ಇದು ಬರಿ ಮಾವಿನ ಕಾಯಲ್ಲೋ ಅಣ್ಣ..

ನಂತರ ಅದನ್ನು ಯಾರು ತಿನ್ನಬೇಕೆಂಬುದು ಯೋಚನೆಯಾಯಿತು. ಕೊನೆಗೆ ಮನೆಯಾಕೆ ನಾನು ನಿರ್ಧರಿಸಿದ್ದು, ಮಾವಿನಕಾಯಿ ಎಂದರೆ ತುಂಬಾ ಇಷ್ಟಪಡುವ ಮಗಳಿಗೇ ಕೊಡಬೇಕೆಂಬುದು. ಕೊನೆಗೆ ಈ ಮಾವಿನಕಾಯಿ ಮಗಳ ಕೈಸೇರಿತು.

ಸಿದ್ಧರಾಮ ಕೂಡ್ಲಿಗಿ

ಇದು ಅಂತಿಂಥ ಮಾವಿನ ಕಾಯಲ್ಲ ಹಾಗಂತ ಇದು ಮಂತ್ರಕ್ಕೆ ಉದುರಿದ ಮಾವಿನಕಾಯಿಯೂ ಅಲ್ಲ. ಇದು ನಮ್ಮ ಮನೆಯ ಕಂಪೌಂಡ್ ನಲ್ಲಿ ಬೆಳೆದ ಮಾವಿನ ಗಿಡದ ಮೊದಲ ಮಾವಿನ ಕಾಯಿ.

ಇಷ್ಟೇನಾ ಅನ್ನಬೇಡಿ, ಇದರ ಮತ್ತೊಂದು ವಿಶೇಷವಿದೆ. ಕಂಪೌಂಡನಲ್ಲಿರುವ ಪುಟ್ಟ ಕೈತೋಟದಲ್ಲಿ ನಾವು ಆಗಾಗ ತಿಂದು ಎಸೆಯುವ ಹಣ್ಣುಗಳ ಬೀಜಗಳೇ ವಿವಿಧ ಗಿಡಗಳಾಗಿಬಿಟ್ಟಿವೆ. ಆ ರೀತಿಯಲ್ಲಿ ಯಾವತ್ತೋ ಮಾವಿನ ಹಣ್ಣನ್ನು ತಿಂದು ಸುಮ್ಮನೆ ಬಿಸಾಡಿದ ಅದರ ಗೊರಟ ಚಿಗುರಿಬಿಟ್ಟಿತು. ನಾನು ಆಶ್ಚರ್ಯಪಡುವ ಅನೇಕ ಅದ್ಭುತಗಳಲ್ಲಿ ಇಂತಹವುಗಳೂ ಇವೆ. ಒಂದು ಬೀಜದಲ್ಲಿ ಚಿಗುರು ಮೂಡುವುದು ನನಗೆ ಜಗತ್ತಿನ ಅದ್ಭುತ ಆಶ್ಚರ್ಯಗಳಲ್ಲಿ ಒಂದಾಗಿ ಕಾಣುತ್ತದೆ.

ಹೀಗೆ ಚಿಗುರಿದ ಪುಟ್ಟ ಮಾವಿನ ಸಸಿಯನ್ನು ಮನೆಯಾಕೆ ಸಂಭ್ರಮದಿಂದ ತೋರಿದ್ದಳು. ಅದನ್ನು ಹಾಗೆಯೇ ಬೆಳೆಯಲುಬಿಟ್ಟೆವು. ಅದು ನೋಡ ನೋಡುತ್ತ ಬೆಳೆಯತೊಡಗಿತು. 2 ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವಾಗ ನಾನು, ಮನೆಯಾಕೆ ಅದರ ಬೆಳವಣಿಗೆಯನ್ನು ಗಮನಿಸುತ್ತ ಒಬ್ಬರಿಗೊಬ್ಬರು ಆ ಕುರಿತು ಮಾತನಾಡುತ್ತಲೇ ಇದ್ದೆವು.

ಪುಟ್ಟ ಕೆಂದು ಬಣ್ಣದ ಚಿಗುರುಗಳಂತೂ ನೋಡಲು ಕಣ್ಣಿಗೆ ಹಬ್ಬ ಎನಿಸಿಬಿಟ್ಟವು. ಗಿಡದ ಉದ್ದನೆಯ ಹಸಿರು ಎಲೆಗಳೇ ನನ್ನ ಖುಷಿಯನ್ನು ದ್ವಿಗುಣಗೊಳಿಸುವಂತಿದ್ದವು. ಅದು ಯಾವಾಗ ಎತ್ತರೆತ್ತರ ಬೆಳೆಯಿತೋ ಎಂದು ಈಗಲೂ ನನಗೆ ಅಚ್ಚರಿ. ಬೆಳೆಯುತ್ತ ಬೆಳೆಯುತ್ತಲೆ ಮನೆಯ ಎತ್ತರವನ್ನೂ ಮೀರಿ ಬೆಳೆದು ನಿಂತುಬಿಟ್ಟಿತು. “ನೋಡು ನೀವು ಉಣಿಸಿದ ಅಲ್ಪಸ್ವಲ್ಪ ನೀರಿನಿಂದಲೇ ಹೇಗೆ ಬೆಳೆದುನಿಂತಿದ್ದೇನೆ” ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಿದೆಯೇನೋ ಎನಿಸಿಬಿಟ್ಟಿತು. ತಬ್ಬಿ ಹಿಡಿದರೆ ಖುಷಿ ಕೊಡುವಷ್ಟು ಅದರ ಕಾಂಡವೂ ದಪ್ಪಗಾಗಿಬಿಟ್ಟಿತು.

ಪ್ರತಿದಿನವೂ ಅದರ ಬೆಳವಣಿಗೆಯನ್ನು ನೋಡುತ್ತಲೇ ಒಂದು ದಿನ ಮನೆಯಾಕೆ ” ರೀ ಬರ್ರಿ ಇಲ್ಲಿ ಮಾವಿನ ಗಿಡ ಹೂ ಬಿಟ್ಟೈತಿ ” ಎಂದು ಕೂಗಿದಳು. ನಾನು ಲಗುಬಗೆಯಿಂದ ಹೋಗಿ ನೋಡಿದರೆ ನಿಜ ಗಿಡ ಹೂ ಮುಡಿದು ನಿಂತಿತ್ತು. ಅದರ ತುದಿಯಲ್ಲಿ ಪುಟ್ಟ ಕಂಡು ಕಾಣದಂತೆ ಕಾಯಿಗಳು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ದಾರಿಯಲ್ಲಿ ಹೋಗಿಬರುವವರಿಗೆ ಅದೊಂದು ಮಾವಿನ ಗಿಡ ಅಷ್ಟೆ. ಆದರೆ ನಮಗದು ಬೆಳೆದು ನಿಂತ ಮಗ, ಮಗಳಂತೆ.

ನೋಡುತ್ತಲೇ ಪುಟ್ಟ ಕಾಯಿಯೊಂದು ಬೆಳೆದು ಬಲಿಯಿತು. ನಮ್ಮ ಮನೆಯಂಗಳದ ಮೊದಲ ಮಾವಿನ ಕಾಯಿ ಎಂದು ಅದನ್ನು ಕಿತ್ತೆವು. ಆದರೆ ಹಾಗೆ ಕಿತ್ತನಂತರ ಅದು ಮೊದಲ ಕಾಯಿ ಆದ್ದರಿಂದ ಅದರ ಒಂದು ಚಿತ್ರ ನೆನಪಿನಲ್ಲಿರಲೆನಿಸಿ ಕ್ಲಿಕ್ಕಿಸಿದೆ.

ನಂತರ ಅದನ್ನು ಯಾರು ತಿನ್ನಬೇಕೆಂಬುದು ಯೋಚನೆಯಾಯಿತು. ಕೊನೆಗೆ ಮನೆಯಾಕೆ ನಾನು ನಿರ್ಧರಿಸಿದ್ದು, ಮಾವಿನಕಾಯಿ ಎಂದರೆ ತುಂಬಾ ಇಷ್ಟಪಡುವ ಮಗಳಿಗೇ ಕೊಡಬೇಕೆಂಬುದು. ಕೊನೆಗೆ ಈ ಮಾವಿನಕಾಯಿ ಮಗಳ ಕೈಸೇರಿತು.

ಒಂದು ಬೊಗಸೆ ನೀರೆರೆದಕ್ಕೇ ಇಂತಪ್ಪ ಮಾವಿನಕಾಯಿಯನ್ನು ಕೊಟ್ಟ ಮಾವಿನ ಮರವೇ ನಿನಗೆ ವಂದನೆಗಳು.

Leave a Reply