ಇಂದೂ ನೆನಪಿದೆ..

ಡಾ ಭಾವನಾ ಎಂ ವಿ 

ಆಶೆ 

ಮತ್ತೆ ಬಂದಿತು, ಮುದ್ದಿನ ಕಂದನ ಹುಟ್ಟಿದ ದಿನ,
ಅವನಿಗಾಗಿ ಸತ್ಕರ್ಮ ಮಾಡಲು ಹಂಬಲಿಸಿತು ಮನ.
ಹೀಗೆ ಪ್ರಾರಂಭವಾಯ್ತು ರಕ್ತದಾನದ ಕಾರ್ಯ,
ಜೀವದಾನವೊಂದೇ ಇದರ ಧ್ಯೇಯ.
ಚುಚ್ಚಿದರು ಕೈಗೆ ದಪ್ಪ ಸೂಜಿ, ತುಂಬಲಾರಂಭಿಸಿತು ಚೀಲ.
ಅವನಿಗೆ ಎಂದೆದು ಒಳಿತಾಗಲಿ, ಆಶೀರ್ವದಿಸಿತು ತಾಯಿ ಹೃದಯ.
ಕೆಂಪು ಅಮೃತ ನೋಡಿದೆಡೆ ಏನೋ ಸಂತೋಷ.
ಬದುಕಿಗೆ ಅರ್ಥ ಸಿಕ್ಕಿದ ಹರ್ಷ.
ಒಳಬಂದರು ಇನ್ನೊಬ್ಬ ದಾನಿ,
“ಆರಾಮಾಗಿದ್ದೀರಾ ಕರೀಂ” ಕೇಳಿತು ವೈದ್ಯರ ದನಿ.
ಅಷ್ಟರಲ್ಲಿ ಮುಗಿಯಿತು ಮೇರಿಯ ರಕ್ತದಾನ,
ಇಂದೂ ನೆನಪಿದೆ ಆಕೆಯ ಹಸನ್ಮುಖ ವದನ.
ನಾನು, ಕರೀಂ, ಮೇರಿ, ಹರ್ಭಜನ್, ಪಾಂಡೆ,
ಎಲ್ಲರ ಭಾವ ಒಂದೇ, ರಕ್ತದ ಬಣ್ಣ ಒಂದೇ..
ಯಾರದು ಯಾರ ಧಮನಿಗೆ ಸೇರುವುದೋ..ಏನಾದರೂ ಗೊತ್ತುಂಟೆ?
ಎಲ್ಲರಲ್ಲೂ ಜೀವ ಕೊಡುವ ಸಂಜೀವನಿ ಒಂದೇ ಇರುವಾಗ,
ಜೀವಿಗಳೂ ಒಂದಾಗಬಾರದೇ? ಆಶಿಸಿತು ಒಳಮನ.


ಹ್ಯಾಪಿ ನ್ಯೂ ಇಯರ್  

“ಹ್ಯಾಪಿ ನ್ಯೂ ಇಯರ್”
ಬರಲು ಶುರುವಾಯ್ತು ಹಾರೈಕೆಗಳ ಮಹಾಪೂರ,
ಹೊಸ ವರ್ಷ, ಹೊಸ ಧ್ಯೇಯ, ಹೊಸ ಹುರುಪು ಎಲ್ಲೆಡೆ.
ಒಂದೆರೆಡು ದಿನ ಬಿಟ್ಟರೆ ಮತ್ತೆ ಪ್ರಾರಂಭ ದೈನಂದಿನ ಕಸರತ್ತು,
ಮತ್ತದೇ ಆಫೀಸ್ ಕೆಲಸ ಸ್ಕೂಲ್ ಹೊಂವರ್ಕ್ ಅಡುಗೆ,
ಕಾಲಚಕ್ರ ಉರುಳುವುದು, ಕ್ಯಾಲೆಂಡರ್ ತಿರುಗುವುದು,
ಕಾಲಿಗೆ ಚಕ್ರ ಕಟ್ಟಿ ಓಡುವ ಕಾಲವಿದು.
ಬದಲಾದ ಕಾಲವ ಬಿಗಿದಪ್ಪಿ ನಡೆಯುವ ಕಾಲವಿದು.
ಮಕ್ಕಳ ದನಿಗೆ ಹಾತೊರೆಯುವ ಅಪ್ಪ ಅಮ್ಮಂದಿರ ಕಾಲವಿದು.
ಒಡಹುಟ್ಟಿದವರೊಟ್ಟಿಗೆ ಆಡಲು ಸಮಯವಿಲ್ಲದ ಕಾಲವಿದು.
ಮಣ್ಣು ಕೇಸರಲ್ಲಿ ಮನಸೋಇಚ್ಛೆ ಆಡಲು ಅವಕಾಶವಿಲ್ಲದ ಕಾಲವಿದು.
ಮನಬಿಚ್ಚಿ ಮಾತಾಡದೆ, Facebook, WhatsApp ಅಲ್ಲಿ ಮಾತಾಡುವ ಕಾಲವಿದು.
ಈ ಕಾಲದಲ್ಲೇನಿದೆ “ಹ್ಯಾಪಿ” ಎಂದು ಬಂತೊಂದು ಯೋಚನೆ,
ನಿಜಕ್ಕೂ ಬದಲಾಗಿರುವುದು ಕಾಲವೋ, ನಾವೋ..

Leave a Reply