ಸಾವಿರದ ಶರಣು

ಎಲ್ ಸಿ ನಾಗರಾಜ್ 

ಸಂಕ್ರಾಂತಿ ಕಳೆಯಿತೆಂದರೆ ಅಮ್ಮನಿಗೆ ಬಿಡುವಿಲ್ಲದ ಕೆಲಸ. ಐದಾರು ಮಹಿಳೆಯರನ್ನ ಕಟ್ಟಿಕೊಂಡು ಹುಣಸೆ ಹಣ್ಣಿನ ನಾರು ಬಿಡಿಸಿ , ಚಚ್ಚಿ ಬೀಜ ತೆಗೆದು ಅದನ್ನ ಹೂವಿನಂತಾಗಿಸುವುದು

ಕೆಲಸ ಮಾಡುವ ಮಹಿಳೆಯರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡಿ ಬಡಿಸುವುದು; ಉಳಿದಂತೆ ಹೂವಂತೆ ಅರಳಿದ ಹುಣಸೆ ಹಣ್ಣಿನಲ್ಲಿ ಹುಳುಕಾಗಿರುವುದು ಇದ್ದರೆ ಅದನ್ನ ತೆಗೆದು ಬಿದಿರಿನ ಮಂಕರಿಗಳಿಗೆ ತುಂಬಿಡುವುದು

ಅಪ್ಪ ಅತ್ತ ಸುಳಿದರೆ ಅಪ್ಪನಿಗೆ ಒಂದು ಲೋಟ ಟೀ ಮಾಡಿಕೊಟ್ಟು ‘ಟ್ಯಾಕ್ಸಿ ರಂಗಪ್ಪಣ್ಣ ಯಾವಾಗ ಬರುತ್ತಾನೆ ‘ ಅಂತಾ ಯಾಚನೆಯ ದನಿಯಲ್ಲಿ ಕೇಳುತ್ತಿದ್ದಳು.

ರಂಗಪ್ಪಣ್ಣನ ಟ್ಯಾಕ್ಸಿಗೆ ಮೋಟಾರ್ ಸೈಕಲಿನ ತರ ಸ್ಪೋಕ್ಸ್ ಇರುವ ಚಕ್ರಗಳಿದ್ದವು , ಅವರ ಟ್ಯಾಕ್ಸಿ ಬಂದು ಮಾವಿನ ಮರದ ನೆರಳಲ್ಲಿ ನಿಲ್ಲುತ್ತಲೇ ನಾವೆಲ್ಲ ಒಂದು ರವುಂಡು ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುತ್ತಿದ್ದೆವು

ರಂಗಪ್ಪಣ್ಣ ಊಟ ಮಾಡಿ ಎಲೆ ಅಡಿಕೆ ತಿನ್ನುತ್ತ ಅಪ್ಪನೊಂದಿಗೆ ಮಾವಿನ ಮರದ ನೆರಳಲ್ಲಿ ಕುಳಿತಿರುವಾಗ ಅಮ್ಮ ಅಲ್ಲಿಗೆ ಬಂದು ‘ ಗಪ್ಪಣ್ಣ ಯಾವಾಗ ಬಿಡುವಾಗ್ತೀರ ?’ ಅಂತಾ ಕೇಳುತ್ತಿದ್ದಳು.

‘ಯಾಕೆ ತಾಯಿ ‘

‘ಏನಿಲ್ಲ ಸಿದ್ದಗಂಗೆಯ ಮಠಕ್ಕೆ ಅಂತಾ ಎರಡು ಚೀಲ ಹೂ ಹುಣಸೆ ಇಟ್ಟಿದೀನಿ , ಅದನ್ನ ಮಠಕ್ಕೆ ತಲುಪಿಸಬೇಕಿತ್ತು ‘

‘ಬಿಡುವಾಗೋದೇನು ತಾಯಿ , ಮಠಕ್ಕೆ ಹೋಗಲೆಂದೇ ಬಿಡುವು ಮಾಡ್ಕೊಳ್ತೀನಿ ‘

ಸಿದ್ದಗಂಗೆಯ ಮಠ ಎಂದರೆ ಅದು ದೇವರಿರುವ ಬೆಟ್ಟವೆಂದೇ ನಾವು ನಂಬಿದ್ದೆವು ; ಲಕ್ಷ ಲಕ್ಷ ಮಕ್ಕಳಿಗೆ ಬದುಕಿನ ಬಟ್ಟೆದೋರಿದ ತ್ರಿವಿಧ ದಾಸೋಹದ ದೇಗುಲ .

ಮಠದ ಆದಾಯ ಕಡಿಮೆ ಇರುವಾಗಲೂ ಮಕ್ಕಳಿಗೆ ಊಟ , ಬಟ್ಟೆ , ವಸತಿ ಮತ್ತು ಶಿಕ್ಷಣ ಕೊಡುತ್ತಿದ್ದ ದೇವರಿರುವ ಬೆಟ್ಟ

ಶಿವನ ಪಾದ ಸೇರುವ ಇಚ್ಛೆ ತೋರಿ , ನಡೆದಾಡುತ್ತ ಹೊರಟುಬಿಟ್ಟಿರಿ ಗುರುಗಳೇ

ಸಾವಿರದ ಶರಣು

Leave a Reply