ಮಾತಾಡು ಆರ್.ವಿ..

                    ಆರ್. ವಿ ನನ್ನ ನೋವಿಗೆ ಸ್ಪಂದಿಸಿದರು, ಅವರು ತೋರಿದ ಬೆಳಕೇ ನನಗೆ ದಾರಿ ದೀಪ

ಸಾಮಾನ್ಯವಾಗಿ ಒಂದು ಸಣ್ಣ ಬರಹವಿದ್ದರು ಅದು ಅಣ್ಣ ನೋಡಿದ ಮೇಲೆಯೇ ವಿಡಂಬಾರಿಯವರು ಪತ್ರಿಕೆಗೆ ಕಳಿಸುವುದು. ಒಂದು ಸಣ್ಣ ಕಾರ್ಯಕ್ರಮವಿದ್ದರೂ ಅದನ್ನು ಅಣ್ಣನಿಗೆ ವರದಿ ಮಾಡದೇ ಇರುತ್ತಿರಲಿಲ್ಲ. ವಿಡಂಬಾರಿಯವರ ಯಶಸ್ಸನ್ನು ನೋಡಿ ಅಣ್ಣ ಮತ್ತು ಅಣ್ಣನ ಯಶಸ್ಸನ್ನು ನೋಡಿ ವಿಡಂಬಾರಿಯವರು ಸಂಭ್ರಮಿಸುತ್ತಿದ್ದರು. ಇದು ಅವರ ಸ್ನೇಹದ ಪರಿ.

ವಿಡಂಬಾರಿಯವರು ತಮ್ಮ ಬದುಕಿನ ಅನುಭವವನ್ನು ಮೊದಲ ಬಾರಿಗೆ ಬರೆದಾಗ ಹಲವು ಬಾರಿ ಅಣ್ಣ ತಿದ್ದಿಕೊಟ್ಟಿದ್ದಿದೆ ಎಂದು ಹಿಂದೆ ಬರೆದಿದ್ದೆ. ತಿದ್ದಿದ್ದು ಮಾತ್ರ ಅಲ್ಲ, ಬರೆಯುವ ವಿಧಾನದ ಕುರಿತೂ ಆತನೊಂದಿಗೆ ಚರ್ಚಿಸಿದ್ದಿದೆ.

ವಿಡಂಬಾರಿಯವರು ತಮ್ಮ ಆತ್ಮ ಕತೆಯ ಪರಿಷ್ಕೃತ ಆವೃತ್ತಿಯಲ್ಲಿ ಅಣ್ಣನನ್ನು ನೆನಪಿಸಿಕೊಂಡು “ಆರ್. ವಿ. ಭಂಡಾರಿ ನನ್ನ ಸ್ಪೂರ್ತಿ” ಎನ್ನುವ ಒಂದು ಅಧ್ಯಾಯವನ್ನೇ ಅವರು ಬರೆದಿದ್ದಾರೆ.

ತನ್ನ ಮತ್ತು ಅಣ್ಣನ ಮೊದಲ ಭೇಟಿಯ ಕುರಿತು ಅವರು ಹೇಳುವುದು ಹೀಗೆ. “ಡಾ. ಆರ್. ವಿ. ಭಂಡಾರಿ ಅವರ ಬಗೆಗೆ ನಾನು ಇದುವರೆಗೂ ಹೇಳದೆ ಇದ್ದುದ್ದು ಇಲ್ಲಿ ಹೇಳುತ್ತಿದ್ದೇನೆ. ಸುತ್ತ ಮುತ್ತ ಎಲ್ಲಿಯೇ ಯಕ್ಷಗಾನ ಇರಲಿ. ಅಲ್ಲಿ ಡಾ. ಆರ್.ವ್ಹಿ.ಭಂಡಾರಿ, ಜಿ.ಆರ್.ಪಾಂಡೇಶ್ವರ, ಎನ್.ಕೆ.ನಾಯಕ ಧಾರವಾಡ ಈ ಮೂವರು ವಿದ್ವಾಂಸರುಗಳಲ್ಲಿ ಒಬ್ಬರದ್ದಾದರೂ ಕಲೆಯ ಕುರಿತಾದ ಭಾಷಣ ಇದ್ದೇ ಇರುತ್ತಿತ್ತು.

ಡಾ.ಆರ್.ವ್ಹಿ.ಭಂಡಾರಿ ಅವರಿಗೆ ವೈಜ್ಞಾನಿಕ, ವೈಚಾರಿಕ ಸಾಹಿತ್ಯದಲ್ಲಿ ಎಷ್ಟು ಆಸಕ್ತಿ ಇದ್ದಿತ್ತೋ ಅಷ್ಟೇ ಆಸಕ್ತಿ ಯಕ್ಷಗಾನ, ಜಾನಪದ, ನಾಟಕಗಳ ಬಗೆಗೂ ಇತ್ತು. ಬರಿಯ ಆಸಕ್ತಿ ಮಾತ್ರವಲ್ಲ ಅಧ್ಯಯನ ಮಾಡುತ್ತಿದ್ದರು. ನಿಖರವಾಗಿ ಮಾತನ್ನಾಡಬಲ್ಲವರಾಗಿದ್ದರು.

ನಾನು ಹೊನ್ನಾವರ ತಾಲೂಕಿನ ಕೊಳೆಗದ್ದೆ ಜಾತ್ರೆಗೆ ಪ್ರತೀ ವರ್ಷ ವಾದ್ಯ ಬಾರಿಸಲು ಹೋಗುತ್ತಿದ್ದೆ. ಜಾತ್ರೆಯ ದಿನ ಯಕ್ಷಗಾನ ಇತ್ತು. ನನಗೆ ಯಕ್ಷಗಾನ ಅಂದರೆ ತುಂಬಾ ಪ್ರೀತಿ. ಇದು ಬಹಳ ಹಿಂದಿನ ಕತೆ ನಾನು ಆಗ ನೌಕರಿಗೆ ಸೇರಿರಲಿಲ್ಲ. ತುಂಬಾ ಸಣ್ಣ ಪ್ರಾಯ.

ಸುಮಾರು ಮುಕ್ಕಾಲು ಭಾಗ ಯಕ್ಷಗಾನ ಮುಗಿದಾಗ ಒಬ್ಬರು ರಂಗಸ್ಥಳಕ್ಕೆ ಬಂದು ಈಗ ಆರ್.ವ್ಹಿ.ಭಂಡಾರಿ ಅವರು ಕಲೆಯ ಕುರಿತು ಮಾತನ್ನಾಡುತ್ತಾರೆಂದು ಪ್ರಚಾರ ಮಾಡಿದರು. ಅವರ ಸಾಹಿತ್ಯಿಕ ಭಾಷಣ ಕೇಳಿದ್ದೆ, ಬರಹ ಕವನಗಳನ್ನು ಓದಿದ್ದೆ, ಆದರೆ ಕಲೆಯ ಕುರಿತು ಭಾಷಣ ಕೇಳಿರಲಿಲ್ಲ.

ಆ ದಿನ ಕಲೆಯ ಬಗೆಗೆ ತುಂಬಾ ಮನೋಜ್ಞವಾಗಿ ಮಾತನ್ನಾಡಿದರು. ನಾನು ಅಂದಿನಿಂದ ಮಾತ್ರ ಅಲ್ಲ; ಅವರ ಬರಹ ಕವನಗಳನ್ನು ಓದಿಯೇ ಅವರ ಅಭಿಮಾನಿಯಾಗಿದ್ದೆ.” ಎಂದು ನೆನಪಿನ ರಂಗಸ್ಥಳ ಪ್ರವೇಶಿಸುತ್ತಾರೆ.

ಅಣ್ಣ ಬೆಳೆದು ಬಂದ ಪರಿಸರ ಮತ್ತು ವಿಡಂಬಾರಿಯವರು ಬೆಳೆದ ಸಮಾಜ ಎರಡೂ ಹೆಚ್ಚುಕಡಿಮೆ ಒಂದೇ ರೀತಿಯದು. ಅಂದಿನ ನಮ್ಮ ಸಮಾಜವನ್ನು ಅವರು ನೆನಪಿಸಿಕೊಳ್ಳುವುದು ಹೀಗೆ. “ಭಂಡಾರಿ ಸಮಾಜದವರು ವಾದ್ಯ ಬಾರಿಸಲು, ದೇವಸ್ಥಾನದ ಹೊರ ಆವಾರವನ್ನು ಗುಡಿಸಿ ಚೊಕ್ಕವಾಗಿ ಇಡುವುದು ಅವರ ಊಟವಾದ ಮೇಲೆ ಮಿಕ್ಕುಳಿದ ಅನ್ನ, ಸಾರು, ಪಾಯಸ ಕೊಡುತ್ತಿದ್ದರು. ಅದನ್ನು ಮನೆಗೆ ಕೊಂಡು ಹೋಗಿ ಕುಟುಂಬದವರೆಲ್ಲ ಉಣ್ಣುವುದು. ಹೊಟ್ಟೆ ತುಂಬುತ್ತಿತ್ತೋ ಇಲ್ಲವೋ ಆ ಮಾತು ಬೇರೆ. ಆರತಿ ತಟ್ಟೆಗಳನ್ನು ಬೂದಿ ಹಾಕಿ ತೊಳೆಯುವ ಕೆಲಸವೂ ಇವರಿಗೇ ಸೇರಿದ್ದಾಗಿತ್ತು.

ಬಡತನದ ಕಾರಣದಿಂದಾಗಿ ಶಿಕ್ಷಣದಿಂದಲೂ ವಂಚಿತರಾಗಿದ್ದರು. ಕೆಲವರಿಗೆ ಅಡಿಯಾಳಾಗಿದ್ದವರು. ಅವರು ಕೊಟ್ಟರೆ ಉಣಬೇಕು, ಉಡಬೇಕು. ಅವರು ನಿಮ್ಮ ಮಗಳನ್ನು ದೇವರ ಹೆಸರಿನಲ್ಲಿ ದೇವದಾಸಿ ಮಾಡೆಂದು ಹೇಳಿದರೆ ದೇವರ ಅಪ್ಪಣೆಯೆಂದೇ ತಿಳಿದು ಭಕ್ತಿಯಿಂದ ಪಾಲಿಸಬೇಕಾಗಿತ್ತು. ಹಾಗೆ ಮಾಡದಿದ್ದರೆ ಅವರು ಶಾಪ ಕೊಡುತ್ತಾರೆ. ಕುಲವೇ ನಾಶವಾಗಿ ಹೋಗುತ್ತದೆಂಬ ಭಯವನ್ನು ಬಿತ್ತಿಟ್ಟಿದ್ದರು. ಅವರು ತಾವು ಹೇಳುವುದೆಲ್ಲಾ ಯಾವುದೋ ವೇದವಾಕ್ಯ ಅನ್ನುತ್ತಿದ್ದರು. ಭೇದ ವಾಕ್ಯ ಎಂಬುದು ಈ ಜನಕ್ಕೆ ಗೊತ್ತಾಗುತ್ತಲೇ ಇರಲಿಲ್ಲ. ಈ ಶತಮಾನದಲ್ಲಿಯೂ ನಮ್ಮ ಜನರಲ್ಲಿ ಆ ಭಯ ಉಳಿದುಕೊಂಡಿದೆ. ನನಗೆ ಇಂಥ ಭಂಡಾರಿ

ಸಮಾಜದವರೊಬ್ಬರು ಸಾರ್ವಜನಿಕರೆದುರು ಭಾಷಣ ಮಾಡುತ್ತಾರೆ, ಲೇಖನ, ಕವನ ಬರೆಯುತ್ತಾರೆಂದರೆ ನಂಬಲೇ ಆಗುತ್ತಿರಲಿಲ್ಲ.” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮುಂದುವರಿದು “ನನಗೆ ಡಾ. ಆರ್.ವ್ಹಿ.ಭಂಡಾರಿ ಅವರೊಂದಿಗೆ ಮಾತಾಡಿ ಪರಿಚಯ ಇರಲಿಲ್ಲ. ಕಾರಣ ಯಾರು ದೊಡ್ಡವರೆಂದು ನಿರ್ಧರಿಸಿಕೊಂಡಿದ್ದೇನೋ ಅಂತವರಲ್ಲಿ ಮಾತಾಡಲು ಭಯ. ಒಂದು ತರ ಭಯ ಮಿಶ್ರಿತ ಗೌರವವೂ ಇದಕ್ಕೆ ಕಾರಣವಾಗಿತ್ತು.

ಅಂದು ಇಂತವರು ಭಾಷಣ ಮಾಡುವುದೆಂದರೆ ಸಾಮಾನ್ಯವಾಗಿರಲಿಲ್ಲ. ಜಾತಿಯಲ್ಲಿ ಕೀಳಾದ ಕಾರಣಕ್ಕಾಗಿ ರಾಷ್ಟ್ರಕವಿ ಕು.ವೆಂ.ಪು ಅವರು ಯಾವ ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸಿದ್ದರು ಎಂಬ ಸತ್ಯ ನಮ್ಮೆದುರಿಗೇ ಇದೆ. ರಾಮಾಯಣ ಬರೆದ ಕಾರಣಕ್ಕಾಗಿ ರಾಮಾಯಣವನ್ನು ರಾಮನನ್ನು ಮೈಲಿಗೆ ಮಾಡಿದರು ಎಂಬ ಕೂಗು ಜೋರಾಗಿತ್ತು. ಸರಸ್ವತಿಗೆ ಅಪಚಾರ ಮಾಡಿದರೆಂಬ ಕೂಗೂ ಇತ್ತು. ಕೊನೆಗೆ ರಾಷ್ಟ್ರ ಕವಿ ಬಿರುದು ಬಂದಾಗ ಎದ್ದ ಹೊಟ್ಟೆ ಉರಿಯನ್ನು ಹೇಗೆ ಹತ್ತಿಕ್ಕಿಕೊಂಡರೋ ಗೊತ್ತಿಲ್ಲ. ಡಾ. ಆರ್.ವ್ಹಿ.ಭಂಡಾರಿ ಅವರಿಗೂ ಕೂಡ ಅದೇ ರೀತಿ ಚಿತ್ರ ಹಿಂಸೆ ಕೊಟ್ಟಿದ್ದರು. ಒಮ್ಮೆ ಹೊಡೆಯಲೂ ಬಂದಿದ್ದರೆಂದು ಕೇಳಿರುವೆ.”

“ನನ್ನ ಚುಟುಕುಗಳನ್ನು ಪತ್ರಿಕೆಯಲ್ಲಿ ಓದಿದ ಡಾ. ಆರ್.ವ್ಹಿ. ಅವರಿಗೆ ಈತ ಯಾರು, ಎಂಬ ಕುತೂಹಲ ಬಂದಿರಬೇಕು. ನನ್ನ ಚುಟುಕು ವಿಡಂಬಾರಿ ಎಂಬ ಕಾವ್ಯ ನಾಮದಲ್ಲಿ ಪ್ರಕಟವಾಗುತ್ತಿರುವುದರಿಂದ ಈತ ಭಂಡಾರಿ ಎಂಬುದೂ ತಿಳಿದಿರಲಿಲ್ಲ.

ಕತ್ತಲೆಗೆ ತಳ್ಳಲ್ಪಟ್ಟವರನ್ನು ಹುಡುಹುಡುಕಿ ಬೆಳಕಿನೆಡೆಗೆ ತರುತ್ತಿದ್ದವರು ಡಾ. ಆರ್.ವ್ಹಿ.ಭಂಡಾರಿ ಅವರು. ಅವರಿಗೆ ಎಂದೂ ಜಾತಿ ಪ್ರಾಮುಖ್ಯವಾಗಿರಲಿಲ್ಲ. ವಂಚಿತರು ಯಾವುದೇ ಜಾತಿಯವರಾಗಿರಲಿ ಪ್ರೋತ್ಸಾಹ ಕೊಡುತ್ತಿದ್ದರು, ಬೆಳೆಸುತ್ತಿದ್ದರು. ಪತ್ರವನ್ನೂ ಬರೆದು ತಿದ್ದಿಕೊಳ್ಳಲು ಹೇಳುತ್ತಿದ್ದರು. ಅವರ ದೊಡ್ಡ ಗುಣಕ್ಕೆ ಶರಣು.” ಬದುಕಿನ ತುಂಬ ಆತ ಇವರಿಗೆ , ಇವರು ಆತನಿಗೆ ಶರಣಾಗಿಯೇ ಕಳೆದರು.

“ಪಾಂಡೇಶ್ವರರಿಂದ ನನ್ನ ಅಡ್ರೆಸ್ ಪಡೆದು ಡಾ. ಆರ್.ವ್ಹಿ. ಅವರು ಮೊಟ್ಟ ಮೊದಲು ನನಗೆ ಒಂದು ಕಾರ್ಡ್ ಬರೆದಿದ್ದರು ಎಂದು ಅದೊಂದು ಪ್ರಶಸ್ತಿ ಎನ್ನುವಂತೆ ನೆನಪಿಸಿಕೊಳ್ಳುತ್ತಾರೆ.

ಪ್ರಿಯ ವಿಡಂಬಾರಿಯವರೆ,
ನೀವು ನನ್ನ ಕುತೂಹಲಕ್ಕೆ ಕಾರಣರಾಗಿದ್ದೀರಿ, ನಾನು ಮತ್ತು ಜಿ.ಎಸ್.ಅವಧಾನಿ ನಿಮ್ಮನ್ನು ಹುಡುಕುತ್ತಿದ್ದೇವೆ. ಪಾಂಡೇಶ್ವರರಿಂದ ನಿಮ್ಮ ಅಡ್ರೆಸ್ ಪಡೆದು ಬರೆಯುತ್ತಿದ್ದೇನೆ. ನಿಮ್ಮ ಚುಟುಕುಗಳು ಚನ್ನಾಗಿರುತ್ತವೆ. ನಿಮಗೆ ಈ ಕಲೆ ಹೇಗೆ ಕರಗತವಾಯಿತು? ಬಹುತೇಕ ಅಂಕೋಲೆಯೇ ಕಾರಣವಾಗಿರಬೇಕು. ನಿಮ್ಮೊಡನೆ ತುಂಬಾ ಮಾತನಾಡಬೇಕು. ನೀವು ಬರೆಯುತ್ತಲೇ ಇರಬೇಕು. ಬರೆಬರೆದು ಇನ್ನೂ ಬೆಳೆಯಬೇಕು. ಪತ್ರ ಬರೆಯುತ್ತಲೇ ಇರಿ’
ನಿನ್ನ ಆರ್.ವಿ.
ಎಂದು ತಿಳಿಸಿದ್ದರು.

“ಇದು ದೊಡ್ಡವರಲ್ಲಿ ಇರಲೇಬೇಕಾದ ದೊಡ್ಡ ಗುಣ. ಸಣ್ಣವರಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ತುಂಬುವ ವಿಶಾಲ ಹೃದಯಿಗಳಾಗಿದ್ದರು ಅವರು. ಮುಂದೆ ಹತ್ತೊಂಬತ್ತು ನೂರಾ ಎಪ್ಪತ್ತೊಂಬತ್ತರವರೆಗೂ ನನ್ನ ಅವರ ಕಾರ್ಡ್ ಚಳವಳಿ ಸಾಗಿಯೇ ಇತ್ತು.

1979ರಲ್ಲಿ ಕಾರವಾರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದು ಶ್ರೀ ವಿಷ್ಣು ನಾಯಕ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ನನಗೆ ಮೊಟ್ಟ ಮೊದಲು ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆ ಕವಿಗೋಷ್ಠಿಯಲ್ಲಿ ಹತ್ತು ಚುಟುಕುಗಳನ್ನು ವಾಚಿಸಿ ನನ್ನಷ್ಟಕ್ಕೇ ನಾನು ಸಭೆಯಲ್ಲಿ ಬಂದು ಕುಳಿತಿದ್ದೆ. ಡಾ. ಆರ್.ವ್ಹಿ. ಮತ್ತು ಪ್ರೊ. ಜಿ.ಎಸ್. ಅವರು ನನ್ನ ಹತ್ತಿರ ಬಂದು ನಾವು ಇದುವರೆಗೂ ಹುಡುಕುತ್ತಿದ್ದ ಕಳ್ಳ ಈ ಹೊತ್ತು ಸಿಕ್ಕಿದ, ಎಂದು ನಗೆಯಾಡಿದ್ದರು. ಅಂದಿನಿಂದ ನಾನು ಅವರ ಸಹೋದರನೇ ಆದೆ.” ಎನ್ನುತ್ತಾರೆ.
ಅವರ ನಿವೃತ್ತಿಯ ನಂತರ ಉಳಿಯುವುದೆಲ್ಲಿ ಎಂದು ಸಮಸ್ಯೆ ಪ್ರಾರಂಭವಾಯಿತು. ಸ್ವಂತ ಮನೆಯೂ ಇರಲಿಲ್ಲ. ಆಗ ಅವನ ನೆರವಿಗೆ ಬಂದಿದ್ದೇ ಅಣ್ಣ. ಅದನ್ನು ಅವರು ನೆನಪಿಸಿಕೊಂಡಿದ್ದು ಹೀಗೆ….

“ನನ್ನ ಬಿಡಾರ ಮತ್ತು ಕಾಂ. ಸುಭಾಸರ ಮನೆಗಳು ಹತ್ತಿರವೇ ಇದ್ದವು. ಕಾಂ. ಕೊಪ್ಪಿಕರ ಅವರು ಡಾ. ಆರ್. ವ್ಹಿ. ಭಂಡಾರಿ ಅವರಿಗೆ ನನ್ನ ಸಮಸ್ಯೆಗಳನ್ನು ತಿಳಿಸಿದರು. ಡಾ. ಆರ್. ವ್ಹಿ. ಅವರು ನನಗೆ ಪರಿಚಯವಾದಿನಿಂದಲೂ ನನ್ನ ನೋವಿಗೆ ಸ್ಪಂದಿಸುತ್ತಾ ಬಂದವರು.

ಡಾ. ಆರ್. ವ್ಹಿ. ಅವರು ನನಗೆ ಶಿರಸಿಯ ಚಿಂತನ ಪುಸ್ತಕ ಮಳಿಗೆಯಲ್ಲಿ ಆಶ್ರಯ ಕೊಟ್ಟು ಮತ್ತೆ ನಾನು ತಲೆಯೆತ್ತುವಂತೆ ಮಾಡಿದರು. ಡಾ. ಆರ್. ವ್ಹಿ. ಅವರು ಚಿಂತನದ ಸಂಸ್ಥಾಪಕರುಗಳಲ್ಲಿ ಪ್ರಮುಖರಾಗಿದ್ದರು. ಅವರು ತೋರಿದ ಬೆಳಕೇ ನನಗೆ ದಾರಿ ದೀಪವಾಗಿ ಮುನ್ನಡೆಸಿತು. ಅವರು ನನಗೆ ಮನುಷ್ಯನಾಗಿ ಬಾಳಿ ಬದುಕಲು ದಾರಿ ತೋರಿದವರು. ಅಷ್ಟು ಮಾತ್ರವಲ್ಲ ಡಾ. ಆರ್. ವ್ಹಿ. ಭಂಡಾರಿ ಅವರ ಪೌರೋಹಿತ್ಯದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ನನ್ನ ಮಗನ ಮದುವೆ ಮಾಡಿಸಿದರು. ಶಿರಸಿಯಲ್ಲಿ ಅದು ಸಾಂಗವಾಗಿ ಮುಗಿಯಿತು. ಆ ದಿನ ಅವರು ಮದುವೆ ಅಂದರೇನೆಂಬುದರ ಕುರಿತು ಮನೋಜ್ಞವಾಗಿ ಮಾತನಾಡಿದರು.” ಎಂದು ನೆನಪಿಸಿದ್ದಾರೆ.

ಡಾ. ಆರ್.ವ್ಹಿ.ಭಂಡಾರಿ ಅವರ ಸಾರ್ವಜನಿಕ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಬರೆದು ವಾಚಿಸಿದ ಉಳಿದ ಚುಟುಕುಗಳು ಇವು.

ಮಾತಾಡು ಆರ್.ವ್ಹಿ?
ಹಗಲಿರುಳು ನೀನಂದು ಉಳಿದೆಲ್ಲ ಮರೆತು
ಮಾತಾಡಿದವನಯ್ಯ ಸಾಹಿತ್ಯ ಕುರಿತು
ನೊಂದೆಯಾ ಅಮಾನುಷ ವ್ಯವಸ್ಥೆ ಕಂಡು
ಮಾತಾಡು ಓ ಆರ್.ವ್ಹಿ ಮಾತಾಡು ಒಂದು

ಬೆಳಕಿತ್ತ ಶಕ್ತಿ
ಓ ಆರ್.ವ್ಹಿ ನಿನ್ನನ್ನು ವರ್ಣಿಸುವ ಶಕ್ತಿ
ನನಗಿಲ್ಲ ನೀ ನನಗೆ ಬೆಳಕಿತ್ತ ವ್ಯಕ್ತಿ
ತಾ ತುಳಿದು ಬರೆ ಮುಳ್ಳು ಕಲ್ಲುಗಳ ಹಾದಿ
ಹೆರವರಿಗೆ ಬೆಳಕಿತ್ತ ಮಾನವತಾವಾದಿ

ನಿನ್ನ ಬೆಳಕು
ಕತ್ತಲೆಗೆ ತಳ್ಳಿಟ್ಟ ಪ್ರತಿಭೆಗಳ ಕಂಡು
ಮರುಗುತ್ತ ನಿಲ್ಲಿಸಿದೆ ಬೆಳಕಿನೆಡೆ ತಂದು
ನಿನ್ನಿಂದ ಅದೆಷ್ಟೋ ಮಂದಿಗಳು ಇಂದೆ
ಬೆಳಕಿನೆಡೆ ಮುಖ ಮಾಡಿ ಸಾಗುವುದ ಕಂಡೆ

ಬೋಳಗೆರೆ (ಕೆರೆಕೋಣ)
ಬೋಳಗೆರೆ ಎಂಬಲ್ಲಿ ಆರ್.ವ್ಹಿ ಮನೆ ಮಾಡಿ
ಹೊಳೆ ಹೊಳೆವ ಗೆರೆಯನ್ನು ಮಾಡಿಸಿದ ನೋಡಿ
ಈ ಗೆರೆಯು ಹೊಳೆಯುತ್ತ ಕರುನಾಡ ಸುತ್ತು
ಚಿರಕಾಲ ಉಳಿಯುವುದು ಇದಕಿಲ್ಲ ಕುತ್ತು

ಗೌರವ
ವಂಚನೆಗೆ ಒಳಗಾದ ಮುಗ್ಧರಿಗೆ ನಿತ್ಯ
ಈ ಆರ್.ವ್ಹಿ. ತಿಳಿಸುತ್ತ ಬಂದವನು ಸತ್ಯ
ಈ ತತ್ವ ಬೆಳೆಸುವುದೆ ನಾವೆಲ್ಲ ಕೂಡಿ
ಈತನಿಗೆ ಬಹುದೊಡ್ಡ ಗೌರವವು ನೋಡಿ

ನಿನ್ನ ಸೊಸೆ ಮಕ್ಕಳು
ಈ ನಿನ್ನ ತತ್ವಗಳ ಮುನ್ನಡೆಗೆ ಮತ್ತೆ
ನಿಜವರಿತ ಸೊಸೆ ಮತ್ತು ಮಕ್ಕಳನು ಕೊಟ್ಟೆ
ಅಳಿಸಲಾಗದ ಗುರುತು ನೀನಿಲ್ಲಿ ಇಟ್ಟೆ
ಇಲ್ಲಿಯೇ ನೀನೆಲ್ಲೋ ಮರೆಯಾಗಿ ಬಿಟ್ಟೆ.

ಈಗ ವಿಡಂಬಾರಿಯವರು ವೃದ್ದಾಪ್ಯದ ಬದುಕಿನಲ್ಲಿದ್ದಾರೆ. ಸದಾ ಅಣ್ಣನ ನೆನಪಲ್ಲಿ. ಮನೆಗೆ ಹೋದರೆ ಕಣ್ಣರಳಿಸಿ ಅಣ್ಣನ ನೆನಪು ಬಿಚ್ಚಿಡುತ್ತಾರೆ.

1 comment

  1. ಕರುಳು ಬಳ್ಳಿಗಳ ನೋವಿನ ಎಳೆಗಳ ಅಪೂವ೯ ಹಾರದಂತೆ ಬರಹದ ಚಲುವಿದೆ.ಬಡವರ ಮಾನವೀಯ ಶಕ್ತಿಗೆ ಞಲ್ಲಿನ ಮಹನೀಯರು ಉದಾಹರಣೆಯಂತಿದ್ದಾರೆ.ಸಂಬಂಧಗಳು ಒಣಗಿ ಕೊಳ್ಳಿ ಬೀಳುತ್ತಿರುವ ಈ ಕಾಲಮಾನದಲ್ಲಿ ಞಂತಹ ಸಂಗತಿಗಳು ಸಂಬಂಜ ಅನ್ನೋದು ದೊಡ್ಡದು ಕಣಾ ಎಂಬ ಮಾತಿಗೆ ಸಾಕ್ಷಿ ಒಡ್ಡುವಂತಿವೆ

Leave a Reply