ಗಾರುಡಿಗ ಅವನೊಬ್ಬನೇ!

ಗೀತಾ ಹೆಗ್ಡೆ ಕಲ್ಮನೆ 

ಚಿತ್ತ ಕದಡಿದ ನೀರು
ಕ್ಷಣಭಂಗುರವೆಂಬ ಬದುಕಲಿ
ಎತ್ತೆತ್ತ ನೋಡಿದರೂ
ಕಪ್ಪುಮೋಡದಾಕಾಶ
ಚದುರಿ ಹೋಗುವ ತುಂಡು
ಕೊನೆ ಕೊನೆಗೆ ಕಳಕೊಂಡ
ಈರ್ಷೆಗೆ ರಕ್ತ ಹೆಪ್ಪುಗಟ್ಟಲು
ಬೇಕು ಒಂದಿನಿತು ಸಾಂತ್ವನ
ಈವ ಗಾರುಡಿಗ ಅವನೊಬ್ಬನೇ!

ಜೊಲ್ಲು ಸುರಿಸುವ ಗದ್ದ
ಕಣ್ಣು ಮಿಟುಕಿಸುವ ಕೋಲು
ಮಿಂದೆದ್ದ ಭೂರಮೆ
ನೋಡಲತೀ ಚಂದ
ಒಳಗೊಳಗೆ ಕಿವಿ ಕನಕ ಕಿಂಡಿ
ಗೊತ್ತಿದ್ದವ ಹೊತ್ತೊಯ್ದಾನೆಂಬ
ಜಂಭದೊಡವೆ ಕಳುವಾಗಿ
ಜತನದ ಜೀವವಾಗುವುದು
ದಿಕ್ಕಿಲ್ಲದ ಪರದೇಶಿ.

ನಗುವ ಹೂವು ತಾವರೆ ಮುಡಿ
ನುಡಿದ ಚಂದಿರನ ಸೋಗು
ಒಂದಷ್ಟು ಬಡಿವಾರ ಬಿನ್ನಾಣ
ಕಿರು ಬೆರಳ ತುದಿಯಲಾಡಿಸಿದ
ದಿನಗಳು ಅದಾಗಲಯೋಮಯ
ಬಡಿವಾರ ಬಿಟ್ಟು ನಿಡುಸುಯ್ಯೆ
ತಿರುಗಿ ಬಾರದ ದಿನವೊಕ್ಕೆ
ಹಿಡಿದು ತರಲಾದೀತೆ ಜನ್ಮ
ಬಂದಿದ್ದನುಭವಿಸಲು ದಿನಗಣನೆ.

ಜೀವ ತೊಯ್ಯುವ ಹಾದಿ
ತುಳಿದ ಮೇಲಿನ್ನೇನು
ಶಿರ ಬಾಗಿ ಮುಡಿಯೀಯೊಡೆ
ಆಗುವುದೇ ಹೊನ್ನು
ಆರ ಮನೆ ಬಾಗಿನವನ
ಮನೆ ಹೊಸಿಲ ತುಳಿಯದು
ನೀಗಿದನುಬಂಧ ಕಿಂಚಿತ್ತೂ
ಮರೆ ಮಾಚಿಯಳಿಯದು
ನೀನೇ ಉಣ್ಣೆಂದ ಶಿವನು!

Leave a Reply