ಕನ್ನಡವನ್ನು ಜಾಗತೀಕರಣಗೊಳಿಸಿ..

ಕನ್ನಡವನ್ನು ಜಾಗತೀಕರಣಗೊಳಿಸಿ ಇಲ್ಲವೇ ಜಾಗತಿಕ ಭಾಷೆಗೆ ಕನ್ನಡದ ಮಕ್ಕಳನ್ನು ಸಿದ್ಧಗೊಳಿಸಿ

-ಡಾ ಬಸವರಾಜ್ ಇಟ್ನಾಳ

ಇದನ್ನು ಚಂಪಾ ಅಥವಾ ಕಂಬಾರರ ಭಾಷಾ ಪ್ರೇಮದ ಮಾತಿನ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿಲ್ಲ. ಸಾಹಿತಿಗಳು ಭಾಷಾ ವಿಜ್ಞಾನಿಗಳೂ ಅಲ್ಲ, ಆರ್ಥಿಕ ತಜ್ಞರೂ ಅಲ್ಲ. ಹಾಗೆಯೇ ಯಾವ ಬುದ್ಧಿ ಜೀವಿ, ಚಿಂತಕನಿಗೂ ನಮ್ಮ ಮಕ್ಕಳ ಹಣೆಬರಹವನ್ನು ನಿರ್ಧರಿಸುವ ಅಹಂಕಾರವೂ ಬೇಡ.

ಶಿಕ್ಷಣದ ಮೂಲ ಗುರಿ ವ್ಯಕ್ತಿಗೆ ಆರ್ಥಿಕ ಉತ್ಪಾದನಾ ಸಾಮರ್ಥ್ಯ ತರುವುದು. ಔದ್ಯೋಗಿಕ ಮತ್ತು ಆರ್ಥಿಕ ಆಯಾಮ ಇಲ್ಲದೇ ಹೋದರೆ ಕನ್ನಡದ ಪರವಾಗಿ ಮಾತನಾಡುವ ಬುದ್ಧಿ ಜೀವಿಗಳೂ ಕೂಡ ನಿರುದ್ಯೋಗಿಗಳು! ಭಾಷೆ, ಸಂಸ್ಕೃತಿ ಮತ್ತು ರಾಜಕಾರಣದ ಚೌಕಟ್ಟನ್ನು ಯಾವಾಗಲೂ ನಿರ್ಧರಿಸುವುದು ಅಂದಂದಿನ ಆರ್ಥಿಕ ಸಂದರ್ಭ. economy is the origin of all culture, technology and politics. ಅಷ್ಟೇ ಅಲ್ಲ ಎಲ್ಲಾ ಸಾಮಾಜಿಕ ಕ್ರಾಂತಿಗಳು, ಯುದ್ಧಗಳು ಕೂಡ ನಡೆಯುವುದು ಆರ್ಥಿಕ ಕಾರಣಗಳಿಗೆ, ಇರಲಿ. ನಮ್ಮೂರಿನ ಒಂದು ಕತೆ ಹೇಳುತ್ತೇನೆ.

ಇಂಜಿನೀಯರಿಂಗ್ ಡಾಕ್ಟರೇಟ್ ಮಾಡಿದ ನಾನು, ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ, ಇಂಗ್ಲೀಷಿನಲ್ಲಿ ಇಂಗ್ಲೀಷರಂತೆಯೇ ಮಾತನಾಡುವ, ಬರೆಯುವ ನಾನು ಬೆಂಚುಗಳು ಕೂಡ ಇಲ್ಲದ ಕನ್ನಡ ಸರಕಾರೀ ಶಾಲೆಯಲ್ಲಿ ತಣ್ಣನೆಯ ನೆಲದ ಮೇಲೆ ಕೂತು ವಿಜ್ಞಾನ, ಗಣಿತ, ಸಾಹಿತ್ಯ ಇತ್ಯಾದಿ ಕಲಿತಿದ್ದು. ನಾನಿದನ್ನು ಪದೇ ಪದೇ, ಕೆಲವರಿಗೆ ಅತೀ ಅನಿಸುವಷ್ಟು ಹೇಳಿಕೊಳ್ಳುತ್ತೇನೆ. ಸರಕಾರೀ ಶಾಲೆಯಿಂದ ಇಲ್ಲಿಯವರೆಗೆ ಬಂದಿರುವುದಕ್ಕೆ ಅಷ್ಟು ಹೆಮ್ಮೆ ನನಗೆ!

ನಾನು ಓದಿದ ಶಾಲೆಗೆ ದಶಕಗಳ ನಂತರ ಒಮ್ಮೆ ಹೋದೆ. ಅದೇ ಕಟ್ಟಡ, ಗೆಳೆಯರೊಡನೆ ಕೋತಿಗಳಂತೆ ಹುಚ್ಚಾಪಟ್ಟೆ ಆಡಿದ ಅದೇ ಮಣ್ಣಿನ ಸೊಗಡು. ನನ್ನೊಡನೆ ಓದಿದ ಗೆಳೆಯರೊಂದಿಗೆ ಶಾಲೆಯ ಹೆಡ್ ಮಾಸ್ಟರ್ ರೂಮಿನಲ್ಲಿಯೇ ಒಂದು ಅನೌಪಚಾರಿಕ ಸಭೆ ನಡೆಯಿತು. ನನಗೆ ಆಘಾತವಾಗಿದ್ದು ಶಾಲೆಯಲ್ಲಿ ಮಕ್ಕಳೇ ಇಲ್ಲದ್ದು ಕಂಡು. ನಾವು ಓದುವಾಗ ಒಂದೊಂದು ಕ್ಲಾಸಿಗೆ 50-60 ವಿಧ್ಯಾರ್ಥಿಗಳ ಎರಡೆರಡು ಡಿವಿಜನ್ ಇದ್ದವು. ಸ್ಕೂಲೆಲ್ಲ ಗಿಜಿಗುಡುತ್ತಿತ್ತು. ಈಗ ನೋಡಿದರೆ ಒಂದನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗಿನ ಒಟ್ಟು ವಿಧ್ಯಾರ್ಥಿಗಳ ಸಂಖ್ಯೆ ಕೇವಲ ನಲವತ್ತು! ಸೈಕಲ್ ಭಾಗ್ಯ, ಬಿಸಿಯೂಟ ಎಲ್ಲವೂ ಇದ್ದರೂ ಈ ಸ್ಥಿತಿ! ಇವಾವ ಸವಲತ್ತೂ ಇಲ್ಲದ ಕಾಲದಲ್ಲಿ ಈ ಶಾಲೆಯಲ್ಲಿ ಏನಿಲ್ಲವೆಂದರೂ ಐದು ನೂರು ವಿಧ್ಯಾರ್ಥಿಗಳಿದ್ದೆವು.

ಏನಾಗಿದೆ ಅಂತ ನೋಡಿದರೆ ಊರ ತುಂಬಾ ಇಂಗ್ಲೀಷ್ ಶಾಲೆಗಳು! ಎಲ್ಲರಿಗೂ ಇಂಗ್ಲೀಷ್ ಮಾಧ್ಯಮದ ಅಥವಾ ಇಂಗ್ಲೀಷ್ ಕಾನ್ವೆಂಟ್ ಮಾದರಿಯ ಶಾಲೆಗಳು ಲಭ್ಯವಾಗಿವೆ. ಎಲ್ಲರಿಗೂ ಮಗುವಿಗೆ ಟೈ, ಬೂಟು ಹಾಕಿ ಸ್ಕೂಲ್ ಗಾಡಿಯಲ್ಲಿ ಕೂರಿಸುವ ಆಸೆ. ನಾವು ಓದುವಾಗ ಇವಾವವೂ ಆ ಊರಲ್ಲಿ ಇರಲಿಲ್ಲ. ಹೀಗಾಗಿ ತಶೀಲ್ದಾರ್, ಡಾಕ್ಟರ್, ಇಂಜಿನೀಯರ್ ಮಕ್ಕಳು ಇವರ ಮನೆಯ ಕೆಲಸದಾಳಿನ ಮಕ್ಕಳ ಜೊತೆಗೇ ಕೂತು ಓದುವ, ಹಾಗೆಯೇ ಆಡುವ ಅವಕಾಶ ಇತ್ತು. ಈಗ ಅನುಕೂಲಸ್ಥರೆಲ್ಲ ಇಂಗ್ಲೀಷ್ ಶಾಲೆಗೇ ಮಕ್ಕಳನ್ನು ಕಳಿಸುತ್ತಿರುವುದರಿಂದ ಅವರ ಮನೆಯ ಕೆಲಸದವರಿಗೂ ಸರಕಾರೀ ಶಾಲೆಗೇ ಹೋಗುವವರು ತೀರ ನಿರ್ಗತಿಕರು ಅನ್ನುವ ಕೀಳರಿಮೆ ಶುರುವಾಗಿ ಅವರೂ ಕೂಡ ಇಂಗ್ಲೀಷ್ ಶಾಲೆಯ ದಾರಿಯನ್ನೇ ಹಿಡಿದಿದ್ದಾರೆ.

 

ಇದನ್ನು ಭಾಷಾ ಪ್ರೇಮದ ಆಧಾರದಲ್ಲಿ ನೋಡುವ ಕಾಲ ಒಂದಿತ್ತು. ಅದು 1991ರಲ್ಲಿ ಡಾ ಮನಮೋಹನ್ ಸಿಂಗ್ ಅವರು ಮಂಡಿಸಿದ ಬಜೆಟ್ ಮೂಲಕ ಅಂತ್ಯಗೊಂಡಿತು. ಅಲ್ಲಿನವರೆಗೆ `ಭಾರತೀಯ’ ವಾಗಿದ್ದ ಆರ್ಥಿಕ ವ್ಯವಸ್ಥೆ ‘ಜಾಗತಿಕ’ ಆಯಿತು. ಜಾಗತಿಕ ಉದ್ಯಮದ ಕೇಳುವ ಔದ್ಯೋಗಿಕ ನಿಪುಣತೆಯನ್ನು ದಾಟಿಸುವ ಹೊಸ ಅನಿವಾರ್ಯತೆ ಶಿಕ್ಷಣಕ್ಕೆ ಹುಟ್ಟಿತು. ನೆನಪಿರಲಿ, ಯಾವ ಆಂಗ್ಲ, ಪಾಶ್ಚಾತ್ಯ ದೇಶವೂ ಕೂಡ ಭಾರತದ ಪ್ರಧಾನಿಗೆ ಆಗಲೀ ಅರ್ಥ ಮಂತ್ರಿಗೆ ಆಗಲೀ ತಲೆಗೆ ಬಂದೂಕ ಇಟ್ಟು ಇದನ್ನು ಮಾಡಿಸಲಿಲ್ಲ. ಸಂಪೂರ್ಣ `ಭಾರತೀಯ’ ಕೇಂದ್ರಿಕೃತ ಸರಕಾರೀ ನಿಯಂತ್ರಣದ ಆರ್ಥಿಕ ನೀತಿಯಿಂದಾಗಿ ಭಾರತದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು. ಟನ್ನುಗಟ್ಟಲೆ ಭಾರತದ ಚಿನ್ನವನ್ನು ವಿಮಾನದಲ್ಲಿ ಹೇರಿಕೊಂಡು ಹೋಗಿ ಅಡವಿಟ್ಟು ಕೇವಲ ಹದಿನೈದು ದಿನದ ಅಸ್ತಿತ್ವಕ್ಕಾಗಿ ವಿದೇಶದಿಂದ ಸಾಲ ತಂದೆವು. ಕೆಟ್ಟ ಮೇಲೆ ಬುದ್ಧಿ ಬಂದು ದುಸರಾ ಮಾತಾಡದೇ ಜಾಗತಿಕ ಆರ್ಥಿಕತೆಗೆ ತಲೆಬಾಗಿದೆವು. ನಾವೂ ಲಿಬರಲ್ ಎಕಾನಮಿ ಆದೆವು.

ನಿಮ್ಮ ಭಾರತೀಯ ಉದ್ಯಮವಾಗಲೀ, ಅಥವಾ ವಿದೇಶಿ ಉದ್ಯಮವಾಗಲಿ ಇಂಗ್ಲೀಷ್ ಇಲ್ಲದೇ ನಮ್ಮ ಮಕ್ಕಳಿಗೆ ಉದ್ಯೋಗ ಕೊಡುವುದೇ ಇಲ್ಲ. ಉದ್ಯೋಗ ಹೋಗಲಿ ಕನ್ನಡ ಸಾಹಿತ್ಯ ಒಂದನ್ನು ಬಿಟ್ಟು ಇನ್ನುಳಿದ ಎಲ್ಲಾ ಜ್ಞಾನವೂ ಇಂಗ್ಲೀಷಿನಲ್ಲಿಯೇ ಇದೆ. 1995ರ ನಂತರದ ಐ ಟಿ /ಬಿ ಟಿ ಉದ್ಯಮವಂತೂ ಇಂಗ್ಲೀಷಿನ ಮಹತ್ವವನ್ನು ನಮಗೆ ಇನ್ನಿಲ್ಲದಂತೆ ಕಲಿಸಿದೆ. ಅಮೇರಿಕಾ ಸರಕಾರಕ್ಕೇ ಭಯ ತರುವಷ್ಟು ನಾವು ಐ ಟಿ / ಬಿ ಟಿ ಯಲ್ಲಿ ಪ್ರಬಲರಾಗಿದ್ದು ನಮ್ಮ ಕನ್ನಡ ಭಕ್ತಿಯಿಂದಲ್ಲ, ನಮ್ಮ ಇಂಗ್ಲೀಷ್ ನಿಪುಣತೆಯಿಂದ. ಜಗತ್ತಿನ ಇಂಗ್ಲೀಷ್ ಭಾಷಿಕ ಜನಸಂಖ್ಯೆಯ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ ಇದೆ. ಇಂದು ಅಮೇರಿಕ ಮತ್ತು ಚೀನಾ ದೇಶಗಳು ಕೂಡ ಭಾರತಕ್ಕೆ ಬೆದರುವುದು ನಮ್ಮ ಇಂಗ್ಲೀಷ್ ಸಾಮರ್ಥ್ಯದಿಂದಾಗಿ. ಯಾವುದೇ ಪ್ರಾದೇಶಿಕ ಭಾಷೆಯ ಪವಾಡದಿಂದಲ್ಲ.

 

ಹಾಗಂತ ಕನ್ನಡ ಶಾಲೆ ಮುಚ್ಚಿ ಅಂತ ಹೇಳುವುದೂ ತಪ್ಪು. ಗಮನಿಸಬೇಕಾದ ವಿಚಾರ ಏನೆಂದರೆ ವಾಸ್ತವದ ಅಗತ್ಯಗಳನ್ನು ಅರಿಯದ ನೀತಿಗಳಿಂದಾಗಿ ಸರಕಾರೀ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕೆಲ ಶಾಲೆಗಳನ್ನು ಮುಚ್ಚಲು ಸರಕಾರವೇ ಮುಂದಾಗಿದೆ. ಕಾಲದ ಅಗತ್ಯಕ್ಕೆ ತಕ್ಕ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡುವ ಖಾಸಗಿ ಶಾಲೆಗಳು ಹೆಚ್ಚುತ್ತಿವೆ. ಹೀಗಿರುವಾಗ ಕನ್ನಡ ಮಾಧ್ಯಮ ಶಾಲೆಗಳನ್ನೂ ಇಟ್ಟುಕೊಂಡು, ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನೂ ಆರಂಭಿಸಿ ಆಯ್ಕೆಯನ್ನು ಜನರಿಗೇ ಬಿಡುವುದು ಸೂಕ್ತ. ಮರಾಟಿ, ಉರ್ದು ಶಾಲೆಗಳನ್ನು ನಡೆಸುವ ಕರ್ನಾಟಕ ಸರಕಾರ (ಇಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುತ್ತಾರೆ) ಇಂಗ್ಲೀಷ್ ಶಾಲೆಗಳನ್ನೂ ನಡೆಸುವುದು ಈ ಕಾಲದ ಅಗತ್ಯ.

ಕನ್ನಡವನ್ನು ಜಾಗತೀಕರಿಸಲು ಕೂಡ ಜಾಗತಿಕ ಭಾಷೆಯ ಅಗತ್ಯವಿದೆ.

Leave a Reply