ಸಿಂಗಾಪುರ್ ನಲ್ಲಿ ಹಂದಿಗಳದ್ದೇ ದರ್ಬಾರ್

ಕಳೆದ ಕೆಲ ತಿಂಗಳುಗಳ ಹಿಂದೆ ಯಾಕೋ ತಲೆ ಖಾಲಿ ಖಾಲಿ ಅನ್ನಿಸಿ ಬಿಟ್ಟಿತ್ತು. “ಕೆಲಸ ಇಲ್ಲ ಪುರುಸೊತ್ತು ಇಲ್ಲ” ಅನ್ನುವ ಹಾಗೆ. ಪರಿಣಾಮ ಫೇಸ್ ಬುಕ್, ವ್ಹಾಟ್ಸ್ಸಾಪ್, ಯೂಟ್ಯೂಬ್ ಹೇಳುತ್ತಾ ಕಾಲ ಕಳೆಯೋದೆ ಅಧಿಕವಾಯಿತು.
ಇವಿಷ್ಟು ಅಪ್‌ಡೇಟ್ ಆಗುತ್ತೋ ಇಲ್ವೋ ನಾನಂತೂ ಫುಲ್ ಅಪ್‌ಡೇಟ್. ಕೊನೆ ಕೊನೆಗಂತೂ ಹೊಸ ನ್ಯೂಸ್ ಗಳೇ ಬರುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಶೋಧ ಕಾರ್ಯ ಮುಂದುವರಿದಿತ್ತು. ಜೊತೆಗೆ ಕಳೆದ ೪ ವರ್ಷಗಳಿಂದ ನನ್ನನ್ನು ಬ್ಯುಸಿ
ಇರುವಂತೆ ಮಾಡಿದ್ದ ವೈಯೊಲಿನ್ ಕ್ಲಾಸ್ ಕೂಡ ಕಾರಾಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಏನಿಲ್ಲಾಂದ್ರು ವರ್ಣ, ಕೀರ್ತನೆ , ಸ್ವರ, ಗಮಕ, ಹೇಳುತ್ತಾ ತಲೆಗಾದ್ರೂ ಕೆಲಸ ಇರುತಿತ್ತು. ಈಗ ಅದೂ ಕೂಡ ಸ್ವಲ್ಪ ದಿನಕ್ಕೆ ನಿಂತಿದೆ.

ತಲೆ ಶೂನ್ಯವಾದಾಗ ಒಳ್ಳೆಯ ವಿಚಾರಗಳು ಪ್ರವೇಶ ಆಗೋದು ಅಪರೂಪವೇ ಸರಿ. ಈ ಸಂದರ್ಭದಲ್ಲಿ ತಟ್ ಅಂತ ಹೊಳೆದಿದ್ದು ಜೋತಿಷ್ಯ. ನಂಬಿಕೆಗಿಂತಲೂ ಕುತೂಹಲಕ್ಕಾಗಿ ರಾಶಿ ಭವಿಷ್ಯಗಳನ್ನು ಓದುವ ಕ್ರಮ ನನ್ನಲ್ಲಿ ಇದೆ.
ಎಷ್ಟಾದರೂ ಭೂತಾರಾಧನೆ, ನಾಗಾರಾಧನೆ ಮಾಡೋರು ನಾವೆಲ್ಲ. ಚಿಕ್ಕಂದಿನಿಂದಲೇ ಜೋತಿಷ್ಯ, ಪ್ರಶ್ನೆ ಕೇಳೋದು, ಜಾತಕಗಳ ಬಗ್ಗೆ ಅನುಸರಿಸುತ್ತಾ ಬಂದವರು. ಹೀಗಾಗಿ ಇವುಗಳ ಬಗ್ಗೆ ಆಸಕ್ತಿ ಸಾಮಾನ್ಯ.

ಯೂಟ್ಯೂಬ್ ನಲ್ಲಿ ಬರೋ ಜೋತಿಷ್ಯ ವೀಡಿಯೋಗಳನ್ನೆಲ್ಲಾ ನೋಡಿದ್ದು ಆಯಿತು. ಎಷ್ಟು ನಂಬಿಕೆ ಬರುತ್ತೋ ಗೊತ್ತಿಲ್ಲ. ಆದರೆ ಸಾಮಾನ್ಯ ಜನರನ್ನು, ಯಾರೆಲ್ಲಾ ಟ್ರೈನ್ ಹತ್ತಿಸ್ತಾರೆ ಅನ್ನೋದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಾ ಇತ್ತು. ಅಂದ ಹಾಗೆ ನನ್ನ ರಾಶಿ ಪಂಚಮ ದೆಸೆ ಶನಿಯಿಂದ ನಲುಗುತ್ತಿತ್ತು. ಇದರ ಪ್ರಭಾವವೇ ಇರಬೇಕು ಅನಗತ್ಯ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದು. ಆದರೆ ಈ ಹೊಸ ವರ್ಷ ನನ್ನ ರಾಶಿಯಲ್ಲಿ ಗುರು ಸಂಚಾರ ನಡೆಯಲಿದೆ ಅಂತೆ. ಜೊತೆಗೆ ಉತ್ತಮ ಫಲಿತಾಂಶದ ನಿರೀಕ್ಷೆ ಎಂದು ತಿಳಿಸಲಾಗಿದೆ. ಟಾಪಿಕ್ ಇಲ್ಲಎಂದು ಗೊಣಗುತ್ತಿದ್ದ ನನಗೆ ಈ ವಿಚಾರವನ್ನೇ ಬರೆಯುವ ಹಾಗೆ ಆಗಬೇಕಾದರೆ, ಬಹುಶ: ಗುರುವಿನ ಪಯಣ ಆರಂಭವಾಗಿದೆ ಏನೋ ಅನ್ನಿಸತೊಡಗಿತು…!

ಆದರೆ ಓದುವಷ್ಟು ಹೊತ್ತು ಅಥವಾ ನೋಡುವಷ್ಟು ಹೊತ್ತು ಮಾತ್ರ ನೆನಪು ಉಳಿಯುವ ಇವು, ನನ್ನ ಪಾಲಿಗೆ ಸಮಯ ಕಳೆಯಲು ಒಂದು ಮನರಂಜನೆ ಅಷ್ಟೇ.

ಇರಲಿ, ಈಗಂತೂ ಜೋತಿಷ್ಯ ಶಾಸ್ತ್ರ ಅನ್ನೋದು ನಮ್ಮಲ್ಲಿ ದೊಡ್ಡ ವ್ಯಾಪಾರ. ತುಂಬಾ ಸುಲಭವಾಗಿ ದುಡ್ಡು ಮಾಡುವ ಮಾರ್ಗವೂ ಹೌದು ಸೋಮಾರಿಗಳಿಗೆ. ಇದರಲ್ಲಿ ಸತ್ಯಾಂಶಕ್ಕಿಂತಲೂ ಮೋಸ ಮಾಡೋರೇ ಹೆಚ್ಚು. ಹೀಗಾಗಿ ಜೋತಿಷ್ಯ ವಿದ್ಯೆ ಕಲಿತು ಪಂಡಿತರಾದವರನ್ನು ಕೂಡ ಸಂಶಯದಿಂದ ನೋಡುವ ಪರಿಸ್ಥಿತಿ ಈಗಿನದ್ದು.

ನಮ್ಮ ಕಥೆ ಹೀಗಾದ್ರೆ, ಸಿಂಗಾಪುರ ಇದಕ್ಕಿಂತ ಭಿನ್ನ. ಜೋತಿಷ್ಯ ವಿಚಾರದಲ್ಲಿ ನಾವೇ ಹುಷಾರು ತಿಳಿದರೆ, ಈ ಚೀನೀಯರು ನಮ್ಮನ್ನೇ ಮೀರಿಸಬಲ್ಲರು. ಚೀನೀ ರಾಶಿಚಕ್ರವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ ಲೋಹ, ನೀರು, ಮರ, ಬೆಂಕಿ, ಮತ್ತು ಭೂಮಿ ಎಂಬುದಾಗಿ 5 ಅಂಶಗಳಿಂದ ಗುರುತಿಸಲಾಗುತ್ತದೆ. ಚೀನೀ ರಾಶಿ ಚಕ್ರದ ಪ್ರತಿ ವರ್ಷವನ್ನು ಬೇರೆ ಬೇರೆ ಪ್ರಾಣಿಗಳ ಹೆಸರಿನಿಂದ ನಿಗದಿಪಡಿಸಲಾಗಿದೆ. ಅವುಗಳೆಂದರೆ ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಮಂಗ, ಹುಂಜ, ನಾಯಿ ಮತ್ತು ಹಂದಿ. ಪ್ರತಿ ಪ್ರಾಣಿಗಳಿಗೆ ವಿವಿಧ ಗುಣಲಕ್ಷಣಗಳನ್ನು ನೀಡಲಾಗುತ್ತದೆ. 12
ರಾಶಿಗಳಿಗೆ ಐದು ಅಂಶಗಳನ್ನು ನಿಯೋಜಿಸುವ ಮೂಲಕ 60-ವರ್ಷಗಳ ಚಕ್ರದಲ್ಲಿ 60 ವಿವಿಧ ಸಂಯೋಜನೆಗಳನ್ನು ಸೃಷ್ಟಿಸಲಾಗಿದೆ.

ನಮ್ಮಲ್ಲಿ ಮಗು ಹುಟ್ಟಿದ ದಿನ – ಘಳಿಗೆ ನೋಡಿ ರಾಶಿ – ನಕ್ಷತ್ರಗಳನ್ನು ಹೇಗೆ ಹೊಂದಾಣಿಕೆ ಮಾಡುತ್ತಾರೋ ಹಾಗೆ ಚೀನೀಯರು, ಈ ಪ್ರಾಣಿಗಳನ್ನು ಜನರ ಹುಟ್ಟಿದ ವರ್ಷಕ್ಕೆ ಹೋಲಿಸಿ ತುಲನೆ ಮಾಡುತ್ತಾರೆ. ಆಯಾಯ ಪ್ರಾಣಿಗಳ
ಸ್ವಭಾವವನ್ನು ವಿವರಿಸುತ್ತಾ, ಅದನ್ನೇ ಮನುಷ್ಯನ ವ್ಯಕ್ತಿತ್ವಕ್ಕೂ ಬಣ್ಣಿಸುತ್ತಾರೆ.

ಚೀನೀ ರಾಶಿಚಕ್ರದಲ್ಲಿ ಯಿನ್ ಮತ್ತು ಯಾಂಗ್ ಎಂಬ ಪರಿಕಲ್ಪನೆಯನ್ನುಕಾಣಬಹುದು. ಪ್ರತಿಯೊಂದು ಪ್ರಾಣಿಗಳಿಗೆ ವಿರೋಧಿ ಶಕ್ತಿಗಳನ್ನು ತಿಳಿಸುವ ಹಾಗೂ ಬೆಸ ಸಂಖ್ಯೆಯ ವರ್ಷಗಳಿಗೆ “ಯಿನ್” ಎಂದು ಕರೆಯಲಾಗುತ್ತದೆ. ಸಮ ಸಂಖ್ಯೆಯ ವರ್ಷಗಳನ್ನು “ಯಾಂಗ್“ಎಂದು ತಿಳಿಸಲಾಗಿದೆ. “ಯಿನ್” ನಲ್ಲಿ ಭೂಮಿ, ಸ್ತ್ರೀ, ಕತ್ತಲೆ, ಮತ್ತು ನಿಷ್ಕ್ರಿಯ ಎಂಬ
ವಿಚಾರಗಳು ಒಳಗೊಂಡರೆ, ಯಾಂಗ್ ಅನ್ನು ಪುರುಷ, ಸ್ವರ್ಗ, ಬೆಳಕು ಮತ್ತು ಸಕ್ರಿಯ ಎಂದು ಗ್ರಹಿಸಲಾಗಿದೆ.

ಅಂದ ಹಾಗೆ ಈ ಚೀನಿ ಜೋತಿಷ್ಯ ಶಾಸ್ತ್ರದ ಇತಿಹಾಸದ ಬಗ್ಗೆ ಅನೇಕ ಕಥೆಗಳಿವೆ. ಅವುಗಳಲ್ಲಿ ಕುತೂಹಲ ಹುಟ್ಟಿಸುವ ಒಂದು ಕಥೆ ಹೀಗಿದೆ. ಚೀನಿ ಕ್ಯಾಲೆಂಡರ್ ನಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಈ 12 ಪ್ರಾಣಿಗಳ ನಡುವೆ ಪೈಪೋಟಿಯೇ
ನಡೆದು ಹೋಯಿತಂತೆ. ಇದನ್ನು ಮನಗಂಡ ಚೀನಿ ದೇವರುಗಳು, ನದಿಯ ಬದಿಯುದ್ದಕ್ಕೂ ಓಟದ ಪಂದ್ಯವನ್ನು ಏರ್ಪಡಿಸಿದರಂತೆ. ಕೊನೆಗೆ ಈ ಕ್ಯಾಲೆಂಡರ್ ನಲ್ಲಿ ನಿಯೋಜಿಸಲ್ಪಟ್ಟ ಕ್ರಮದಂತೆ, ಆ ಪ್ರಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಓಟವನ್ನು ಪೂರ್ಣಗೊಳಿಸಿದ್ದವಂತೆ. ಪರಿಣಾಮವಾಗಿ ಇಲಿ ಪ್ರಥಮ ಸ್ಥಾನ ಪಡೆದರೆ, ಹಂದಿಗೆ ಕೊನೆಯ ಸ್ಥಾನ ಲಭಿಸಿತು ಎಂದು ವಿವರಿಸಲಾಗಿದೆ.

ಇನ್ನೊಂದು ವಿಚಾರ ತಿಳಿಸಲೇಬೇಕು ಈ ಪ್ರಾಣಿಗಳ ಗುಣಲಕ್ಷಣಗಳು ಹಾಗೂ ವರ್ಷಗಳಿಗೆ ಸರಿಯಾಗಿ ಅನೇಕ ವಿವಾಹಿತ ಮಹಿಳೆಯರು, ತಾಯಂದಿರಾಗುವ ಹಾಗೂ ತಮ್ಮ ಮಗುವಿನ ಜನನದ ಬಗ್ಗೆ ಯೋಜನೆ ರೂಪಿಸುತ್ತಾರೆ. ಈ ರಾಶಿ
ಚಕ್ರಗಳ ಅನ್ವಯ ಹುಟ್ಟಿದ ಮಗುವಿನ ಮೂಲಕ, ಕುಟುಂಬ ಸದಸ್ಯರ ಜೊತೆಗಿನ ಹೊಂದಾಣಿಕೆ ಹಾಗೂ ಭವಿಷ್ಯದ ಅಭಿವೃದ್ದಿಯನ್ನು ನಿರ್ಧರಿಸಲಾಗುತ್ತದೆ. ಚೀನಿಯರಲ್ಲಿ ಇದೇನು ಹೊಸದಲ್ಲ. ತಲಾತಲಾಂತರಗಳಿಂದ ನಡೆಯುತ್ತಾ
ಬರುತ್ತಿರುವ ಪದ್ಧತಿ. ಈ 12 ಪ್ರಾಣಿಗಳಲ್ಲಿ ಡ್ರ್ಯಾಗನ್ ಅದೃಷ್ಟದ ಪ್ರಾಣಿಯೆಂದು ಗುರುತಿಸಲಾಗುತ್ತದೆ. ಹೀಗಾಗಿ ಡ್ರ್ಯಾಗನ್ ಪ್ರಾಣಿಯ ವರ್ಷದಲ್ಲಿ “ಸಿಸೇರಿಯನ್ ಡೆಲಿವರೀ” ಗಳ ಸಂಖ್ಯೆ ಉತ್ತುಂಗದಲ್ಲಿ ಇರುತ್ತವೆ ಅನ್ನುವ ಮಾಹಿತಿ ಇದೆ.

ಇದೆ ವೇಳೆ ಹುಲಿಯ ವರ್ಷ ಹಾಗೂ ಅದರ ವ್ಯಕ್ತಿತ್ವದ ಬಗ್ಗೆ ಈ ಚೀನೀಯರಿಗೆ ಅಷ್ಟಕಷ್ಟೆ. ಶಾಂತ ಚಿತ್ತರು ಎಂದು ಕರೆಸಿಕೊಳ್ಳುವ ಇವರಿಗೆ, ಹುಲಿಯ ಕ್ರೋಧ ಸ್ವಭಾವ ಇಷ್ಟವಾಗೋದಿಲ್ಲಂತೆ. ಈ ವರ್ಷದಲ್ಲಿ ಜನನ
ಪ್ರಮಾಣದಲ್ಲೂ ಇಳಿಕೆ ಇರುತ್ತದೆ ಎನ್ನಲಾಗಿದೆ.

ಇನ್ನೂ ವ್ಯಾಪಾರಿಗಳು ಕೂಡ ರಾಶಿ ಚಕ್ರ ಸೂಚ್ಯಂಕದ ಪ್ರಕಾರ ತಮ್ಮ ವ್ಯಾಪಾರವನ್ನು ಮುಂದುವರಿಸುತ್ತಾರೆ. ಚೀನೀಯರು ಕೈ ಹಾಕುವ ಯಾವುದೇ ಕ್ಷೇತ್ರಗಳಿರಲಿ, ಅವುಗಳಲ್ಲಿನ ಅಭಿವೃದ್ಧಿ ಹಾಗೂ ಯಶಸ್ಸು ಈ ರಾಶಿಚಕ್ರ ಗಳಿಗೆ
ಅವಲಂಬಿತವಾಗಿರುತ್ತದೆ.

ಇನ್ನೂ ಕಟ್ಟಡಗಳು ಕೂಡ ಇವಕ್ಕೆ ಹೊರತಾಗಿಲ್ಲ. ಈಗಾಗಲೇ ತಿಳಿಸಿರುವ ೫ ಅಂಶಗಳು ಹೊಸ ಕಟ್ಟಡಗಳ ನಿರ್ಮಾಣ ಹಾಗೂ ವಿನ್ಯಾಸಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ. ಸಿಂಗಾಪುರದ ಮರೀನಾ ಬೇ, ಚಾಂಗಿ ವಿಮಾನ
ನಿಲ್ದಾಣ, ಸಿಂಹದ ಮುಖ ಇರುವ ಪ್ರತಿಮೆ { ಮೆರ್ಲಿಯನ್ } ಮ್ಯೂಸಿಯಂ ಗಳು ಹೀಗೆ ಅನೇಕ ಕಟ್ಟಡಗಳು ಚೀನಿಯರ ಫೆಂಗ್ ಶೂಯಿ ಶಾಸ್ತ್ರದ ಪ್ರಕಾರವಾಗಿ ನಿರ್ಮಾಣಗೊಂಡಿರುತ್ತವೆ.

ಫೆಂಗ್ ಶೂಯಿ ಅಕ್ಷರಶಃ ”ಗಾಳಿ ಮತ್ತು ನೀರು”ಎಂದರ್ಥ. ಜ್ಯೋತಿಷ್ಯ, ಭೌಗೋಳಿಕತೆ, ಪರಿಸರ ವಿಜ್ಞಾನ, ಮನೋವಿಜ್ಞಾನ, ವಾಸ್ತುಶಿಲ್ಪ ಮತ್ತು ಸೌಂದರ್ಯಶಾಸ್ತ್ರದಂತಹ ವಿವಿಧ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಅಧ್ಯಯನ
ಮಾಡುವುದಾಗಿದೆ. ಸಿಂಗಾಪುರದಲ್ಲಿ ಫೆಂಗ್ ಶೂಯಿ 1 ಅನ್ನು ಅಭ್ಯಸಿಸುವ ವೃತ್ತಿಪರ ಜಿಯೋಮಾನ್ಸರ್ಸ್ ಗಳ ಸಮುದಾಯವನ್ನು ಕಾಣಬಹುದು. ಇಷ್ಟು ಬಲವಾಗಿರುವ ಜೋತಿಷ್ಯ ಶಾಸ್ತ್ರದ ಬಗ್ಗೆ ದೇಶದ ಮುಕ್ಕಾಲು ಪಾಲು
ಚೀನೀಯರು ನಂಬಿಕೆ ಉಳ್ಳವರಾಗಿದ್ದಾರೆ.

ಬಾಯಿ ಮಾತಿಗೆ ಮೂಢನಂಬಿಕೆ ಅನ್ನೋರು ಸಿಂಗಾಪುರದಲ್ಲಿ ಹೊರತಾಗಿಲ್ಲ. ಅದೇನೇ ಇರಲಿ ಅವರಿಗೆ ಬಿಟ್ಟ ವಿಚಾರ. ನಮಗೆ ಮಾಹಿತಿಯ ಜ್ಞಾನ ಇದ್ದರೆ ಸಾಕು. ಅವರ ಇತಿಹಾಸ, ಪುರಾಣಗಳನ್ನು ಕೆದಕಿ, ಪ್ರಶ್ನಿಸಿ, ತಿದ್ದಿ, ಹೀಯಾಳಿಸಿ, ತಮ್ಮ ನಿಲುವೇ ಶ್ರೇಷ್ಟ ಎಂದು ಜನರನ್ನು ನಂಬಿಸಿ ನಮ್ಮ ಆರೋಗ್ಯ ಹಾಗೂ ಸಮಯ ವ್ಯರ್ಥ ಮಾಡೋದ್ರಲ್ಲಿ ಯಾವುದೇ ಅರ್ಥ ಇಲ್ಲ. ನಮ್ಮ ದೇಶದಲ್ಲಿ ತುಂಬಿ ತುಳುಕುತ್ತಿವೆಯಲ್ಲಾ ಇಂತಹ ವಿಚಾರಗಳು.

ನಾವು ಹುಟ್ಟಿದ ವರ್ಷವನ್ನು ಈ ಪ್ರಾಣಿಗಳ ವರ್ಷಗಳಲ್ಲಿ ಅಳವಡಿಸಿರುವ ಕಾರಣ ಚೀನಿ ರಾಶಿಯ ಮಾಹಿತಿಯನ್ನು ಅರಿಯಲು ಯಾವ ಕಷ್ಟನೂ ಇಲ್ಲ. ಈ ಬಗ್ಗೆ ತಿಳಿದುಕೊಂಡಾಗ ನನ್ನ ರಾಶಿ ಚಕ್ರದ ಪ್ರಾಣಿ ಹೆಸರು “ಇಲಿ”
ಅನ್ನೋದು ಸ್ಪಷ್ಟವಾಯಿತು. ಆಗಲೇ ತಿಳಿದಿದ್ದು ಅರೆರೆ..! ನಾವು ಅಂದರೆ “ಇಲಿ” ವಂಶದವರು ಸ್ಪರ್ಧೆಯಲ್ಲಿ ಗೆದ್ದವರು.

ಏನೇ ಆಗಲಿ ಈ ಆಚರಣೆಗೆ ಕಲಿಯುಗದಲ್ಲಿ ಒಂದು ಪಾರ್ಟೀ ಆಗಲೇಬೇಕು. ಅಂದ ಹಾಗೆ ಈ ವರ್ಷ 2019,
ಚೀನೀಯರಿಗೆ “ಈಯರ್ ಆಫ್ ದ ಪಿಗ್”{ಹಂದಿಯ ವರ್ಷ}. ರಾಶಿ ಚಕ್ರದ ಕೊನೆಯ ಪ್ರಾಣಿ. ಈ ಜೋತಿಷ್ಯದ ಪ್ರಕಾರ, ಇಲಿ ಹಾಗೂ ಹಂದಿ ತುಂಬಾ ಕ್ಲೋಸ್ ಫ್ರೆಂಡ್ಸ್ ಅಂತೇ. ಹಾಗಾದರೆ ಇಲಿಗೆ ಈ ವರ್ಷ ಮುಟ್ಟಿದ್ದೆಲ್ಲಾ ಬಂಗಾರ. ಹಾಗಂತ ಶಾಸ್ತ್ರ ಹೇಳ್ತೈತೆ..!

ಕೊನೆ ಮಾತು: ಸದ್ಯ..! ಪುರಾಣದಲ್ಲಿ ನಡೆದ ಪ್ರಾಣಿಗಳ ಓಟದ ಸ್ಪರ್ಧೆ ನಮ್ಮ ಭಾರತದಲ್ಲಿ ಆಗಿಲ್ಲ. ಇಲ್ಲಾಂದ್ರೆ… ಇಷ್ಟೊತ್ತಿಗೆ ಏನ್ ಆಗ್ತಿತ್ತೋ ಏನೋ ಈ ವಿಷಯ….

“ನಾರಾಯಣ…..! ನಾರಾಯಣ..!”

 

Leave a Reply