ಬ್ಯಾಕ್ ಟು ಬ್ಯಾಕ್ ಕಾರಂತ್

ಒಂದೇ ವೇದಿಕೆಯಲ್ಲಿ ಕಾರಂತರ 2 ನಾಟಕಗಳು

ಸಂಕೇತ್ ಗುರುದತ್

ಇದೇ ಭಾನುವಾರದಂದು (ಜನವರಿ 27) ಬೆಂಗಳೂರಿನ ಕೆ ಎಚ್ ಕಲಾಸೌಧದಲ್ಲಿ ಒಂದರ ಹಿಂದೆ ಒಂದರಂತೆ ವಿಭಿನ್ನವಾದ ಎರಡು ಪತ್ತೇದಾರಿ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಾಸ್ಯಮಿಶ್ರಿತವಾಗಿದೆ ಎಂಬುದೂ ಈ ನಾಟಕಗಳ ಪ್ಲಸ್ ಪಾಯಿಂಟ್. ಸಾಂಸಾರಿಕ, ಸಂಗೀತಮಯ, ಹಾಸ್ಯ, ರಾಜಕೀಯ ಹಿನ್ನೆಲೆ ಹಾಗೂ ಪ್ರಾಯೋಗಾತ್ಮಕಗಳಂತಹ ಹಲವಾರು ಮಜಲುಗಳ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ ರಾಜೇಂದ್ರ ಕಾರಂತ್ ಅವರೀಗ ಹೊಸದಾಗಿ ಪತ್ತೇದಾರಿ, ರೋಚಕ ಹಾಗೂ ಕೌತುಕಮಯವಾದ ಅಂಶಗಳನ್ನು ಹೊಂದಿರುವ ಎರಡು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಇಲ್ಲಿ ಪ್ರದರ್ಶಿಸುತ್ತಿದ್ದಾರೆ.

ಎಷ್ಟೊತ್ತಿಗೆ, ಯಾವ್ಯಾವ ನಾಟಕಗಳು?
ಇಂದು ಮಧ್ಯಾಹ್ನ 4 ಗಂಟೆಗೆ `ಸುಮ್ಮನೆ’ ಹಾಗೂ 7-30ಕ್ಕೆ `ರಂಗಮಹಲ್ ರಹಸ್ಯ’ ಎಂಬ ನಾಟಕಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ.

ಮನೆಯೊಂದನ್ನು ನೋಡಲು ಬರುವ ಗಂಡ-ಹೆಂಡತಿ ಹಾಗೂ ಅವರ ತಾಯಿಯು ಆ ಮನೆಯಲ್ಲಿನ ಹಲವಾರು ರಹಸ್ಯಾತ್ಮಕ ಗೊಂದಲಗಳಲ್ಲಿ ಹೇಗೆ ಸಿಲುಕುತ್ತಾರೆ. ಹಾಗೂ ಆ ಗೊಂದಲದ ಗೂಡಿಂದ ಹೇಗೆ ಪಾರಾಗುತ್ತಾರೆ? ಎಂಬ ಕಥಾ ಹಂದರವನ್ನು ಈ `ಸುಮ್ಮನೆ’ ನಾಟಕವು ಹೊಂದಿದೆ. ಇಲ್ಲಿ ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಅನ್ನು ಕಾಯ್ದುಕೊಂಡಿದ್ದಾರೆ. ಕಾರಂತರೊಂದಿಗೆ ಸತೀಶ್ ಐತಾಳ್, ರಾಜೇಶ್ವರಿ, ಲಕ್ಷ್ಮೀ ಅವರು ಈ ನಾಟಕದಲ್ಲಿ ನಟಿಸಿದ್ದಾರೆ.

ದೆವ್ವಗಳೆರಡು ಕೊಲೆಯೊಂದನ್ನು ನೋಡಿರುತ್ತವೆ. ಆದರೆ ಆ ವಿಷಯವನ್ನು ಆ ದೆವ್ವಗಳು ಆ ಮನೆಯವರಿಗೆ ತಿಳಿಸಲು ಪಡುವ ಪರಿಪಾಟಲುಗಳನ್ನು `ರಂಗಮಹಲ್ ರಹಸ್ಯ’ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ರಂಗಭೂಮಿಯಲ್ಲಿ ರೋಚಕ ಕಥಾ ಹೂರಣವನ್ನು ಪ್ರಯೋಗಿಸಲು ಈ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆಂಬುದು ಇಲ್ಲಿ ವಿಶೇಷವೆನಿಸುತ್ತದೆ. ಈ ನಾಟಕದಲ್ಲಿ ಸ್ವತಃ ಕಾರಂತರೂ ನಟಿಸುತ್ತಿದ್ದು ಇವರೊಂದಿಗೆ ರಾಜೇಶ್ವರಿ, ಲಕ್ಷ್ಮೀ, ಶ್ರೀನಾಥ್, ಮಮತಾರಾವ್, ಲಕ್ಷ್ಮಣ್ ಪುಜಾರಿ, ಶ್ರೀಹರಿ, ರಮೇಶ್, ಜಗನ್ನಾಥ್ ಹಾಗೂ ಕಾರಂತರ ಮಗ ಪ್ರಣವ್ ಕಾರಂತ್ ನಟಿಸುತ್ತಿದ್ದಾರೆ.

ಕಾರಂತರ ಕಾರ್ಯ ವಿಸ್ತಾರ
ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಾಜೇಂದ್ರ ಕಾರಂತರಿಗೆ ಅವರದ್ದೇ ಆದ ನೋಡುಗ ವರ್ಗವೊಂದು ಸೃಷ್ಟಿಯಾಗಿದೆ. ಹಾಗಾಗಿ ಕಾರಂತರು ತಮ್ಮ ನಾಟಕಗಳ ನೋಡುಗರÀ ಅಭಿರುಚಿಗೆ ತಕ್ಕಂತೆ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ಆ ನೋಡುಗ ವರ್ಗವನ್ನು ತೃಪ್ತಿ ಪಡಿಸುತ್ತಾ ಬಂದಿದ್ದಾರೆ.
1978 ರಿಂದ ನಾಟಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಸುಮಾರು 53 ನಾಟಕಗಳನ್ನು ರಚಿಸಿದ್ದಲ್ಲದೇ, 70ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಾ ಅದರೊಟ್ಟಿಗೆ ಕನ್ನಡ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.

ನೂರಾರು ಪ್ರದರ್ಶನಗಳು
ಹಾಸ್ಯದ ಹೂರಣವಿರುವ `ಮುದ್ದಣನ ಪ್ರಮೋಷನ್ ಪ್ರಸಂಗ’ ನಾಟಕವು 500 ಪ್ರದರ್ಶನಗಳನ್ನೂ, ಪ್ರೇಮಕವಿ ಕೆಎಸ್‍ನ ಅವರ ಬದುಕು ಹಾಗೂ ಬರಹವನ್ನು ಪ್ರತಿಬಿಂಬಿಸುವ `ಮೈಸೂರು ಮಲ್ಲಿಗೆ’ ನಾಟಕವು 300 ಪ್ರದರ್ಶನಗಳನ್ನು ಕಂಡಿವೆ. ಅದಲ್ಲದೇ ವರಕವಿ ಬೇಂದ್ರೆ ಅವರ ಬದುಕು ಹಾಗೂ ಬರಹವನ್ನು ಆಧರಿಸಿದ `ಗಂಗಾವತರಣ’ ನಾಟಕವು ಬೇಂದ್ರೆ ಅವರನ್ನು ಕಾಣದವರಿಗೆ ಒಂದು ವರದಾನವೇ ಸರಿ. ಈ ಪ್ರಯೋಗವು 75ಕ್ಕೂ ಪ್ರದರ್ಶನಗಳನ್ನು ಕಂಡಿವೆ. ಇಡೀ ನಾಟಕವು ಬೇಂದ್ರೆ ಅವರ ಪರಿಚಯವನ್ನು ಹಾಗೂ ಸಾಂಗತ್ಯವನ್ನು ತಂದು ಕೊಡುವಲ್ಲಿ ಯಶಕಂಡಿದೆ. ರಾಜಕೀಯ ಹಿನ್ನೆಲೆಯ `ಮರಣ ಮೃದಂಗ’ ಹಾಗೂ `ಸಂಜೆಯ ಹಾಡು’ ನಾಟಕಗಳು ಮನದ ಆಳಕ್ಕೆ ಹೊಕ್ಕು ಚಿಂತನೆಗೆ ಹಚ್ಚುತ್ತವೆ.

ರಾಷ್ಟ್ರ ಹಾಗೂ ರಾಜ್ಯಪ್ರಶಸ್ತಿಗಳು
ನಾಡಿನ 20ಕ್ಕೂ ಹೆಚ್ಚು ರಂಗಾಸಕ್ತ ತಂಡಗಳಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಎಸ್‍ಬಿಐ, ಕಾರ್ಪೊರೇಷನ್ ಬ್ಯಾಂಕ್, ಪಿಎನ್‍ಬಿ, ಕೆಎಸ್‍ಎಫ್‍ಸಿ, ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಲಲಿತಕಲಾ ಸಂಘ, ಕೆಸಿಎಸ್ ಕ್ಲಬ್‍ಗಳಲ್ಲದೇ ಕೈಗಾರಿಕಾ ತಂಡಗಳಿಗೂ ನಾಟಕ ನಿರ್ದೇಶನ ಮಾಡುತ್ತಾ ಕನ್ನಡ ರಂಗಭೂಮಿಯಲ್ಲಿ ಹೊಸ ಆಯಾಮ ನೀಡುವತ್ತ ಶ್ರಮಿಸುತ್ತಿದ್ದಾರೆ. ರಾಷ್ಟ್ರ, ರಾಜ್ಯ ಹಾಗೂ ದಕ್ಷಿಣವಲಯ ಮಟ್ಟದ ಸ್ಪರ್ಧಾ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ವಿದೇಶದಲ್ಲೂ ಕನ್ನಡ ಕಂಪು
ಹಾಂಗ್‍ಕಾಂಗ್, ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿ `ಮುದ್ದಣನ ಪ್ರಮೋಷನ್ ಪ್ರಸಂಗ’ವನ್ನು ಪ್ರದರ್ಶಿಸಿದ್ದಾರಲ್ಲದೇ ಅಮೆರಿಕಾದಲ್ಲೂ ಬೇಂದ್ರೆ ಅವರ `ಗಂಗಾವತರಣ’ವನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ದೆಹಲಿ, ಮುಂಬೈ, ಚೆನೈ ಹಾಗೂ ಹೈದರಾಬಾದ್‍ಗಳಲ್ಲೂ ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಕನ್ನಡದ ಕಂಪನ್ನು ದೇಶವಿದೇಶಗಳಲ್ಲೂ ಪಸರಿಸುತ್ತಿದ್ದಾರೆ.

ಹಿರಿಯ ಪ್ರೇಕ್ಷಕರ ವರ್ಗವನ್ನೂ ಹಾಗೂ ಈ ಜನರೇಷನ್ನಿನ ಯುವ ಸಮೂಹವನ್ನು ತಮ್ಮ ನಾಟಕದ ಕಡೆಗೆ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಮಾತಲ್ಲಿ ಜಾದು ಮಾಡಬಲ್ಲ ಕಾರಂತರ ನಾಟಕಗಳಲ್ಲಿ ಚುರುಕಾದ ಸಂಭಾಷಣೆಗಳಿಗೇನೂ ಕೊರತೆ ಬರದು. ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟು ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೇ ಹಲವಾರು ಚಿತ್ರಗಳಿಗೆ ಸಂಭಾಷಣೆಯನ್ನೂ ಒದಗಿಸಿದ್ದಾರೆ. ನಾಟಕ ರಚನೆಕಾರ, ಸಂಭಾಷಣೆಕಾರ, ನಟ, ನಿರ್ದೇಶಕ ಹಾಗೂ ಬ್ಯಾಂಕ್ ಉದ್ಯೋಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ನಿರಂತರ ಕೆಲಸ ಮಾಡುವ ಅವರ ಎನರ್ಜಿಯನ್ನು ಮೆಚ್ಚುವುದಲ್ಲದೇ ಐವತ್ತ್ಮೂರು ವೈವಿಧ್ಯಮಯ ನಾಟಕಗಳನ್ನು ಕನ್ನಡ ರಂಗಭೂಮಿಗೆ ಕೊಟ್ಟ ಕಾರಂತರನ್ನು ಅಭಿನಂದಿಸೋಣ.

Leave a Reply