ದಿ ಗ್ರೇಟ್ ಡಿಕ್ಟೇಟರ್ ಹಾಗೂ ಡಾ. ಆನಂದ ತೇಲ್ತುಂಬ್ಡೆ

ಹಸಿವಿನ ಬಗ್ಗೆ ಮಾತಾಡಿದರೆ ನಕ್ಸಲ್‍ವಾದಿ, ಕೋಮುವಾದದ ಬಗ್ಗೆ ಮಾತನಾಡಿದರೆ ಭಯೋತ್ಪಾದಕ , ಸಾಮಾಜಿಕ ನ್ಯಾಯದ ಬಗ್ಗೆ ದನಿ ಎತ್ತಿದರೆ ಜಾತಿವಾದಿ ಎಂದು ಪಟ್ಟಗಳನ್ನು ಕಟ್ಟಲಾಗುತ್ತಿದೆ.

ನೀವು ತಡರಾತ್ರಿ ನನ್ನನ್ನು ಬಂಧಿಸಿ
ಕೈಗೆ ಕೋಳತೊಡಿಸಿ
ಕಣ್ಣಿಗೆ ಬಟ್ಟೆ ಕಟ್ಟಿ
ತುಟಿ ಹೊಲಿದು
ಕೊರಳಿಗೆ ಮಿಣಿ ಬಿಗಿದರೆ ನನ್ನ ಕೊರಳ
ಶಬ್ದಗಳನ್ನಷ್ಟೇ ಹತ್ತಿಕ್ಕಬಹುದು
ಆದರೆ…
ನಿಮ್ಮ ಅಧಿಕಾರ ದೌರ್ಜನ್ಯವನ್ನು ಜಗತ್ತಿಗೆ ಸಾರಲು
ನನ್ನ ಚರ್ಮ ಒಸರುವ ಬೆವರು
ಒಳಗೆ ಕುದಿವ ಉಸಿರು
ಹೆಜ್ಜೆ ಸಪ್ಪಳದೊಳಗಿನ ಚೈತನ್ಯವನ್ನು ಕೊಲ್ಲಲಾರಿರಿ.

ಜಗತ್ತಿನಲ್ಲಿ ಎಲ್ಲಾ ಕಾಲಕ್ಕೂ ನಡೆದ ಪ್ರಭುತ್ವದ ದೌರ್ಜನ್ಯ-ಅಟ್ಟಹಾಸವನ್ನು ಇಂತಹ ಚೈತನ್ಯಪೂರ್ಣ ಹೋರಾಟವೊಂದು ಎದುರುಗೊಳ್ಳುತ್ತಲೆ ಬಂದಿದೆ. ಮತ್ತೀಗ ಮುಂದುವರೆದಿದೆ. ಇದು ಭಾರತಕ್ಕೂ ಹೊರತಾಗಿಲ್ಲ.

ಸ್ವತಂತ್ರ ಭಾರತ ಕಂಡ 1975 ರ ತುರ್ತು ಪರಿಸ್ಥಿತಿ ಕಣ್ಣಿಗೆ ಕಾಣುವಂತೆ ನೇರಾನೇರವಾಗಿತ್ತು. ಶ್ರೀಮತಿ ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಎದುರಾಡುವವರನ್ನು ನಿರ್ದಾಕ್ಷಿಣ್ಯವಾಗಿ ಬಗ್ಗುಬಡಿಯುವ ಪ್ರಯತ್ನ ಮಾಡಿದರು. ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮಿಚ್ಛೆಯಂತೆ ಬಳಸಿಕೊಂಡರು. ಎಲ್ಲರಿಗೂ ಅವರು ಸರ್ವಾಧಿಕಾರಿಯಂತೆ ನೇರವಾಗಿ ಕಾಣಿಸಿಕೊಂಡಿದ್ದರು. ಇಲ್ಲಿ ಸೈದ್ದಾಂತಿಕ ಪ್ರಶ್ನೆ ಮತ್ತು ಭಿನ್ನತೆಗಿಂತ ಇಂದಿರಾ ಅವರಿಗಿದ್ದ ‘ರಾಜಕೀಯ ಮಹತ್ವಾಕಾಂಕ್ಷೆ’ ಯೇ ಮಿಗಿಲಾಗಿ ತಮ್ಮ ಅಸಂವಿಧಾನಿಕ , ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವವರನ್ನು, ಪ್ರಶ್ನಿಸುವವರನ್ನು ಹತ್ತಿಕ್ಕಲು ಮುಂದಾಗಿದ್ದರು.

ಕಳೆದ 58 ತಿಂಗಳಲ್ಲಿ ಭಾರತ ಒಂದು ‘ಅಘೋಷಿತ ತುರ್ತು ಪರಿಸ್ಥಿತಿ’ಗೆ ಒಳಗಾಗಿ ಹೋಗಿದೆ. ಇಂದಿರಾಗಾಂಧಿಯವರ ರಾಜಕೀಯ ಪ್ರತಿಗಾಮಿತನವನ್ನು ಪ್ರತಿ ಸಂದರ್ಭದಲ್ಲೂ ಮುಂದು ಮಾಡುತ್ತಾ ಪ್ರಜಾತಂತ್ರದ ಉಳಿವಿನ ಧೀರೋದ್ದಾತ ಹೋರಾಟಗಾರರು ಎಂದೆನಿಸಿಕೊಂಡೇ ಅಧಿಕಾರ ಹಿಡಿದವರು ಪರೋಕ್ಷವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿರುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ನರೇಂದ್ರ ಮೋದಿ ಅವರು ಪಟ್ಟಾಭಿಷೇಕಗೊಂಡು ವರ್ಷ ಪೂರೈಸುವುದರೊಳಗೆ ಬಿಜೆಪಿಯ ಹಿರಿಯ ನಾಯಕ , ಭೀಷ್ಮರಾಗಿ ಬಲವಂತದ ಶರಶಯ್ಯೆಯಲ್ಲಿ ಮಲಗಿಸಲ್ಪಟ್ಟಿರುವ ಎಲ್.ಕೆ ಅಡ್ವಾನಿ ಅವರು (2015 –ಜೂನ್) Indian express ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳನ್ನೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. “I don’t have the confidence that it (Emergency ) cannot happen again”, “forces that can crush democracy have become stronger”.

ಈ ಮಾತುಗಳು ದಿಟವೂ ಆಗಿರುವುದು ಆತಂಕದ ಸಂಗತಿ. ‘ಜನರಿಂದ ಆಯ್ಕೆಯಾದ ಸರ್ಕಾರವೊಂದು ಜನರ ಕಲ್ಯಾಣವನ್ನು ಸಾಧಿಸಲಾಗದಿದ್ದಾಗ ಅದು ತನ್ನ ರಾಜಕೀಯ ಅಸ್ವಿತ್ವಕ್ಕಾಗಿ ಹಿಂಸೆಯನ್ನು ಅವಲಂಬಿಸಿರುತ್ತದೆ’ ಎಂಬ ಮಾತಿನಂತೆ ದೇಶದ ಇವತ್ತಿನ ಆಡಳಿತ ನಡೆದಿರುವುದು ಅಡ್ವಾನಿ, ಯಶವಂತ್ ಸಿನ್ಹ, ಶತ್ರುಘ್ನಸಿನ್ಹ ರಂತಹ ಹಿರಿಯ ನಾಯಕರನ್ನು ಕಾಡಿರುವಾಗ ಇನ್ನೂ ಜನಸಾಮಾನ್ಯರ ಪಾಡೇನು?

1975 ರಲ್ಲಿನ ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಮತ್ತು ಅವರು ಮುನ್ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ ನೇರವಾಗಿ ಎದುರಾಳಿಗಳಿಗೆ ಗೋಚರಿಸುತ್ತಿತ್ತು. ಶತ್ರು ಕಾಣುವಾಗ ಯುದ್ಧ ಸಲೀಸು, ಆದರೆ ಈಗ ಇಂತಹ ಸ್ಥಿತಿಯಿಲ್ಲ. ತಿನ್ನುವ ಆಹಾರ, ತೊಡುವ ಬಟ್ಟೆ, ಪೂಜಿಸುವ ದೇವರು, ಅನುಸರಿಸುವ ಧರ್ಮ, ಆಡುವ ಮಾತು, ಬರೆಯುವ ಬರಹ ಎಲ್ಲವೂ ಏಕಸ್ವಾಮ್ಯದಲ್ಲಿರಬೇಕು ಎಂಬ ಫರ್ಮಾನು, ದಂಡನೆಗಳೊಂದಿಗೆ ಪ್ರಭುತ್ವ ಪ್ರಾಯೋಜಿತ ಕಾಲಾಳು ಪಡೆಗಳು ದೇಶದ ಜನರನ್ನು ಕಾಡುತ್ತಿವೆ.

ಸಾಂವಿಧಾನಿಕ ಆಶಯಗಳಿಗೆ ವಿರುದ್ದವಾಗಿ ಹೊರಟಿರುವ ಈ ಶಕ್ತಿಗಳನ್ನು ಅಧಿಕಾರ ದಂಡ ಹಿಡಿದವರು ದಂಡಿಸುತ್ತಿಲ್ಲ. ಈ ಫ್ಯಾಸಿಸ್ಟ್ ಶಕ್ತಿಗಳು ದಲಿತರನ್ನು ದನದ ಮಾಂಸ ತಿಂದ ನೆಪದಲ್ಲಿ ನಡುಬೀದಿಯಲ್ಲಿ ಹಾಡುಹಗಲೆ ಬಡಿದು ಕೊಲ್ಲುವಾಗ ಅಂತಹ ಪುಂಡರನ್ನು, ದುಷ್ಟ ಶಕ್ತಿಗಳ ವಿರುದ್ದ ದಂಡ ಬೀಸದ ಈ ದೇಶದ ಪ್ರಧಾನಿ ‘ಬೇಕಿದ್ದರೆ ನನ್ನೆದೆಗೆ ಗುಂಡಿಕ್ಕಿ ಆದರೆ ದಲಿತರನ್ನುಕೊಲ್ಲಬೇಡಿ’ ಎಂದು ಹೇಳುತ್ತಾರೆಂದರೆ ಸಶಕ್ತ ಪ್ರಜಾಪ್ರಭುತ್ವ ಭಾರತದ ಆ ಪ್ರಧಾನಿ ಅದೆಂತಹ ದುರ್ಬಲ ಅಥವಾ ಬೂಟಾಟಿಕೆಯವರಾಗಿರಬೇಕು ಎಂದು ಯಾರಿಗಾದರೂ ಅನಿಸಬಾರದಾ?

ದೇಶದಲ್ಲಿ ಇವತ್ತು ಪ್ರಧಾನ ಮಂತ್ರಿಗಳು ಗಾಂಧೀಜಿಯನ್ನು ಸ್ವಚ್ಛ ಭಾರತದ ಐಕಾನ್ ಆಗಿ ಬಳಸಿಕೊಂಡು ಕೊಂಡಾಡುತ್ತಾ ಸ್ಮರಣೆ ಮಾಡುತ್ತಿದ್ದರೆ ಹಿಂದೂ ಕಟ್ಟರ್ ಪಂಥೀಯರ ಗೋಡ್ಸೆ ಸಂತತಿಗಳು ಪ್ರತಿರೂಪದಲ್ಲಿ ಗಾಂಧಿಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ತಮ್ಮ ಪಾರಂಪರಿಕ ಹಗೆತನದ ವಿಕೃತಿಯನ್ನು ಬಹಿರಂಗವಾಗಿ ಸಾರುತ್ತಿದ್ದಾರೆ.

ಇದು ದೇಶಕ್ಕೆ ಮಾಡಿದ ಅಪಮಾನ , ಇದು ಪರಮ ದೇಶದ್ರೋಹ ಎಂದು ಯಾಕೆ ದೇಶದ ನಾಗರಿಕ ಸರ್ಕಾರಕ್ಕೆ ಅನಿಸುತ್ತಿಲ್ಲ. ಹಿಂದೂ ಕಟ್ಟರ್ ಪಂಥಿಗಳಿಗೂ ಮತ್ತು ಅಧಿಕಾರರೂಢ ಬಿಜೆಪಿಗೆ ಇರುವ ನಂಟು ಏನೆಂಬುದನ್ನು ಬಾಯ್ಬಿಟ್ಟು ಹೇಳಬೇಕಾಗಿಲ್ಲ. ದೇಶದ ಸವೋಚ್ಛ ನ್ಯಾಯಲಯದ ಮುಂಚೂಣಿ ನ್ಯಾಯಧೀಶರೆ ಮಾಧ್ಯಮಗಳ ಮುಂದೆ ಕುಳಿತು ಇಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವುದು, ಸಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಆರ್‍ಬಿಐನಲ್ಲಿನ ಏರುಪೇರು, ದೇಶದಲ್ಲಿ ಒಂದು ಜಗತ್ತಿನ ಶ್ರೇಷ್ಟ ಸಂವಿಧಾನ ಇರುವಾಗ ಅದನ್ನು ಬದಲಾಯಿಸಿ ತಮ್ಮದೇ ಆದ ಸಂಪ್ರದಾಯವಾದಿ ಸಂವಿಧಾನವನ್ನು ತರುತ್ತೇವೆ ಎಂದು ಹೇಳುವವರದ್ದು ದೇಶದ್ರೋಹವಲ್ಲವೆ.? ಈ ಎಲ್ಲಾ ಸಂಗತಿಗಳು ಏನನ್ನು ಸೂಚಿಸುತ್ತವೆ. ?

ಮೋದಿ ಸರ್ಕಾರದ ಜನವಿರೋಧಿ ಆಡಳಿತಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿ, ನಕ್ಸಲ್ ರ ನಂಟಿಗೆ ಬಿಗಿದು ಹಣಿಯುವ ಕೆಲಸ ನಡೆದಿದೆ. ಅದು ರೋಹಿತ್ ವೇಮುಲನನ್ನು ಆತ್ಮಹತ್ಯೆಗೆ ದೂಡುವುದರೊಂದಿಗೆ ಹಿಡಿದು ಆನಂದ ತೇಲ್ತುಂಬ್ಡೆ ಅವರನ್ನು ಸುಪ್ರೀಂ ಕೋರ್ಟ್‍ನ ತೀರ್ಪುಗಳನ್ನು ಉಲ್ಲಂಘಿಸಿ ಜೈಲಿಗೆ ನೂಕುವವರೆಗೂ ನಡೆದಿದೆ.

ಡಾ. ಆನಂದ ತೇಲ್ತುಂಬ್ಡೆ ಅಪಾರ ಜ್ಞಾನಮತ್ತೆಯ ಮೊತ್ತ. ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕ, ಸಾಮಾಜಿಕ ವಿಜ್ಞಾನಿ-ಸುಧಾರಕ, ಮಾನವ ಹಕ್ಕುಗಳ ಹೋರಾಟಗಾರ… ಹೀಗೆ ಅವರ ವ್ಯಕ್ತಿತ್ವ ಬೆಳೆಯುತ್ತಲೆ ಹೋಗುತ್ತದೆ. ಈ ದೇಶದ ಸಾಮಾಜಿಕ ಸಂರಚನೆಯ ಬೇರು-ಬಿಳಲುಗಳ ಸಮಗ್ರ ಪರಿಚಯವಿರುವ ತೇಲ್ತುಂಬ್ಡೆ ಅವರ ಪರಂಪರೆ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಮಹಾನದಿಯ ಮೂಲದಿಂದ ಚಿಮ್ಮಿ ಬಂದದ್ದು, 100ಕ್ಕೂ ಹೆಚ್ಚು ಮೌಲಿಕ ಲೇಖನಗಳು, 33ಕ್ಕೂ ಹೆಚ್ಚು ಪುಸ್ತಕಗಳು, ನೂರಾರು ಸಂದರ್ಶನ-ಸಂವಾದದ ವಿಚಾರಧಾರೆಗಳು ಜಾಗತಿಕ ದಾಖಲೆಗಳು ಈ ದೇಶದ , ಜನಸಮುದಾಯದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವಿನ್ಯಾಸವನ್ನು ಪ್ರತಿಪಾದಿಸುತ್ತವೆ. ದಾರಿ ದೀವಿಗೆಗಳಾಗುತ್ತವೆ.

ಸಮಕಾಲೀನ ಚಳವಳಿಯ ಅಂತಃಶಕ್ತಿ ಕೂಡ ಅವರು. ಡಾ. ಬಾಬಾ ಸಾಹೇಬ್‍ ಅಂಬೇಡ್ಕರ್ ಅವರನ್ನು ಕೊಂಡಾಡುತ್ತಾ ದಲಿತರ ಮತ ಕ್ರೋಢೀಕರಣಕ್ಕಾಗಿ ಮಠದೊಳಿಗಿನ ಬೆಕ್ಕಿನಂತೆ ಸೋಗು ಹಾಕಿ ಹೊರಟಿರುವ ಮೋದಿ ಅವರು ಅಂಬೇಡ್ಕರ್ ಪರಂಪರೆಯ ತೇಲ್ತುಂಬ್ಡೆ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಿದ್ದಾರೆ. ತೇಲ್ತುಂಬ್ಡೆ ಅವರನ್ನು ನಾಲ್ಕು ವಾರಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟನ ಆದೇಶವಿದ್ದಾಗ್ಯೂ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ತೇಲ್ತುಂಬ್ಡೆ ಅವರನ್ನು ಬಂಧಿಸುತ್ತದೆ , 24 ಗಂಟೆಯೊಳಗೆ ಕೋರ್ಟಿನ ಛೀಮಾರಿಗೆ ಒಳಗಾಗಿ ಅವರನ್ನು ಬಿಡುಗಡೆ ಮಾಡಬೇಕಾದ ಸ್ಥಿತಿಯಿಂದ ದೇಶದಲ್ಲಿ ನ್ಯಾಯವೊಂದು ಇನ್ನೂ ಕಪಿಮುಷ್ಟಿಗೆ ಸಿಲುಕಿಲ್ಲ ಎಂಬ ಆಶಯ ಜೀವಂತವಿರುವಂತಾಗಿದೆ.

“ vande matarm or bharath  Mata ar not merely innocent patriotic symbolism, they are deeply identified with RSS.” ಡಾ. ಆನಂದ ತೇಲ್ತುಂಬ್ಡೆ ಅವರ ಈ ‘ಸತ್ಯ ನುಡಿಗಳನ್ನು’ ಅರಗಿಸಿಕೊಳ್ಳಲಾಗದ ಆರ್ ಎಸ್ ಎಸ್ ತನ್ನ ನಿಯಂತ್ರಕ ಶಕ್ತಿಯಿಂದ ದೇಶವನ್ನು ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಅಸಲಿಗೆ ಈ ದೇಶ ಪ್ರಜಾಪ್ರಭುತ್ವ ಮಾದರಿಯ ರಾಜಕೀಯ ಪಕ್ಷವೊಂದರಿಂದ ನಡೆಯುತ್ತಿಲ್ಲ.

2017 ಡಿಸೆಂಬರ್ ದಲಿತರ ಸ್ವಾಭಿಮಾನಿ ಹೋರಾಟದ ಕೋರೆಗಾಂವ್ ನಲ್ಲಿ ನಡೆದದ್ದು ಪ್ರಭುತ್ವ ಪ್ರಾಯೋಜಿತ ಗಲಭೆಯೇ. ಇದನ್ನು ನೆಪವಾಗಿಟ್ಟುಕೊಂಡು ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಚಿಂತಕರು, ವಕೀಲರು, ಪತ್ರಕರ್ತರುಗಳೂ ಆದ ಡಾ. ಆನಂದ ತೇಲ್ತುಂಬ್ಡೆ, ಕ್ರಾಂತಿಕಾರಿ ಕವಿ ವರವರರಾವ್, ಸುಧಾ ಭಾರಧ್ವಜ್, ಅರುಣ್ ಫೆರಾರಿ, ವರ್ನಾನ್ ಗೋನ್ವಾಲೀಸ್, ಗೌತಮ್ ನೌಲಾಕ್, ಸ್ತಾನ್ ಸ್ವಾಮಿ ಅವರುಗಳಿಗೆಲ್ಲಾ ‘ಅರ್ಬನ್ ನಕ್ಸಲ್’ ಪಟ್ಟ ಕಟ್ಟಿ ಗೃಹಬಂಧನದಲ್ಲಿರಿಸಲಾಗುತ್ತದೆ. ನಡುರಸ್ತೆಯಲ್ಲಿ ದಾಳಿ ಇಡುತ್ತಾ ಜನರನ್ನು ಕೊಲುವ, ಬಡಿಯುವ, ಗಾಂಧೀಜಿಯನ್ನು ಮತ್ತೆ ಕೊಲ್ಲುವ ಹಿಂದೂತ್ವವಾದಿಗಳು, ಗೋರಕ್ಷಕರ ಅಟ್ಟಹಾಸ ಅನಂತ ದೇಶಪ್ರೇಮದಂತೆ ಕಾಣುತ್ತಿದೆ.

ಹಸಿವಿನ ಬಗ್ಗೆ ಮಾತಾಡಿದರೆ ನಕ್ಸಲ್‍ವಾದಿ, ಕೋಮುವಾದದ ಬಗ್ಗೆ ಮಾತನಾಡಿದರೆ ಭಯೋತ್ಪಾದಕ , ಸಾಮಾಜಿಕ ನ್ಯಾಯದ ಬಗ್ಗೆ ದನಿ ಎತ್ತಿದರೆ ಜಾತಿವಾದಿ ಎಂದು ಪಟ್ಟಗಳನ್ನು ಕಟ್ಟಲಾಗುತ್ತಿದೆ.

ಅಭಿವೃದ್ದಿಯನ್ನು ಪ್ರಶ್ನಿಸಿದರೆ ಮಂದಿರ-ದೇವರು,ಧರ್ಮ ಎಂಬ ಅಫೀಮನ್ನು ಚುಮುಕಿಸಿ ಹಿಂಸೆಯ ಸಮುದಾಯ ಸಂಘರ್ಷವನ್ನು ಪ್ರಚೋದಿಸಲಾಗುತ್ತದೆ. ಮತ್ತೊಂದು ಸುತ್ತಿನ ಅಧಿಕಾರಕ್ಕಾಗಿ ಹೊರಟಿರುವ ಶಕ್ತಿ-ವ್ಯಕ್ತಿಗಳಿಗೆ ಈಗ ಪ್ರಶ್ನಿಸುವ ಬಾಯಿಗಳನ್ನು ಹೊಲಿಯಬೇಕಿದೆ. ಮತ್ತೊಮ್ಮೆ ಚಕ್ರವರ್ತಿಯಾಗಿ ಗಡಚಿಕ್ಕುವ ಸುಳ್ಳುಗಳಿಂದ ಉಘೇ-ಹೂಂಕಾರಗಳ ನಡುವೆ ಮೆರೆಯಬೇಕಿದೆ. ಪ್ರಳಯಕ್ಕೆ ಮುನ್ನ ಎಚ್ಚರಾಗಬೇಕಾದ ಕಾಲವಿದು.

“ಪ್ರಭುತ್ವದ ಪಾತಕತನಗಳಿಗೆ ಕಿವುಡರಾಗಿ, ಮೂಕರಾಗಿ, ಕುರುಡರಾಗಿ ಬದುಕುವುದು ಈ ನೆಲಕ್ಕೆ , ಜನಸಮುದಾಯಕ್ಕೆ ಬಗೆಯುವ ದ್ರೋಹ.” ಹೀಗೆ ಬರೆದು ಮುಗಿಸಿ ಚಾರ್ಲಿ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ನೋಡುತ್ತಾ ಕುಳಿತೆ. ಒಂದು ವಿಷಾದದ ದನಿಯೊಂದಿಗೆ ‘ದಿ ಡಿಕ್ಟೇಟರ್’ ಮಾತನಾಡುತ್ತಾ ಹೋದ..

`ಕ್ಷಮಿಸಿ. ಚಕ್ರವರ್ತಿಯಾಗುವ ಬಯಕೆ ನನಗಿಲ್ಲ. ಅದು ನನ್ನ ಕೆಲಸವೂ ಅಲ್ಲ. ಯಾರ ಮೇಲೂ ಆಳ್ವಿಕೆ ನಡೆಸುವ ಅಥವಾ ಯಾರನ್ನೂ ನಿಗ್ರಹಿಸುವ ಬಯಕೆಯೂ ನನಗಿಲ್ಲ. ಯಹೂದ್ಯರು, ಮೂರ್ತಿ ಪೂಜಕರು, ಕರಿಯರು, ಬಿಳಿಯರು ? ಪ್ರತಿಯೊಬ್ಬರಿಗೂ ನನ್ನಿಂದಾದಷ್ಟೂ ಸಹಾಯ ಮಾಡಲೇಬೇಕೆಂಬುದೇ ನನ್ನ ಆಸೆ.

ಪರಸ್ಪರರಿಗೆ ಸಹಾಯ ಮಾಡಬೇಕೆಂಬುದೇ ನಮ್ಮೆಲ್ಲರೊಳಗಿನ ಬಯಕೆ. ಮಾನವನ ಮೂಲಗುಣವೇ ಅದು. ನಾವೆಲ್ಲರೂ ಪರಸ್ಪರರ ಸಂತೋಷಕ್ಕಾಗಿಯೇ ಬದುಕಲು ಬಯಸುತ್ತೇವೆಯೇ ಹೊರತು ಸಂಕಟವನ್ನುಂಟು ಮಾಡುವುದಕ್ಕಲ್ಲ. ನಾವು ಪರಸ್ಪರರನ್ನು ದ್ವೇಷಿಸಲು ಅಥವಾ ಹೀನಾಯಿಸಲು ಬಯಸುವುದಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳಿವೆ ಮತ್ತು ಈ ವಸುಂಧರೆಯು ಪ್ರತಿಯೊಬ್ಬರ ಅಗತ್ಯವನ್ನೂ ಪೂರೈಸಬಲ್ಲಷ್ಟು ಸಂಪದ್ಭರಿತಳೂ ಆಗಿದ್ದಾಳೆ.

ಸ್ವಾತಂತ್ರ್ಯ ಮತ್ತು ಸೌಂದರ್ಯವೇ ಬದುಕಿನ ಹಾದಿ. ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಸೆಯು ಮಾನವರ ಮೂಲ ಸತ್ತ್ವಗಳನ್ನು ವಿಷಪೂರಿತವಾಗಿಸಿದೆ, ಪ್ರಪಂಚದಾದ್ಯಂತ ದ್ವೇಷದ ಬೇಲಿ ನಿರ್ಮಿಸಿದೆ, ಸಂಕಟ ಮತ್ತು ರಕ್ತಪಾತಗಳಿಂದಾಗಿ ಒಂಟಿಕಾಲಿನ ಮೇಲೆ ನಿಲ್ಲುವಂತೆ ಮಾಡಿದೆ. ವೇಗವಾಗಿ ಸಾಗುವುದನ್ನು ಸಾಧಿಸಿರುವೆವಾದರೂ ನಮ್ಮನ್ನು ನಾವು ನಾಲ್ಕು ಗೋಡೆಗಳ ನಡುವೆ ಬಂಧಿಸಿಕೊಂಡಿದ್ದೇವೆ. ಸಮೃದ್ಧತೆಯನ್ನು ನೀಡಬಲ್ಲ ಯಂತ್ರಗಳು ನಮ್ಮೊಡನಿದ್ದರೂ ನಮ್ಮ ಬಯಕೆಗಳಿಗೆ ಅಂತ್ಯವೇ ಇಲ್ಲವಾಗಿದೆ.

ನಮ್ಮ ತಿಳಿವಳಿಕೆಯೇ ನಮ್ಮನ್ನು ಸಿನಿಕರನ್ನಾಗಿಯೂ ಮಾಡಿದೆ. ನಮ್ಮ ವ್ಯಾವಹಾರಿಕ ಬುದ್ಧಿಯು ನಮ್ಮನ್ನು ಒರಟರನ್ನಾಗಿಯೂ, ನಿಷ್ಕರುಣಿಗಳನ್ನಾಗಿಯೂ ಮಾಡಿದೆ. ನಾವು ಅತಿಯಾಗಿ ಯೋಚಿಸುತ್ತಿದ್ದೇವೆ ಮತ್ತು ನಮ್ಮ ಪರಾನುಭೂತಿ ಕನಿಷ್ಟ ಮಟ್ಟಕ್ಕಿಳಿದಿದೆ. ನಮಗೀಗ ಬೇಕಿರುವುದು ಮಾನವೀಯತೆಯೇ ಹೊರತು ಯಂತ್ರಗಳಲ್ಲ. ವ್ಯಾವಹಾರಿಕ ನಡವಳಿಕೆಗಿಂತಲೂ ಮಿಗಿಲಾಗಿ ನಮಗೀಗ ದಯಾಪರತೆ ಮತ್ತು ಸಭ್ಯತೆಯ ಅಗತ್ಯವಿದೆ. ಈ ಗುಣಗಳಿಲ್ಲದಿದ್ದರೆ ಬದುಕು ಹಿಂಸೆಯಲ್ಲಿಯೇ ಕಳೆದು ಹೋಗುತ್ತದೆ.

ವಾಯುಯಾನ ಮತ್ತು ರೇಡಿಯೋ ನಮ್ಮನ್ನು ಹೆಚ್ಚು ಸಮೀಪಕ್ಕೆ ತಂದಿವೆ. ಅಂದರೆ, ನಮ್ಮೆಲ್ಲರಲ್ಲಿಯೂ ಒಳ್ಳೆಯತನ, ವಿಶ್ವ ಭ್ರಾತೃತ್ವ ಮತ್ತು ನಮ್ಮೆಲ್ಲರ ಒಗ್ಗಟ್ಟು ಅರಳಲಿ, ಬೆಳಗಲಿ ಎಂಬುದು ತಮ್ಮ ಮೂಲ ಉದ್ದೇಶ ಎಂದು ಈ ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ, ಈ ಕ್ಷಣದಲ್ಲಿ ನನ್ನ ಧ್ವನಿಯು ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ತಲುಪುತ್ತಿದೆ, ಜನಗಳೇ ಮುಗ್ಧ ಜನರನ್ನು ಹಿಂಸಿಸಿ ಜೈಲಿಗಟ್ಟುವ ವ್ಯವಸ್ಥೆಗೆ ಬಲಿಯಾಗಿ ಹತಾಶರಾದ ಗಂಡಸರು, ಹೆಂಗಸರು ಮತ್ತು ಪುಟ್ಟ ಮಕ್ಕಳನ್ನೂ ಕೂಡ ನನ್ನೀ ಧ್ವನಿ ತಲುಪುತ್ತಿದೆ.

ನನ್ನ ಮಾತುಗಳನ್ನು ಕೇಳುತ್ತಿರುವ ನಿಮಗೆಲ್ಲ ನಾನು ಹೇಳುವುದಿಷ್ಟೆ: `ಹತಾಶೆಗೆ ಶರಣಾಗದಿರಿ’. ಮನುಷ್ಯತ್ವವು ಅರಳುವ ಬಗೆಯಿಂದ ಭೀತಿಗೊಳಗಾದ ಜನರ ಮನದೊಳಗಣ ಕಹಿ ದುರಾಸೆಯೇ ನಮ್ಮೆಲ್ಲರನ್ನೂ ಈಗ ಕವಿದಿರುವ ಸಂಕಟಕ್ಕೆ ಮೂಲ ಕಾರಣ. ನಿರಾಶರಾಗದಿರಿ. ಮನುಷ್ಯರ ದ್ವೇಷ ಕರಗುತ್ತದೆ, ಸರ್ವಾಧಿಕಾರ ನಶಿಸುತ್ತದೆ, ಜನತೆಯಿಂದ ಕಸಿದುಕೊಂಡ ಪ್ರಭುತ್ವವು ಜನತೆಗೇ ಮರಳಿ ದೊರೆಯುತ್ತದೆ. ಜನರಿಗೆ ಮರಣವಿರಬಹುದು, ಆದರೆ ಸ್ವಾತಂತ್ರ್ಯವು ಸದಾ ಅಮರ.

ಹೋರಾಳುಗಳೇ, ನಿಮ್ಮನ್ನು ಸಂಕಟಕ್ಕೆ, ಗುಲಾಮಗಿರಿಗೆ ತಳ್ಳುವ, (ಶಿಸ್ತಿನ ಹೆಸರಿನಲ್ಲಿ) ನಿಮ್ಮ ಬದುಕನ್ನು ಕಟ್ಟುಪಾಡಿಗೆ ಒಳಪಡಿಸುವ, ನೀವೇನು ಮಾಡಬೇಕು ಹಾಗೂ ಯೋಚಿಸಬೇಕು, ನಿಮ್ಮ ಭಾವನೆಗಳು ಏನಿರಬೇಕೆಂದು ನಿರ್ದೇಶಿಸುವ, ನಿಮ್ಮ ದೈಹಿಕ ಕಸರತ್ತುಗಳನ್ನು ಮತ್ತು ನೀವುಣ್ಣುವ ಅನ್ನವನ್ನೂ ನಿಯಂತ್ರಿಸುತ್ತ ನಿಮ್ಮನ್ನು ಪಶುಗಳೆಂದೆಣಿಸುವ, ಯುದ್ಧಗಳಲ್ಲಿ ಮಾತ್ರ ಬಳಸಲು ಯೋಗ್ಯವಾದ ತುಚ್ಛ ಜೀವಿಗಳು ನೀವು ಎಂದೆಣಿಸುವ ನಿಷ್ಕರುಣಿಗಳಿಗೆ ಶರಣಾಗದಿರಿ.

ಯಾಂತ್ರಿಕ ಮನಸ್ಸು ಮತ್ತು ಹೃದಯಗಳುಳ್ಳ ಆ ಅಸಹಜ ಮಾನವ-ಯಂತ್ರದಂಥ ಜೀವಿಗಳಿಗೆ ಶರಣಾಗದಿರಿ. ನೀವು ಯಂತ್ರಗಳಲ್ಲ. ನೀವು ಪಶುಗಳೂ ಅಲ್ಲ. ನೀವು ಮಾನವರು. ನಿಮ್ಮ ಹೃದಯಗಳೊಳಗೆ ಮಾನವೀಯ ಪ್ರೀತಿಯ ಸೆಲೆಯಿದೆ. ನಿಮ್ಮೊಳಗೆ ದ್ವೇಷ ಲವಲೇಶವೂ ಇಲ್ಲ. ಯಾರೊಳಗೆ ಪ್ರೀತಿಯ ಸೆಲೆಯಿಲ್ಲವೋ, ಯಾರು ಅಸಹಜ ಜೀವಿಗಳೋ ಅವರು ಮಾತ್ರ ದ್ವೇಷಿಸುವರು.

ಹೋರಾಳುಗಳೇ, ಗುಲಾಮಗಿರಿಗಾಗಿ ಹೋರಾಡದಿರಿ. ಸ್ವಾತಂತ್ರ್ಯಕ್ಕಾಗಿ ನಿಮ್ಮ ಹೋರಾಟವನ್ನು ಮೀಸಲಿಡಿ. ಸೈಂಟ್ ಲ್ಯೂಕನ (ಬೈಬಲಿನ) ಹದಿನೇಳನೆಯ ಅಧ್ಯಾಯದಲ್ಲಿ ದೇವರ ಸಾಮ್ರಾಜ್ಯವು ಮಾನವನೊಳಗೇ, ಕೇವಲ ಒಬ್ಬ ಮನುಷ್ಯನೊಳಗಲ್ಲ, ಇಡೀ ಮನುಕುಲದೊಳಗೇ, ಅಂದರೆ ನಿಮ್ಮೊಳಗೇ, ಹಬ್ಬಿದೆ ಎಂದು ಬರೆಯಲಾಗಿದೆ. ಓ ಜನತೆಯೇ, ನಿಮ್ಮಿಚ್ಛೆಗೆ ತಕ್ಕ ಯಂತ್ರಗಳನ್ನು ಸೃಷ್ಟಿಸುವ ಶಕ್ತಿ ನಿಮಗಿದೆ. ಅದೇ ರೀತಿ ನಿಮ್ಮಿಚ್ಛೆಯಂತೆ ಸುಖವಾಗಿ ಬದುಕುವುದೂ ನಿಮ್ಮಿಂದ ಸಾಧ್ಯ.

ನಿಮ್ಮಿಚ್ಛೆಯಂತೆ ಸ್ವತಂತ್ರವಾಗಿ ಬದುಕುವ, ಬದುಕಿನ ಸೌಂದರ್ಯ ಹೆಚ್ಚಿಸಿಕೊಳ್ಳುವ, ಬದುಕನ್ನು ಅದ್ಭುತ ಸಾಹಸಯಾನವನ್ನಾಗಿಸಿಕೊಳ್ಳುವ ಶಕ್ತಿಯೂ ನಿಮಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮೀ ಶಕ್ತಿಯನ್ನು ಬಳಸಿಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನಿಗೂ ಕೆಲಸದ ಅವಕಾಶ ಕಲ್ಪಿಸುವ, ಯುವಕರಿಗೆ ಭರವಸೆಯುಳ್ಳ ಭವಿಷ್ಯವನ್ನು ನೀಡುವ, ಹಿರಿಯರಿಗೆ ಬದುಕಿನಲ್ಲಿ ಸುರಕ್ಷತೆಯನ್ನು ಒದಗಿಸುವ ಹೊಸ ಸಭ್ಯ ಪ್ರಪಂಚವೊಂದರ ಸೃಷ್ಟಿಗಾಗಿ ನಾವೆಲ್ಲರೂ ಹೋರಾಡೋಣ.

ನಿಮಗೆ ಈ ಸುಂದರ ಬದುಕನ್ನು ನೀಡುವ ಭರವಸೆಯೊಡನೆಯೇ ನಿಷ್ಕರುಣಿಗಳು ಅಧಿಕಾರ ಹಿಡಿದಿದ್ದಾರೆ. ಆದರೆ ಅದೆಲ್ಲವೂ ಹಸಿ ಸುಳ್ಳು. ತಾವು ನೀಡಿದ ಯಾವ ಭರವಸೆಯನ್ನೂ ಅವರು ಈಡೇರಿಸುತ್ತಿಲ್ಲ. ಮುಂದೆಂದೂ ಕೂಡ ಈಡೇರಿಸಲಾರರು. ಸರ್ವಾಧಿಕಾರಿಗಳೆಲ್ಲರೂ ಜನರನ್ನು ಗುಲಾಮಗಿರಿಯಲ್ಲಿಟ್ಟು ತಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. (ನಮಗವರು ಅಂದು ನೀಡಿದ್ದ) ಭರವಸೆಗಳನ್ನು ಈಡೇರಿಸಿಕೊಳ್ಳಲು ನಾವೀಗ ಹೋರಾಡೋಣ.

ರಾಷ್ಟ್ರಗಳ ನಡುವಣ ಅಡೆತಡೆಗಳನ್ನು ಮೀರಿದ, ದುರಾಸೆ, ದ್ವೇಷ ಮತ್ತು ಅಸಹಿಷ್ಣತೆಗಳನ್ನು ದೂರವಿಟ್ಟ ಸ್ವತಂತ್ರ ಜಗತ್ತಿನ ನಿರ್ಮಾಣಕ್ಕಾಗಿ ನಾವು ಹೋರಾಡೋಣ. ವಿವೇಚನೆ ಮತ್ತು ವಿಜ್ಞಾನಗಳೊಡಗೂಡಿ ಮನುಕುಲದ ಏಳಿಗೆಗೆ ಕಾರಣವಾಗಬಲ್ಲ ಜಗತ್ತಿನ ನಿರ್ಮಾಣಕ್ಕಾಗಿ ಹೋರಾಡೋಣ. ಹೋರಾಳುಗಳೇ, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲರೂ ಒಂದಾಗೋಣ.

ಹನ್ನಾ, ನಿನಗೆ ನನ್ನ ಮಾತುಗಳು ಕೇಳಿಸುತ್ತಿವೆಯೇ? ನೀನೆಲ್ಲಿಯಾದರೂ ಇರು, ಆಗಸದತ್ತ ನೋಡು. ಮೋಡಗಳು ಕರಗುತ್ತಿವೆ! ಸೂರ್ಯನ ಕಿರಣಗಳು ಇಣುಕುತ್ತಿವೆ! ಕತ್ತಲಿನಿಂದ ಬೆಳಕಿನತ್ತ ನಾವೀಗ ಮುನ್ನಡೆಯುತ್ತಿದ್ದೇವೆ. ಜನರು ತಮ್ಮ ದ್ವೇಷ, ದುರಾಸೆ ಮತ್ತು ಪಶುತ್ವಗಳನ್ನು ಮೀರಿ ದಯಾಪರರಾಗಿರುವ ಹೊಸ ಪ್ರಪಂಚವೊಂದಕ್ಕೆ ನಾವೀಗ ಕಾಲಿಡುತ್ತಿದ್ದೇವೆ.

ತಲೆ ಎತ್ತಿ ನೋಡು ಹನ್ನಾ! ಮಾನವನ ಮೂಲ ಸತ್ತ್ವಕ್ಕೆ ರೆಕ್ಕೆಗಳು ಮೂಡಿವೆ. ಅಂತೂ ಅವನು ಹಾರಲಾರಂಭಿಸಿದ್ದಾನೆ. ಅವನೀಗ ಇಂದ್ರಚಾಪದೊಳಗೆ ಹಾರುತ್ತಿದ್ದಾನೆ. ನಿನಗೆ, ನನಗೆ, ನಮ್ಮೆಲ್ಲರಿಗೂ ಸೇರಿದ, ಭರವಸೆ ತುಂಬಿದ ಭವ್ಯ ಭವಿಷ್ಯದೊಳಗೆ ಮಾನವ ಹಾರುತ್ತಿದ್ದಾನೆ. ನೋಡು ಹನ್ನಾ ?? ತಲೆಯೆತ್ತಿ ನೋಡು! .

ನನ್ನ ಪ್ರಧಾನಿಯಿಂದ ಇಂತಹದ್ದೊಂದು ಸತ್ಯಸಂದ-ಸಂವೇದನಾ ಪೂರ್ಣ ಆತ್ಮನಿವೇದನೆಗೆ ದೇಶ ಕಾಯುತ್ತಿದೆ…..!

3 comments

Leave a Reply