ಕೇಸರಿಯಾಗದಿದ್ದರೂ ಕೆಂಪಾಗಿ ಉಳಿಯಲಿಲ್ಲ

ಸ್ಮರಣಾರ್ಹ ನಾಯಕನಿಗೊಂದು ಸಲಾಂ-

ನಾ ದಿವಾಕರ

ಸುದೀರ್ಘ ಹೋರಾಟದ ನಂತರ ಇಂದು ನಿಧನರಾದ ಜಾರ್ಜ್ ಫರ್ನಾಂಡಿಸ್ ತಮ್ಮ ವಿಭಿನ್ನ ರಾಜಕೀಯ ನಿಲುವುಗಳ ಹೊರತಾಗಿಯೂ ಹಲವು ಕಾರಣಗಳಿಗೆ ಸ್ಮರಣಾರ್ಹರಾಗುತ್ತಾರೆ.  ಇಂದಿನ ರಾಜಕೀಯ ಪರಿಭಾಷೆಯಲ್ಲೇ ಹೇಳುವುದಾದರೆ  1970ರ ದಶಕದ ಆರಂಭದ ನಗರ ನಕ್ಸಲ್, ತುರ್ತುಪರಿಸ್ಥಿತಿಯ ದೇಶದ್ರೋಹಿ,  ವಾಜಪೇಯಿ ಕಾಲಘಟ್ಟದ ದೇಶಪ್ರೇಮಿ ಇಂದು ತಮ್ಮ ಬದುಕಿಗೆ ವಿದಾಯ ಹೇಳಿದ್ದಾರೆ.

ಅವರು ಸಾಯಬಾರದಿತ್ತು ಎನ್ನುವ ಕ್ಲೀಷೆ ಬೇಕಿಲ್ಲ ಎನಿಸುತ್ತದೆ. ಏಕೆಂದರೆ ಹಲವು ವರ್ಷಗಳಿಂದ ಸಾವಿನೊಡನೆ ಸಂಘರ್ಷ ನಡೆಸಿದ ಜಾರ್ಜ್ ತಮ್ಮ ಬದುಕಿನಂತೆಯೇ ಸಾವಿನಲ್ಲೂ ಸಂಘರ್ಷವನ್ನೇ ಕಂಡಿದ್ದಾರೆ

ಲೋಹಿಯಾವಾದ ಮತ್ತು ಸಮಾಜವಾದವನ್ನೇ ತಮ್ಮ ಬಾಳ ಧ್ಯೇಯವನ್ನಾಗಿ ಸ್ವೀಕರಿಸಿ ಕಾರ್ಮಿಕರ, ಶೋಷಿತರ ಪರವಾಗಿ ಹೋರಾಡುತ್ತಲೇ ಬದುಕು ಕಟ್ಟಿಕೊಂಡ ಜಾರ್ಜ್ ಫರ್ನಾಂಡಿಸ್ ನೆನಪಾಗುವುದು 1974ರ ರೈಲ್ವೆ ಮುಷ್ಕರ. 30 ಲಕ್ಷ ರೈಲ್ವೆ ಕಾರ್ಮಿಕರ ಸುದೀರ್ಘ ಮುಷ್ಕರದಲ್ಲಿ ಅವರು ನೀಡಿದ ನಾಯಕತ್ವ , ತಾತ್ವಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ, ಅಂದಿನ ಇಂದಿರಾಗಾಂಧಿ ಸರ್ಕಾರವನ್ನು ನಡುಗಿಸಿದ್ದಂತೂ ಸತ್ಯ.

ಫರ್ನಾಂಡಿಸ್ ಅವರ ಪುಣ್ಯ ಅಂದು ಅರ್ಬನ್ ನಕ್ಸಲ್ ಎನ್ನುವ ದೇಶದ್ರೋಹ ಪಟ್ಟ ಅಥವಾ ನಕಲಿ ಎನ್ಕೌಂಟರ್ ಎನ್ನುವ ನಿರ್ಗಮನದ ಹಾದಿ ವ್ಯವಸ್ಥಿತವಾಗಿ ರೂಪುಗೊಂಡಿರಲಿಲ್ಲ. ಆದರೂ ಫರ್ನಾಂಡಿಸ್ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಜೈಲು ವಾಸ ಅನುಭವಿಸಿದ್ದರು. ತುರ್ತುಪರಿಸ್ಥಿತಿಯಲ್ಲಿ ಭೂಗತರಾಗಿದ್ದರೂ ಸೆರೆವಾಸದಿಂದ ಮುಕ್ತರಾಗಲಿಲ್ಲ. ಬರೋಡಾ ಡೈನಾಮೈಟ್ ಪ್ರಕರಣದಲ್ಲಿ ಆರೋಪಿಯಾಗಿ ಸೆರೆವಾಸ ಅನುಭವಿಸಬೇಕಾಯಿತು.

ಜನತಾ ಪಕ್ಷದ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿ ಅಮೆರಿಕದ ಐಬಿಎಂ ಮತ್ತು ಕೋಕಾಕೋಲ ಕಂಪನಿಗಳಿಗೆ ನಿರ್ಗಮಿಸಲು ಆದೇಶಿಸಿದ್ದ ಜಾರ್ಜ್ ದೇಶದ ಜನತೆಯ ದೃಷ್ಟಿಯಲ್ಲಿ ಸಿಡಿಲ ಮರಿಯಂತೆ ಕಂಡಿದ್ದರೆ ಅಚ್ಚರಿಯೇನಿಲ್ಲ.  ಆದರೆ ಮೃದು ಹಿಂದುತ್ವವಾದಿ ವಾಜಪೇಯಿಯವರಿಂದ ಸಮ್ಮೋಹಿತರಾಗಿ ಬಲಿಯಾದ ಮೊದಲ ಸಮಾಜವಾದಿ ನಾಯಕರಾಗಿ ಜಾರ್ಜ್ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆಸುದ್ದಿಮಾಡಿದ್ದರು.

ಒಬ್ಬ ಸಮಾಜವಾದಿ ನಾಯಕರಾಗಿ ಸಾರ್ವಜನಿಕ ಉದ್ದಿಮೆಗಳ ಅವಸಾನಕ್ಕೆ ಬಂಡವಾಳ ಹಿಂತೆಗೆತ ನೀತಿಯ ಮೂಲಕ ತಳಪಾಯ ನಿರ್ಮಿಸುತ್ತಿದ್ದ ವಾಜಪೇಯಿ ಸರ್ಕಾರವನ್ನು ಸಹಿಸಿಕೊಂಡಿದ್ದು ಸೋಜಿಗವೇ ಸರಿ.

ಮತ್ತೊಂದೆಡೆ ಪೋಕ್ರಾನ್ ನಲ್ಲಿ ಎರಡನೆಯ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ  ಜಾರ್ಜ್ ರಕ್ಷಣಾ ಮಂತ್ರಿಯಾಗಿದ್ದುದು ಅವರ ಜೀವನದ ವಿಡಂಬನೆಗಳಲ್ಲಿ ಒಂದು ಎನ್ನಬಹುದು. ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಜಾರ್ಜ್ ತಮ್ಮ ಬದಲಾದ ರಾಜಕೀಯ ತಾತ್ವಿಕ ನಿಲುವಿಗೆ ಪಶ್ಚಾತ್ತಾಪವನ್ನೂ ಪಡಲಿಲ್ಲ ಎನ್ನುವುದನ್ನು ಗಮನಿಸಿದರೆ ಬಹುಶಃ ಅವರ ರಾಜಕೀಯ ಬದುಕಿನ ದ್ವಂದ್ವದ ಅರಿವಾಗುತ್ತದೆ.

ಫರ್ನಾಂಡಿಸ್ ದ್ವಂದ್ವದಲ್ಲೇ ಬದುಕಿದವರಲ್ಲ ಆದರೆ ದ್ವಂದ್ವ ಎದುರಾದಾಗ ತಮ್ಮ ಮೂಲ ತತ್ವ ಸಿದ್ಧಾಂತಗಳೊಡನೆ ರಾಜಿಯಾದದ್ದಂತೂ ಸತ್ಯ.

ಸಂಘಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಆಶಯವನ್ನು ತಾತ್ವಿಕವಾಗಿ ನಿರಾಕರಿಸಿದರೂ ಈ ನಿಟ್ಟಿನಲ್ಲಿ ತಳಪಾಯ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಇಟ್ಟಿಗೆ ಪೇರಿಸದಿದ್ದರೂ, ಮರಳು, ಜಲ್ಲಿ ಒದಗಿಸಿದ ಅಪಕೀರ್ತಿಯನ್ನೂ ಜಾರ್ಜ್ ಹೊರಲೇಬೇಕು.

ಇಷ್ಟಾದರೂ ಅವರು ಸ್ಮರಣೀಯರಾಗುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರಲ್ಲಿದ್ದ ವಿಶ್ವಾಸ ಮತ್ತು ಅವರಿಗಿದ್ದ ಬದ್ಧತೆಗಾಗಿ. ಈ ಬದ್ಧತೆಯೊಡನೆ ರಾಜಿಯಾಗದೆ ಹೋಗಿದ್ದಲ್ಲಿ ಬಹುಶಃ ಜಾರ್ಜ್ ಮೇರು ವ್ಯಕ್ತಿಯಾಗಿಯೇ ನಿರ್ಗಮಿಸುತ್ತಿದ್ದರು. 1970ರ ದಶಕದ  ಕಾರ್ಮಿಕ ಹೋರಾಟಗಳಿಗೆ, ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟಗಳಿಗೆ ಸ್ಪೂರ್ತಿ ನೀಡಿದ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ.

ಕೇಸರಿಯಾಗದಿದ್ದರೂ ಕೆಂಪು ಕೆಂಪಾಗಿಯೇ ಉಳಿಯಲಿಲ್ಲ ಎನ್ನುವುದೊಂದೇ ಕಾಡುವ ವಿಚಾರ. ಏನೇ ಅಗಲಿ ಜಾರ್ಜ್ ನೀವು ಸ್ಮರಣಾರ್ಹರು. ನಿಮಗೊಂದು ಸಲಾಂ.

ಪಾದ್ರಿಯಾಗುವ ಬದಲು ಸಮಾಜವಾದಿ ನಾಯಕರಾದರು!

ಮ ಶ್ರೀ ಮುರಳಿ ಕೃಷ್ಣ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಜಾರ್ಜ್ ಫರ್ನಾಂಡಿಸ್ ಯೌವನದಲ್ಲೇ ತಮ್ಮ ತಂದೆಯ ಇಚ್ಛೆಯಂತೆ ಪಾದ್ರಿಯಾಗಲು ಮುಂಬೈಗೆ ತೆರಳಿದರು. ಆದರೆ ಅಲ್ಲಿ ಒಬ್ಬ ಫೈರ್‍ಬ್ರಾಂಡ್ ಕಾರ್ಮಿಕ ನಾಯಕನಾಗಿ ರೂಪುಗೊಂಡು, ಸಾರ್ವಜನಿಕ ಜೀವನಕ್ಕೆ ಒಬ್ಬ ಸಮಾಜವಾದಿ ರಾಜಕಾರಣಿಯಾಗಿ ಪಾದಾರ್ಪಣೆ ಮಾಡಿದರು. ರಾಮ್ ಮನೋಹರ್ ಲೋಹಿಯಾ, ಅಶೋಕ್ ಮೆಹ್ತ, ಮಧು ಲಿಮಯೆ ಮುಂತಾದ ಸಮಾಜವಾದಿ ನೇತಾರರಿಂದ ಪ್ರಭಾವಿತರಾಗಿ 1967ರಲ್ಲಿ ದಕ್ಷಿಣ ಮುಂಬೈ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಘಟಾನುಘಟಿಯಾಗಿದ್ದ ಎಸ್ ಕೆ ಪಾಟೀಲರನ್ನು ಸೋಲಿಸಿದರು. ನಂತರ ಮೇ 8, 1974ರಂದು ಅಖಿಲ ಭಾರತ ಮಟ್ಟದ ರೈಲ್ವೆ ಮುಷ್ಕರಕ್ಕೆ ಕರೆ ನೀಡಿದರು. ಅಂದು ದೇಶಾದ್ಯಂತ ರೈಲು ಪಯಣ ಸ್ತಂಭನಗೊಂಡಿತು. ಆ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ಆಗ ಏಳನೇ ಇಯತ್ತೆ ಮುಗಿಸಿ, ರಜಾ ದಿನಗಳ ಆಟೋಟಗಳಲ್ಲಿ ಮುಳುಗಿದ್ದೆ. ಮೇ 8ರಂದೇ ನಮ್ಮ ಮನೆಯಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಂದು ನೆರೆದಿದ್ದ ಬಂಧು-ಬಾಂಧವರ ನಡುವೆ ಈ ರೈಲ್ವೆ ಮುಷ್ಕರ ಭಾರಿ ಸುದ್ದಿಯಾಗಿತ್ತು.

ತರುವಾಯ 1975ರಲ್ಲಿ ತುರ್ತುಪರಿಸ್ಥಿತಿ ಜಾರಿಯಾದ ಸ್ವಲ್ಪ ಸಮಯದಲ್ಲೇ ಜಾರ್ಜ್ ಫರ್ನಾಂಡಿಸ್ ರೈಲ್ವೆ ಆಸ್ತಿಯನ್ನು ಧ್ವಂಸ ಮಾಡುವ ಯೋಜನೆಯ ರೂವಾರಿಯೆಂದು ಆಪಾದಿಸಲಾಯಿತು. ‘ಬರೋಡ ಡೈನಾಮೈಟ್ ಕೇಸ್’ ಎಂದೇ ಹೆಸರುವಾಸಿಯಾಗಿರುವ ಈ ಕೇಸ್‍ನಲ್ಲಿ ಅವರನ್ನು ಬಂಧಿಸಲಾಯಿತು. 1977ರಲ್ಲಿ ಸಾರ್ವತ್ರಿಕ ಚುನಾವಣೆ ಜರುಗಿದಾಗ ಅವರು ಜೈಲಿನಲ್ಲಿದ್ದರು. ಆದರೂ ಬಿಹಾರದ ಮುಝಫರ್‍ಪುರ್‍ನಿಂದ ಸ್ಪರ್ಧಿಸಿ, ಅಧಿಕ ಮತಗಳನ್ನು ಪಡದು ಜಯಶಾಲಿಗಳಾದರು. ನಂತರ ಪ್ರಥಮ ಬಾರಿಗೆ ಕಾಂಗ್ರೇಸೇತರ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು. ಮೊರಾರ್ಜಿ ದೇಸಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಕೈಗಾರಿಕ ಮಂತ್ರಿಯಾದರು. ಆಗ ಅವರು ಒಂದು ಮಹತ್ವದ ನಿರ್ದಾರವನ್ನು ತೆಗೆದುಕೊಂಡು ಅಂತರರಾಷ್ಟ್ರೀಯ ಮಟ್ಟದ ಕೋಕೊ ಕೋಲಾ(ಐಬಿಎಮ್‍ನ್ನು ಸಹ) ಕಂಪನಿಯನ್ನು ಭಾರತದಿಂದ ಉಚ್ಛಾಟಿಸುವುದರಲ್ಲಿ ಸಫಲರಾದರು. ಇದಕ್ಕೆ ಪರ್ಯಾಯವಾಗಿ 77 ಎಂಬ ದೇಶೀಯ ಪಾನೀಯವನ್ನು ಮಾರುಕಟ್ಟೆಗೆ ತರುವುದರ ಹಿಂದಿನ ಪ್ರೇರಕಶಕ್ತಿಯಾಗಿದ್ದರು. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ!

ಕೇಂದ್ರದಲ್ಲಿ ಜಾರ್ಜ್ ಫರ್ನಾಂಡಿಸ್ ದೂರಸಂಪರ್ಕ, ರೈಲು ಮತ್ತು ರಕ್ಷಣಾ ಸಚಿವರಾಗಿಯೂ ಕೆಲಸ ಮಾಡಿದರು. ಕೊಂಕಣ ರೈಲ್ವೆ ಯೋಜನೆ ಅವರ ಮಧ್ಯಪ್ರವೇಶದಿಂದಲೇ ಜಾರಿಯಾಯಿತು. ಒಂಬತ್ತು ಬಾರಿ ಸಂಸದರಾಗಿ ಚುನಾಯಿತರಾದರು. ಕಾರ್ಗಿಲ್ ಯುದ್ಧ ಮತ್ತು ಪೋಕ್ರಾನ್‍ನಲ್ಲಿ ಪರಮಾಣು ಪರೀಕ್ಷೆಗಳು ಜರುಗಿದಾಗ ಅವರು ಎನ್‍ಡಿಎ ಸರ್ಕಾರದ ರಕ್ಷಣಾ ಮಂತ್ರಿಯಾಗಿದ್ದರು. ಸಮತಾ ಪಕ್ಷದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು ತಮ್ಮ ಅಧಿಕಾರದ ಕೊನೆಯ ವರ್ಷಗಳಲ್ಲಿ ಕಾಫಿನ್ ಮತ್ತು ಬಾರಕ್ ಮಿಸೈಲ್ ಹಗರಣಗಳಿಗೆ ಸಿಲುಕಿದರು. ನಂತರ ತೆÀಹಲ್ಕ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಯಿತು. ಅವರು ಎಲ್‍ಟಿಟಿಇಯ ಸಮರ್ಥಕರಾಗಿದ್ದರು ಮತ್ತು ಬರ್ಮಾ ದೇಶದ ಬಂಡುಕೋರರ ಚಳವಳಿಗೆ ಬೆಂಬಲವನ್ನು ನೀಡಿದ್ದರು. ಸಚಿವರಾಗಿದ್ದಾಗ ಅವರ ನಿವಾಸಕ್ಕೆ ಯಾರು ಬೇಕಾದರೂ ಸಲೀಸಾಗಿ ಹೋಗಬಹುದಿತ್ತು ಎಂದು ಹೇಳಲಾಗುತ್ತಿತ್ತು.

ಸಮಾಜವಾದಿ ಹಿನ್ನೆಲೆಯ ಜಾರ್ಜ್ ಫರ್ನಾಂಡಿಸ್ ತಮ್ಮ ಸೈದ್ಧಾಂತಿಕ ವಿರೋಧಿ ಬಲಪಂಥೀಯ ಬಣದ ಜೊತೆ ಸಖ್ಯವನ್ನು ಬೆಳೆಸಿ ಅಧಿಕಾರವನ್ನು ಅನುಭವಿಸಿದ್ದು ಅಸಮರ್ಥನೀಯ ವಿಷಯವಾಗಿತ್ತು. ಆ ಸಂದರ್ಭದಲ್ಲಿ ಈ ವಿಚಾರದ ಬಗೆಗೆ ಅವರನ್ನು ಪ್ರಶ್ನಿಸಿದಾಗ, “ನಾನು ಒಳಗಡೆಯಿಂದಲೇ ಬಿಜೆಪಿ/ಸಂಘ ಪರಿವಾರದವರ ದೃಷ್ಟಿಕೋನವನ್ನು ಬದಲಾಯಿಸುವುದಕ್ಕಾಗಿ ಎನ್‍ಡಿಎ ಜೊತೆ ಕೈಜೋಡಿಸಿದೆ…” ಎಂಬ ಹೇಳಿಕೆಯನ್ನು ನೀಡಿದರು! ಈ ನಿಟ್ಟಿನಲ್ಲಿ, ಚಿರತೆ ತನ್ನ ಚುಕ್ಕೆಗಳನ್ನು ಬದಲಾಯಿಸುವುದೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಜಾರ್ಜ್ ಫರ್ನಾಂಡಿಸ್ ಒಬ್ಬರೇ ಅಲ್ಲ, ಇನ್ನು ಕೆಲವು ಸಮಾಜವಾದಿ ನಾಯಕರು ಅಧಿಕಾರಕ್ಕಾಗಿ ತಾವು ನಂಬಿದ ಸಿದ್ಧಾಂತದಿಂದ ದೂರ ಸರಿದದ್ದು ನಮ್ಮ ದೇಶದ ರಾಜಕೀಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹೀಗೇಕಾಯಿತು? ಬಹುಶಃ ರಾಮ್ ಮನೋಹರ್ ಲೋಹಿಯಾ ಪ್ರಖರವಾಗಿ ಪ್ರತಿಪಾದಿಸಿದ ಕಾಂಗ್ರೆಸ್ ವಿರೋಧಿ ನಿಲುವು ಇದಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಅಪ್ರಸ್ತುತವಾಗಲಾರದೇನೋ..

ಇರಲಿ…ಒಬ್ಬ ವ್ಯಕ್ತಿ ಗತಿಸಿದ ಸಂದರ್ಭದಲ್ಲಿ ಆತನÀ/ಆಕೆಯ ಬಗೆಗೆ ಒಳ್ಳೆಯ ಮಾತುಗಳನ್ನೇ ಆಡಬೇಕೆಂಬ ಅಲಿಖಿತ ಸಂಪ್ರದಾಯವಿದೆ! ಆದರೆ ಆvನÀ/ಆಕೆಯ ಕೊಡುಗೆಗಳನ್ನು ಗುರುತಿಸುತ್ತಲೇ, ವ್ಯಕ್ತಿತ್ವದಲ್ಲಿರಬಹುದಾದ ದ್ವಂದ್ವಗಳನ್ನು, ನೇತ್ಯಾತ್ಮಕವೆನ್ನಬಹುದಾದ ಅಂಶಗಳ ಬಗೆಗೆ ವಸ್ತುನಿಷ್ಠ ಬೆಳಕನ್ನು ಚೆಲ್ಲಿದರೇ ಅದು ಅಪಚಾರವಾಗುವುದಿಲ್ಲ.

ದುಡಿಯುವ ಮಂದಿಯ ಹಿತದಲ್ಲಿ ಶ್ರಮಿಸಿದ ಜಾರ್ಜ್ ಫರ್ನಾಂಡಿಸ್‍ರಿಗೆ ಲಾಲ್ ಸಲಾಮ್.

1 comment

  1. ನನ್ನ ಬರೆಹವನ್ನು ಪ್ರಕಟಿಸಿದ್ದಕ್ಕೆ ಶ್ರೀ ಮೋಹನ್ ಹಾಗೂ ಅವಧಿ ತಂಡಕ್ಕೆ ಧನ್ಯವಾದ…

Leave a Reply