ಹೂವು ಮಾರುವ ಹುಡುಗ..

ನಗರದ ಸರ್ಕಲ್ ವೊಂದರಲ್ಲಿ ಹೂವು ಮಾರುತ್ತಿದ್ದ ಆ ಹುಡುಗನ ಬಳಿ ಅವನದೇ ವಯೋಮಾನದ ಹುಡುಗಿಯೋರ್ವಳು ದಾಸವಾಳ ಹೂವೊಂದನ್ನು ಕೊಳ್ಳಲು ಬಂದಳು. ಜೀವಶಾಸ್ತ್ರದ ಪ್ರಯೋಗಾಲಯದಲ್ಲಿ ಅವಶ್ಯವಿದ್ದ ಆ ಹೂವನ್ನು ಕೊಂಡಾಗ ಆಕೆ ಕೊಟ್ಟ ಹಣಕ್ಕೆ ಹಿಂತಿರುಗಿ ಕೊಡಲು ಅವನ ಬಳಿ ಚಿಲ್ಲರೆ ಇಲ್ಲದ ಕಾರಣ ಒಂದು ಕೆಂಗುಲಾಬಿಯನ್ನು ಆಕೆಗೆ ಕೊಟ್ಟನು. ಕೆಂಗುಲಾಬಿಯನ್ನು ಇಷ್ಟಪಡದ ಹುಡುಗಿಯರುಂಟೆ ? ಅವಳು ಚಿಲ್ಲರೆ ಬದಲಾಗಿ ಅದನ್ನೇ ಪಡೆದಳು.

ಆ ‘ವ್ಯಾಪಾರ’ ಅಲ್ಲಿಗೆ ಮುಗಿಯಿತು. ಇಲ್ಲ ಮುಗಿಯಲಿಲ್ಲ. ಮರುದಿನ ಆ ಹುಡುಗಿ ಬಸ್ ಗಾಗಿ ಕಾಯುತ್ತಿದ್ದಾಗ ಅಲ್ಲಿಯೇ ಇದ್ದ ಹೂವು ಮಾರುವ ಹುಡುಗ ಆಕೆಯನ್ನು ಗುರುತಿಸಿದ . ಅವಳೂ ಗುರುತಿಸಿ ನಕ್ಕಳು. ಇವನು ಅವಳ ಬಳಿ ಹೋಗಿ ಒಂದು ಕೆಂಗುಲಾಬಿಯನ್ನು ಹಿಡಿದು ನಿಂತು. ಅದಕ್ಕವಳು, ‘ನಿನ್ನೆ ಚಿಲ್ಲರೆ ಕೊಟ್ರಲ್ಲ ,ಮತ್ಯಾಕೆ ಈ ಹೂವು ?’ ಎಂದು ಪ್ರಶ್ನೆ ಹಾಕಿದಳು. ‘ನೀವು ಲ್ಯಾಬಲ್ಲಿ ನಿನ್ನೆ ನನ್ನಿಂದ ಕೊಂಡ ಹೂವನ್ನು ಬಳಸಿದ್ರಂತೆ ? ಅದಕ್ಕೆ ನನಗೆ ಖುಷಿಯಾಯಿತು. ‌ಹಾಗಾಗಿ ಈ ಹೂವು ನೀವು ತಗೊಳ್ಳೇಬೇಕು ‘ ಎಂದವನು ಅವಳ ಕೈಯಲ್ಲಿ ಕೆಂಗುಲಾಬಿ ಇಟ್ಟು ಅಲ್ಲಿಂದ ಓಡಿಹೋದ. ಹೂವು ಮಾರುವ ಜಾಗಕ್ಕೆ  ಹೋಗಿ ಹಿಂತಿರುಗಿ ನೋಡಿದರೆ ಅವಳು ಬಸ್ಸೇರಿದ್ದಳು.

ಮರುದಿನವೂ ಹಾಗೇ ಆಯಿತು. ಅವಳು ಬಂದಳು. ಈತ ಹೂವು ಕೊಡಲು ಹೋದ. ಆಕೆ ದಬಾಯಿಸಿದಳು ; ಏನು ಇದೆಲ್ಲ ? ಸರಿ ಇರೋದಿಲ್ಲ. ಆಗ ಆ ಹುಡುಗ ಹೇಳಿದ; ‘ತಪ್ಪು ತಿಳೀಬೇಡಿ . ನನಗೂ ಕಾಲೇಜಿಗೆ ಹೋಗಬೇಕೆಂಬ ಆಸೆ ಇದೆ. ಆದರೆ ಹೂವು ಮಾರುತ್ತಿದ್ದ ಅಪ್ಪ ಹೀಗೆ ನಮ್ಮನ್ನು ಅನಾಥ ಮಾಡಿ ಹೋಗ್ಬಿಟ್ಟ. ಇಲ್ಲದಿದ್ದರೆ ನಾನೂ ನಿಮ್ಮಂತೆಯೇ ಹೂವುಗಳ ಬಗ್ಗೆ ಅಧ್ಯಯನ ಮಾಡುವ ಪ್ರಯೋಗಾಲಯದಲ್ಲಿ ಇರಬಹುದಿತ್ತು.‌ ಹಾಗಾಗಿ ದಯವಿಟ್ಟು ನಾನು ಕೊಡುವ ಈ ಹೂವನ್ನು ನೀವು ತೆಗೆದುಕೊಳ್ಳಲೇಬೇಕು’

ಇದನ್ನು ಕೇಳಿದ ಆಕೆಯ ಮನಸ್ಸು ಕರಗಿತು. ಅವನಿಂದ ಹೂವನ್ನು ಪಡೆದು ಕಿರುನಗೆ ಬೀರಿ ಬಸ್ಸೇರಿದಳು. ಅಂದಿನಿಂದ ಯಥಾಪ್ರಕಾರ ಈ ‘ಹೂವಿನ ವ್ಯವಹಾರ’ ನಡೆಯುತ್ತಲೇ ಹೋಯಿತು. ಯಾವುದೇ ತಕರಾರು ಮಾಡದೆ ಅವಳು ಅವನಿಂದ  ಆ  ಕೆಂಗುಲಾಬಿಯನ್ನು  ಪಡೆಯುತ್ತಾಳೆ. ಅವನೋ ಅತೀ ಶ್ರದ್ಧೆ ಮತ್ತು ವಿನಯದಿಂದ ದಿನಕ್ಕೊಂದು‌ ಹೂವು ಅವಳಿಗಾಗಿ ಎತ್ತಿಡುತ್ತಾನೆ. ಹಾಗೆ ನೋಡಿದರೆ ಅವಳಿಗೆ ಲ್ಯಾಬ್ ಗಾಗಿ ಹೂವು ಬೇಕಿದ್ದುದು ಕೇವಲ ಮೊದಲನೆಯ ದಿನ ಮಾತ್ರ.‌ ಅದೂ ದಾಸವಾಳ  ಹೂವು. ಆದರೆ ಪ್ರತಿನಿತ್ಯ ಅವನು ಕೊಡುವ ಈ ಕೆಂಗುಲಾಬಿಯನ್ನು ಅವಳೂ ನಿರಾಕರಿಸುತ್ತಿಲ್ಲ. ಅವಳ ಕೋರ್ಸು ಮುಗಿದು ಮುಂದಿನ ಹಂತದ ಕೋರ್ಸಿಗೆ ಅವಳು ಸೇರಿದ ಮೇಲೂ ಈ ‘ಹೂವಿನ ವ್ಯವಹಾರ’ ಚಾಚೂತಪ್ಪದೆ ನೆರವೇರುತ್ತಲೇ ಇರುತ್ತದೆ.

*                *                *                     *

ಓದು ಮುಗಿಸಿದ ಆ ಹುಡುಗಿಗೆ ಮದುವೆ ನಿಶ್ಚಯವಾಗುತ್ತದೆ. ಆದರೂ ಆಕೆ ಆ ಹೂವು ಪಡೆಯುವುದನ್ನು ನಿಲ್ಲಿಸುವುದಿಲ್ಲ. ಆ ವಿಷಯ ತಿಳಿದ ಅವನೂ ಕೂಡ ತೀರ ಸಹಜವಾಗಿ ಅದನ್ನು ಸ್ವೀಕರಿಸುತ್ತಾನೆ. ‘ಎಲ್ಲೋಗ್ತೀರ ಮೇಡಂ, ಇದೇ ಊರು ತಾನೆ ? ನಾನು ಹೂವು ಕೊಡುವುದನ್ನು  ನಿಲ್ಲಿಸುವುದಿಲ್ಲ‌ . ಎಂದಿನಂತೆ‌ಯೇ ನಿಮ್ಮ ಹೂವು ನಿಮ್ಮದೇ ‘ ಎಂದಾಗ ಅವಳಿಗೆ ಖುಷಿಯಾಗುತ್ತದೆ. ತನ್ನ ಮದುವೆ ದಿನದ‌ ಹೂವಿನ ಅಲಂಕಾರವನ್ನು ಆತನಿಗೆ ಕೊಡುವಂತೆ ಅವರಪ್ಪನಿಗೆ ತಾಕೀತು ಮಾಡುತ್ತಾಳೆ. ಆತ‌ ಕೂಡ ಅದನ್ನು‌ ಎಲ್ಲಿಲ್ಲದ ಉತ್ಸಾಹದಿಂದ ಮಾಡಿ ತಕ್ಕ‌ ಹಣ ಪಡೆಯುತ್ತಾನೆ.

*                   *                    *                  *

ಮದುವೆಯಾದ ಮೇಲೆ ತನ್ನ ಬದಲಾದ ವಿಳಾಸವನ್ನು ಆಕೆ ಆತನಿಗೆ ಕೊಡುತ್ತಾಳೆ. ಆತ ಹೂವು ಕೊಡುವುದನ್ನು ನಿಲ್ಲಿಸುವುದಿಲ್ಲ. ದಿನದ ವ್ಯಾಪಾರದ ನಡುವೆ ಹೇಗಾದರೂ  ಸಮಯ ಹೊಂದಿಸಿಕೊಂಡು ಹೂವಿನ ಗಾಡಿಯನ್ನು ಆಕೆಯ ಮನೆಯ ರಸ್ತೆಗೆ ತಳ್ಳಿಕೊಂಡು ಬಂದು ಹೂವು ಕೊಟ್ಟು ಹೋಗುತ್ತಿರುತ್ತಾನೆ.

ಅಂಥದ್ದೇ ಒಂದು ದಿನ ಆಕೆಗೆ ಹೂವು ಕೊಡಲೆಂದು ಬಂದಾಗ ಆಕೆಯ ಪತಿ ಅವನಿಂದ  ಖರೀದಿಸಿದ ಹೂವಿಗೆ ದುಡ್ಡು ಕೊಡುತ್ತಾನೆ. ಆ ಹುಡುಗ ಚಿಲ್ಲರೆ ವಾಪಾಸ್ ಕೊಡಲು ಹೋಗಬೇಕೆನ್ನುವಷ್ಟರಲ್ಲಿ ಆಕೆ ಮನೆಯಿಂದ ಹೊರ ಬಂದದ್ದನ್ನು ಗಮನಿಸಿ, ಕೆಂಗುಲಾಬಿಯೊಂದನ್ನು ಕೊಡಲು ಮುಂದಾಗುತ್ತಾನೆ. ಆಕೆಯ ಮುಖ ಹೂವಿನಂತೆಯೇ ಅರಳಿರುತ್ತದೆ. ಆದರೆ ಆಕೆಯ ಪತಿ‌ ಅವಳನ್ನು  ತಡೆದು, ‘ಏಯ್  ಬೇಡ . ಆ ಸಣ್ಣ ಚಿಲ್ಲರೆಗೋಸ್ಕರ ನೀನು ಅವನು ವ್ಯಾಪಾರ‌ ಮಾಡಬೇಕಾದ ಹೂವುಗಳನ್ನು  ತೆಗೆದುಕೊಂಡು ಅವರಿಗೆ ನಷ್ಟ ಮಾಡಬೇಡ. Let him keep the change ‘ ಎಂದು ನಿರ್ಭಾವುಕನಾಗಿ ಹೇಳಿ ಮನೆಯೊಳಗೆ ನಡೆಯುತ್ತಾನೆ‌. ಆ ಹೂವಿನ ಹುಡುಗ ಏನೂ ಮಾತಾಡದೆ ಗಾಡಿ ತಳ್ಳಿಕೊಂಡು ಹೊರಟು ಹೋಗುತ್ತಾನೆ. ಮತ್ತೆಂದೂ ಆ ರಸ್ತೆಯೆಡೆಗೆ ಆ ಹುಡುಗ ಸುಳಿಯುವುದಿಲ್ಲ. ಆಕೆಯ ಪತಿಯ ಮಾತು ಏಕಕಾಲಕ್ಕೆ ಅವನ ಬಡತನವನ್ನು , ಆಕೆಯ ಶ್ರೀಮಂತಿಕೆಯನ್ನು  ನೆನಪಿಸಿಬಿಟ್ಟಿರುತ್ತದೆ. ಚಿಲ್ಲರೆ ಕೊಡುವ ವಿಷಯಕ್ಕಾಗಿ‌ ಹುಟ್ಟಿಕೊಂಡ ಆ ‘ಹೂವಿನ ವ್ಯವಹಾರ’ ವೊಂದು  ಚಿಲ್ಲರೆಯ ವಿಷಯಕ್ಕಾಗಿಯೇ ಕೊನೆಯಾಗಿದ್ದು ಮಾತ್ರ ಸೋಜಿಗವೇ ಸರಿ.

*                *                   *                  *              *

ಈಗ ಆತ ನಗರದ ನಂಬರ್ ಒನ್ Florist ಎಂಬ ಖ್ಯಾತಿ ಗಳಿಸಿ ದೊಡ್ಡ ಮಟ್ಟದ ವ್ಯವಹಾರ ನಡೆಸುವ ಹಂತಕ್ಕೆ ಬೆಳೆದಿದ್ದಾನೆ‌.  ದೊಡ್ಡ ದೊಡ್ಡ ಕಾರ್ಯಕ್ರಮಗಳ ಅಲಂಕಾರದ  ಆರ್ಡರ್ ಪಡೆಯುತ್ತಾನೆ. ಅವಳ ಶ್ರೀಮಂತಿಕೆಯಲ್ಲಿ ಲವಲೇಶವೂ ಕುಂದಿಲ್ಲ.

ಆದರೆ ?

” ಅವಳಿಗೊಂದು ಕೆಂಗುಲಾಬಿ ಕೊಡಲಾಗದಂಥ ಬಡತನ  ಅವನದ್ದು…
ಅವನಿಂದ ಆ ಹೂವು ಪಡೆಯಲಾಗದಂಥ ಬಡತನ ಅವಳದ್ದು…”

ಆ ಬಡತನ ನಿರ್ಮೂಲನೆಗೆ‌ ಯಾವ ಸರ್ಕಾರವನ್ನಾದರೂ ಹೊಣೆ ಮಾಡಲಾದೀತೆ ?

5 comments

 1. ಲವ. ಜಿ.ಆರ್.
  ಸರಳ ನಿರೂಪಣೆ, ಸುಂದರ ಕಾವ್ಯ.
  ವ್ಯಾಪಾರಿ ಸಂಬಂಧದಲ್ಲಿ ಸ್ನೇಹ, ಪ್ರೀತಿಯ ಅರ್ಥ ಗುಪ್ತಗಾಮಿನಿಯಂತಿದೆ.
  ಹೂ ಮಾರುವ ಹುಡುಗ ಫ್ಲೊರಿಸ್ಟ್ ಆಗಿ ರೂಪಗೊಳ್ಳುವ ವ್ಯಾಪಾರಿ ರೂಪಗೊಳ್ಳುವ ವಾಣಿಜ್ಯ ಕಥೆಯಂತಿದೆ.

 2. ಅವಳಿಗೊಂದು ಕೆಂಗುಲಾಬಿ ಕೊಡಲಾಗದಂಥ ಬಡತನ ಅವನದ್ದು…
  ಅವನಿಂದ ಆ ಹೂವು ಪಡೆಯಲಾಗದಂಥ ಬಡತನ ಅವಳದ್ದು…”
  ಕೊನೆಯ ಈ ಸಾಲುಗಳು… ಇಂದಿನ..ಧಾವಂತದ…ಬದುಕಿನ… ಕನ್ನಡಿ.‌

Leave a Reply