ಕವಿತೆ ಓದುವಾಗ ಸಾಲು ಸಾಲು ಚಿತ್ರಗಳು ಮೂಡುತ್ತವೆ..

ಬೆಂಗಳೂರಿನ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿರುವ ಈ ಹುಡುಗನ ಸಾಹಿತ್ಯಾಸಕ್ತಿ ನನಗೆ ಆಶ್ಚರ್ಯ ಮೂಡಿಸಿದೆ. ತಾನು ಓದಲಿಚ್ಛಿಸುವ ಪುಸ್ತಕವನ್ನು ಕೊಂಡೇ ಓದಬೇಕೆಂದು ನಿಯಮ ಹಾಕಿಕೊಂಡಿರುವುದಾಗಿ ಹಟ ಹಿಡಿದು, ದುಡ್ಡು ಕಟ್ಟಿ, ನನ್ನಿಂದ ಪುಸ್ತಕವನ್ನು ತರಿಸಿಕೊಂಡಿದ್ದಾನೆ.

ನಾನೇನೂ ಹೇಳದಿದ್ದರೂ ಓದಿ ಸ್ವ ಇಚ್ಛೆಯಿಂದ ಪ್ರಾಮಾಣಿಕವಾಗಿ ತನಗೆ ನನ್ನ ಪುಸ್ತಕ ಕೊಟ್ಟ ಅನುಭವವನ್ನು, ಅನಿಸಿಕೆಯನ್ನು ಹಂಚಿಕೊಂಡಿದ್ದಾನೆ. ಎಷ್ಟು ಪ್ರಬುದ್ಧವಾಗಿ ಬರೆದಿದ್ದೀಯ ಮಗಾ.. ತುಂಬಾ ಖುಷಿಯಾಯ್ತು. Thank you so much. –ಉಮಾ ಮುಕುಂದ್

ದಾದಾಪೀರ್  ಜೈಮನ್

ಉಮಾ ಮುಕುಂದರ ‘ಕಡೆ ನಾಲ್ಕು ಸಾಲು’ ಪುಸ್ತಕ ಓದಿದೆ. ಪುಸ್ತಕದ ನಾಡಿಮಿಡಿತದಂತಿರುವ ಹೆಚ್. ಎಸ್. ರಾಘವೇಂದ್ರರಾವ್ ಅವರ  ಮುನ್ನುಡಿ ಮತ್ತು ವೈದೇಹಿಯವರ ಬೆನ್ನುಡಿಯಾಚೆಗೆ ನಾನೇನು ಬರೆಯಲು ಸಾಧ್ಯ ಅಥವಾ ಬರೆಯಲೇ ಬೇಕೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾರದೆ ಬರೆಯಬಾರದೆಂದು ನಿರ್ಧರಿಸುತ್ತಿರುವಾಗಲೇ ಹೊಳೆದ ಉತ್ತರದಿಂದ ಪ್ರೇರಿತನಾಗಿ ಬರೆಯುತ್ತಿದ್ದೇನೆ. ಆ ಉತ್ತರ ಇಷ್ಟೇ; ಇಪ್ಪತ್ತೈದರ ಹರಯದ ಈಗಷ್ಟೇ ಕವಿತೆಗಳ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇನೆಂದು ಅನ್ನಿಸುವ ನನ್ನ ಮೇಲೆ ಪುಸ್ತಕ ಬೀರಿದ ಪ್ರಭಾವದ ಕುರಿತು ಮತ್ತು ಪುಸ್ತಕದಲ್ಲಿ ನನಗಿಷ್ಟವಾದ ಕವಿತೆಗಳ ದಾಖಲು ಮಾಡುವ,  ಆ ಮೂಲಕ ಪುಸ್ತಕಕ್ಕೆ ಸ್ಪಂದಿಸುವ ಉಮೇದಿನಿಂದ ಬರೆಯುತ್ತಿರುವೆ.

ನಿತ್ಯದ  ಸಂತೆಯಲ್ಲಿ ಕಳೆದು ಹೋದ ಅತಿ ಎಚ್ಚರದ ಸೂಕ್ಷ್ಮ,  ಸಂವೇದನಾಶೀಲ ಹೃದಯದ ಒಬ್ಬ ಅಪ್ಪಟ ಮನುಷ್ಯ ತನಗೆ ತಾನೇ ಆಡಿಕೊಂಡ ಮಾತುಗಳೇ ಇಲ್ಲಿ ಸಹಜವಾಗಿ ಕವಿತೆಗಳಾಗಿವೆ. ಈ ಪ್ರಯಾಣದಲ್ಲಿ ಕಾಳಜಿ, ಕಿವಿಮಾತು, ಸಾಮಾಜಿಕ ಆಯಾಮ, ಆಧ್ಯಾತ್ಮಿಕತೆ, ಸಾತ್ವಿಕ ಪ್ರತಿಭಟನೆ, ಸ್ವ ವಿಮರ್ಶೆ, ಮನುಜ ಕುಲದ ಒಳಿತಿನ ಕುರಿತ ಏಕಾಂತದಲ್ಲಿನ ಪ್ರಾರ್ಥನೆ ಎಲ್ಲವೂ ಆನುಷಂಗಿಕವಾಗಿ ಸೇರಿಕೊಂಡಿವೆ.  ಇಲ್ಲಿನ ಕವಿತೆಗಳು  ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅನಾಯಾಸವಾಗಿ ಓದಿಸಿಕೊಳ್ಳುತ್ತವೆ. ಮುಖ್ಯವೆಂದರೆ ಓದುವವರಲ್ಲಿ  ಮೊದಲಿಂದ ಕೊನೆಯವರೆಗೂ ಕಥೆ ಕೇಳುವ ಮಕ್ಕಳ ಕುತೂಹಲವನ್ನು ಉಳಿಸುತ್ತವೆ. ಇಲ್ಲಿನ ಎಷ್ಟೋ ಕವಿತೆಗಳಿಗೆ ಓದಿದಾದ ಮೇಲೆ ಬಹಳಷ್ಟು ಹೊತ್ತು  ಕಾಡುವ ಗುಣವೂ ಇವೆ.

ಹಿತ್ತಲು, ಕಾಫಿ ಗೀಫಿ, ಪಯಣ ಇತ್ಯಾದಿ ಕವಿತೆಗಳಲ್ಲಿ ಮನುಷ್ಯ ಸಾಂಗತ್ಯದ ಕುರಿತಾದ ಕವಿತೆಗಳಿವೆ.

ವಸಂತಗಳುರುಳಿ…

ಕೂದಲು ನೆರೆತು

ಮಂಡಿ ಸವೆದರೂ

ನಡೆಯುತ್ತಿದ್ದೇವೆ

ನಿಂತರೂ ಆಗಾಗ ಜೊತೆಗೆ (ಪಯಣ)

ನನ್ನನ್ನು ಸೆಳೆದ ಕವಿತೆಗಳಲ್ಲಿ ‘ದಾರಿ’ ಕೂಡ ಒಂದು. ಮಾನವನ ನೋವು ಕೇವಲ ನೋಟ, ಸ್ಪರ್ಶದಿಂದ ಮಾತ್ರ ಅರ್ಥಮಾಡಿಕೊಂಡು ಬಿಡಬಲ್ಲ ಅಂತಃಕರಣದಿಂದಾಗಿ ಅದೊಂದು ಅಪ್ಪಟ  ಆಧ್ಯಾತ್ಮದ ಘಳಿಗೆಯೂ ಆಗಿಬಿಡುತ್ತದೆ. ಆ ಜಾದೂ ಈ ಕವಿತೆಯಲ್ಲಿದೆ.

ಬಾಗಿ ನೆಲದ ಮೇಲೆ

ಚೆಲ್ಲಾಡಿದ್ದ ಕಾಸ

ಒಂದೊಂದನ್ನೇ ಹೆಕ್ಕಿ

ಮೆಲ್ಲನೆ ಅವಳ ಹೆಗಲು ಬಳಸಿ

ಅಂಗೈಯಲ್ಲಿಟ್ಟಾಗ

ಥಟ್ಟನೆ ನನ್ನ ಕೈಯನ್ನು

ಗಟ್ಟಿ ಹಿಡಿಯುತ್ತಾಳೆ

ಇಬ್ಬರ ಉಸಿರೂ ಬೆರೆತು

ನಿಟ್ಟುಸಿರಾಗುತ್ತದೆ

ಮೆಲ್ಲನೆ ಕೈ ಸಡಿಲಿಸಿ

ಮನೆ ದಾರಿ ಹಿಡಿದಾಗ

ಹೆಜ್ಜೆಗಳು ವಜ್ಜೆಯಾಗುತ್ತವೆ

ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ  ತಾಕಲಾಟಗಳು  ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ.

ಆರ್ದತೆ ಆರದಂತೆ ಸಿಡಿದೇಳಬೇಕು

ಸಂಬಂಧಗಳ ಕಳಚಿಕೊಳ್ಳದೆ

ಬಂಧ ಬಿಡಿಸಿಕೊಳ್ಳಬೇಕು

ಹೇಗೆ? ಹೇಗೆ?      [ಬಯಕೆ]

ಕಾಳಜಿ, ಅನುಕಂಪ, ಸಾಮಾಜಿಕ ಸಮಸ್ಯೆಗಳಿಗೆ ತಣ್ಣನೆಯ ಪ್ರತಿಭಟನೆ ‘ಅಳಲು’ ‘ಹಕ್ಕಿ ಮತ್ತು ಹುಡುಗ’ ‘ಹಸಿವು’ ‘ಪಾದಕಾರಣ’ ‘ನಾಗರ ಪಂಚಮಿ’ ‘ಸೊಪ್ಪಿನವಳು’ ಇತ್ಯಾದಿ ಕವನಗಳಲ್ಲಿವೆ.

ನೂರು ಹೆರಿಗೆಯ ನೋವುಂಡು

ಕಣ್ಣು ಮುಚ್ಚಿದ ಕಂದಮ್ಮಗಳೇ

ಸಾಧ್ಯವಾದರೆ ಕ್ಷಮಿಸಿ.     [ಅಳಲು]

ಈ ಸಂಕಲನದ ಅತ್ಯುತ್ತಮವಾದ ಕವಿತೆಯೊಂದನ್ನು ಆರಿಸು ಎಂದರೆ ನನ್ನ ಮೊದಲ ಆಯ್ಕೆ ‘ಇರಲಿ ಎಲ್ಲ ಹೀಗೆ ಹೀಗೆ’. ಇದು ಸದಾ ನೆನಪಿನಲ್ಲುಳಿಯುವ ಕವಿತೆ. ಮಕ್ಕಳಾಟದ ಹಿನ್ನಲೆಯಲ್ಲಿ ಬರುವ ಕವಿತೆ;

ಗೋದಲಿಯಾಗಿವೆ ರಟ್ಟಿನ ಪೆಟ್ಟಿಗೆ

ಹುಲ್ಲ ತೊಟ್ಟಿಲಲಿ ಶಿಶು ಏಸು

ಇಟ್ಟಿಗೆ ಜೋಡಿಸಿ ಮಸೀದಿ ಕಟ್ಟಿವೆ

ಹಾಡುತ್ತಿವೆ ‘ಅಲ್ಲಾ… ಹು… ಅಕ್ಬರ್’

……

ಕತ್ತಲಾವರಿಸುತಿದೆ

ಕೇಳುತಿದೆ ತಾಯಂದಿರ ಕೂಗು

‘ರೀತು… ನೀತು’/ ‘ರಶೀದ್… ಜೂಡಿತ್’/

ಬಿಟ್ಟೋಡಿವೆ ಎಲ್ಲ ಹಾಗೆ ಹಾಗೆ…

ಗುಡಿಸಬೇಕೆನಿಸುವುದಿಲ್ಲ/

ಇರಲಿ ಇಳೆಯೆಲ್ಲ ಹೀಗೆ ಹೀಗೆ…

ಸಂಕಲನದ ನನಗೆ ಆಪ್ತ ಮತ್ತೊಂದು ಕವಿತೆ ಎಂದರೆ ‘ಕಡೆ ನಾಲ್ಕು ಸಾಲು’.  ಕರೆಗಂಟೆಯೊತ್ತುವ  ಬಾಗಿಲಾಚೆಗಿನ  ಅತಿಥಿಗಳನ್ನು ಕಡೆಗಣಿಸಿ ಕಥೆ ಮುಗಿಸಿದ ಮೇಲೆ ಬಾಗಿಲು ತೆರೆದಾಗ ಯಾರು ಇಲ್ಲ. ಮರಳಿ ಬಂದು ಕಥೆ ನೋಡಿದಾಗ ಕಡೆಯ ನಾಲ್ಕು ಸಾಲು ಕೂಡ ಮಾಯ. ಬದುಕುವುದೇ ಮುಖ್ಯ ಎಂದು ಹೇಳುವ ಕವಿತೆ ಇದು. ತಂತ್ರದ ದೃಷ್ಟಿಯಿಂದ ‘ಆ… ನಂತರ’ ಥ್ರಿಲ್ಲಿಂಗ್ ಅನುಭವ ನೀಡುತ್ತದೆ.

ಪ್ರಾಥಮಿಕವಾಗಿ ಉಮಾ ಮುಕುಂದರದ್ದು ಚಿತ್ರಪ್ರಧಾನವಾದ ಕವಿತೆಗಳು. ಕವಿತೆ ಓದುವಾಗ ಸಾಲು ಸಾಲು ಚಿತ್ರಗಳು ಮೂಡುತ್ತವೆ ಮತ್ತು ಸೀದಾ ನಮ್ಮ ಎದೆಗಿಳಿದು ಕಾಡುತ್ತವೆ.  ವೈದೇಹಿ ಹೇಳಿರುವಂತೆ ನಿಮ್ಮಲ್ಲಿ ಕತೆಗಾತಿಯ ಎಲ್ಲ ಗುಣಗಳೂ ಇವೆ. ನಿಮ್ಮಿಂದ ಆದಷ್ಟು ಬೇಗ ಕವಿತೆಗಳೊಟ್ಟಿಗೆ ಕಥೆಗಳೂ ಹೊರಬರಲಿ ಎಂದು ಆಶಿಸುವೆ. ಕಾಡುವ ಕವಿತೆಗಳನ್ನು ಕೊಟ್ಟ ನಿಮಗೆ ಧನ್ಯವಾದಗಳು.

Leave a Reply