ಸಾಮಾಜಿಕ ನ್ಯಾಯದ ಕಣ್ಣಿಗೆ ಕಳ್ಳಿಹಾಲು!

ಕಳೆದ ವಾರ ಮಲೆಮಹದೇಶ್ವರ ಬೆಟ್ಟಗಳ ಇಳಿದು ಕರ್ನಾಟಕದ ಕಟ್ಟಕಡೆಯ ಗ್ರಾಮ , ಕಾಡುಗಳ್ಳ ವೀರಪ್ಪನ್ ಖ್ಯಾತಿಯ ಗೋಪಿನಾಥಂ ಕಡೆಗೆ ಹೊರಟಾಗ ಗ್ರಾಮಕ್ಕೆ ಇನ್ನೂ ಏಳು ಕಿ.ಮೀ ಇರುವಾಗಲೇ ಕಾಡುದಾರಿಯಲ್ಲಿ ಮಹಿಳೆಯರು ಗುಂಪು ಗುಂಪಾಗಿ ತಲೆ ಮೇಲೆ ಒಣಸೌದೆಯ ತುಂಡುಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕುತ್ತಿದ್ದದ್ದು ಕಣ್ಣಿಗೆ ಬಿದ್ದಿತು.

ಇದೇನು ಭಾರತದಲ್ಲಿ ಹೊಸತೇನಲ್ಲ ಬಿಡಿ. ನಮ್ಮ ಸರ್ಕಾರದ ಯೋಜನೆಗಳು ಕಟ್ಟಕಡೆಯ ಗ್ರಾಮದ ಜನತೆಗೆ ಎಷ್ಟರಮಟ್ಟಿಗೆ ತಲುಪಿದೆ ಎಂಬ ಕುತೂಹಲ ಬುದ್ದಿಯಿಂದ ಕಾರು ನಿಲ್ಲಿಸಿ ಮಹಿಳೆಯರನ್ನು ತಡೆದು ಒಂದಿಷ್ಟು ಪೋಟೋಗಳನ್ನು ಸೆರೆ ಹಿಡಿವಾಗ ಮಹಿಳೆಯರು ತಮಿಳು ಮಿಶ್ರಿತ ಕನ್ನಡದಲ್ಲಿ ಪೋಟೋ ತೆಗೆಯುವ ಉದ್ದೇಶವನ್ನು ಪ್ರಶ್ನಿಸಿದರು.

ಅವರೊಂದಿಗೆ ಹೆಜ್ಜೆ ಹಾಕುತ್ತಲೆ ಮಾತಿಗೆಳೆದೆ. ವೀರಪ್ಪನ್ ನಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೂ ಮಾತುಗಳು ವಿನಿಮಯಗೊಂಡವು. ಅವರ ಮನೆಗಳಿಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯವರಾಗಲಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ ಇನ್ನೂ ಗ್ಯಾಸ್ ಸಿಲಿಂಡರ್ ಗಳು ತಲುಪಿಸಿಲ್ಲವಾದ್ದರಿಂದ ಕಾಡು ಸೌದೆಯನ್ನೆ ನೆಚ್ಚಿಕೊಂಡಿರುವ ಈ ಹಳ್ಳಿಗರಿಗೆ ಯಾರೊಬ್ಬರೂ ನಾಯಕರಲ್ಲ ಎಂಬುದು ಬಹಿರಂಗಗೊಂಡಿತು. ಅಂತಿಮವಾಗಿ ಸುದೀರ್ಘ ನಿಟ್ಟುಸಿರು ಬಿಟ್ಟ ಮಹಿಳೆಯರು ‘ಸಾಮಿ ಯಾರುಣ ಅಧಿಕಾರಕ್ಕೆ ಬಂದರೂ ನಮ್ಮ ಪಾಡು ಹಿಂಗೇಯಾ…, ಯಾರುಣು ಕೇಳೋದಿಲ…’ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಗುಡ್ಡ ಹತ್ತಿ ಮರೆಯಾದರು.

ಈ ದೇಶದಲ್ಲಿ ಎಲ್ಲರ ವಿಕಾಸವೂ, ಎಲ್ಲರ ಜೊತೆಗೂ ಇಲ್ಲ.ಅದಿರುವುದು ಅಬ್ಬರದ ವಾಗಾಡಂಬರದಲ್ಲಿ ಮಾತ್ರ. ತುಕ್ಕು ಹಿಡಿದಿರುವ ಶೇ. 50 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದು ಬಿಟ್ಟರೆ ಸೌದೆ ಹೊತ್ತು ನಿಟ್ಟಿಸಿರುವ ಬಿಡುವ ಗೋಪಿನಾಥಂನಂತಹ ಕಾಡು ಗ್ರಾಮದ ಮಹಿಳೆಯರಿಗೂ ಸ್ಪಲ್ಪವಾದರೂ ನ್ಯಾಯ ದಕ್ಕಬಹುದೇನೋ ಎಂದು ಯೋಚಿಸುತ್ತಿರುವಾಗಲೆ ಕೇಂದ್ರದ ಸರ್ಕಾರ ಈ ದೇಶದ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿಯ ಘೋಷಿಸಿದ ಸುದ್ದಿ ಕಿವಿಗೆಯನ್ನು ತಬ್ಬಿಕೊಂಡಿತು.

ಕೆಲವು ದಿನಗಳ ಹಿಂದೆಯಷ್ಟೆ ನನ್ನ ಕೆಲವು ಸ್ನೇಹಿತರು ದಲಿತ-ದಮನಿತರಿಗಿರುವ ‘ಮೀಸಲಾತಿ’ ಬಗ್ಗೆ ಒಂದು ಬಗೆಯ ಅಸಹನೆ, ವಿರೋಧವನ್ನು ವ್ಯಕ್ತ ಪಡಿಸಿ ವಾದ ನಡೆಸಿದ್ದರು. ಮೀಸಲಾತಿ ಎಲ್ಲಾ ಜಾತಿಯ ಬಡವರಿಗೂ ಸಿಗಲಿ, ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರಲ್ಲೂ ಬಡವರಿದ್ದಾರೆ. ಅವರಿಗೂ ಸಿಗಲಿ, ಈಗ ದಲಿತರಿಗೆ ಮಾತ್ರ ಮೀಸಲಾತಿ ಏಕೆ? ಎಂದು ಸಂದರ್ಭ ಬಂದಾಗಲೆಲ್ಲಾ ಪ್ರಶ್ನಿಸುತ್ತಲೆ ಇದ್ದರು.

ಇನ್ನು ಕೆಲವರಂತೂ ದಲಿತರನ್ನು ಸರ್ಕಾರಿ ಮಕ್ಕಳು ಎಂದು ಲೇವಡಿ ಮಾಡುತ್ತಾ ಮೀಸಲಾತಿಯನ್ನೆ ರದ್ದು ಮಾಡಿ ಸಮಾನ ನಾಗರೀಕ ಕಾಯ್ದೆಯನ್ನು ತಂದು ಬಿಡಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬ್ರಾಹ್ಮಣಸಮುದಾಯದ ಗೆಳೆಯರಿಗಿಂತ ಈಗಾಗಲೆ ಮೀಸಲಾತಿಯ ಫಲ ಉಣ್ಣುತ್ತಿರುವ ಲಿಂಗಾಯಿತ, ಒಕ್ಕಲಿಗ ಮತ್ತು ಇತರೆ ಹಿಂದುಳಿದ ವರ್ಗಗಳ ಗೆಳೆಯರು ಮೀಸಲಾತಿಯ ವಿರುದ್ದ ಮಾತನಾಡುವುದು ಸಮುದಾಯ ದ್ರೋಹದಂತೆ ಕಾಣುತ್ತಿತ್ತು. ಈ ದೇಶದ ಸಾಮಾಜಿಕ ಸಂರಚನೆ ಎಂಬುದು ಜಾತಿ ಆಧಾರಿತವಾಗಿ ರೂಪಿಸಲ್ಪಟ್ಟಿದೆ. ಇದರೊಳಗಿನ ತಾರತಮ್ಯ, ಮೇಲು-ಕೀಳುಗಳನ್ನು ಸಮಾನ ರೇಖೆಗೆ ತಂದು ನಿಲ್ಲಿಸುವ ಸಮಾನತೆಯ ಸೂತ್ರ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೀಸಲಾತಿ ರೂಪುಗೊಂಡಿದ್ದು ಅರಿವಿಲ್ಲದವರು ಮೀಸಲಾತಿಯನ್ನು ವಿರೋಧಿಸುತ್ತಲೆ ಬಂದಿದ್ದಾರೆ.

ನೋಡು ನೋಡುತ್ತಿದ್ದಂತೆ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿಯ ರಹದಾರಿಗಾಗಿ ಸಂವಿಧಾನದ ಕಲಂ ಗಳಿಗೆ ತಿದ್ದುಪಡಿ ಪ್ರಕ್ರಿಯೆಯೂ, ಮತ್ತು ಲೋಕಸಭೆ, ರಾಜ್ಯಸಭೆ ಯಲ್ಲಿ ಅಂಗೀಕಾರವೂ , ರಾಷ್ಟ್ರಪತಿಗಳ ಅಂಕಿತವೂ ಮೊಹರು ಬಿದ್ದಿದೆ. ‘ಮೀಸಲಾತಿ’ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರ ಅರ್ಥೈಸಿಕೊಂಡ ಬಗ್ಗೆ ನನಗೆ ಕಳವಳವಿದೆ. ಒಂದು ಪ್ರಭುತ್ವ ಈ ದೇಶದ ಜನಸಮುದಾಯದ ಸಾಮಾಜಿಕ ನ್ಯಾಯವನ್ನು ನಿರ್ವಹಿಸುವಲ್ಲಿ ಕ್ಷುದ್ರರಾಜಕಾರಣವನ್ನೆ ಮುಂದು ಮಾಡಿದರೆ ಚಾರಿತ್ರಿಕ ದ್ರೋಹವೊಂದು ದಾಖಲಾಗುತ್ತದೆ ಎಂಬುದಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಮೇಲ್ಜಾತಿಗಳಿಗೆ ಶೇ.10 ರಷ್ಟುಮೀಸಲಾತಿಯೇ ಸಾಕ್ಷಿ. ಇಂತಹ ದ್ರೋಹಗಳು ಹೊಸತೇನಲ್ಲ. 1991 ರಲ್ಲಿ ಅಂದಿನ ಪ್ರಧಾನಮಂತ್ರಿ ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರ ಕೂಡ ಮೇಲ್ಜಾತಿಯಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ರಷ್ಟು ಮೀಸಲಾತಿಯನ್ನು ತಂದಿದ್ದು.

ಆದರೆ ಅದನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿ ದೇಶದಲ್ಲಿ ಮೀಸಲಾತಿಯ ಪ್ರಮಾಣ ಶೇ. 50 ಕ್ಕಿಂತ ಮೀರಬಾರದು ಎಂದೂ, ಸಂವಿಧಾನದ ಮೂಲ ಆಶಯಕ್ಕೆ ಮತ್ತು ಸಂವಿಧಾನದ ಅನುಚ್ಚೇದಗಳಾದ 15(1), 16(4)(ಅ) , 16(4)(ಬಿ) ಹಾಗೂ ಅನುಚ್ಛೇದ 17 ಕ್ಕೆ ಧಕ್ಕೆಯಾಗುತ್ತದೆ ಎಂದು ತಿರಸ್ಕರಿಸಿತ್ತು. (ಇಂದಿರಾ ಸಹಾನಿ ವ/ಸ ಭಾರತ ಸರ್ಕಾರ AIR 1993 SC 477 & 1992 SUPP(3) SCC 217) ಹೀಗಿರುವಾಗಲೇ ನರೇಂದ್ರ ಮೋದಿ ಅವರು ಮೇಲ್ಜಾತಿಗಳಿಗೆ ಶೇ.10 ರಷ್ಟು ಮೀಸಲಾತಿ ಕೊಡಲು ಸಾಧ್ಯವಾದರೂ ಇದೆಯಾ?

ಈಗಾಗಲೆ ಎಸ್ಸಿ/ಎಸ್ಟಿ, ಓಬಿಸಿ.ಬಿಸಿ ಜಾತಿಗಳಿಗೆ ಒಟ್ಟಾರೆ ಶೇ. 49.5 ರಷ್ಟು ಮೀಸಲಾತಿ ಜಾರಿಯಲ್ಲಿದ್ದು , ಸಾಮಾನ್ಯ ವರ್ಗಕ್ಕೆ ಶೇ. 50.05 ಅವಕಾಶವಿದೆ. ಇದರಲ್ಲಿ ಶೇ. 10 ರಷ್ಟು ಮೀಸಲು ನಿಗದಿಯಾದರೆ ಒಟ್ಟಾರೆ ಮೀಸಲ ಪ್ರಮಾಣ ಶೇ. 59.05 ಕ್ಕೆ ತಲುಪಲಿದೆ. ಇದು ಸಂವಿಧಾನದ ಮೂಲಕ ಆಶಯಕ್ಕೆ ಧಕ್ಕೆ ಮತ್ತು ಸುಪ್ರೀಂ ಕೋರ್ಟ್ನ ತೀರ್ಪಿನ ವಿರುದ್ದವೇ ಆಗುತ್ತದೆ ಎಂಬುದರ ಅರಿವು ಮೋದಿ ಬಳಗಕ್ಕೆ ಅರಿವಾಗುತ್ತಿಲ್ಲವೆಂದನೇಲ್ಲ. ಈಗ ಬೇಕಿರುವುದು ಓಟು ಮಾತ್ರ.

ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಮೀಸಲಾತಿ ಪ್ರಮಾಣವನ್ನು ತಮಿಳುನಾಡು ಮಾದರಿ(ಶೇ.65) ಶೇ. 70 ಕ್ಕೆ ಏರಿಸುವ ಚಿಂತನೆ ಇದೆ ಎಂದು ಹೇಳಿದ್ದೇ ತಡ ಅದು ಸಂವಿಧಾನಕ್ಕೆ ವಿರುದ್ದ, ಇದೇ ಸುಪ್ರೀಂ ಕೋರ್ಟು ನ ತೀರ್ಪುನ್ನು ಉಲ್ಲೇಖಿಸಿ ಅವರ ಮೇಲೆ ಮುಗಿಬಿದ್ದ ಜನಸಮುದಾಯ, ಜಾತಿವಂತರು ಈಗ ಹೊಸದಾಗಿ ಘೋಷಿಸಲ್ಪಟ್ಟ ಶೇ. 10 ರಷ್ಟು ಮೀಸಲಾತಿಯ ಬಗ್ಗೆ ಚಕಾರವೆತ್ತುತ್ತಿಲ್ಲ.

ಮೀಸಲಾತಿ ಎಂಬುದೇ ಒಂದು ಅಸಹ್ಯ ನೀತಿ ಎಂಬಂತೆ ವಿರೋಧಿಸುತ್ತಿದ್ದವರು ಮೇಲ್ಜಾತಿಗೆ ಶೇ.10 ರಷ್ಟು ಮೀಸಲಾತಿಯನ್ನು ಜಾಣ ಮೌನದಿಂದ ಸ್ವಾಗತಿಸುತ್ತಿದ್ದಾರೆ. ಆರ್ಥಿಕ ಕಾರಣಗಳಿಂದಾಗಿ ಹಿಂದುಳಿದ ಮೇಲ್ಜಾತಿಯ ಬಡವನಿಗಿಂತ ಜಾತಿಯ ಕಾರಣಕ್ಕಾಗಿ ಹಿಂದೂಡಲ್ಪಟ್ಟ ಬಡವನ ಬದುಕು ಹೆಚ್ಚು ಧಾರುಣವಾಗಿರುತ್ತದೆ. ಆರ್ಥಿಕವಾಗಿ ದುರ್ಬಲನಾಗಿದ್ದ ಮೇಲ್ಜಾತಿಯ ಬಡವನೊಬ್ಬ ಸಲೀಸಾಗಿ ದೇವಸ್ಥಾನ, ಇತರೆ ಸಹ ಜಾತಿಗಳ ಮನೆಗೆ ಹೋಗುವಂತೆ ಆರ್ಥಿಕವಾಗಿ ಬಲಾಢ್ಯನಾಗಿದ್ದ ದಲಿತನೊಬ್ಬನಿಗೆ ದೇವಸ್ಥಾನ ಪ್ರವೇಶವಾಗಲಿ, ಮೇಲ್ಜಾತಿಯ ಮನೆಗಳಿಗೆ ಪ್ರವೇಶ ಸಾಧ್ಯವಾಗುವುದೇ ಎಂಬುದನ್ನು ಯೋಚಿಸಬೇಕು.

ಮೇಲ್ಜಾತಿಗಳ ಮೂರು ತಲೆಮಾರುಗಳು ಸರ್ಕಾರಿ ವಿವಿಧ ಸ್ಥರಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿ ಮಾಸಾಸನ ಪಡೆಯುತ್ತಿರುವ ಈ ಹೊತ್ತಿನಲ್ಲಿ ತಳಸಮುದಾಯದ ಮೊದಲ ತಲೆಮಾರು ಈಗಿನ್ನೂ ನಿವೃತ್ತಿಯ ಅಂಚಿನಲ್ಲಿ ತೆವಳುತ್ತಿವೆ. ಬಹುಶಃ ಮೀಸಲಾತಿ ಎಂಬ ನ್ಯಾಯದ ಪಥವೊಂದು ತೆರದುಕೊಳ್ಳದೆ ಇದ್ದಿದ್ದರೆ ದಲಿತ,ಹಿಂದುಳಿದ ವರ್ಗಗಳು ಇನ್ನೂ ಜೀತ ಗೇಯುತ್ತಲೇ ಇರುತ್ತಿದ್ದವು.

ಇವೆಲ್ಲದರ ಆಚೆ ಯೋಚಿಸಲೇ ಬೇಕಾದದ್ದು ಎಂದರೆ ಮೇಲ್ಜಾತಿಯ ಬಡವರಿಗೆ ಶೇ.10 ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು. ನರೇಂದ್ರ ಮೋದಿ ಅವರು ಚುನಾವಣೆಯ ಕಾಲಕ್ಕೆ ಇಂತಹದ್ದೊಂದು ತಂತ್ರ ಹೂಡಿರುವುದು ರಾಜಕೀಯ ಲಾಭದ ನಿರೀಕ್ಷೆಯೇ ಆಗಿದೆ. ಇತ್ತೀಚೆಗೆ ನಡೆದ ಉತ್ತರದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚಿರುವುದರಿಂದ ಕೆಂಗೆಟ್ಟಿರುವ ಬಿಜೆಪಿ ಹೊಸತೊಂದು ತಂತ್ರವನ್ನು ಹೂಡಿದೆ. ಸಂವಿಧಾನ ಬದಲಾವಣೆಯ ಕೂಗೆಬ್ಬಿಸಿ ದೇಶಾದ್ಯಂತ ಪ್ರತಿರೋಧ ಎದುರಿಸಿದ ಮೋದಿ ಬಳಗ ಮತ್ತವರ ಹಿಂದಿರುವ ಸಂಘಪರಿವಾರ ಶೇ. 10 ಮೀಸಲಾತಿ ಮುಂದು ಮಾಡಿಕೊಂಡು ಮತ ಎತ್ತುವಳಿಗೆ ಹೊರಟಿದೆ. ಇದು ಮೇಲ್ಜಾತಿಯ ಮತ್ತು ಈಗಾಗಲೆ ಮೀಸಲಾತಿ ಪಡೆಯುತ್ತಿರುವ ಜನಸಮುದಾಗಳ ನಡುವೆ ಸಂಘರ್ಷ ಹುಟ್ಟುಹಾಕಿ ಓಟುಗಳಿಸುವ ಒಡಕಿನ ರಾಜಕಾರಣವೇ.

ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ದ ಈ ಮೀಸಲಾತಿ ಮಸೂದೆಯನ್ನು ಸಕ್ಯೂಲರ್ ಪಕ್ಷಗಳಾದ ಕಾಂಗ್ರೇಸ್, ಎಡಪಕ್ಷಗಳು ಉಸಿರು ಬಿಡದೆ ಒಪ್ಪಿಕೊಂಡು ತಮ್ಮೊಳಗಿರುವ ಮೇಲ್ಜಾತಿ ಸಂವೇದನೆಯನ್ನು ಸಾಬೀತು ಪಡಿಸಿವೆ. ಬಿಎಸ್ಪಿ ಸೇರಿದಂತೆ ಎಲ್ಲಾ ಪಕ್ಷಗಳು ಅಂತಿಮವಾಗಿ ಬಲಾಢ್ಯ ಜಾತಿ ವ್ಯವಸ್ಥೆಯ ಅಡಿಯಾಳುಗಳಂತೆ ವರ್ತಿಸಿ ಬೆತ್ತಲಾಗಿವೆ. ಮೀಸಲಾತಿ ಎಂಬುದು ಆರ್ಥಿಕ , ರಾಜಕೀಯ ಕಾರ್ಯಕ್ರಮವಲ್ಲ. ಅದೊಂದು ತುಳಿತಕ್ಕೊಳಗಾದ ಸಮುದಾಯವನ್ನು ಸಧೃಢಗೊಳಿಸುವ , ಇತೆರೆ ಬಲಾಢ್ಯ ಜಾತಿಗಳ ಸರಿಸಮಾನವಾಗಿ ನಿಲ್ಲಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂಬುದನ್ನು ಮರೆತಿರುವ ರಾಜಕೀಯ ಪಕ್ಷಗಳು ಓಟಿಗಾಗಿ ಸಾಮಾಜಿಕ ನ್ಯಾಯದ ಕಣ್ಣಿಗೆ ಒಗ್ಗಟ್ಟಾಗಿ ಕಳ್ಳಿ ಹಾಲು ಸುರಿದಿದ್ದಾರೆ.

ಇಷ್ಟು ಹೇಳಿ ಮುಗಿಸುವ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಬಿಜೆಪಿ ವಿರುದ್ದ ಹೋರಾಟಕ್ಕೆ ಬಿಎಸ್ಪಿ-ಎಸ್ಪಿ ಪಕ್ಷಗಳು ದೋಸ್ತಿ ಕಟ್ಟಿಕೊಂಡು ಹೊರಟಿರುವ ಸುದ್ದಿ ಸ್ಪೋಟಿಸಿತು. ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿರುವುದು ಆಶಾದಾಯಕ ಸಂಗತಿ.

ರಾಮಮಂದಿರ ಹೋರಾಟದ ಉತ್ತುಂಗದಲ್ಲಿದ್ದ ಕಾಲದಲ್ಲೇ ಎಸ್ಪಿಯ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿಯ ಕಾನ್ಸಿರಾಂ ಮೈತ್ರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾಗಿತ್ತು. ‘ಮಿಲೇ ಮುಲಾಯಂ ಕಾನ್ಸಿರಾಂ ಹವಾ ಮೇ ಉಡುಗಯಾ ಜೈ ಶ್ರೀರಾಂ’ ಎಂಬ ಘೋಷಣೆಯೊಂದಿಗೆ ಹೊರಟಿದ್ದ ಎಸ್ಪಿ-ಬಿಎಸ್ಪಿ ಸ್ನೇಹ ಹೆಚ್ಚು ದಿನ ಉಳಿಯಲಿಲ್ಲ. ಇದೀಗ ಮಾಯಾವತಿ-ಅಖಿಲೇಶ್ ಯಾದವ್ ಹಳೆಯ ಮೈತ್ರಿಗೆ ಜೀವ ತಂದಿದ್ದಾರೆ. ಬಿಜೆಪಿಗೆ ಇದು ನುಂಗಲಾರದ ತುತ್ತು.

ರಾಮ ಮಂದಿರ ವಿಷಯವನ್ನೆ ಮುಂದಿಟ್ಟುಕೊಂಡು ಪಾಣಿಪತ್ ಕದನಕ್ಕೆ ಹೊರಟಿರುವ ಬಿಜೆಪಿಯ ಯಾಗದ ಕುದುರೆಯನ್ನು ಬಹದೊಡ್ಡ ಉತ್ತರ ಪ್ರದೇಶದಲ್ಲೇ ಕಟ್ಟಿ ಕೆಡವಲು ಅಖಿಲೇಶ್- ಮಾಯಾವತಿ ಜೋಡಿ ಸಜ್ಜುಗೊಂಡಿದೆ. ‘ಮಿಲೇ ಮಾಯಾವತಿ-ಆಖಿಲೇಶ್ ಹವಾ ಮೇ ಉಡುಗಯಾ ಮೋದಿ-ಷಾ’.. ಸ್ಲೋಗನ್ ಕೇಳುತಿದೆ.

1 comment

  1. The rich & upper middle class in SC, ST, OBC should voluntarily refuse reservation to help their own poor brothers and sisters. Now reservation has become a vote bank politics and is not reaching the deserving candidates. Constitution provided reservation is swallowed by children of people who is already in good position using the same reservation. Anybody have statistics on this? Why reservation to a child of an IAS, KAS, or a Govt officer? Ravikumar is dead silent on this.
    And his comparison of poverty in different community is inhuman. Poor in all community need help. Poverty does not have colour, cast, religion, language…
    Now it has become a fashion to blame BJP and MODI for all the plight of poor and neglected lot. After May ’19 BJP and MODI may not be in center. We have to look for somebody else to blame. No article will end with such hatred and dividing opinion. This article could have been a good one if not dragged Sangha, BJP and MODI..!!!
    Ravikumar grow up…!!

Leave a Reply