ಡಸ್ಟ್ ಬಿನ್ ಗಳ ಉಭಯಕುಶಲೋಪರಿ…

ಒಂದು ವೇಳೆ ಆ ಪೌರ ಕಾರ್ಮಿಕ ಮಹಿಳೆಯ ಕಣ್ತಪ್ಪಿಸಿ ಈ ಅಚಾತುರ್ಯ ನಡೆಯದೇ ಹೋಗಿದ್ದರೆ ಇಂಥದ್ದೊಂದು ಅಪರೂಪದ ಸಂಗತಿ ಜರುಗುತ್ತಿರಲಿಲ್ಲವೇನೋ …

ಬೀದಿಯ ಪ್ರತಿಯೊಂದು ಮನೆಯ ಮುಂದಿರುವ ಡಸ್ಟ್ ಬಿನ್ ಗಳಿಂದ ಕಸವನ್ನು ತಳ್ಳುಗಾಡಿಗೆ ಹಾಕಿಕೊಂಡು ಬಂದು ಆನಂತರ ಟೋಲ್ ಗೇಟ್ ಬಳಿಯ ಕಸದ ರಾಶಿಗೆ ಅದನ್ನು ಸುರಿಯುವುದು, ಅಲ್ಲಿಂದ ಎಲ್ಲಾ ಬೀದಿಗಳಿಂದ ಬಂದ ಕಸವನ್ನು ಲಾರಿಗಳಲ್ಲಿ ನಗರದ ಹೊರವಲಯದ ನಿಗದಿತ ಪ್ರದೇಶಕ್ಕೆ ಕೊಂಡೊಯ್ದು ಹಾಕುವುದು ರೊಟೀನು.

ಆ ದಿನ, ಆ ಮಹಿಳೆ ಕಸದ ಜೊತೆ ಎರಡು ಮನೆಯ ಡಸ್ಟ್ ಬಿನ್ ಗಳನ್ನು ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದು ಕಸವನ್ನು ಲಾರಿಗಳಿಗೆ ವಿಲೇವಾರಿ ಮಾಡುವಾಗ ತಿಳಿದು ಬಂತು. ಆಗ ಆ ಎರಡೂ ಡಸ್ಟ್ ಬಿನ್ ಗಳನ್ನು ಪಕ್ಕಕ್ಕಿಟ್ಟು ಕಸವನ್ನು ಲಾರಿಗೆ ಹೇರಿಯಾದ ನಂತರ ಅಲ್ಲೆ ಇದ್ದ ಪೆಟ್ಟಿಗೆ ಅಂಗಡಿಯವನಿಗೆ ಅವುಗಳನ್ನು ಜೋಪಾನ ನೋಡಿಕೊಳ್ಳುವಂತೆಯೂ, ನಾಳೆ ಆಕೆ ಬಂದಾಗ ಆ ಡಸ್ಟ್ ಬಿನ್ ಗಳನ್ನು ವಾಪಸ್ಸು ತೆಗೆದುಕೊಂಡೊಯ್ಯಲು ಹೇಳುವಂತೆಯೂ ಅವನಿಗೆ ತಿಳಿಸಲಾಯಿತು. ಅದಕ್ಕೆ ಅಂಗಡಿಯವನು; ‘ಇದು ಪೆಟ್ಟಿಗೆ ಅಂಗಡಿ. ನನ್ನ ಬಿಟ್ಟು ಇನ್ನೊಬ್ಬರು ಕೂತ್ಕೊಳ್ಳೋಕು ಇಲ್ಲಿ ಜಾಗ ಇಲ್ಲ. ಹೊರಗೆ ಇಟ್ಟಿರಿ’ ಎಂದ. ಆದರೆ ರಾತ್ರಿ ಮನೆಗೆ ಹೋಗುವಾಗ ಏನನ್ನಿಸಿತೋ ಏನೋ ಡಸ್ಟ್ ಬಿನ್ ಗಳನ್ನು ತನ್ನ ಅಂಗಡಿಯೊಳಗೆ ಇಟ್ಟು ಲಾಕ್ ಮಾಡಿಕೊಂಡು ಹೋದ.

ರಾತ್ರಿ ಪೆಟ್ಟಿಗೆ ಅಂಗಡಿಯೊಳಗೆ ತಂಗಿದ ಡಸ್ಟ್ ಬಿನ್ ಗಳ ನಡುವೆ ಹೀಗೊಂದು ಸಂಭಾಷಣೆ ನಡೆಯಿತು :

ಡಸ್ಟ್ ಬಿನ್ ೧ : ನಿಮ್ಮ ಮನೆ ನಂಬರ್ ಏನು ?

ಡಸ್ಟ್ ಬಿನ್ ೨ : # 122

ಡಸ್ಟ್ ಬಿನ್ ೧ : ಹೌದು. ನಿನ್ನನ್ನ ನಾನು ನೋಡಿದ್ದೇನೆ.‌ ಅದಕ್ಕೆ ಕೇಳಿದೆ.

ಡಸ್ಟ್ ಬಿನ್ ೨ : ನನಗೂ ನಿನ್ನನ್ನು ನೋಡಿದ ನೆನಪಿದೆ.ಡೋರ್ ನಂಬರ್ ಏನು ನಿಂದು ?

ಡಸ್ಟ್ ಬಿನ್ ೧ : # 138

ಡಸ್ಟ್ ಬಿನ್ ೨ : ಹಾಂ . ಅದಕ್ಕೆ ಕೇಳಿದೆ. ನಮ್ಮ ಎದುರಿನ ಮನೆಯವನೇ ನೀನು … ಸಾಕಷ್ಟು ಬಾರಿ ನೋಡಿದ್ದೆ ನಿನ್ನ.

ಡಸ್ಟ್ ಬಿನ್ ೧ : ಹೌದು. ನನಗೂ ನಿನ್ನ ನೋಡಿದ ನೆನಪಿದೆ.

ಡಸ್ಟ್ ಬಿನ್ ೨ : ಪ್ರತಿ‌ದಿನ ರಸ್ತೆಯ ಆ ಕಡೆ ನೀನು, ಈ ಕಡೆ ನಾನು ಇರ್ತಿದ್ವಿ ಆದರೂ ಮಾತಾಡೋಕೆ ಆಗ್ತಿರ್ಲಿಲ್ಲ. ಇವತ್ತು ಇಲ್ಲಿ ಈ ಅಂಗಡಿಯೊಳಗೆ ಮಾತಾಡೋಕೆ ಛಾನ್ಸು ಸಿಕ್ತು ನೋಡು.

ಡಸ್ಟ್ ಬಿನ್ ೧ : ಅಲ್ವಾ ? ಅಂದಹಾಗೆ ಪ್ರತಿ‌ ದಿನ ನಿನ್ನೊಳಗೆ ಇರೋ ಕಸ ಕಡಿಮೆ ಇರುತ್ತಲ್ಲ ಯಾಕೆ ? ಎಲ್ಲೋ ಒಂದೆರೆಡು ಪ್ಲಾಸ್ಟಿಕ್ ಕವರ್ ಗಳು, ತರಕಾರಿಗಳ ಸಿಪ್ಪೆ , ಹರಿದ ಒಳ ಉಡುಪುಗಳು, ತುಂಡಾದ ಬಟ್ಟೆಯ ಚೂರು, ಕರಿಬೇವಿನ ಸೊಪ್ಪಿನ ಕಡ್ಡಿ ಇವಿಷ್ಟೇ ನಾನು ನೋಡಿರೋದು. ಯಾಕೆ ನಿಮ್ಮನೇಲಿ ಬೇರೆ ಥರದ ವಸ್ತುಗಳನ್ನು ಬಳಸೋದಿಲ್ವ ?

ಡಸ್ಟ್ ಬಿನ್ ೧ : ಹಾಗೇನಿಲ್ಲ, ಬೇರೆ ಏನೇನೋ ಬಳಸ್ತಾರೆ. ಆದರೆ ಅವ್ಯಾವು ಕಸದ ಬುಟ್ಟಿಗೆ ಬರೋಲ್ಲ. ನಿಮ್ ಮನೆ ಥರ ಮೆಟಲ್ ಟಿನ್ ಗಳು, ಹಾಫ್ ಯೂಸ್ಡ್ ಬೀವರೇಜ್ ಬಾಟಲ್ಸ್, ನ್ಯಾಪ್ ಕಿನ್ಸ್ , ಎನರ್ಜಿ ಡ್ರಿಂಕ್ ಬಾಟಲ್ ಗಳು , ಪಾಷ್ ಗಾರ್ಮೆಂಟ್ಸ್ ಗಳ ಹ್ಯಾಂಡ್ ಬ್ಯಾಗ್ ಗಳು , ಕಾಂಡಿಮೆಂಟ್ಸ್ ಮತ್ತು ಫುಡ್ ಡೆಲಿವರಿ ಕವರ್ ಗಳು ಇನ್ನೂ ನನಗೆ ಅರ್ಥವಾಗದ ಎಷ್ಟೋ ವಸ್ತಗಳನ್ನ ನಿಮ್ಮ ಓನರ್ ಗಾಡಿಗೆ ಸುರಿಯೋದನ್ನ ನೋಡಿದ್ದೀನಿ. ನಿನಗೇ ಇಷ್ಟು ಹಾಕ್ತಾರೆ ಅಂದ್ರೆ ಇನ್ನು ಒಳಗೆ ಏನೇನೆಲ್ಲ ಬಳಸಬಹುದು ನಿಮ್ಮ ಮನೆಯವ್ರು ?

ಡಸ್ಟ್ ಬಿನ್ ೧ : ಏನೋ ಗೊತ್ತಿಲ್ಲ . ಆದರೆ ಕಡಿಮೆ ಬಳಸಿ ಹೆಚ್ಚು ಕಸ ಹಾಕ್ತಾರೆ ಅಂತ ನನಗೆ ಅನ್ಸುತ್ತೆ… ಆದರೆ ನಿಮ್ಮನೇಲಿ ಹೆಚ್ಚು ಬಳಸಿ ಕಡಿಮೆ ಕಸ ಹಾಕ್ತಾರೇನೋ … ಅದಿರ್ಲಿ ದಿನ ಸಂಜೆ ಮತ್ತು ರಾತ್ರಿ ನಿಮ್ಮನೇಲಿದಾನಲ್ಲ ಆ ಹುಡುಗ ಯಾಕೆ ಟೆರೇಸ್ ಮೇಲೆ ಬಂದು ನಮ್ಮ ಮನೆ ಬಾಲ್ಕನಿ ಕಡೆಗೆ ನೋಡ್ತಿರ್ತಾನೆ ?

ಡಸ್ಟ್ ಬಿನ್ ೨ : ನಿನ್ಗೆ ಗೊತ್ತಿಲ್ವಾ ? ಅವನು ನಿಮ್ಮನೇಲಿರೋ‌ ಹುಡುಗಿನ ಪ್ರೀತಿಸ್ತಿದಾನೆ. ಅದಕ್ಕೆ ಅಲ್ಲಿ ನಿಂತ್ಕೊಂಡ್ ನೋಡ್ತಾನೆ. ಅವಳೂ ಕೂಡ ನಗ್ತಾಳೆ . ಆಗಾಗ ಅವರಿಬ್ಬರು ಜೋರಾಗಿ ನಗ್ತಾರೆ … ಒಟ್ಟಿಗೆ ಆಕಾಶ ನೋಡ್ತಾರೆ …

ಡಸ್ಟ್ ಬಿನ್ ೧. : ಅವನು ಟೆರೇಸ್ ನಲ್ಲಿ ನಿಂತು ಯಾವುದೋ ಪುಸ್ತಕ ಓದುವಂತೆ ನಟಿಸುತ್ತಾನೆ.

ಡಸ್ಟ್ ಬಿನ್ ೨ : ಮತ್ತೆ ಅವಳು ಅವನೆಡೆಗೆ ಕಿರುನಗೆ ಬೀರುತ್ತಾಳೆ… ಯಾವುದೋ ಪ್ರೇಮಗೀತೆಯೊಂದಕ್ಕೆ ಧ್ವನಿಗೂಡಿಸುತ್ತಾಳೆ…

ಡಸ್ಟ್ ಬಿನ್ ೧ : ಅವನು ತಾನೇ ಸಂಗೀತ ನುಡಿಸಿದವನಂತೆ ಹಿಗ್ಗುತ್ತಾನೆ…

ಡಸ್ಟ್ ಬಿನ್ ೨ : ಅವಳೇ ಹಾಡಾದಂತೆ … ಹಾಡುತ್ತಾ ಮನೆಯೊಳಗೆ ಓಡುತ್ತಾಳೆ… ಬಾಲ್ಕನಿಯಿಂದ ಒಳಗೆಷ್ಟು ಮಹಾ ಹೆಜ್ಜೆಗಳು !

ಡಸ್ಟ್ ಬಿನ್ ೧ : ಇನ್ನು ಅವನೋ, ನಕ್ಷತ್ರಗಳನ್ನು ಎಣಿಸುತ್ತಲೇ ಟೆರೇಸ್ ಮೇಲಿಂದ ಒಂದೊಂದೇ ಮೆಟ್ಟಿಲು ಕೆಳಗಿಳಿಯುತ್ತಾನೆ …

ಡಸ್ಟ್ ಬಿನ್ ೨ : ಹೌದು, ಅವಳು ಮನೆಯೊಳಗೆ ಸೇರುತ್ತಾಳೆ…

ಡಸ್ಟ್ ಬಿನ್ ೧ : ಅವನು ಮೆಟ್ಟಿಲುಗಳಲ್ಲಿ ಕೆಳಗಿಳಿಯುತ್ತಾ ಹೋಗುತ್ತಾನೆ …‌

ಡಸ್ಟ್ ಬಿನ್ ೨ : ಮರು ದಿನ ಮತ್ತೆ ಇದೇ ಮುಂದುವರಿಯುತ್ತದೆ…

ಡಸ್ಟ್ ಬಿನ್ ೧ : ಇಲ್ಲ. ಮುಂದುವರೆಯುತ್ತಿಲ್ಲ ….ಎಷ್ಟೋ ದಿನಗಳಾಯ್ತು ಅದು ಅಲ್ಲೇ ನಿಂತಿದೆ… ನಾವು ಅದನ್ನು ಹೇಗಾದರೂ ಮಾಡಿ ಮುಂದುವರೆಯುವಂತೆ ಮಾಡಬೇಕು .

ಡಸ್ಟ್ ಬಿನ್ ೨ : ಅದ್ಹೇಗೆ ? ನನಗೂ ತುಂಬಾ ಸಲ ಅನ್ನಿಸಿದೆ ಹೇಗಾದರೂ ಮಾಡಿ ಅವರನ್ನು ಸೇರಿಸಬೇಕೆಂದು. ನಿನ್ನ ಬಳಿ ಏನಾದರೂ ಉಪಾಯ ಇದೆಯಾ ?

ಡಸ್ಟ್ ಬಿನ್ ೧ : ಖಂಡಿತಾ ಇದೆ… ಒಂದು ಕೆಲಸ ಮಾಡೋಣ ನಾಳೆ ನೀನು ನಮ್ಮ ಮನೆಗೆ ಹೋಗಿ ಅವನು ಎಣಿಸುವ ಆ ನಕ್ಷತ್ರಗಳ ಬಗ್ಗೆ ಅವಳಿಗೆ ತಿಳಿಸು… ನಾನು ನಿಮ್ಮ ಮನೆಗೆ ಹೋಗಿ, ಅವಳು ತಲೆದೂಗುವ ಪ್ರೇಮ ಗೀತೆಗಳ ಬಗ್ಗೆ ಅವನಿಗೆ ಹೇಳುತ್ತೇನೆ …

ಡಸ್ಟ್ ಬಿನ್ ೨ : ಓಹ್ ! ಎಂಥ ಒಳ್ಳೆಯ ಯೋಚನೆ ನಿನ್ನದು . ನನಗಿದಕ್ಕೆ‌ ಒಪ್ಪಿಗೆ ಇದೆ . ಹಾಗಾದರೆ ನಾಳೆ ನಾವಿಬ್ಬರೂ ಅದಲು ಬದಲಾಗಿ ಮನೆಗಳನ್ನು ಹೊಕ್ಕು ನಮ್ಮ ಕೆಲಸ ಮಾಡೋಣ …

* * * *

ಹೀಗೆ ಡಸ್ಟ್ ಬಿನ್ ಗಳು ತೀರ್ಮಾನಿಸಿದ್ದೇನೋ ನಿಜ . ಆದರೆ ಅವುಗಳ ಈ ಸಾಹಸ ಯಶಸ್ವಿಯಾಗಲು ನಾಳೆ ಮತ್ತೊಂದು ಯಡವಟ್ಟಾಗಬೇಕು . ಆ ಮಹಿಳೆ ಡಸ್ಟ್ ಬಿನ್ ಗಳನ್ನು ಅದಲು ಬದಲು ಮನೆಗಳ ಮುಂದೆ ಇಟ್ಟು ಬರಬೇಕು. ಆಗ ಅವುಗಳ ಕಾರ್ಯಾಚರಣೆ ಸಾಕಾರಗೊಳ್ಳಬಹುದು. ಕತೆಯ ಓಟಕ್ಕಾಗಿ ಅದು ಹಾಗೇ ಆಯಿತು ಅಂದುಕೊಳ್ಳೋಣ.

ಆದರೆ ?

ಎಷ್ಟೋ ವರ್ಷಗಳ ನಂತರ ಆ ಡಸ್ಟ್ ಬಿನ್ ಗಳ ನಡುವೆ ನಡೆದ ಈ ಕಾಲ್ಪನಿಕ ಸಂಭಾಷಣೆ ಬೇರೆಯದೇ ಕತೆ ಹೇಳುತ್ತದೆ ನೋಡಿ :

ಡಸ್ಟ್ ಬಿನ್ ೧ : ನೀನು ಅವನಿಗೆ ಆ ಪ್ರೇಮಗೀತೆಗಳ ಬಗ್ಗೆ ಹೇಳಿದೆಯಾ ?

ಡಸ್ಟ್ ಬಿನ್ ೨ : ಇಲ್ಲ … ನೀನು ಅವಳಿಗೆ ಅವನು ಎಣಿಸುವ ನಕ್ಷತ್ರಗಳ ಬಗ್ಗೆ ಹೇಳಿದೆಯಾ ?

ಡಸ್ಟ್ ಬಿನ್ ೧ : ಇಲ್ಲ … ಟೆರೇಸ್ ಗೂ ಬಾಲ್ಕನಿಗೂ ತುಂಬಾ ವ್ಯತ್ಯಾಸವಿದೆ… ಅದಕ್ಕೆ ಹೇಳಲಿಲ್ಲ …

ಡಸ್ಟ್ ಬಿನ್ ೨ : ಏನು ಹಾಗಂದರೆ ?

ಡಸ್ಟ್ ಬಿನ್ ೧ : ಬಾಲ್ಕನಿಗೆ ಹೊಂದಿಕೊಂಡವಳಿಗೆ ಟೆರೇಸ್ ತುಂಬಾ ಆಕರ್ಷಕವಾಗಿ ಕಾಣಬಹುದಷ್ಟೇ. ಆದರೆ ಬಾಲ್ಕನಿಯನ್ನು ಬಿಟ್ಟು ಬರುವಷ್ಟಲ್ಲ …‌

ಡಸ್ಟ್ ಬಿನ್ ೨ : ಈ ಟೆರೇಸ್ ಹುಡುಗನಿಗೆ ಬಾಲ್ಕನಿ ಬೇಕೆಂದು ಅನ್ನಿಸದೆಯೂ ಇರಬಹುದು… ಬಡವನಿಗೆ ಅಭಾವವಿದ್ದುದರ ಬಗ್ಗೆ ವೈರಾಗ್ಯವಿರಬೇಕು … ಧನಿಕನಿಗೆ ಹೇರಳವಾಗಿರುವುದರ ಬಗ್ಗೆ ಹೇವರಿಕೆ‌ ಇರಬೇಕು…

ಡಸ್ಟ್ ಬಿನ್ ೧ : ಅದಕ್ಕಾಗಿಯೇ ನಾನು ಅವನಿಗೆ ಏನೂ ಹೇಳಲಿಲ್ಲ …

ಡಸ್ಟ್ ಬಿನ್ ೨ : ಅದಕ್ಕಾಗಿಯೇ ನಾನು ಅವಳಿಗೆ ಏನೂ ಹೇಳಲಿಲ್ಲ …

* * * *
ಎರಡೂ ಡಸ್ಟ್ ಬಿನ್ ಗಳು ಹೀಗೆ ಉಭಯಕುಶಲೋಪರಿ ಹಂಚಿಕೊಳ್ಳುತ್ತ ಮಾಡಿದ ಐತಿಹಾಸಿಕ ತೀರ್ಮಾನಕ್ಕೆ ನನ್ನ ಸಹಮತವೂ ಇದೆ. ಯಾರು ಹೇಳಿದ್ದು ಬದುಕಲು ಪ್ರೀತಿ ಬೇಕೆಂದು ? ಅದಿಲ್ಲದಿದ್ದರೂ ಸಲೀಸಾಗಿ ಎಲ್ಲ ನಡೆಯುತ್ತದೆ . ನಮ್ಮ ವಾಸ ಬಾಲ್ಕನಿಯಾ ಅಥವಾ ಟೆರೇಸಾ ಎಂಬುದನ್ನು ತೀರ್ಮಾನ ಮಾಡಿಕೊಳ್ಳಬೇಕಷ್ಟೇ …

ಆದರೂ …

ನಾವು ಕಸ ಬಿಸಾಡುವ ಡಸ್ಟ್ ಬಿನ್ ಗಳಿಗೆ ಮನುಷ್ಯರ ಮೇಲೆ ಅದೆಂಥಾ ಪ್ರೀತಿ ಮತ್ತು ಕಾಳಜಿ !

4 comments

Leave a Reply