ಬಜೆಟ್ ಹೇಗೆ ಅರ್ಥ ಮಾಡಿಕೊಳ್ಳುವುದು?

ಈ ಬಜೆಟ್ಟು…… ಎಷ್ಟು ಬಜೆಟ್ಟು? ಎಷ್ಟು ಲೇಖಾನುದಾನ?

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು 

ಇಂತಹದೊಂದು ಬಜೆಟ್ ನಲ್ಲಿ ಎಷ್ಟೂ ಸಿಕ್ಸರ್ ಹೊಡೆಯಬಹುದು. ಹೊಡೆದ ಬಾಲುಗಳನ್ನೆ ಲ್ಲ ಮೀಡಿಯಾ ಫೀಲ್ದರ್ ಗಳು ಎತ್ತಿ ಎತ್ತಿ ಬೌಂಡರಿ ಗಡಿ ದಾಟಿಸಿ, ಸಿಕ್ಸರ್ ಎಂದು ಕೂಗಲಾರಂಭಿಸಿಯಾಗಿದೆ. ಹತ್ತಿರದಲ್ಲೇ ಚುನಾವಣೆ ಇರುವುದರಿಂದ ಸರ್ಕಾರಕ್ಕೆ ಬೇಕಾದದ್ದೂ ಇದೇ.

ಬಜೆಟ್ ನ ಪ್ರೆಸೆಂಟೇಷನ್ ಅನ್ನು ತುಂಡು ತುಂಡು ಮಾಡಿ, ಅದರಲ್ಲಿ ಕ್ರೀಂ ಇರುವ ಭಾಗವನ್ನು ಮಾತ್ರ ಎತ್ತಿ ತೋರಿಸುವುದು ರೂಢಿಯಾಗಿ ಈಗ ಕೆಲವು ವರ್ಷಗಳೇ ಆಗಿಬಿಟ್ಟಿವೆ. ಸುದ್ದಿಕೋಣೆಗಳಲ್ಲೂ ಇಡಿಯ ಬಜೆಟ್ಟನ್ನು ವಿಶ್ಲೇಷಿಸಿ ಸುದ್ದಿ ಮಾಡಬಲ್ಲ ಜನಗಳು ಇಲ್ಲ… ಹಾಗಾಗಿ ಬಜೆಟ್ ಅಂದರೆ ಹಣಕಾಸು ಸಚಿವರ ಸಿಕ್ಸರ್ ಗಳು ಮತ್ತು ಸುದ್ದಿಮನೆಗಳ ಕೂಗುಮಾರಿಗಳ “ಚೀರ್ ಲೀಡಿಂಗ್” ಆಗಿಬಿಟ್ಟಿದೆ.

ಮೂಲಭೂತವಾಗಿ ಈ ಲೇಖಾನುದಾನದ ವಾಯಿದೆ 2019 ಎಪ್ರಿಲ್ ನಿಂದ ಜುಲೈ ಅಂತ್ಯದ ತನಕದ್ದು. ಅದು ಸದನದ ಅನುಮತಿ ಕೋರುತ್ತಿರುವುದು, ಆ 4 ತಿಂಗಳಿಗೆ ಬೇಕಾದ 3417295.38ಕೋಟಿ ರೂಪಾಯಿಗಳ ಖರ್ಚಿಗೆ ಬೇಕಾದ ಅನುಮತಿಯನ್ನು. ಆದರೆ ಅದು ಇಡೀ 2019-20ಹಣಕಾಸು ವರ್ಷಕ್ಕೆ 9743039.70ಲಕ್ಷ ಕೋಟಿ ರೂಪಾಯಿಗಳ ಖರ್ಚು ತೋರಿಸಿ, ಇಡಿಯ ಬಜೆಟನ್ನೇ ಸದನದ ಮುಂದಿಟ್ಟಿದೆ. ಈ ಉಳಿಕೆ ಮೊತ್ತ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಇದು ಇಂದು ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರು ಮಂಡಿಸಿರುವ ಲೇಖಾನುದಾನ (ಬಜೆಟ್ ಅಲ್ಲ)ದ ಹೂರಣ.

ಹಾಗೆಂದ ಮಾತ್ರಕ್ಕೆ ಬಜೆಟ್ ಘೋಷಣೆಗಳೆಲ್ಲ ಪೊಳ್ಳಲ್ಲ. ಯಾಕೆಂದರೆ ಫೈನಾನ್ಸ್ ಬಿಲ್ ನಲ್ಲಿ, ಆದಾಯತೆರಿಗೆಯಲ್ಲಿ, ಸೆಕ್ಯುರಿಟಿಗಳಿಂದ ತೆರಿಗೆ ಸಂಗ್ರಹದ ಕುರಿತಾದ ಬದಲಾವಣೆ ಮಾಡಲು ಇಂಡಿಯನ್ ಸ್ಟಾಂಪ್ ಆಕ್ಟ್ ನಲ್ಲಿ, ಅಗತ್ಯ ಬದಲಾವಣೆಗಳಿಗೂ ಸದನದ ಅನುಮತಿ ಪಡೆಯಲಾಗುವುದರಿಂದ ಅವೆಲ್ಲ ಜಾರಿಗೆ ಬರಲಿವೆ.

ಸರ್ಕಾರ ಹೊಡೆದಿರುವ ಸಿಕ್ಸರ್ ಗಳೆಲ್ಲ ಶೀಘ್ರದಲ್ಲೇ ಬರಲಿರುವ ಚುನಾವಣೆಯತ್ತಲೇ ಗಮನ ಇಟ್ಟುಕೊಂಡದ್ದಾಗಿದ್ದು, ಅದರಲ್ಲಿ ಅನುಮಾನಗಳಿಲ್ಲ. ಅವೆಲ್ಲ ಎಷ್ಟು ಮತವಾಗಿ ಪರಿವರ್ತಿತವಾಗಲಿವೆ ಎಂಬುದೂ ಇನ್ನು 3-4 ತಿಂಗಳಲ್ಲಿ ನಮಗೆ ಕಾಣಸಿಗಲಿದೆ.

ಪಿಯೂಷ್ ಗೋಯಲ್ ಅವರು ಮಂಡಿಸಿದ, ಆದರೆ ಓದಿಹೇಳದ ಅಂಕಿಸಂಖ್ಯೆಗಳನ್ನು ಗಮನಿಸಿದರೆ, ಕೆಲವು ವಿಚಾರಗಳು ಸ್ಪಷ್ಟ:

೧. ನೋಟುರದ್ಧತಿಯಿಂದ ಆದಾಯ ತೆರಿಗೆಯಲ್ಲಿ ಆಗಿರುವ ಏರಿಕೆ ಕಂಡರೆ, ಇದು ಬೆಟ್ಟ ಅಗೆದು ಇಲಿ ಹಿಡಿದದ್ದೆಂಬುದು ಸ್ಪಷ್ಟ. ಎರಡನೆಯದಾಗಿ 130 ಕೋಟಿ ಜನ ಇರುವ ಭಾರತದಲ್ಲಿ ಈ ಅವಧಿಯಲ್ಲಿ ಮೊದಲ ಬಾರಿ ತೆರಿಗೆ ರಿಟರ್ನ್ಸ್ ಸಲ್ಲಿಸಿದವರು ಬರೀ 1.06 ಕೋಟಿ ಜನ.

೨. ಜಿ ಎಸ್ ಟಿ – ಒಂದು ದೇಶ ಒಂದು ತೆರಿಗೆ ಕಲ್ಪನೆಯಡಿ ಬಂದು ಗಾತ್ರ ದೊಡ್ಡದು ಕಾಣಿಸುತ್ತಿದೆಯಾದರೂ, ಅದರಲ್ಲಿ ರಾಜ್ಯದ ಪಾಲು ಇದೆ. ದೇಶದ ಒಟ್ಟು ನೇರ ತೆರಿಗೆ ಸಂಗ್ರಹದ ಗಾತ್ರದಲ್ಲಿ ಗಮನಾರ್ಹ ಬದಲಾವಣೆ ಆದಂತೆ ತೋರುತ್ತಿಲ್ಲ

೩. ಸರಕಾರ ನಷ್ಟದಲ್ಲಿರುವ ಬ್ಯಾಂಕುಗಳಿಗೆ 2.6ಲಕ್ಷ ಕೋಟಿ ರೀಕ್ಯಾಪಿಟಲೈಸೇಷನ್ ಒದಗಿಸಿದೆ, 3ಲಕ್ಷ ಕೋಟಿ ಸುಸ್ತಿ ಸಾಲ ವಸೂಲಿ ಮಾಡಿದೆ ಎಂದು ಹೇಳುತ್ತಿದೆಯಾದರೂ ಬ್ಯಾಂಕುಗಳ ಆರೋಗ್ಯ ಸುಧಾರಿಸಿರುವುದು ತೋರುತ್ತಿಲ್ಲ.

(ಬಜೆಟ್ ವಿವರಗಳು ಬೇಕಿದ್ದವರು ಇಲ್ಲಿ ನೋಡಿ: https://www.indiabudget.gov.in/budget.asp )

ಈ ಅಂಕಿಸಂಖ್ಯೆಗಳ ಆಟಕ್ಕಿಂತ ನನಗೆ ಈ ಬಜೆಟ್ ಭಾಷಣದಲ್ಲಿ ಕುತೂಹಲಕರವೆನ್ನಿಸಿದ್ದು, ಸಚಿವರು ಹರಡಿಟ್ಟ ಭವಿಷ್ಯದ ಹತ್ತು ವಿಷನ್ ಗಳು. ಹೆಚ್ಚಿನಂಶ ಇವು ನಾವೆಲ್ಲಿದ್ದೇವೆ, ಎತ್ತ ಹೋಗುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ. 2030ರ ಹೊತ್ತಿಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವ ಲಕ್ಷ್ಯ ಇಟ್ಟುಕೊಂಡ ವಿಷನ್ ಗಳಿವು:

ಆ ಹತ್ತು ವಿಷನ್ ಗಳು:

ಮೂಲ ಸೌಕರ್ಯಗಳ ಅಭಿವ್ರದ್ಧಿ (ಬ್ರಹತ್ ಮೂಲಸೌಕರ್ಯ ಯೋಜನೆಗಳು)
ಡಿಜಿಟಲ್ ಇಂಡಿಯಾ
ಮಾಲಿನ್ಯ ಮುಕ್ತ ಭಾರತ (ಇಲೆಕ್ಟ್ರಿಕ್ ವಾಹನ, ಎನರ್ಜಿ ಸ್ಟೋರೇಜ್)
ಗ್ರಾಮೀಣ ಕೈಗಾರಿಕೀಕರಣ (ದೊಡ್ಡ ಕೈಗಾರಿಕೆಗಳಿಗೆ ಬೆಂಬಲ ನೀಡುವ MSME)
ಶುದ್ಧ ನದಿಗಳು (ಮೈಕ್ರೋ ಇರಿಗೇಷನ್)
ಕರಾವಳಿಯ ಸದುಪಯೋಗ (ಸಾಗರಮಾಲಾ)
ಬಾಹ್ಯಾಕಾಶ ಕಾರ್ಯಕ್ರಮ (ಗಗನಯಾನ)
ಆಹಾರ ಸ್ವಾವಲಂಬನೆ (ಕಾರ್ಪೋರೇಟ್ ಫಾರ್ಮಿಂಗ್)
ಆರೋಗ್ಯವಂತ ಭಾರತ (ಆಯುಷ್ಮಾನ್ ಭಾರತ)
ಮತ್ತು ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆ (ಆಧುನಿಕ, ಟೆಕ್ನಾಲಜಿ ಡ್ರಿವನ್)

ಈ ವಿಷನ್ ಗಳು ಒಟ್ಟಾಗಿ ಕೂಗುತ್ತಿರುವುದು ಇಷ್ಟೇ. ಭಾರತ ಸಂಪೂರ್ಣ ಕಾರ್ಪೋರೇಟೀಕರಣದತ್ತ ಹೆಜ್ಜೆ ಹಾಕುತ್ತಿದೆ. ಬಡವರು –ಸಿರಿವಂತರ ನಡುವಿನ ಅಂತರ ಇನ್ನಷ್ಟು ಹೆಚ್ಚಲಿದೆ. ದೇಶಪ್ರೇಮ, ದೇಶಭಕ್ತಿಯ ಮಾತನಾಡುತ್ತಲೇ ದೇಶವನ್ನು ಜಾಗತೀಕರಣದ ಶಕ್ತಿಗಳ ಕೈಗೆ ತಟ್ಟೆಯಲ್ಲಿಟ್ಟು ಒಪ್ಪಿಸಲಾಗುತ್ತಿದೆ.

ಈಗ ಚರ್ಚೆ ನಡೆಯಬೇಕಿದ್ದರೆ, ಅದು ಈವತ್ತು ಗೋಯಲ್ ಹೊಡೆದ ಸಿಕ್ಸರ್ ಗಳ ಬಗ್ಗೆ ಅಲ್ಲ; ಈ ಹತ್ತು ವಿಷನ್ ಗಳ ಬಗ್ಗೆ. #ಡಿಯರ್_ಮೀಡಿಯಾ ದ ಕೂಗುಮಾರಿಗಳಿಗೆ ಇದನ್ನು ತಿಳಿಹೇಳುವವರು ಯಾರು?!!!

1 comment

  1. ನೋಟು ರದ್ಧತಿಯಿಂದ ಏನೇನು ಪ್ರಯೋಜನವಿಲ್ಲ ಎಂದು ಬೊಬ್ಬೆ ಹೊಡೆಯುವ ಸ್ಥಿತಿಯಿಂದ ಈ ಅವಧಿಯಲ್ಲಿ ಮೊದಲ ಬಾರಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ಅಂಕಿ ಅಂಶಗಳನ್ನು ಕೊಡುವ ಮಟ್ಟಿಗೆ, (೧.೦೬ ಕೋಟಿ ಜನ ರಿಟರ್ನ್ಸ್ ಸಲ್ಲಿಸದೆ ಇರುವವರು ಮೊದಲ ಬಾರಿಗೆ ಆ ಕೆಲಸ ಮಾಡಿದ್ದಾರೆ ಎಂದರೆ ಅದು ಬಹುದೊಡ್ಡ ಸಂಖ್ಯೆಯೇ ಹೌದು. ಅದನ್ನೇಕೆ ನೀವು ಅಲ್ಪವೆಂದು ಬಿಂಬಿಸಲು ಹೊರಟಿರುವಿರೋ ತಿಳಿಯುತ್ತಿಲ್ಲ, ಇರಲಿ) ಜಿ ಎಸ್ ಟಿ ತೆರಿಗೆ ಪದ್ಧತಿಯ ಗಾತ್ರ ದೊಡ್ಡದು ಎಂದು ಅದರಲ್ಲಿ ರಾಜ್ಯಗಳಿಗೂ ಪಾಲಿರುತ್ತದೆ ಎಂಬುದನ್ನು ಈ ಪದ್ಧತಿ ಜಾರಿಗೆ ಬರುವಾಗ ಅದರ ಬಗ್ಗೆ ಸಾಕಷ್ಟು ಟೀಕಿಸಿದ್ದ ನಿಮ್ಮಂಥವರೂ ಒಪ್ಪುವಷ್ಟು ಬದಲಾವಣೆ ಆಗಿದೆ ಎಂದ ಮೇಲೆ ಇದೀಗ ಅಪಸ್ವರ ಎತ್ತಲು ಆರಂಭಿಸಿರುವ ಹತ್ತು ವಿಷನ್ ಕಾರ್ಯಕ್ರಮಗಳೂ ಭವಿಷ್ಯದಲ್ಲಿ ಒಳ್ಳೆಯದನ್ನೇ ಮಾಡಲಿವೆ ಎಂಬ ಭರವಸೆ ಮೂಡುತ್ತಿದೆ

Leave a Reply