ಮೇಲೆ ಸುರಿದುಕೊಳ್ಳುತ್ತಿರುವಾಗ, ನೀರಿನ ರಭಸಕ್ಕೆ ಪೂರ್ತಿಯಾಗಿ ಕಣ್ಣುಬಿಡಲಾರದೆ, ಅರ್ಧ ಮುಚ್ಚಿದ ಕಣ್ಣುಗಳಲ್ಲಿ ಎದುರಿದ್ದ ನನ್ನನ್ನು ಕಿಚಾಯಿಸುವಂತೆ ನೋಡುವ ಘಳಿಗೆಯಲ್ಲಂತೂ, ನನ್ನ ಅನುಮಾನ ಇನ್ನಷ್ಟು ಹೆಚ್ಚಾಗುತ್ತಿತ್ತು. ಸ್ನಾನದ ಹೆಸರಿನಲ್ಲಿ ನೀರಿನೊಂದಿಗೆ ಮೋಜು ಮಾಡುತ್ತಿದ್ದ ಮುಕುಂದಸ್ವಾಮಿಯ ಕುತಂತ್ರಕ್ಕೆ ಬಲಿಯಾಗಿ ಒದ್ದೆಯಾಗಬಾರದು ಎನ್ನುವ ಕಾರಣಕ್ಕೆ ಒಂದಿಷ್ಟು ದೂರದಲ್ಲಿ ನಿಂತು ಅವನು ಸ್ನಾನ ಮುಗಿಸುವುದನ್ನೇ ಕಾಯುತ್ತಿದ್ದೆ.

ಸಾಮಾನ್ಯವಾಗಿ ಕೇರಳದಲ್ಲಿ ಹೈವೇ ಅಥವಾ ಊರಿನ ಮುಖ್ಯರಸ್ತೆಯ ಮಗ್ಗುಲಿಗೆ ಕಾಲುದಾರಿಯೊಂದು ಮನುಷ್ಯನ ದಿನನಿತ್ಯದ ಕೃತ್ಯದಿಂದ ಜನ್ಮತಳೆದಿರುತ್ತದೆ. ಅದೇ ಕಾಲುದಾರಿಯ ಬೆನ್ನು ಹಿಡಿದು ಹೊರಟರೆ ರಬ್ಬರ್ ಹಾಗೂ ತೆಂಗಿನ ತೋಟಗಳ ನಡುವೆ ಮಿಣುಕುಹುಳುಗಳಂತೆ ಅಲ್ಲೊಂದು ಇಲ್ಲೊಂದು ಮನೆಗಳು ಕಾಣಿಸುತ್ತವೆ. ಹೀಗೆ ಸಾವಿನ ಕೂಗು ಕೇಳದಷ್ಟು ದೂರದಲ್ಲಿರುವ ಮನೆಗಳಿಂದಲೇ ಊರು ಎನ್ನುವುದಕ್ಕೆ ಲಾಯಕ್ಕಾದ ಪ್ರದೇಶವೊಂದು ದ್ವೀಪದಂತೆ ಸೃಷ್ಠಿಯಾಗಿರುತ್ತದೆ. ಅಂತಹದೇ ಸುಪ್ತವಾದ ದ್ವೀಪದಂತಹ ಊರು ಕೇರಳದ “ನಡುವತ್”.

ಅದೇ ಊರಿನ ಯಾವುದೋ ಮೂಲೆಯೊಂದರ ತೆಂಗಿನ ತೋಟದ ನಡುವಿನಲ್ಲಿದ್ದ ಮನೆಯ ಎದುರಿನ ಬಾವಿಯ ಒಂದಿಷ್ಟು ದೂರಕ್ಕೆ ನಾನು ನಿಂತುಕೊಂಡು ಅವನು ಸ್ನಾನ ಮುಗಿಸುವುದನ್ನೇ ಕಾಯುತ್ತಿದ್ದರೆ, ಮುಕುಂದಸ್ವಾಮಿ ಅದೇ ಬಾವಿಯ ನೀರು ತೋಡುತ್ತ ಸ್ನಾನದ ಹೆಸರಿನಲ್ಲಿ ಮೋಜು ಮಾಡುತ್ತಿದ್ದ.

ಪಶ್ಚಿಮಘಟ್ಟದ ಕಾಡುಗಳ ಸಾಲಿನಲ್ಲಿನರುವ ಕೇರಳದ ನಿಲಂಬೂರ್ನಿಂದ ಕೇವಲ ಎಂಟು ಕಿಲೋ ಮೀಟರ್ ದೂರದಲ್ಲಿರುವ ಈ ನಡುವತ್ ಎನ್ನುವ ಸಣ್ಣ ಊರು, ಎಳೆಯ ಮಗುವಿನಂತೆ ಅತಿಯಾದ ಮುದ್ದಾಗಿದೆ. ಮಗುವಿನ ಎಳೆಯ ಪಾದದಷ್ಟೇ ನುಣುಪು ಕಾಲುದಾರಿಯ ಈ ಊರು ನಮ್ಮನ್ನು ಇದ್ದಲ್ಲೇ ಇರಿಸಿಕೊಂಡು ಇಡೀ ಊರನ್ನು ಸುತ್ತಿಸಿತೋರುವಂತೆ ಮಾಡುತ್ತದೆ. ಆ ಊರಿನ ನಾಲ್ಕುಮೂಲೆಗಳಿಗೂ ಹರಡಿಕೊಂಡಿರುವ ತೋಟಗಳ ನಡುವಿನ ಮನೆಗಳ ಪೈಕಿ ಮುಕುಂದಸ್ವಾಮಿಯ ಮನೆಯೂ ಒಂದು. ಆದರೆ ಅದು ಅವನ ಸ್ವಂತ ಮನೆಯಾಗಿರಲಿಲ್ಲ. ಅದು ನಿಲಂಬೂರಿನಲ್ಲಿದ್ದ ಆ ತೋಟದ ಮಾಲೀಕರಾಗಿದ್ದ ಓರ್ವ ಕಮ್ಯೂನಿಷ್ಟರದ್ದು.

ಈ ಮೊದಲು ಮುಕುಂದಸ್ವಾಮಿಯ ಮಗನೂ ತೋಟದ ಮಾಲೀಕರ ಬಳಿ ಕೆಲಸ ಮಾಡುತ್ತಿದ್ದ. ಆರಂಭದಲ್ಲಿ ತೋಟಕ್ಕೆ ಗೊಬ್ಬರ ಹಾಕುತ್ತಾ, ಪಂಪ್‍ಸೆಟ್‍ನಿಂದ ನೀರು ಹಾಯಿಸುತ್ತ, ಉಳಿದ ಸಮಯದಲ್ಲಿ ಪೇಟೆ ಹಾಗೂ ಊರಿನ ನಡುವೆ ಅಲೆಯುತ್ತ ಉಳಿದುಹೋಗಿದ್ದ. ತೋಟವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಕ್ಕೋ ಏನೋ ನಿಲಂಬೂರಿನಲ್ಲಿದ್ದ ತೋಟದ ಮಾಲೀಕರಿಗೆ ಇಷ್ಟದ ಹುಡುಗನಾಗಿ ರೂಪಾಂತರವಾಗಿದ್ದ. ಶಾಲೆಯಲ್ಲಿ ಕಲಿಯದ ಅವನು ದಿನಕಳೆದಂತೆ ಥೇಟು ತೋಟದ ಮಾಲೀಕನಂತೆ ದೊಡ್ಡ ದೊಡ್ಡ ಮಾತುಗಳನ್ನಾಡಲು ಶುರುವಿಟ್ಟುಕೊಂಡಿದ್ದ.

ಅವರೊಂದಿಗೆ ದಿನಪೂರ್ತಿ ಮಾತನಾಡುತ್ತಿದ್ದ ಅವನು, ಒಂದಿಷ್ಟು ವರ್ಷಗಳ ಅವರೊಂದಿಗಿನ ಸಲುಗೆ ದೊರೆತ ನಂತರ, ಮನೆಯ ವಿಚಾರಗಳನ್ನು ಮರೆತವನಂತೆ ಉಳಿದ ವಿಚಾರಗಳನ್ನೇ ಹೆಚ್ಚಾಗಿ ಮಾತನಾಡುತ್ತಿದ್ದ. ಕೆಲವೊಮ್ಮೆ ತೋಟದ ಮಾಲೀಕರೊಂದಿಗೆ ಮಾತಿಗಿಳಿದು ಅವರನ್ನೇ ವಿರೋಧಿಸಿ ಮುನಿಸಿಕೊಂಡು ಎಂಟು ಕಿಲೋ ಮೀಟರ್ ದೂರದಲ್ಲಿದ್ದ ನಡುವತ್ ಮನೆಯನ್ನು ನಡೆದೇ ತಲುಪಿಬಿಡುತ್ತಿದ್ದ.

ಆದರೆ ಈ ಯಾವುದರ ಎಳೆಯನ್ನೂ ಅರ್ಥೈಸಿಕೊಳ್ಳಲಾರದೆ ಹಾಗೆ ಉಳಿದುಹೋಗಿದ್ದ ಮುಕುಂದಸ್ವಾಮಿಗೆ ತೋಟದ ಮಾಲೀಕ ಮತ್ತು ಮಗನ ನಡುವಿನ ಸಂಬಂಧ ಕ್ರಮಿಸಿರಬಹುದಾದ ತುದಿಯನ್ನು ದರ್ಶಿಸುವುದು ಅಸಾಧ್ಯವಾಗಿ ಭಯದಿಂದ ದೂರವೇ ಉಳಿದುಕೊಂಡುಬಿಟ್ಟಿದ್ದ.
ಹೀಗಿರುವಾಗಲೇ ಅದೊಂದು ದಿನ ಅವನ ಮಗನೇ ಸಂಜೆಯ ವೇಳೆ ಮನೆಯ ಎದುರು ಕೂತು ಮಾತನಾಡುವಾಗ, ತೋಟದ ಮಾಲೀಕರೊಂದಿಗೆ ನಾನು ಮಾತನಾಡುತ್ತಿರುವುದು ಕಮ್ಯೂನಿಸಂ ಎಂದಿದ್ದನಂತೆ.

ಮಗನ ಮಾತು ಮುಕುಂದಸ್ವಾಮಿಗೆ ಅರ್ಥವಾಗಿರಲಿಲ್ಲ. ಕಮ್ಯೂನಿಸಂ ಎಂದರೆ, ಮಲಯಾಳಂ, ಕನ್ನಡದಂತೆ ಯಾವುದೋ ಮತ್ತೊಂದು ಭಾಷೆ ಇರಬೇಕು ಎಂದು ತನ್ನ ಕೆಲಸಗಳಲ್ಲಿ ತೊಡಗಿಕೊಂಡಿದ್ದನಂತೆ. ಮಗ, ತೋಟದ ಮಾಲೀಕ, ಊರಿನ ಕತೆಗಳನ್ನು ಹಂಚಿಕೊಳ್ಳುತ್ತಿರುವಾಗ ಮುಕುಂದಸ್ವಾಮಿ ಅದೇ ಮೊದಲು ಸ್ಕೂಲಿಗೆ ಹೋಗಿ ಬಂದ ಪುಟಾಣಿ ಮಗುವೊಂದು ಮನೆಯಲ್ಲಿ ದಿನದ ವರದಿಯನ್ನು ಒಪ್ಪಿಸುತ್ತಿದ್ದವನಂತೆ ಕಾಣುತ್ತಿತ್ತು.

ಎಷ್ಟೋ ವರ್ಷಗಳ ಹಿಂದೆ ಮಗ “ನಾವು ಮಾತನಾಡುತ್ತಿರುವುದು ಕಮ್ಯೂನಿಸಂ” ಎಂದಿದ್ದರ ನಿಜವಾದ ಅರ್ಥ ಮುಕುಂದಸ್ವಾಮಿಗೆ ಇಂದಿಗೂ ಅರ್ಥವಾಗಿಲ್ಲ ಎನ್ನುವುದು ಅವನ ಸ್ವರದ ಏರಿಳಿತದಲ್ಲೇ ಸ್ಪಷ್ಟವಾಗಿತ್ತು. ಆದರೆ ಈಗ ಮುಕುಂದಸ್ವಾಮಿಯ ಮಗನನ್ನು ಎದುರು ನಿಲ್ಲಿಸಿಕೊಂಡು ಆ ಬಗ್ಗೆ ನನಗೆ ಇರಬಹುದಾದ ಪ್ರಶ್ನೆಗಳನ್ನು ಕೇಳಬೇಕು ಎಂದುಕೊಂಡರೂ ಅದು ಅಸಾಧ್ಯವಾಗಿತ್ತು. ಏಕೆಂದರೆ ಎರಡು ಬಾಗಿಲುಗಳನ್ನು ಬಲವಂತವಾಗಿ ಜೋಡಿಸಿಕೊಂಡಂತೆ ತೋರುತ್ತಿರುವ ಆ ಸಣ್ಣ ಹೆಂಚಿನ ಮನೆಯ ಗೋಡೆಗೆ ಫೋಟೋವಾಗಿ ಅವನು ನೇತುಬಿದ್ದು ಅದಾಗಲೇ ಹತ್ತು ವರ್ಷಗಳೇ ಕಳೆದುಹೋಗಿವೆ.

ಮುಕುಂದಸ್ವಾಮಿ ಮಗ ಮೂವತ್ತು ವರ್ಷದವನಾಗಿದ್ದಾಗಲೇ ಅದು ಯಾವುದೋ ಖಾಯಿಲೆಯಿಂದ ಸತ್ತುಹೋಗಿದ್ದ. ಮಗ ಸತ್ತುಹೋದ ನಂತರ ಮುಕುಂದಸ್ವಾಮಿ ಮತ್ತು ಅವನು ಇಬ್ಬರು ಹೆಂಡತಿಯರು ಎಷ್ಟೋ ದಿನಗಳು ಕೂಲಿಗೆ ಹೋಗದೆ ಮನೆಯೊಳಗಿನ ಕತ್ತಲ ಬೆರಳನ್ನು ಹಿಡಿದು ಉಳಿದುಹೋಗಿದ್ದರು. ಅದೊಂದು ದಿನ ನಿಲಂಬೂರಿನಲ್ಲಿದ್ದ ತೋಟದ ಮಾಲೀಕರು ನಡುವತ್ನ ತೋಟಕ್ಕೆ ಬಂದು ಸಮಾಧಾನ ಮಾಡಿದ್ದರು. ಈ ತೋಟದಲ್ಲಿ ಕೆಲಸ ಮಾಡುತ್ತಾ ಇರಬಹುದು ಎಂದಿದ್ದರು. ಅದಕ್ಕಾಗೇ ತಿಂಗಳಿಗೆ ಇಷ್ಟು ಸಂಬಳ ಎಂದು ಗೊತ್ತುಮಾಡಿ ಹೋಗಿದ್ದರು.

ಮಗ ಸತ್ತಿದ್ದು ನನಗಿಂತ ತೋಟದ ಮಾಲೀಕರಿಗೆ ಹೆಚ್ಚು ನೋವು ಎಂದಿದ್ದ ಮುಂದುಸ್ವಾಮಿ. ನನಗೆ ಅವನ ಮಾತು ಅರ್ಥವಾಗದೇ, ಅದು ಹೇಗೆ ಎನ್ನುವುದನ್ನು ಬಗೆಹರಿಸಿಕೊಳ್ಳುವ ಮೊದಲೇ, ತೋಟದ ಮಾಲೀಕರು ಮಾತನಾಡುವ “ಕಮ್ಯೂನಿಸಂ” ಭಾಷೆ ನಡುವತ್ನಲ್ಲಿ ನನ್ನ ಮಗನಿಗೆ ಬಿಟ್ಟರೆ ಮತ್ತೆ ಯಾರಿಗೂ ಬರುವುದಿಲ್ಲ ಎನ್ನುವಂತಹ ಮಾತುಗಳನ್ನು ಹೇಳಿದ. ನನಗೆ ಏನನ್ನೂ ಹೇಳಬೇಕು ಎನಿಸಿದೆ  ಹೆಜ್ಜೆ ಹಾಕುತ್ತಾ ಅವನ ಮಾತುಗಳಿಗೆ ಕಿವಿಯಾಗಿದ್ದೆ.

ದೂರದ ಕಾಸರಗೋಡಿನಿಂದ ಕೇರಳದ ಕರಾವಳಿಯ ಊರುಗಳನ್ನು ದಾಟುತ್ತ, ಮಲಪ್ಪುರಂ ಜಿಲ್ಲೆಯ ನಿಲಂಬೂರನ್ನು ಸೇರಿಕೊಂಡಿದ್ದ ಇವನ ಎರಡು ತಲೆಮಾರಿನ ಹಿಂದಿನ ಪೂರ್ವಜರು ಕನ್ನಡಿಗರು. ಇಂದಿಗೂ ಮನೆಯಲ್ಲಿ ಕನ್ನಡವನ್ನೇ ಮಾತನಾಡುವ ಮುಕುಂದಸ್ವಾಮಿಯ ಮೊದಲ ಹೆಂಡತಿಯೂ ಕನ್ನಡದವಳೇ. ಆದರೆ ಒಬ್ಬಳು ಹೆಂಡತಿ ಇರುವಾಗಲೇ. ಅದು ಯಾವ ಕಾರಣಕ್ಕೆ ತಾನು ಎರಡನೇ ಮದುವೆಯಾದೆ ಎನ್ನುವುದನ್ನು ವಿವರಿಸುವುದಕ್ಕೆ ಮುಕುಂದಸ್ವಾಮಿ ಹೆಣಗಾಡುತ್ತಾನೆ. ಹಾಗೆ ಹೆಣಗಾಡುವಾಗೆಲ್ಲಾ ಅವನ ಅಸ್ಪಷ್ಟತೆ ಢಾಳುಢಾಳಾಗಿ ಹೊರಜಾರುತ್ತದೆ.

ಗಿಡಗಳಿಗೆ ಪಾತಿ ಮಾಡುವ ಕೆಲಸದಿಂದ, ತೋಟದ ಎಲ್ಲಾ ಕೆಲಸಗಳನ್ನು ಮಾಡಲು ಕಲಿತಿರುವ ಮುಕುಂದಸ್ವಾಮಿಯ ಮಲಯಾಳಂ ಹೆಂಡತಿ ಬಹಳ ಚಾಲಾಕಿ. ಕನ್ನಡವನ್ನ ಗ್ರಹಿಸುಷ್ಟು ಬುದ್ದಿವಂತಿಕೆ ಅವಳು ಬೈಗಳುಗಳನ್ನು ಇನ್ನೂ ವೇಗವಾಗಿ ಗ್ರಹಿಸುತ್ತಾಳೆ ಎನ್ನುವುದನ್ನು ಮುಕುಂದಸ್ವಾಮಿ ಬಾವಿಯಲ್ಲಿ ನೀರು ತೋಡುತ್ತಾ, ಮೈ ಮೇಲೆ ಧಬಧಬನೇ ಸುರಿದುಕೊಳ್ಳುವ ಮೊದಲಿನ ಒಂದು ತಾಸಿನ ಮಾತುಕತೆಯಲ್ಲಿ ಹೇಳಿದ್ದ.

ಈ ಮುಕುಂದಸ್ವಾಮಿ ಅದೊಂದು ವಿಲಕ್ಷಣ ಕೀಟದಂತೆ ಜೀವಿಸುತ್ತಿರುವ ಮನುಷ್ಯ. ಕಪ್ಪನೆಮುಖಕ್ಕೆ ಯಾರೋ ಸುಣ್ಣದಲ್ಲಿ ಎರಡು ಚುಕ್ಕೆಗಳನ್ನಿಟ್ಟಿರುವಂತೆ ಅವನ ಶ್ವೇತವರ್ಣದ ಹಲ್ಲುಗಳು ಕಾಣುತ್ತವೆ. ಅಸಾಧ್ಯ ಎನಿಸುವಷ್ಟು ಕೊಳಕುತನ ಮೆರೆಯುವ ಅವನು ಹಲ್ಲುಜ್ಜುವುದೇ ಸ್ವಚ್ಛತೆಗಿರುವ ಮೊದಲ ಮಾನದಂಡ ಎಂದುಕೊಂಡಿದ್ದಾನೆ. ದಿನನಿತ್ಯ ಎರಡು ಬಾರಿ ಸ್ನಾನ ಮಾಡುವ ಅವನು, ಬೆಳಗ್ಗೆ ಎದ್ದವನೇ ತೋಟವನ್ನು ಒಂದು ಸುತ್ತು ಬರುತ್ತಾನೆ.

ಮರದಿಂದ ಬಿದ್ದಿರುವ ತೆಂಗಿನಕಾಯಿಯನ್ನು ಮನೆಯಲ್ಲಿ ಜೋಡಿಸಿಟ್ಟು, ತೆಂಗಿನಮರದ ಕುರಂಬಳೆಗಳನ್ನು ಗುಡ್ಡೆಯಾಗಿಸಿ, ಊರಿನ ಮುಂಬಾಗಕ್ಕೆ ಹೋಗಿಬರುತ್ತಾನೆ. ಬೆಳಗ್ಗೆಯ ತಿಂಡಿ ಮುಗಿಸಿ ಕಾಲು ನಡಿಗೆಯಲ್ಲೇ ನಿಲಂಬೂರಿನಲ್ಲಿರುವ ತೋಟದ ಮಾಲೀಕರ ಮನೆಗೆ ಹೋಗುತ್ತಾನೆ.
ಅವರು ಹೇಳಿದ ಕೆಲಸ ಮುಗಿಸಿ ಸಂಜೆಯ ಹೊತ್ತಿಗೆ ಮನೆಗೆ ಬಂದುಬಿಡುತ್ತಾನೆ. ಹೀಗೆ ತನ್ನದೇ ಲೋಕದಲ್ಲಿ ಬದುಕುತ್ತಿರುವ ಮುಕುಂದಸ್ವಾಮಿಯ ನೆಮ್ಮದಿಗೆ ಕಂಟಕವಾಗಿರುವುದು ಮಾತ್ರ, ಅವನ ಪುಟ್ಟ ಮನೆಗಿರುವ ಎರಡು ಬಾಗಿಲುಗಳು.

ಮುಕುಂದಸ್ವಾಮಿಯ ಇಬ್ಬರು ಹೆಂಡತಿಯರು ಒಂದೇ ಮನೆಯನ್ನು ಎರಡು ಮಾಡಿಕೊಂಡು ಒಬ್ಬನೇ ಗಂಡನ ಜತೆ ಸಂಸಾರ ಮಾಡುತ್ತಿದ್ದಾರೆ. ಅವರಿಬ್ಬರಿಗೂ ಪರಸ್ಪರ ಒಬ್ಬರ ಭಾಷೆ ಮತ್ತೊಬ್ಬರಿಗೆ ಬಾರದೇ ಇದ್ದರೂ ಈಗಾಗಲೇ ಸಾಕಷ್ಟು ಬಾರಿ ತರಾಮಾರಾ ಜಗಳವಾಡಿದ್ದಾರೆ. ಒಲೆಯ ಮೇಲಿನ ಪರೋಟದ ನಾರಿನಂತೆ ಎಳೆದಷ್ಟು ಉದ್ದವಾಗವ ಅವರಿಬ್ಬರ ನಾಲಗೆಯಿಂದ ಹೊರಡುವ ಮಸಾಲೆಭರಿತ ಭಾಷೆಗೆ ಭಯಗೊಂಡು ಮುಕುಂದಸ್ವಾಮಿ ಪ್ರೇಕ್ಷಕನಂತೆ ಮೌನವಾಗಿ ಜೀವನ ಕಳೆಯುತ್ತಿದ್ದಾನೆ.

ತಪ್ಪಿಯೂ ಅವರಿಬ್ಬರ ನಡುವಿನ ಸ್ವಯಂಘೋಷಿತ ಸ್ವಾಭಿಮಾನದ ಹೋರಾಟವನ್ನ ತಪ್ಪಿಸುವ ಯಾವ ಯತ್ನವನ್ನೂ ಮಾಡಿಲ್ಲ. ಅವರಿಬ್ಬರ ನಡುವಿನ ಈ ಕಿತ್ತಾಟ ಮಿತಿಮೀರುತ್ತಿದ್ದ ದಿನಗಳಲ್ಲಿ, ಅದನ್ನು ಶಮನ ಮಾಡುವ ದಾರಿತೋರದೆ ಕಡೆಗೆ ನಿಲಂಬೂರಿನಲ್ಲಿದ್ದ ತೋಟದ ಮಾಲೀಕರ ಕಾಲು ಹಿಡಿದಿದ್ದ. ಅವನ ಸಣ್ಣಮನೆಗೆ ಮತ್ತೊಂದು ಬಾಗಿಲು ಮಾಡಿಸಿಕೊಡಿ ಎಂದು ಅಲವತ್ತುಕೊಂಡಿದ್ದ. ಮನೆಗೆ ಮತ್ತೊಂದು ಬಾಗಿಲು ಮಾಡಿಸುವುದರಿಂದ ಅವರಿಬ್ಬರು ಪರಸ್ಪರ ಎದುರುಗೊಳ್ಳದೆ ಇರುವುದು ಸಾಧ್ಯವಾಗುತ್ತದೆ. ಅದು ಸಾಧ್ಯವಾದರೆ ಹೇಗಿದ್ದರೂ ಪ್ರತ್ಯೇಕ ಕೂಲಿ ಮಾಡುತ್ತಾ, ಪ್ರತ್ಯೇಕ ಒಲೆಯಲ್ಲಿ ಅಡಿಗೆ ಮಾಡುತ್ತ ಬದುಕಿರುವುದರಿಂದ ಇಬ್ಬರೂ ಅವರವರ ಪಾಡಿಗೆ ಉಳಿದುಹೋಗುತ್ತಾರೆ. ಹೀಗಾಗಿ ಮನೆಗೆ ಮತ್ತೊಂದು ಬಾಗಿಲು ಮಾಡಿಸುವುದೇ ತನ್ನ ಮೋಕ್ಷಕ್ಕೆ ದಾರಿ ಎನ್ನುವುದನ್ನು ಅವರಿಗೆ ಮನದಟ್ಟುಮಾಡಿಸಿ ಮನೆಗೆ ಮತ್ತೊಂದು ಬಾಗಿಲು ಜೋಡಿಸಿದ್ದ.

ಈಗ ಆ ಮನೆಗೆ ಬಾಗಿಲು ಬಂದು ಎಷ್ಟೋ ವರ್ಷಗಳು ಕಳೆದುಹೋಗಿವೆ. ಮುಕುಂದಸ್ವಾಮಿಯೂ ಯಾವ ತಕರಾರುಗಳು ಇಲ್ಲದೇ ಅವನಿಗೆ ಬೇಕು ಎನಿಸಿದ ಮನೆಯ ಬಾಗಿಲನ್ನು ಉಪಯೋಗಿಸುತ್ತ, ಬೇಕು ಎನಿಸಿದ ಹೆಂಡತಿಯ ಜತೆ ಊಟ ಮಾಡುತ್ತ ಉಳಿದುಹೋಗಿದ್ದಾನೆ.  ಸುಮ್ಮನೇ ಮಾತಿಗಿಳಿದಿದ್ದರ ಪರಿಣಾಮ ಈ ಎಲ್ಲವನ್ನೂ ನಿರ್ಭಯವಾಗಿ ಹೇಳಿಕೊಳ್ಳುತ್ತಿದ್ದ ಮುದುಕನಂತಿರುವ ಮುಕುಂದಸ್ವಾಮಿ ತುಂಬಾ ಪಾಪದವನು ಎನಿಸಿದ್ದಾನೆ.

ನಡುವತ್‍ನ ಬಸ್‍ಸ್ಟಾಂಡ್ ಎದುರಿನ ಸಣ್ಣ ಅಂಗಡಿಯಲ್ಲಿ ಬಾಳೆಹಣ್ಣು ತೆಗೆದುಕೊಳ್ಳುವಾಗ ಚಿಲ್ಲರೆ ವಿಷಯವಾಗಿ ಅಂಗಡಿಯವನೊಂದಿಗೆ ಮಾತನಾಡಬೇಕಾಗಿತ್ತು. ಹೀಗೆ ಮಾತನಾಡುವಾಗ ನಾನು ಕನ್ನಡದವನು ಎನ್ನುವುದನ್ನು ತಿಳಿದ ಅಂಗಡಿಯವನು, ನಡುವತ್ನಲ್ಲಿಯೂ ಒಬ್ಬರು ಕನ್ನಡವರು ಇದ್ದಾರೆ ಎನ್ನುವುದು ಅಸಾಧ್ಯ ಇಂಗ್ಲಿಷ್ನಲ್ಲಿ ಹೇಳುವುದಷ್ಟೇ ಅಲ್ಲದೆ, ಅವನೇ ಮುಕುಂದಸ್ವಾಮಿಯ ತೋಟದವರೆಗೂ ನನ್ನನ್ನು ಕರೆದುತಂದು ಬಂದು ಬಿಟ್ಟು ಹೋಗಿದ್ದ.

ಕನ್ನಡದವರು ಎನ್ನುವ ಕಾರಣಕ್ಕೆ ನಾಲ್ಕು ಮಾತು ಮುಗಿಸಿ ಹೊರಡಬೇಕು ಎನ್ನುವ ಯೋಜನೆಯೇ ಜಾರಿಯಾಗಲಿಲ್ಲ. ಸಣ್ಣದಾಗಿ ಮಾತು ಆರಂಭಿಸಿದ್ದ ಮುಕುಂದಸ್ವಾಮಿ ಇಡೀ ಸಂಜೆಯನ್ನು ತಿಂದು ಮುಗಿಸಿದ್ದ. ಆ ದಿನ ಅವನ ಮನೆಯಲ್ಲೇ ಉಳಿಸಿಕೊಂಡು ಬಾವಿಯ ಎದುರಿನ ಅಂಗಳದಲ್ಲಿ ಮಾಡಿನ ಕೆಳಗೆ ಮಲಗಲು ವ್ಯವಸ್ಥೆ ಮಾಡಿದ್ದ. ಅದೇ ರಾತ್ರಿ ಮೌಖಿಕವಾಗಿ ಅವನ ಆತ್ಮಕತೆಯ ಕೆಲವು ಪ್ರಮುಖ ಅಧ್ಯಾಯಗಳನ್ನು ಹೇಳಿದ್ದ ಅವನು, ನಿದ್ರೆಗೆ ಜಾರುವ ಮೊದಲು ನಾಳೆಯೂ ಅವನ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಯಾವುದೋ ಉಮೇದಿನಲ್ಲಿ ತಾಕೀತು ಮಾಡಿದ್ದ. ಕತ್ತಲೆಯಲ್ಲಿ ಹ್ಞೂಗುಟ್ಟಿದ್ದ ನಾನು, ಇರುವುದಾದರೇ ಏಕೆ ಎನ್ನುವುದನ್ನು ಅವನು ನಿದ್ರೆಹೋದ ನಂತರ ಪ್ರಶ್ನಿಸಿಕೊಂಡು ಉತ್ತರ ದೊರೆಯದೆ ಹಾಗೆಯೇ ನಿದ್ರೆಹೋಗಿದ್ದೆ.

ಕೇರಳದ ಊರುಗಳನ್ನು ಸುತ್ತುವುದು ನನ್ನ ಆಯ್ಕೆಯಾಗಿರಲಿಲ್ಲ. ಆದರೆ ಪಶ್ಚಿಮಘಟ್ಟದ ಕಾಡುಗಳನ್ನು ಅಲೆಯುವ ಹೆಸರಿನಲ್ಲಿ ಬರ್ಡ್ ವಾಚಿಂಗ್ ಮಾಡುವುದಕ್ಕೆ ಒಂದು ತಂಡ ಹೊರಟಿತ್ತು. ಕಾಡು ಅಲೆಯುವ ಆಸಕ್ತಿಯನ್ನು ಹೊಂದಿರುವ ಯಾರು ಬೇಕಾದರೂ ನಮ್ಮನ್ನು ಸೇರಿಕೊಳ್ಳಬಹುದು ಎನ್ನುವ ಮುಕ್ತ ಅವಕಾಶವನ್ನ ಪಶ್ಚಿಮಘಟ್ಟಕ್ಕೆ ಹೊರಟಿದ್ದ ತಂಡ ತೆರದಿಟ್ಟಿತ್ತು. ಒಂದು ತಿಂಗಳು ಕೇರಳದ ಪಶ್ಚಿಮಘಟ್ಟದ ಕಾಡುಗಳಲ್ಲಿ ಅಲೆಯುತ್ತ, ಆ ಕಾಡಿನಲ್ಲಿ ಮಾತ್ರವೇ ಹೆಚ್ಚಾಗಿ ವಾಸಿಸುವ ಹೆಣ್ಣು ಹಕ್ಕಿಯೊಂದರ ಜೀವನಶೈಲಿಯನ್ನು ಅಧ್ಯಯನ ಮಾಡುವುದು ಅವರ ಮುಖ್ಯ ಉದ್ದೇಶ.

ಒಂದು ತಿಂಗಳ ಅಧ್ಯಯನ ನಂತರ ಏರ್ಪಡಿಸುವ ಸೆಮಿನಾರಿನಲ್ಲಿ ಬರ್ಡ್ ವಾಚಿಂಗ್‍ಗೆ ಹೊರಟಿದ್ದ ಪ್ರತಿಯೊಬ್ಬರು ಆ ಹಕ್ಕಿಯ ಕುರಿತು ಮಾಡಿದ ಅಧ್ಯಾಯನ ಹಾಗೂ ಗ್ರಹಿಕೆಗಳನ್ನು ಹಂಚಿಕೊಳ್ಳಬೇಕಿತ್ತು. ಹೀಗೆ ಬರ್ಡ್ ವಾಚಿಂಗ್ಗೆ ಹೊರಟಿದ್ದ ಪ್ರತಿಯೊಬ್ಬರ ಮಾತುಗಳನ್ನು ಸಂಗ್ರಹಿಸಿ ಆ ಹಕ್ಕಿಯ ಬಗ್ಗೆ ಒಂದು ಪುಸ್ತಕ ತಯಾರಿಸುವುದು ಅವರ ಅಂತಿಮ ಗುರಿಯಾಗಿತ್ತು. ಬೆಂಗಳೂರಿನಿಂದ  ಹೊರಟು ಅವರೊಂದಿಗೆ ಪಶ್ಚಿಮಘಟ್ಟದ ಕಾಡುಗಳಲ್ಲಿ ಬರ್ಡ್ ವಾಚಿಂಗ್ ಮಾಡಲು ಸೇರಿಕೊಳ್ಳುವಂತೆ ಮಾಡಿದ್ದು, ಅವರು ಅಧ್ಯಯನ ಮಾಡಲು ಆರಿಸಿಕೊಂಡಿದ್ದ ಆ ಹಕ್ಕಿಯ ಗುಣ.

ಅದೊಂದು ವಿಚಿತ್ರ ಹಕ್ಕಿ. ಮುಳ್ಳುಗಂಟಿಗಳ ಮರಗಳ ಕೊಂಬೆಯ ತುದಿಗೆ ಗೂಡು ಕಟ್ಟುವ ಗಂಡುಹಕ್ಕಿಗಳನ್ನು ಅದೇ ಪ್ರಬೇಧದ ಹೆಣ್ಣುಹಕ್ಕಿಗಳು ಎಷ್ಟೂ ಕಿಲೋ ಮೀಟರ್ ದೂರದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತವೆ. ಹೀಗೆ ಗಂಡುಹಕ್ಕಿಯ ಪ್ರತಿಹೆಜ್ಜೆಯನ್ನು ಅವಲೋಕಿಸುವ ಹೆಣ್ಣುಹಕ್ಕಿಗಳು
ಅವುಗಳ ಬಣ್ಣ, ಹಾರುವ ಎತ್ತರ, ಹದ್ದುಗಳಂತಹ ದೈತ್ಯಗಳಿಂದ ಎದುರಾಗುವ ಸಾವಿನಂತಹ ಸನ್ನಿವೇಶವನ್ನ ನಿಭಾಯಿಸುವ ಕಲೆ, ಪ್ರತಿರೋಧಿಸುವಾಗ ತೋರುವ ಧೈರ್ಯ, ಅವುಗಳು ದಿನನಿತ್ಯ ತಿನ್ನುವ ವೈವಿಧ್ಯಮಯ ಕಾಳು ಹಾಗೂ ಹಣ್ಣುಗಳು ಸೇರಿದಂತೆ ಒಟ್ಟಾರೆ ಚಂದದ ಬದುಕಿಗೆ ಬೇಕಾದ ಎಲ್ಲವನ್ನೂ ಕೂಡಿಸುವ ಛಾತಿಯುಳ್ಳ ಗಂಡುಹಕ್ಕಿಯನ್ನು ಕಡೆಗೆ ಹೆಣ್ಣುಹಕ್ಕಿಗಳು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ನಿಜದಲ್ಲಿ, ಆ ಗಂಡುಹಕ್ಕಿ ಅಷ್ಟೆಲ್ಲಾ ಸಾಹಸಗಳನ್ನು ತೋರುವುದು ಹೆಣ್ಣುಹಕ್ಕಿಯನ್ನು ಒಲಿಸಿಕೊಳ್ಳುವಾಗಿ ಮಾತ್ರ.

ಹೀಗೆ ಐದಾರು ತಿಂಗಳ ದೀರ್ಘ ಪರೀಕ್ಷೆಯ ನಂತರ ಗಂಡುಹಕ್ಕಿಯನ್ನು ಆಯ್ಕೆ ಮಾಡಿಕೊಳ್ಳುವ ಹೆಣ್ಣುಹಕ್ಕಿ ಆಯ್ಕೆ ಮಾಡಿಕೊಂಡ ಗಂಡುಹಕ್ಕಿಯ ಗೂಡನ್ನು ಯಾವ ಆಹ್ವಾನಪತ್ರಿಕೆಯೂ ಇಲ್ಲದೇ ಪ್ರವೇಶಿಸಿ ನಾನು ನಿನ್ನವಳು ಎನ್ನುವಂತೆ ಸರ್ವವನ್ನು ಅರ್ಪಿಸಿಕೊಳ್ಳುತ್ತವೆ. ಗಂಡುಹಕ್ಕಿಯೂ ತನ್ನ ಹೋರಾಟದ ಫಲವಾಗಿ ಚಂದದ ಹೆಣ್ಣುಹಕ್ಕಿಯನ್ನು ಪಡೆದ ಗೆಲುವಿನಲ್ಲಿ ಕೆಲಕಾಲ ಅರಸಿಬಂದ ಹೆಣ್ಣುಹಕ್ಕಿಯೊಂದಿಗೆ ಗೂಡಿನಲ್ಲಿ ಬದುಕುತ್ತದೆ. ಆದರೆ ಗಂಡುಹಕ್ಕಿ, ಸದಾಕಾಲವೂ ಅದೇ ಹೆಣ್ಣುಹಕ್ಕಿಯೊಂದಿಗೆ ಉಳಿಯುವುದಿಲ್ಲ. ತನಗೆ ಬೇಸರವಾದಾಗ, ಕಟ್ಟಿದ ಗೂಡನ್ನು ಹೆಣ್ಣುಹಕ್ಕಿಗೆ ಉಳಿಸಿ ಮತ್ತೊಂದು ಕಡೆಗೆ ಹೊರಡುತ್ತದೆ.

ಹೀಗೆ ಹೊರಟ ಗಂಡುಹಕ್ಕಿಗೆ ಮತ್ತೊಂದು ಗೂಡು ಕಟ್ಟುವ ಮತ್ತೊಂದು ಹೆಣ್ಣುಹಕ್ಕಿಗಾಗಿ ಕಾಯುವ ಅವಕಾಶವಿದೆ. ಆದರೆ ಐದಾರು ತಿಂಗಳು ಕಾದು ತನಗೆ ಬೇಕಾದ ಗಂಡುಹಕ್ಕಿಯನ್ನು ಆರಿಸಿಕೊಳ್ಳುವ ಹೆಣ್ಣುಹಕ್ಕಿಗೆ ಮತ್ತೊಂದು ಗಂಡುಹಕ್ಕಿಯನ್ನು ಆರಿಸಿಕೊಳ್ಳುವ ಅವಕಾಶವಿಲ್ಲ. ನನಗೆ ಈಗಲೂ ಅದೊಂದು ವಿಚಿತ್ರ ಎನಿಸುತ್ತದೆ.

ಪ್ರಕೃತಿಯಯಲ್ಲಿ ಮನುಷ್ಯನ ಎಣಿಕೆ ಹಾಗೂ ಆವಿಷ್ಕಾರಗಳು ಸ್ಪರ್ಶಿಸಲು ಅಸಾಧ್ಯವಾಗಿರುವ ಕೋಟಿಕೋಟಿ ಪದರುಗಳಲ್ಲಿ ಪಶ್ಚಿಮಘಟ್ಟದ ಈ ಹಕ್ಕಿಯ ಬದುಕು ಕೂಡ ಒಂದು ಎನಿಸುತ್ತದೆ. ನಾವು ಮನುಷ್ಯರು ಪಶ್ಚಿಮಘಟ್ಟದ ಹಕ್ಕಿಗಳ ಬದುಕನ್ನು ನಮ್ಮ ವಿವೇಚನೆಯ ಆಧಾರದಿಂದ ಅವುಗಳ ಬದುಕನ್ನು ಅಧ್ಯಯನ ಮಾಡಬಹುದೇ ಹೊರತು, ಆ ಹಕ್ಕಿಗಳ ಅಸಲಿ ಮನೋಧರ್ಮವನ್ನಾಗಲಿ, ಅವುಗಳ ಜೀವನಶೈಲಿಯ ಹಿಂದಿನ ಮರ್ಮವನ್ನಾಗಲಿ ಅವಲೋಕಿಸುವುದು ಯಾವತ್ತಿಗೂ ಅಸಾಧ್ಯಾವೇ ಸರಿ. ಪ್ರಕೃತಿಯಲ್ಲಿ ಮನುಷ್ಯ ಗ್ರಹಿಸಿರುವುದು ಕೇವಲ ಒಂದು ಬಿಂದುವಿನಷ್ಟು ಮಾತ್ರ ಎನ್ನುವುದಕ್ಕೆ ಇದೂ ಒಂದು ಉದಾಹರಣೆಯಾಗಬಲ್ಲದು ಎನ್ನುವುದನ್ನು ನಾನು ಇಂದಿಗೂ ಒಪ್ಪಿಕೊಳ್ಳುತ್ತೇನೆ.

ಬರ್ಡ್ ವಾಚಿಂಗ್ ಗೆ  ಹೊರಟ ಮೊದಲ ವಾರದಲ್ಲೇ ಕಿರಿಕಿರಿಯಾಗಿತ್ತು. ನಾವು ನಮ್ಮ ಪಾಡಿಗೆ ಹಕ್ಕಿಯನ್ನು ಹುಡುಕಿ, ತನ್ಮಯವಾಗಿ ಕಾಡಿನ ಸದ್ದಿನೊಂದಿಗೆ ಲೀನವಾಗಲು ಅಗತ್ಯವಾದ ಏಕಾಂತವನ್ನು ಸೃಷ್ಠಿಸಿಕೊಳ್ಳುವುದೇ ಅಸಾಧ್ಯವಾದ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲಿ ಬಂದಿದ್ದ ಬಹುತೇಕರು ಮಾತಿನಲ್ಲಿಯೇ ಮುಳುಗಿಹೋಗಿ ಹಕ್ಕಿಯೊಂದಿಗೆ ಮೌನವಾಗಿ ಸಂಭಾಷಿಸುವುವ ಅವಕಾಶವನ್ನೇ ಕಡೆಗಣಿಸಿದ್ದರು.  ಅವರು ಹೇಳುವ ಅದದೇ ವಿಚಾರಗಳು ಸಾಕು ಎನಿಸಿತ್ತು. ನನ್ನ ಸ್ವತಂತ್ರ ಹರಣವಾಗುತ್ತಿರುವುದು ಸಾಭೀತಾಗಿ ಒಂದೇ ವಾರಕ್ಕೆ ಊರಿಗೆ ಹೊರಡುತ್ತೇನೆ ಎಂದು ಗುಂಪನ್ನು ತೊರೆದು ಕೇರಳವನ್ನ ಅಲೆಯಲು ತೀರ್ಮಾನಿಸಿ ಹೊರಟುಬಿಟ್ಟಿದ್ದೆ. ಹೀಗೆ ದಾರಿಕಾಣದೆ ಹೊರಟ ಯಾವುದೋ ತಿರುವಿನ ಊರಿನಲ್ಲಿ ಮುಕುಂದಸ್ವಾಮಿ ಸಿಕ್ಕಿದ್ದ.

ರಾತ್ರಿಪೂರ ಅವನ ಕತೆಯನ್ನು ನನಗೆ ಒಪ್ಪಿಸಿದಕ್ಕೆ ಋಣಸಂದಾಯವಾಗಿ ನಾನು ಬೆಳಗ್ಗೆ ಅವನೊಂದಿಗೆ ತೋಟದಲ್ಲಿ ತಿರುಗುವಾಗ ನನ್ನ ಈ ಹಕ್ಕಿಯ ಜಾಡಿನ ಕತೆಯನ್ನು ಅನಿವಾರ್ಯವಾಗಿ ಹೇಳಿದ್ದೆ. ಹೆಣ್ಣುಹಕ್ಕಿಯ ಗುಣ ಲಕ್ಷಣಗಳನ್ನು ಹೇಳುತ್ತಿರುವಾಗ ಯಾವುದೋ ಅನ್ಯಗ್ರಹದ ಕತೆಯನ್ನು ಕೇಳುತ್ತಿದ್ದೇನೆ ಎನ್ನುವಂತೆ ಕಣ್ಣುಮಾಡುತ್ತ ಕೇಳಿಸಿಕೊಂಡಿದ್ದ. ಆ ಪಶ್ಚಿಮಘಟ್ಟದ ಹೆಣ್ಣುಹಕ್ಕಿಯನ್ನು ತನ್ನ ಎರಡನೇ ಮಲೆಯಾಳಿ ಹೆಂಡತಿಗೆ ಹೊಲಿಸಿ ತಾನೇ ಒಮ್ಮೆ ಜೋರಾಗಿ ನಕ್ಕುಬಿಟ್ಟಿದ್ದ. ಆದರೆ ಅವಳ ಯಾವ ಹಿನ್ನಲೆಯೂ ತಿಳಿಯದ ನಾನು, ನಗುವುದಕ್ಕೆ ಸರಿಯಾದ ಕಾರಣವೂ ಇರದೇ ಅವನನ್ನೇ ನೋಡುತ್ತ ಹೆಜ್ಜೆಹಾಕಿದ್ದೆ.

ಎಷ್ಟೋ ಹೊತ್ತಿನ ನಂತರ ತನ್ನ ಬಾವಿ ನೀರಿನ ಸ್ನಾನ ಮುಗಿಸಿ ಬಂದ ಮುಕುಂದಸ್ವಾಮಿ ನಡುವತ್ ನನ್ನನ್ನು ಸುತ್ತಾಡಿಸಿದ. ಮಧ್ಯಾಹ್ನ ಅವನ ಮನೆಯಲ್ಲೇ ಊಟ ಮಾಡಿಸಿ, ಸಂಜೆಯ ಹೊತ್ತಿಗೆ ನಿಲಂಬೂರಿನಲ್ಲಿ ಮೀನು ತಂದು ತಿನ್ನುವ ಎಂದು ಗೂಡ್ಸ್ ಆಟೋವೊಂದರಲ್ಲಿ ಅವನೊಂದಿಗೆ ಕರೆದುಕೊಂಡುಹೋದ. ಸಂಜೆ ಮನೆಗೆ ಬಂದವನು ಇಬ್ಬರು ಹೆಂಡತಿಯರನ್ನು ಕರೆದು ರಾತ್ರಿಗೆ ಮೀನು ಮಾಡಿ, ಒಟ್ಟಿಗೆ ಊಟ ಮಾಡುವ ಎಂದವನು ನನ್ನನ್ನು ತೋರಿಸಿ, ಇವನು ನಾಳೆ ಊರಿಗೆ ಹೊರಡುತ್ತಾನೆ ಎಂದು ಹೇಳಿದ್ದ.

ಮೀನು ಸಾರನ್ನು ರುಚಿಗಟ್ಟಾಗಿ ಮಾಡುವ ಅವನ ಮಲಯಾಳಂ ಹೆಂಡತಿಗೆ ಪೂಸಿ ಹೊಡೆದು ರಾತ್ರಿಗೆ ಒಳ್ಳೆಯ ಸಾರು ಮಾಡು ಎನ್ನುವುದನ್ನು ಅವನ ಇಳಿವಯಸ್ಸಿನ ತುಂಟತನದಲ್ಲಿ ಹೇಳಿದ್ದ, ಎಲ್ಲವೂ ಸಾಂಗವಾಯಿತು ಎನಿಸುತ್ತಿದ್ದಂತೆ ಉಳಿದ ಕತೆಗಳನ್ನು ಹೇಳು ಎನ್ನುವಂತೆ ಮರಳಿ ಮಾತಿಗಿಳಿದಿದ್ದ.
ಮಾತಿನ ನಡುವೆ ಅಡುಗೆಗೆ ಕೈ ಜೋಡಿಸಿದ್ದ ಮುಕುಂದಸ್ವಾಮಿಯ ಕನ್ನಡದ ಹೆಂಡತಿ ಆಗಾಗ ಹೊರಬಂದು ನನಗೂ ಕನ್ನಡ ಗೊತ್ತು ಎನ್ನುವಂತೆ, ನನ್ನೊಂದಿಗೆ ಇನ್ನಿಲ್ಲದ ತರಲೆ ಪ್ರಶ್ನೆಗಳನ್ನು ಕೇಳುತ್ತಾ ಸಮಯವನ್ನ ಸಾಗಿಸುವ ಬದಲು ಕೊಲ್ಲುತ್ತಿದ್ದಳು.

ಒಲೆಯ ಮೇಲೆ ಬೇಯುತ್ತಿದ್ದ ಮೀನಿನಷ್ಟೇ ಅಸಹಾಯಕವಾಗಿ ಆ ಕಾಡಿನಂತಹ ಊರಿನಲ್ಲಿ ಸಿಕ್ಕಿಬಿದ್ದಿದ್ದ ನಾನು ಬೆಳಗಾಗುವುದನ್ನೇ ಕಾಯುತ್ತಿದ್ದೆ. ನಡುನಡುವೇ ಕನ್ನಡದ ಹೆಂಡತಿಯೂ, ಅವಳ ಜನ್ಮಾಂತರ ಶತ್ರು ಎನ್ನುವಂತೆ ಭಾವಿಸಿದ್ದ ಮಲೆಯಾಳಂ ಹೆಂಡತಿಗಾಗಿ ಹೂಡಿದ್ದ ಬಾಗಿಲಿನಲ್ಲೇ ಒಳಹೋಗಿ ಬರುತ್ತಿದ್ದಳು, ಒಲೆಯ ಮೇಲಿನ ಮೀನಿನ ಸಾರು, ತನ್ನ ಊರಿನ ಕಡೆಯ ಸೊಗಡಿಗೆ ಹೊಂದುತ್ತದೆಯೇ ಎನ್ನುವುದನ್ನು ನಗುತ್ತಲೇ ಪರೀಕ್ಷಿಸಿ ಗಂಡನಿಗೆ ವರದಿ ಒಪ್ಪಿಸುತ್ತಿದ್ದಳು.
ಮುಕುಂದಸ್ವಾಮಿ ಮಾತ್ರ ರೈಲಿನಂತೆ ನಾಜೂಕಾಗಿ ಎರಡು ಹಳಿಗಳಂತಹ ಅವನ ಇಬ್ಬರು ಹೆಂಡತಿಯರನ್ನು ಮಿತವಾಗಿ ಮಾತನಾಡಿಸುತ್ತಾ ಅಡಿಗೆ ಪೂರ್ತಿಗೊಳಿಸಿ ಊಟಕ್ಕೆ ಅಣಿಯಾಗಿಸಿದ ಖುಷಿಯಲ್ಲಿದ್ದ. ಮೀನಿನ ಪರಿಮಳ ಮನೆಯನ್ನು ಆವರಿಸಿಕೊಂಡಿತ್ತು. ಅದು ಯಾವುದೋ ಕೇರಳದ ಹುಳಿಯನ್ನು ಹಾಕಿ ಎನ್ನುವುದನ್ನು ಪದೇ ಪದೇ ನೆನಪಿಸುತ್ತಿದ್ದ ಅವನು, ಅವರಿಬ್ಬರನ್ನು ಪಳಗಿಸುವುದಕ್ಕೆ ಬೇಕಾದ ಸೂತ್ರವನ್ನು ಇಷ್ಟು ವರ್ಷಗಳ ನಂತರ ಅರಿತುಕೊಂಡೆ ಎನ್ನುವ ಸಮಾಧಾನದಲ್ಲಿರುವಂತೆ ಕಾಣುತ್ತಿತ್ತು.

ಮೀನಿನ ಸಾರು ಮಾಡಿದ್ದ ಮುಕುಂದಸ್ವಾಮಿಯ ಮಲೆಯಾಳಂ ಹೆಂಡತಿ ಮನೆಯ ಎದುರಿದ್ದ ಬಾವಿಕಟ್ಟೆಯ ಅಂಗಳದಲ್ಲಿ ಚಾಪೆ ಹರವಿ ತಟ್ಟೆಗಳನ್ನು ಜೋಡಿಸಿಟ್ಟಳು. ನಾನು ಮಾಡುಬಹುದಾಗಿದ್ದು ಇದಿಷ್ಟು ಮಾತ್ರ ಎನ್ನುವಂತೆ ಮಾತಿನಲ್ಲಿ ಮುಳುಗಿದ್ದ ಎಲ್ಲರನ್ನೂ ಒಮ್ಮೆ ದಿಟ್ಟಿಸಿ ನೋಡಿದ್ದಳು.  ಕಡೆಗೆ ತನ್ನ ಇಬ್ಬರೂ ಹೆಂಡತಿಯರನ್ನು ಮುಕುಂದಸ್ವಾಮಿಯೇ ಎಲ್ಲರನ್ನೂ ಕರೆದು ಊಟಕ್ಕೆ ಕೂರಿಸಿ ಉಳಿದ ಕತೆಗಳನ್ನು ಹೇಳಿದ. ಯಾವುದೋ ಪ್ರಭೇದದ ಹಕ್ಕಿಯನ್ನು ಹುಡುಕಿ ಬಂದ ನನಗೆ ಮುಕುಂದಸ್ವಾಮಿ ಹಾಗೂ ಅವನ ಇಬ್ಬರು ಹೆಂಡತಿಯರು ಹಕ್ಕಿಯಷ್ಟೇ ವಿಚಿತ್ರವಾಗಿ ಕಂಡಿದ್ದಾರೆ. ಒಂದೇ ಮನೆಗೆ ಎರಡು ಬಾಗಿಲುಗಳನ್ನು ಜೋಡಿಸಿರುವ ಅವರ ಮನೋಧರ್ಮಗಳು ಕೂಡ ಹಕ್ಕಿಯಷ್ಟೇ ನಿಗೂಢ ಎನಿಸಿದೆ.

ಊಟದ ನಡುವೆ ಮುಕುಂದಸ್ವಾಮಿ ಬೆಂಗಳೂರಿಗೆ ಹೋಗಲು ಯಾವ ಊರಿನಿಂದ ಹೊರಡಬೇಕು
ಎನ್ನುವುದನ್ನು ರೂಟ್‍ಮ್ಯಾಪ್ ಸಮೇತ ವಿವವರಿಸುತ್ತಿದ್ದ. ಅವನ ಇಬ್ಬರು ಹೆಂಡತಿಯರು ಊಟ ಮಾಡುತ್ತ ಮಲಯಾಳಂನಲ್ಲಿ ಸಣ್ಣದಾಗಿ ಮಾತಿಗಿಳಿದಿದ್ದರು. ಊಟದ ನಡುವೆಯೇ ಇದೊಂದು ಮನೆಯಲ್ಲಿ ಬೆಚ್ಚಗೆ ಗೋಡೆ ನೇತುಬಿದ್ದಿರುವ ಆ ಹುಡುಗನ ಕುರುಮರಿಯಂತಹ ಮುಖ ನೆನಪಾಯಿತು. ನಾನು ಕೇಳದೇ ಉಳಿದ ಪ್ರಶ್ನೆಗಳಲ್ಲಿ ಬಹುಮುಖ್ಯವಾದ ಪ್ರಶ್ನೆ ಅದೊಂದೇ ಎನಿಸಿತು.
ಹೀಗೆ ಅಸಾಧ್ಯವಾಗಿ ಕಾದಾಡುವ ಈ ಇಬ್ಬರಲ್ಲಿ, ಗೋಡೆಯ ಫೋಟೋ ಫ್ರೇಮಿನ ರೂಪದಲ್ಲಿ ಇವರೊಂದಿಗೆ ಬದುಕುತ್ತಿರುವ ಆ ಹುಡುಗ ಯಾರ ಎನ್ನುವುದೇ ಗೊಂದಲವಾಯಿತು. ಕೇಳಬೇಕು ಎನಿಸಿ ಮುಕುಂದಸ್ವಾಮಿಯನ್ನು ತಡಮಾಡದೆ ಕೇಳಿದೆ.

“ಮುಕುಂದುಸ್ವಾಮಿ ತೀರಿಕೊಂಡ ಅವನು ಈ ಇಬ್ಬರಲ್ಲಿ ಯಾರ ಮಗ?” ಎಂದೆ.

ನನ್ನ ಪ್ರಶ್ನೆ ಮುಕುಂದಸ್ವಾಮಿ ಕನ್ನಡದ ಹೆಂಡತಿಗೆ ಅರ್ಥವಾಗಿ, ನಾನು ಕೇಳಿದ ಪ್ರಶ್ನೆಯನ್ನ ಅವಳು ಕೇಳದೇ ಇದ್ದರೂ ಮಗ್ಗುಲಿನಲ್ಲಿದ್ದ ಮಲಯಾಳಂನವಳಿಗೆ ಮಾತಿನನಲ್ಲೇ ತುರ್ಜುಮೆ ಮಾಡಿದ್ದಳು.
ನನ್ನ ಆ ಪ್ರಶ್ನೆಗೆ ಅವರಿಬ್ಬರೂ ಇಬ್ಬರೂ ಸಣ್ಣದಾಗಿ ನಕ್ಕರು.

ನಾನು ಮತ್ತೊಮ್ಮೆ ಮುಕುಂದಸ್ವಾಮಿಯನ್ನು ಕೇಳಿದೆ. “ಹೇಳಿ ಮುಕುಂದಸ್ವಾಮಿ, ಅವನು ಈ ಇಬ್ಬರಲ್ಲಿ ಯಾರ ಮಗ” ಎಂದು ಈ ಬಾರಿ ಅವನಿಬ್ಬರ ಹೆಂಡತಿರ ಕಡೆಗೆ ಬೆರಳು ತೋರಿ ಮತ್ತೊಮ್ಮೆ ಕೇಳಿದೆ.

ಈ ಬಾರಿ ಮುಕುಂದಸ್ವಾಮಿಯೂ ಅವನ ಹೆಂಡತಿಯರಷ್ಟೇ ಸಣ್ಣದಾಗಿ ನಗೆಯಾಡಿದ.
 

Leave a Reply