ನಿನ್ನೆಗಳ ವೀಳ್ಯ..

ವಿನತೆ ಶರ್ಮ

ಕೈ ಚಿಪ್ಪಿನಲ್ಲಿ ಮೊಗವ ಇರುಕಿಸಿ ಕೂತಿದ್ದ ನಿನ್ನೆ ಪಕ್ಕಕ್ಕೆ ನಾಳೆ ಬಂತು

ಸಪ್ಪೆಮೋರೆ ಯಾಕೆ, ಬಾ ವೀಳ್ಯ ಹಾಕೋಣ ಅಂತು ನಗುಮುಖದಿ

ಅಲ್ಲಿ ನೋಡು ಚಿಟ್ಟೆ, ಇಲ್ಲಿ ನೋಡು ನೀಲಾಕಾಶ, ಸ್ವಲ್ಪ ಅರಳು ಎಂದ ನಾಳೆಗೆ

ಮೊಗ ತೆಗೆಯದೆ ಕೇಳಿತು ನಿನ್ನೆ, ವೀಳ್ಯದ ಪೆಟ್ಟಿಗೆಯಲ್ಲಿ ಏನಿದೆ?

ವೀಳ್ಯದ ನೆನವರಿಕೆಯಲಿ ತೇಲಿಹೋದ ಅರೆಮುಚ್ಚಿದ ಕಂಗಳ ನಾಳೆ

ಕನಸ ದನಿಯಲ್ಲಿ ಹೇಳಿತು, ಎಳೆ ಹಸಿರು ಎಲೆಗಿದೆ ತಿದ್ದಿ ತೀಡಿದ ಗೆರೆಗಳ

ನವಿರು ಮೈ ಹೊರಸೂಸುವ ಸುಗಂಧಕ್ಕೆ ಅರಳದ ಮೂಗುಂಟೇ

ಮೈಮೇಲೆ ಕುಶಲ ಕೈಬೆರಳು ಅಳ್ಳಕವಾಗಿ ಸೋಕಿಸಿದ ಪೇಲವ

ಗುಲಾಬಿ ಬಣ್ಣದ ಅದೇ ಸುವಾಸನೆಯ ಸುಣ್ಣದ ಮಿಂಚು ಸರಿಯೇ ಸೈ,

ಬಣ್ಣದ ಭಾಂಡ ತುಂಬಲು ಜೊತೆಗೆ ಗುಲಾಬಿ ಸಕ್ಕರೆಸಿಹಿ ಪಕಳೆ,

ಸುಗಂಧ ಸಿರಿತನವನು ಹೆಚ್ಚಿಸಲು ಬಂತು ಬೆಣ್ಣೆ ರುಚಿಯ ಅಡಿಕೆ

ಎಲ್ಲವೂ ಬೆರೆತು ಕೂತರೆ ನಾಲಿಗೆಗೇ ನಾಚಿಕೆ, ಜಾರಿಸುತ್ತದೆ

ವಾಹ್, ಒಂದರಲ್ಲೊಂದು ಬೆಸೆದು ಸ್ರವಿಸುವ ರುಚಿ ನಾಳೆಗಳಂತೆ.

ವೀಳ್ಯದ ರುಚಿ ಉಂಡಿದ್ದ ನಿನ್ನೆಗೆ ಗೊತ್ತಿದೆ ಅದರ ಮರ್ಮ, ಉಳಿಸಿಹೋದ

ಸವೆದ ಉಗಿದ ಗಟ್ಟಿ ಅಡಿಕೆ, ನಿಂತನೀರಾದ ಬಣ್ಣ ಕಳೆದ ಸುಣ್ಣ ,

ಗುಲಾಬಿಯಲಿ ಬೆರೆತ ಮತ್ತೇನೋ, ಬಾಡಿದ ಎಲೆಯ ಮೈಮೇಲೆ ಬರೆ

ನೀಲಿಮೋಡದ, ಹುಣ್ಣಿಮೆ ಅಮಾವಾಸ್ಯೆಯ ಬಟ್ಟಲು ಕಂಗಳ

ಬೆಚ್ಚುಬಿದ್ದ, ಕನಸು ಕಂಡ ಬಹುರೂಪಿ ಚಿಟ್ಟೆಗಳು

ನಾಳೆ ಕಂಡ ಕನಸಿನ ಕನ್ಯೆ ಸಿಹಿವೀಳ್ಯದ ಸ್ತಬ್ಧಚಿತ್ರವಲ್ಲ

ನಿನ್ನೆಯ ಕಣ್ಣು ಅದರದೇ ಕೈಗಳ ಮೇಲೆ ಕಂಡ ಚಿತ್ರದಲ್ಲಿ

ಸಾವಿರ ಮೈಮನ ಕಣ್ಣುಗಳ ಕನ್ನಡಿಚೂರುಗಳ ಗಂಟಲುಕಟ್ಟಿದ ದನಿ

ಅಲ್ಲಿ ಎಲ್ಲವೂ ಅವೇನೋ ಆಗಿವೆ, ಪ್ರತಿಫಲಿಸುವ ಎಲ್ಲಾ ಅಲ್ಲಿವೆ ನಿನ್ನೆನಾಳೆಗಳಂತೆ

ಮರಳುಗಾಡಿನ ಕಂದರಗಳಲಿ ನೀರ ಒರತೆಯ ಹುಡುಕುವ

ಬಿಸಿಲ ಕಿರಣ, ಬೆಳದಿಂಗಳು, ರಾತ್ರಿ ಕಪ್ಪು, ಕನ್ನಡಿ ಚೂರಿನಲಿ

ರೆಕ್ಕೆ ಬಡಿಯುವ ಬಣ್ಣವಿಲ್ಲದ ಒಂಟಿ ಪತಂಗ.

1 comment

Leave a Reply