ಕ್ಷಮಿಸಿಬಿಡು ವೇಮುಲ..

ಕಾವ್ಯಶ್ರೀ ಎಚ್.

ಸಹಿಸುವುದನ್ನು ಕಲಿಯುತ್ತ ಕಲಿಯುತ್ತ
ನಾನು ಅಸಹನೆಯನ್ನು ಅಡವಿಟ್ಟಿದ್ದೇನೆ
ರೋಷದಿಂದ ಬೀದಿಗಿಳಿಯಲಾರೆ

ಕಾರಣಗಳನ್ನು ಹುಡುಕುತ್ತಾ ಪರಿಣಾಮಗಳನ್ನು ಚಿಂತಿಸುತ್ತಾ
ಸಂವೇದನೆಯನ್ನು ಅಡವಿಟ್ಟಿದ್ದೇನೆ
ಕರಗಿ ಕಣ್ಣೀರಾಗಲಾರೆ
ಕ್ಷಮಿಸಿಬಿಡು ವೇಮುಲ

ಬದುಕನ್ನು ಗೆಲುವಾಗಿಸುತ್ತಾ
ಪ್ರಾಮಾಣಿಕತೆಯನ್ನು ಅಡವಿಟ್ಟಿದ್ದೇನೆ
ಆತ್ಮಸಾಕ್ಷಿಯನ್ನು ಮಾರಿಕೊಂಡಿದ್ದೇನೆ
ಕ್ಷಮಿಸಿಬಿಡು ವೇಮುಲ

ನಿನಗಿಂತ ಮೊದಲೇ ಸಮಾಧಿಯಾಗಿದ್ದೇನೆ
ನಿನ್ನಂತೆ ಹೊಳೆವ ನಕ್ಷತ್ರವಾಗಲಾರೆ
ಉರಿಯಾಗಿ ಸುಡಲಾರೆ
ಕ್ಷಮಿಸಿಬಿಡು ವೇಮುಲ !

ಚಿತೆಯ ಜ್ವಾಲೆಯ ಬಣ್ಣವ ವರ್ಣಿಸುತ್ತಾ
ಬೂದಿಯ ಮರೆಯಲ್ಲಿ ಕೆಂಡವ ಅರಸುತ್ತಾ
ಜನ ಮಾನವೀಯತೆಯನ್ನೇ ಅಡವಿಟ್ಟಿದ್ದಾರೆ
ಕ್ಷಮಿಸಿಬಿಡು ವೇಮುಲ…

 

2 comments

Leave a Reply